ಖಳನಟನಾದರೂ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ಕನ್ನಡದ ಬಹುಬೇಡಿಕೆಯ ಪ್ರತಿಭಾವಂತ ಖಳನಟ ರವಿಶಂಕರ್ ಗೆ ಇಂದು 50ನೇ ಹುಟ್ಟು ಹಬ್ಬದ ಸಂಭ್ರಮ.
ರವಿಶಂಕರ್ ತಮ್ಮ ಹುಟ್ಟುಹಬ್ಬವನ್ನು ಎರಡು ದಿನ ಮುಂಚೆಯೇ ಮಾಧ್ಯಮದ ಜೊತೆ ಆಚರಿಸಿಕೊಂಡಿದ್ದರು. ತಮ್ಮ ಈ ಗೆಲುವಿಗೆ ಕಾರಣ ಕನ್ನಡಿಗರು ಮತ್ತು ಮಾಧ್ಯಮದವರು ಎಂದು ಹೇಳಿದ್ದು ಜೊತೆಗೆ ತಮ್ಮನ್ನು ಕನ್ನಡ ಚಿತ್ರರಂಗಕ್ಕೆ ಕೆಂಪೇಗೌಡ ಚಿತ್ರದ ಮೂಲಕ ಪರಿಚಯಿಸಿದ ಕಿಚ್ಚ ಸುದೀಪ್ ಗೆ ಧನ್ಯವಾದ ಹೇಳಿದರು.
ಕನ್ನಡದ ನಂಟು ನನಗೆ ಚಿಕ್ಕಂದಿನಿಂದಲೇ ಇದ್ದು, ನನ್ನ ತಂದೆ-ತಾಯಿ ಕೂಡಾ ಕನ್ನಡ ಚಿತ್ರಗಳಲ್ಲಿ ನಟಿಸಿದ್ದು, ನಮ್ಮಣ್ಣ ಇಲ್ಲಿ ಬಹಳ ಬೇಡಿಕೆಯ ನಟರಾಗಿದ್ದಾರೆ. ತೆಲುಗಿನಲ್ಲಿ ಸಾಕಷ್ಟು ಸಿನಿಮಾಗಳಿಗೆ ಡಬ್ಬಿಂಗ್ ಮಾಡಿದ್ದೇನೆ. ಆದರೆ, ನನ್ನ ಪ್ರತಿಭೆಗೆ ಅಲ್ಲಿ ಅವಕಾಶ ಸಿಗಲಿಲ್ಲ. ನನ್ನನ್ನು ಕೈ ಹಿಡಿದು ಬೆಳೆಸಿದ್ದು ಕನ್ನಡ ಚಿತ್ರರಂಗ ಮತ್ತು ಇಲ್ಲಿನ ಜನ. ಯಾವತ್ತಿಗೂ ನಾನು ಅವರಿಗೆ ಚಿರಋಣಿಯಾಗಿರುತ್ತೆನೆ ಎಂದು ಕನ್ನಡ ಜನತೆ ಮತ್ತು ಕನ್ನಡ ಚಿತ್ರರಂಗಕ್ಕೆ ಕೃತಜ್ಙತೆ ಸಲ್ಲಿಸಿದರು.
ತಮ್ಮ ಮಗನನ್ನು ಹೀರೋ ಆಗಿ ಲಾಂಚ್ ಮಾಡುವ ಬಗ್ಗೆ ಮಾತನಾಡಿದ ರವಿಶಂಕರ್ ಕನ್ನಡ ಜನತೆ ನನ್ನ ಕೈ ಹಿಡಿದು, ನನಗೊಂದು ಲೈಫ್ ಕೊಟ್ಟಿದ್ದಾರೆ. ಇದೇ ವಿಶ್ವಾಸದಿಂದ ಮಗನನ್ನು ಕನ್ನಡದಲ್ಲಿಯೇ ಹೀರೋ ಆಗಿ ಲಾಂಚ್ ಮಾಡುತ್ತೇನೆ. ನನ್ನನ್ನು ಪ್ರೀತಿಸಿ, ಬೆಳೆಸಿ, ಪ್ರೋತ್ಸಾಹಿಸಿದಂತೆ ನನ್ನ ಮಗನನ್ನು ಬೆಳೆಸುತ್ತಾರೆ ಎಂಬ ನಂಬಿಕೆಯಿದೆ ಎಂದು ಹೇಳುತ್ತಾರೆ ಈ ಆರ್ಮುಗಂ.