2020ರ ವೇಳೆಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯ ನಂ1

2020ರ ವೇಳೆಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯ ನಂ1

Jan 12, 2016 10:14:49 AM (IST)

ಬೆಂಗಳೂರು: ಮುಂದಿನ 2020 ರ ವೇಳೆಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ದೇಶದಲ್ಲೇ ನಂಬರ್ಒನ್ ರಾಜ್ಯವಾಗಲಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಂಡಿಯಾ ಎಲೆಕ್ಟ್ರಾನಿಕ್ಸ್ ವೀಕ್-2016ರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಪಾನ್-ಕೊರಿಯಾ-ಚೀನಾಗೆ ಹೋಲಿಸಿದರೆ ಭಾರತ  ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಹಿಂದುಳಿದಿದೆ. 2020ರ ವೇಳೆಗೆ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ರಫ್ತು ಮಾಡುವ ಹಂತಕ್ಕೆ ಬೆಳೆಯುವಂತಾಗಲಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲೂ ಎಲೆಕ್ಟ್ರಾನಿಕ್ ಉದ್ದಿಮೆಗಳ ಸ್ಥಾಪನೆಗೆ ಒತ್ತು ಕೊಡಲಾಗುವುದು. 2016 ಫೆಬ್ರವರಿಯಲ್ಲಿ ನಡೆಯುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲೂ ಈ ಉದ್ದಿಮೆಗೆ ಸಂಬಂಧಿಸಿದಂತೆ ರಾಜ್ಯ ಹೆಚ್ಚು ಆಸಕ್ತಿ ತೋರಲಿರುವುದಾಗಿ ತಿಳಿಸಿದರು.

ಬೆಂಗಳೂರು ಮಾತ್ರವಲ್ಲದೆ, 2ನೆ ದರ್ಜೆ ನಗರಗಳಾದ ಮಂಗಳೂರು, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಗುಲ್ಬರ್ಗಾಗಳಲ್ಲೂ ಉದ್ಯಮ ಆರಂಭಿಸಲು ಅವಕಾಶವಿದೆ. ಹೂಡಿಕೆ ಮಾಡಲು ಬರುವವರಿಗೆ ರಾಜ್ಯಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ. ರಾಜ್ಯದಲ್ಲಿ 400ಕ್ಕೂ ಹೆಚ್ಚು ಇಂಜಿನಿಯರಿಂಗ್ ಕಾಲೇಜುಗಳಿವೆ. ಕೌಶಲ್ಯಭರಿತವಾದ ಮಾನವ ಸಂಪನ್ಮೂಲವಿದೆ. ಕಡಿಮೆ ಬೆಲೆಯಲ್ಲಿ ಭೂಮಿ ಸಿಗಲಿದೆ. ಹೂಡಿಕೆದಾರರ ಸ್ನೇಹಿ ವಾತಾವರಣವಿದೆ. ಇದನ್ನೆಲ್ಲ ಬಳಸಿಕೊಂಡು ಮುಂಬರುವ ದಿನಗಳಲ್ಲಿ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಮುನ್ನುಗ್ಗಬೇಕಾಗಿದೆ ಎಂದು ಹೇಳಿದರು.