ತಮ್ಮ ಚೊಚ್ಚಲ ನಿರ್ದೇಶನದಲ್ಲೇ “ಒಲವೇ ಮಂದಾರ” ದಂತಹ ನವಿರಾದ ಪ್ರೇಮಕಥೆಯನ್ನು ಮನಮುಟ್ಟುವಂತೆ ಕಟ್ಟಿಕೊಟ್ಟ, ರಂಗಭೂಮಿ ಹಿನ್ನೆಲೆಯ ನಿರ್ದೇಶಕ ಜಯತೀರ್ಥ ಅವರು ತದನಂತರ ಶ್ರೀನಗರ ಕಿಟ್ಟಿ ನಟನೆಯ, ಸಾಮಾಜಿಕ ಸಂದೇಶ ಸಾರುವ “ಟೋನಿ” ಎಂಬ ವಿಭಿನ್ನ ಚಿತ್ರವನ್ನು ನಿರ್ದೇಶಿಸಿದ್ದರು.
ಎರಡೂ ಚಿತ್ರಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸಾಮಾಜಿಕ ಸಂದೇಶವನ್ನು ನೀಡುತ್ತಾ ಬಂದಿರುವ ಜಯತೀರ್ಥ ಅವರು ನಂತರ ಶರಣ್ ಅಭಿನಯದ ಸಂಪೂರ್ಣ ಕಮರ್ಷಿಯಲ್ “ಬುಲೆಟ್ ಬಸ್ಯಾ” ಚಿತ್ರವನ್ನು ನಿರ್ದೇಶಿಸಿದ್ದರು. ಚಿತ್ರ ಹೇಳಿಕೊಳ್ಳುವ ಮಟ್ಟಿಗೆ ಹಿಟ್ ಆಗದಿದ್ದರು ಜಯತೀರ್ಥರವರು ತಾವು ಎಲ್ಲಾ ರೀತಿಯ ಸಿನೆಮಾಗಳನ್ನು ಮಾಡಲು ಅರ್ಹನೆಂಬುದನ್ನು ಸಾಬೀತು ಪಡಿಸಿದ್ದರು. ಮೂರು ವಿಶಿಷ್ಟವಾದ ಚಿತ್ರಗಳ ಬಳಿಕ ಈ ಬಾರಿ ಹೊಸತನ್ನು ಹುಡುಕಾಡುವ ತುಡಿತದಲ್ಲಿ ಬ್ಯೂಟಿಫುಲ್ ಮನಸುಗಳಿಗೆ ಬಲೆ ಬೀಸಿದ್ದಾರೆ. ಶೀರ್ಷಿಕೆಯಲ್ಲೇ “ಬ್ಯೂಟಿ”ಯನ್ನು ತೋರಿಸಿರುವ ನಿರ್ದೇಶಕರು ಕಥೆ, ಚಿತ್ರಕಥೆಯನ್ನು ಬರೆದು ನಿರ್ದೇಶಿಸುತ್ತಿದ್ದಾರೆ. ಸ್ಕಂದ ಎಂಟರ್ ಟೇನ್ ಮೆಂಟ್ ಮೂಲಕ ಪ್ರಸನ್ನ ಮತ್ತು ಶಶಿಕಾಂತ್ ಬಾಲಾಜಿಯವರು “ಬ್ಯೂಟಿಫುಲ್ ಮನಸುಗಳು” ಅನ್ನು ನಿರ್ಮಿಸುತ್ತಿದ್ದಾರೆ. “ಲೂಸಿಯಾ” ಚಿತ್ರದ ಸತೀಶ್ ಮತ್ತು ಶ್ರುತಿಹರಿಹರನ್ ಪ್ರಮುಖ ಪಾತ್ರಗಳಲ್ಲಿದ್ದರೆ ಅಚ್ಯುತ್ ಕುಮಾರ್ ಮತ್ತು ತಬಲಾ ನಾಣಿಯವರು ಬ್ಯೂಟಿಫುಲ್ ಮನಸುಗಳಿಗೆ ಜೊತೆಯಾಗಿದ್ದಾರೆ. ಕಿರಣ್ ಹಂಪಾಪುರ್ ಅವರ ಕ್ಯಾಮೆರಾದಲ್ಲಿ ಸೆರೆಯಾಗುತ್ತಿರುವ ಬ್ಯೂಟಿಫುಲ್ ಮನಸುಗಳನ್ನು ಕೆ.ಎಂ.ಪ್ರಕಾಶ್ ಅವರು ಸಂಕಲಿಸುತ್ತಿದ್ದಾರೆ. ಬ್ಯೂಟಿಫುಲ್ ಮನಸುಗಳಿಗೆ ಬ್ಯೂಟಿಫುಲ್ ಆಗಿರುವ ಸಂಗೀತ ಬಿ.ಜೆ.ಭರತ್ ಅವರ ಬತ್ತಳಿಕೆಯಲ್ಲಿ ತಯಾರಾಗುತ್ತಿದೆ.