ಗೋಹತ್ಯೆ ನಿಷೇಧ ಕಾಯ್ದೆ ಇಂದಿನಿಂದ ಜಾರಿ

ಗೋಹತ್ಯೆ ನಿಷೇಧ ಕಾಯ್ದೆ ಇಂದಿನಿಂದ ಜಾರಿ

MS   ¦    Jan 18, 2021 03:44:05 PM (IST)
ಗೋಹತ್ಯೆ ನಿಷೇಧ ಕಾಯ್ದೆ ಇಂದಿನಿಂದ ಜಾರಿ

ಬೆಂಗಳೂರು : ಹಲವಾರು ವಿವಾದಗಳ ನಂತರ ಇಂದಿನಿಂದ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ (ಗೋಹತ್ಯೆ ನಿಷೇಧ ಕಾಯ್ದೆ) ಮತ್ತು ಸಂರಕ್ಷಣಾ ಕಾಯ್ದೆಯು ರಾಜ್ಯದಲ್ಲಿ ಜಾರಿಯಾಗಲಿದೆ.

ಈ ಬಗ್ಗೆ ಪಶುಸಂಗೋಪನಾ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಬಿ.ಎನ್ ಪ್ರವೀಣ್ ಆದೇಶ ಹೊರಡಿಸಿದ್ದು, ಅದರ ರೀತಿ ರಿವಾಜುಗಳ ಕುರಿತು ಪ್ರಕಟಣೆಗಳ ಮೂಲಕ ತಿಳಿಸಿದ್ದಾರೆ. ಗೋಹತ್ಯೆ ನಿಷೇಧದ ಹಿನ್ನೆಲೆಯಲ್ಲಿ ಗೋವುಗಳ ಸಂರಕ್ಷಣೆಗೆ ಬೇಕಾಗುವ ಗೋಶಾಲೆ ಹಾಗೂ ಇನ್ನಿತರ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿ ಹಂತ ಹಂತವಾಗಿ ಗೋಶಾಲೆಗಳ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಗೋವುಗಳ ಹತ್ಯೆ ಹಾಗೂ ಅಕ್ರಮ ಸಾಗಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಕ್ರಮ ಗೋವುಗಳ ಸಾಗಾಟ ಮತ್ತು ವಧೆ ಆಗುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದರೆ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆ ಅಥವಾ ಆ ಜಿಲ್ಲೆ ಅಥವಾ ತಾಲೂಕಿನ ವ್ಯಾಪ್ತಿಯ ಪಶುಪಾಲನಾ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಬೇಕೆಂದು ಸಾರ್ವಜನಿಕರಲ್ಲಿ ಪಶುಸಂಗೋಪನೆ ಸಚಿವರು ಮನವಿ ಮಾಡಿಕೊಂಡರು.

ಗೋಹತ್ಯೆ ನಿಷೇಧ ನಿಯಮದಲ್ಲಿ ಏನೇನಿವೆ ಎಂದು ಇಲ್ಲಿದೆ ಮಾಹಿತಿ:
* ರೈತರು ಕೃಷಿಯ ಉದ್ದೇಶವನ್ನು ಸ್ಥಳೀಯವಾಗಿ 15 ಕಿಲೋಮೀಟರ್‌ ದೂರದವರೆಗೆ ಪರವಾನಗಿ ಇಲ್ಲದೆ ಎರಡು ಹಸು ಮತ್ತು ಎರಡು ಕರುಗಳನ್ನು ಮಾತ್ರ ಕೊಂಡೊಯ್ಯಬಹುದು.

* ರಾತ್ರಿ ವೇಳೆ ಗೋವುಗಳ ಸಾಗಣೆ ಸಂಪೂರ್ಣ ನಿಷೇಧ. ಅಂದರೆ ರಾತ್ರಿ 8ರಿಂದ ಬೆಳಿಗ್ಗೆ 6ರವರೆಗೆ ಗೋವುಗಳ ಸಾಗಣೆಗೆ ಅವಕಾಶವಿಲ್ಲ. ಅಷ್ಟೇ ಅಲ್ಲದೆ, ಬೇಸಿಗೆಯ ಕಾಲದಲ್ಲಿ ಮಾರ್ಚ್‌ನಿಂದ ಮೇ ತಿಂಗಳವರೆಗೆ ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರ ಅವಧಿಯಲ್ಲೂ ಗೋವುಗಳ ಸಾಗಣೆಗೆ ನಿಷೇಧ.

* ವಾಹನದಲ್ಲಿರುವ ಗೋವುಗಳ ಸಂಖ್ಯೆ, ಕಳುಹಿಸಿದವರು ಮತ್ತು ಪಡೆಯುವವರ ಹೆಸರು, ವಿಳಾಸ, ದೂರವಾಣಿ ಸಂಖ್ಯೆಯನ್ನು ದೊಡ್ಡ ಅಕ್ಷರಗಳಲ್ಲಿ ವಾಹನದ ಮೇಲೆ ಬರೆಯುವುದು ಕಡ್ಡಾಯ.

* ಕೃಷಿ ಅಥವಾ ಪಶುಸಂಗೋಪನೆಯ ಉದ್ದೇಶಕ್ಕೆ ಹಸು, ಕರು, ಎತ್ತು, ಎಮ್ಮೆ, ಕೋಣಗಳನ್ನು ಸಾಗಿಸುವಾಗಲೂ ಸಾಗಣೆಯ ಪರವಾನಗಿ ಹೊಂದಿರಬೇಕಾದುದು ಕಡ್ಡಾಯ. ಅದರೊಂದಿಗೆ ಮಾಲೀಕತ್ವದ ದಾಖಲೆ ಮತ್ತು ಪಶುವೈದ್ಯಕೀಯ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನೂ ಹೊಂದಿರಬೇಕು.

* ನುವಾರುಗಳ ಮಾಲೀಕರು ಮಾಲೀಕತ್ವದ ದಾಖಲೆಗಳನ್ನು ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಿ ಸಾಗಣೆ ಪರವಾನಗಿ ಪಡೆಯುವುದು ಕಡ್ಡಾಯ. ಪರವಾನಗಿಯ ಹೊರತಾಗಿ ಗೋಸಾಗಣೆಗೆ ವಾಹನಗಳ ಮಾಲೀಕರು ಸಮ್ಮತಿ ಸೂಚಿಸುವಂತಿಲ್ಲ.

* ಜಾನುವಾರುಗಳನ್ನು ಎಂಜಿನ್‌ ಕಡೆ ಮುಖ ಮಾಡಿಯೇ ಕಟ್ಟಿರಬೇಕು. ಮೇವು ಮತ್ತು ನೀರು ಪೂರೈಸಿದ ಬಳಿಕವೇ ವಾಹನ ಹತ್ತಿಸಬೇಕು. ಆರು ತಿಂಗಳಿಗಿಂತಲೂ ಹೆಚ್ಚಿನ ಅವಧಿಯ ಗಬ್ಬದ ಹಸು ಅಥವಾ ಎಮ್ಮೆಗಳನ್ನು ಸಾಗಿಸುವಂತಿಲ್ಲ ಎಂಬ ನಿರ್ಬಂಧಗಳನ್ನು ವಿಧಿಸಲಾಗಿದೆ.

* 25 ಕಿ.ಮೀ. ವೇಗಮಿತಿ: ಗೋವುಗಳನ್ನು ಸಾಗಿಸುವ ವಾಹನವನ್ನು ಪ್ರತಿ ಗಂಟೆಗೆ 25 ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ಓಡಿಸುವಂತಿಲ್ಲ.

* ಸಾಗಣೆಯ ಸಮಯದಲ್ಲಿ ಗೋವುಗಳ ಸಾವು ಸಂಭವಿಸಿದರೆ ಮರಣೋತ್ತರ ಪರೀಕ್ಷೆ ನಡೆಸಿ, ವರದಿ ಪಡೆದ ಬಳಿಕವೇ ಮೃತದೇಹವನ್ನು ಸಾಗಿಸಬಹುದು.

* ವಾಹನದೊಳಗೆ ಗೋವುಗಳು ಪ್ರತ್ಯೇಕವಾಗಿ ಇರುವುದಕ್ಕೆ ಪೂರಕವಾಗಿ ವಿಭಜನಾ ವ್ಯವಸ್ಥೆ ಮಾಡಿರಬೇಕು. 100 ಕೆ.ಜಿ.ಗಿಂತ ಕಡಿಮೆ ತೂಕ ಹೊಂದಿದ್ದಲ್ಲಿ 1.5 ಚದರ ಮೀಟರ್‌ ಮತ್ತು 100 ಕೆ.ಜಿ.ಗಿಂತ ಹೆಚ್ಚು ತೂಕವಿದ್ದಲ್ಲಿ 2 ಚದರ ಮೀಟರ್‌ ಸ್ಥಳಾವಕಾಶ ಕಲ್ಪಿಸಬೇಕು.

* ನಿಯಮಗಳ ಉಲ್ಲಂಘನೆಯಾದಲ್ಲಿ ಗೋವುಗಳ ಮಾಲೀಕರು ಅಥವಾ ಅವರ ಪ್ರತಿನಿಧಿ, ವಾಹನ ಮಾಲೀಕರು, ಜತೆಗಿರುವ ಸಿಬ್ಬಂದಿ ಕೂಡ ಹೊಣೆಗಾರರಾಗುತ್ತಾರೆ.