ಬಾಗಲಕೋಟೆ : ಪ್ರಸಕ್ತ ವರ್ಷದಿಂದಲೇ ಜಾರಿಯಾಗಿರುವ ರಾಷ್ಟಿçಯ ಶಿಕ್ಷಣ ನೀತಿಯನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವದರ ಮೂಲಕ ಭವ್ಯ ಭಾರತದ ಕನಸನ್ನು ಸಾಕಾರಗೊಳಿಸಬೇಕಾಗಿದೆ ಎಂದು ಇಳಕಲ್ಲದ ಎಸ್.ವಿ.ಎಂ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ.ಎಸ್.ಬಿ.ಬಿರಾದಾರ ಹೇಳಿದರು.
ಈ ನೀತಿಯನ್ನು ಪ್ರಜಾಪ್ರಭುತ್ವದ ತಳಹದಿಯ ಮೇಲೆ ರೂಪಿಸಲಾಗಿದ್ದು, ಅಂದಾಜು ಮೂರು ಲಕ್ಷ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿ ಇದನ್ನು ಸಿದ್ಧಪಡಿಸಲಾಗಿದೆ. ಎಲ್ಲರಿಗೂ ಶಿಕ್ಷಣ ನೀಡುವ, ಪ್ರೋತ್ಸಾಹಿಸುವ ಹಾಗೂ ಜ್ಞಾನವಂತರನ್ನಾಗಿ ಮಾಡುವ ಉದ್ದೇಶ ಈ ಹೊಸ ರಾಷ್ಟಿçಯ ಶಿಕ್ಷಣ ನೀತಿಯಾಗಿದೆ. 21ನೇ ಶತಮಾನಕ್ಕೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವ ಉದ್ದೇಶ ಹೊಂದಿರುವ ಈ ನೀತಿ, ಎಲ್ಲ ಕ್ಷೇತ್ರಗಳಲ್ಲಿ ಬೇಕಾಗಿರುವ ವಿವಿಧ ಕೌಶಲಗಳು, ಮೌಲ್ಯಗಳು,ಬದ್ಧತೆ,ಸುಸ್ಥಿರ ಅಭಿವೃದ್ಧಿ ಮುಂತಾದವುಗಳನ್ನು ಗಮನದಲ್ಲಿಟ್ಟುಕೊಂಡು ಅವರನ್ನು ಪ್ರಬುದ್ಧ ಜಾಗತಿಕ ನಾಗರಿಕರನ್ನಾಗಿ ಮಾಡುವ ದೃಷ್ಠಿಕೋನವನ್ನು ಹೊಂದಿದೆ ಎಂದರು.
ಇದೊಂದು ಸಂಕ್ರಮಣ ಕಾಲವಾಗಿದ್ದು ಸಾಕಷ್ಟು ಬದಲಾವಣೆಗಳು ಆಗುತ್ತಿವೆ.ಮುಂದಿನ ದಿನಗಳಲ್ಲಿ ಕಾಲೇಜುಗಳು ಸ್ವಾಯತ್ತ ಸಂಸ್ಥೆಗಳಾಗುವ ಸಾಧ್ಯತೆಗಳಿರುವದರಿಂದ ಶಿಕ್ಷಣದ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಅವುಗಳ ಜವಾಬ್ದಾರಿಯಾಗಲಿದೆ.ಇಲ್ಲದಿದ್ದರೆ ಅವುಗಳ ಅಸ್ತಿತ್ವಕ್ಕೆ ಧಕ್ಕೆ ಬರುವ ಆತಂಕವಿದೆ. 2035ರ ಹೊತ್ತಿಗೆ ಉನ್ನತ ಶಿಕ್ಷಣದ ದಾಖಲಾತಿ ಪ್ರಮಾಣವನ್ನು ಶೇಕಡಾ 50 ಕ್ಕೆ ಹೆಚ್ಚಿಸುವು0ದು ಹೊಸ ನೀತಿ ಉದ್ದೇಶವಾಗಿದೆ. ಹೊಸ ನೀತಿಯಲ್ಲಿ ಕೌಶಲ ಹಾಗೂ ಮೌಲ್ಯ ಆಧಾರಿತ ಪಠ್ಯಕ್ರಮ ರೂಪಿಸಲಾಗುತ್ತಿದ್ದು ಅದು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಈ ಹೊಸ ವ್ಯವಸ್ಥೆಯ ಅನುಷ್ಠಾನದಲ್ಲಿ ಹಲವು ಸವಾಲುಗಳಿದ್ದು ಅವುಗಳನ್ನು ಸಮರ್ಥವಾಗಿ ಎದುರಿಸಬೇಕಾಗಿದೆ ಎಂದು ಹೇಳಿದರು.