ಮಂಗಳೂರು: ನಗರದ ಮಣೇಲ್ ಶ್ರೀನಿವಾಸ್ ನಾಯಕ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಎಂಎಸ್ಎನ್ಐಎಂ) ಸಂಪರ್ಕ್ ಗಾಲಾ ನೈಟ್ – ಹಳೆ ವಿದ್ಯಾರ್ಥಿ ಸಮ್ಮೇಳನ ೨೦೨೨ ಅನ್ನು ಶುಕ್ರವಾರ, ಡಿಸೆಂಬರ್ ೨೩, ೨೦೨೨ ರಂದು ಬೊಂದೆೆಲ್ನಲ್ಲಿರುವ ಸಂಸ್ಥೆಯ ಕ್ಯಾಂಪಸ್ನಲ್ಲಿ
ಆಯೋಜಿಸಿತು.
ಎಲ್ಲಾ ಬ್ಯಾಚ್ಗಳ ಹಳೆಯ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸುವುದು ಮತ್ತು ಹಿಂದಿನ ವರ್ಷ ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸುವುದು ಸಭೆಯ ಉದ್ದೇಶವಾಗಿತ್ತು. ಚಿತ್ರನಟ ‘ಕಾಂತಾರ’ ಖ್ಯಾತಿಯ ಸ್ವರಾಜ್ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು. ಮಹಿಳಾ ರಾಷ್ಟ್ರೀಯ ಶಿಕ್ಷಣ ಸೊಸೈಟಿ (ಡಬ್ಲ್ಯುಎನ್ಇಎಸ್) ಅಧ್ಯಕ್ಷರಾದ ಮಣೆಲ್ ಅಣ್ಣಪ್ಪ ನಾಯಕ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ ನಿರ್ದೇಶಕಿ ಡಾ. ಮೊಲ್ಲಿ ಎಸ್. ಚೌಧುರಿ ಮತ್ತು ಸಂಸ್ಥೆಯ ಸಹಾಯಕ ಪ್ರಾಧ್ಯಾಪಕಿ ಮತ್ತು ಹಳೆ ವಿದ್ಯಾರ್ಥಿನಿ ನಂದಿತಾ ಸುನಿಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ವರಾಜ್ ಶೆಟ್ಟಿ ತಮ್ಮ ಭಾಷಣದಲ್ಲಿ ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡರು. ದೊಡ್ಡ ಕನಸುಗಳನ್ನು ಹೊಂದುವುದರ ಮಹತ್ವ ಮತ್ತು ಆ ಕನಸುಗಳನ್ನು ಸಾಧಿಸುವ ಜೀವನ ಪಯಣ ಕುರಿತು ಅವರು ಮಾತನಾಡಿದರು.
ಸಮಾರಂಭದಲ್ಲಿ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಕುಡ್ಪಿ ಜಗದೀಶ್ ಶೆಣೈ ಅವರನ್ನು ಮಹಿಳಾ ರಾಷ್ಟ್ರೀಯ ಶಿಕ್ಷಣ ಸೊಸೈಟಿಯ ಅಧ್ಯಕ್ಷರಾಗಿ ೨೪ ವರ್ಷಗಳ ಸುದೀರ್ಘ ಸೇವೆಗಾಗಿ ಗಣ್ಯರು ಸನ್ಮಾನಿಸಿದರು. ನಂತರ ತುಳು ನಾಟಕ ಮತ್ತು ಚಲನಚಿತ್ರೋದ್ಯಮಕ್ಕೆ ನೀಡಿದ ಕೊಡುಗೆಗಾಗಿ ಸ್ವರಾಜ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಮಂಗಳೂರು ವಿಶ್ವವಿದ್ಯಾನಿಲಯ ಪರೀಕ್ಷೆಯಲ್ಲಿ ೩ನೇ ರ್ಯಾಂಕ್ ಗಳಿಸಿದ ಕಾಲೇಜಿನ ೨೨ನೇ ಬ್ಯಾಚ್ನ ಹಳೆ ವಿದ್ಯಾರ್ಥಿನಿ ಶಿವಾನಿ ಸುವರ್ಣ ಅವರನ್ನು ಸನ್ಮಾನಿಸಲಾಯಿತು. ಮಹಿಳಾ ರಾಷ್ಟ್ರೀಯ ಶಿಕ್ಷಣ ಸೊಸೈಟಿಯ ಸಹಾಯಕ ಕಾರ್ಯದರ್ಶಿ ಡಾ. ಮಣೇಲ್ ಅರ್ಜುನ್ ನಾಯಕ್, ಸದಸ್ಯ ಬಿ.ಗಣೇಶ್ ಕೃಷ್ಣ ಭಟ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಯೋಜಕಿ ನಂದಿತಾ ಸುನಿಲ್ ಸ್ವಾಗತಿಸಿ, ಕುಡ್ಪಿ ಜಗದೀಶ್ ಶೆಣೈ ಅವರನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಕೆ.ಅರ್ಪಿತಾ
ನಾಯಕ್ ಸ್ವರಾಜ್ ಶೆಟ್ಟಿ ಅವರನ್ನು ಪರಿಚಯಿಸಿದರು. ಅಕ್ಷಯ ಬಿ.ರಾವ್ ರ್ಯಾಂಕ್ ವಿಜೇತೆ ಶಿವಾನಿ ಸುವರ್ಣ ಅವರನ್ನು ಪರಿಚಯಿಸಿದರು.
ಹಳೆ ವಿದ್ಯಾರ್ಥಿನಿ ರುಥ್ವಿ ವಸಂತಕುಮಾರ್ ಪಟೇಲ್ ವಂದಿಸಿದರು. ಸ್ನೇಹಾ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ ನಡೆಯಿತು.