ಬಾಡಿ ಬಿಲ್ಡಿಂಗ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ ? ಈಗಂತೂ ಎಲ್ಲಾ ಯುವಕರಿಗೂ ಬಾಡಿ ಬಿಲ್ಡಿಂಗ್ ಮಾಡುವುದೆಂದರೆ ತುಂಬಾನೆ ಕ್ರೇಜ್…ತುಂಬಾ ಜನರ ಪ್ರಕಾರ ಬಾಡಿ ಬಿಲ್ಡಂಗ್ ಜಸ್ಟ್ ಫಾರ್ ಟೈಮ್ ಪಾಸ್ ಆದರೆ ಕೆಲವರಿಗೆ ಇದೇ ಜೀವನ ಮತ್ತು ಸಾಧನೆ. ಇದಕ್ಕೆ ಉತ್ತಮ ಉದಾಹರಣೆ ಜುನಿಯರ್ ಮಿ.ಇಂಡಿಯಾ ಆಗುವ ಮೂಲಕ ತನ್ನ ಕನಸನ್ನು ನನಸು ಮಾಡಿಕೊಂಡ ಮಂಗಳೂರು ಮೂಲದ ನಿಶಾನ್ ಕುಮಾರ್. ಇತ್ತೀಚೆಗೆ ಕೊಯಂಬತ್ತೂರಿನಲ್ಲಿ ನಡೆದ ಮಿ. ಇಂಡಿಯಾ ಚಾಂಪಿಯನ್ಶಿಪ್ ಗೆಲ್ಲುವ ಮೂಲಕ ಕೇವಲ 21 ವರ್ಷ ಪ್ರಾಯದ ಈ ಹುಡುಗ, ಬಾಡಿಬಿಲ್ಡಿಂಗ್ನಲ್ಲಿ ನಮ್ಮ ಮಂಗಳೂರಿನ ಹುಡುಗರೂ ಕೂಡ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಬಲ್ಲರು ಎಂಬುದನ್ನು ಸಾಬೀತುಪಡಿಸಿದ್ದಾನೆ.
ಶಾಲಾ ದಿನಗಳಲ್ಲಿ ಹಿರಿಯರು ಮುಂದೆ ಏನಾಗುತ್ತೀರಿ ಮಕ್ಕಳೇ ?.. ಎಂದು ಕೇಳಿದರೆ ನಮ್ಮ ಉತ್ತರ ಡಾಕ್ಟರ್, ಇಂಜಿನಿಯರ್ …ಹೀಗೆ ಅನೇಕ. ಆದರೆ ಈ ಹುಡುಗ ಸ್ವಲ್ಪ ಡಿಫರೆಂಟ್ ನಾನು ಬಾಡಿ ಬಿಲ್ಡರ್ ಆಗ್ತೇನೆ ಇದೇ ನನ್ನ ಗುರಿ ಅಂತ ಹೇಳಿದ್ದ. ಅದೆಷ್ಟೋ ಜನ ಈತನ ಕನಸಿಗೆ ಗೇಲಿ ಮಾಡುತ್ತಿದ್ದರು ಅಷ್ಟೇ ಯಾಕೆ ಸಾಲದೆಂಬಂತೆ ಈತನ ಮನೆಯವರೂ ಕೂಡ. ಇದಕ್ಕಾಗಿ ಒಂದು ವರ್ಷ ಚೆನ್ನಾಗಿ ಕೆಲಸ ಮಾಡಿ ಅದ್ರಲ್ಲಿ ಬಂದಂತ ದುಡ್ಡು ಬಾಡಿ ಬಿಲ್ಡಂಗ್ ಕಾಂಪಿಟೇಶನ್ಗೋಸ್ಕರ 2 ತಿಂಗಳಿಗೆ ಖರ್ಚು ಮಾಡಿದ, ಈ ಹುಡುಗ ಹೇಳಿ ಕೇಳಿ ಕಾಲೇಜ್ ಡ್ರಾಪ್ ಔಟ್, ನೌಕರಿ ಬಿಟ್ಟು ಬಾಡಿಬಿಲ್ಡಿಂಗ್ನತ್ತ ಬರುವುದಕ್ಕೆ ಹೆತ್ತವರ ಆಕ್ಷೇಪವಿತ್ತು. ಆದರೂ ಬಾಡಿ ಬಿಲ್ಡಿಂಗ್ ನಲ್ಲಿ ಏನಾದರೂ ಸಾಧಿಸಬೇಕು ಎಂಬ ಛಲಗಾರ ನಿಶಾನ್ ಈಗ “ಜೂ. ಮಿ.ಇಂಡಿಯಾ ಚಾಂಪಿಯನ್” ಈ ಸಂದರ್ಭ ನ್ಯೂಸ್ ಕನ್ನಡ.com ಜೊತೆ ನಡೆಸಿದ ಸಂದರ್ಶನ ಹೀಗಿದೆ.
1. ಈಗ ಮಿ.ಇಂಡಿಯಾ ಟೈಟಲ್ ವಿನ್ ಆಗಿದ್ದೀರ…ಹೇಗನಿಸ್ತಾಯಿದೆ.
ತುಂಬಾನೇ ಬದಲಾಗಿದೆ ಅನ್ಸುತ್ತೆ ಮೊದಲು ನಾನು ಈ ತರ ಕಾಂಪಿಟೇಶನ್ ಗೆ ಹೋಗಿ ಸೋತು ಬರ್ತಿದ್ದೆ ಆದ್ರೆ ಈ ಬಾರಿ ಎಲ್ಲಾ ಡಿಫೆರೆಂಟ್…ನಾನು ಊರಿಗೆ ಬರುವಾಗ್ಲೆ ನನ್ನನ್ನು ಅಭಿನಂದಿಸ್ಲಿಕ್ಕೆ ತುಂಬಾ ಜನ, ಜೊತೆಗೆ ಮೆರವಣಿಗೆ, ಅಲ್ಲಲ್ಲಿ ನನ್ನ ಪೋಸ್ಟರ್ …ತುಂಬಾನೆ ಖುಷಿ ಆಯ್ತು.
2. ನಿಮ್ಮ ಈ ಸಾಧನೆಗೆ ಸ್ಪೂರ್ತಿ…?
ನನ್ನ ಬೆಸ್ಟ್ ಫ್ರೆಂಡ್ ಸೂಷ್ಮಾ ರಾಜ್
3. ನಿಮ್ಮ ಈ ಸಾಧನೆಗೆ ನಿಜವಾದ ಬೆಂಬಲ, ಪ್ರೋತ್ಸಾಹ ಯಾರು ?
ನನಗೆ ಸಿಕ್ಕಿದ ಈ ಪ್ರಶಸ್ತಿಯ ಎಲ್ಲಾ ಕ್ರೆಡಿಟ್ ಮಾಸ್ಟರ್ ಇಂಡಿಯಾ, 4 ಬಾರಿಯ ಮಸಲ್ ಮೇನಿಯಾ ಚಾಂಪಿಯನ್, ‘ಝೆನ್’ ಜಿಮ್ ನ 47 ವರ್ಷದ ಕುಮಾರ್ ಪುತ್ರನ್ ಇವರಿಗೆ ಸಲ್ಲುತ್ತದೆ. ಸೂಷ್ಮಾ ರಾಜ್ , ದೋಸ್ತ್ ಕ್ರಿಕೆಟ್ ಕ್ಲಬ್ ಬೊಕ್ಕಪಟ್ಣ, ಝೂಯೆಸ್ ಫಿಟ್ ನೆಸ್ ಜಿಮ್ ಮತ್ತು ನನ್ನ ಸಹೋದರರ ಸಹಾಯದಿಂದ ಇದು ಸಾಧ್ಯವಾಯಿತು.
4. ಬಾಡಿ ಬಿಲ್ಡಿಂಗ್ ಗೆ ಭಾರತ ಹಾಗೂ ನಮ್ಮ ಮಂಗಳೂರಲ್ಲಿ ಸಪೋರ್ಟ್ …ಹೇಗೆ? ..ಏನು ಕಥೆ?
ಇಲ್ಲ ..ನಮ್ಮ ದೇಶದಲ್ಲಿ ಬಾಡಿಬಿಲ್ಡಿಂಗ್ಗೆ ಬೆಂಬಲ ಪ್ರೋತ್ಸಾಹ ತುಂಬಾ ಕಡಿಮೆ ಇದೆ. ಪ್ರಾಯೋಜಕರ, ಕೋಚ್ಗಳ ಕೊರತೆ ಇದೆ. ಬೇಸರದ ಸಂಗತಿಯೆಂದರೆ ಮೊದಲೇ ನನ್ನ ಆರ್ಥಿಕ ಪರಿಸ್ಥಿತಿ ತುಂಬಾ ಕಷ್ಟದಲ್ಲಿತ್ತು. ಮಿ.ಇಂಡಿಯಾ ಟೈಟಲ್ ವಿನ್ ಆದ್ರೂ ನನಗೆ ಬರಬೇಕಿದ್ದ ನಗದು ಬಹುಮಾನ ಕೊಡ್ಲೇ ಇಲ್ಲ, ಟ್ರೋಫಿ ಮಾತ್ರ ನೀಡಿದರು. ಇದು ತುಂಬಾನೆ ಬೇಸರದ ಸಂಗತಿ, ಸಹಾಯ ದೂರದ ಮಾತು. ಪಟ್ಟ ಕಷ್ಟಕ್ಕೂ ಸ್ವಲ್ಪ ಕೂಡ ಬೆಲೆ ಸಿಗಲಿಲ್ಲ.
5. ಮಿ.ಇಂಡಿಯಾ ಚಾಂಪಿಯನ್ ಶಿಪ್ ನಲ್ಲಿ ನಿಮಗೆದುರಾದ ಸವಾಲುಗಳು ?
ಅಲ್ಲಿ ನಾಡಿನ ಶ್ರೇಷ್ಠ ಬಾಡಿಬಿಲ್ಡರ್ಸ್ ಭಾಗವಹಿಸಿದ್ದು, ನನಗಿಂತ ಎರಡು ಪಟ್ಟು ಹೆಚ್ಚು ತೂಕ ಹೊಂದಿದ್ದರು. ಆದರೆ ಶೈಲಿ, ಅಂಗಾಂಗ ರಚನೆ ಇವೆಲ್ಲದರಲ್ಲಿ ಅವರಿಗಿಂತ ನಾನು ಪ್ರಬಲನಾಗಿದ್ದೆ. ಕೊನೆಗೂ 4 ವರ್ಷದ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿತು.
6.ನಿಮ್ಮ ವರ್ಕ್ ಔಟ್ ಹಾಗೂ ಡಯೆಟಿಂಗ್ ಬಗ್ಗೆ…
ಬೆಳಗ್ಗೆ 4.30 ಕ್ಕೆ ನನ್ನ ದಿನ ಪ್ರಾರಂಭ, ಬೆಳಿಗ್ಗೆ ಎದ್ದು ನನ್ನ ಊಟವನ್ನು ನಾನೇ ತಯಾರಿಸಿ ಮತ್ತೆ 5.30ಕ್ಕೆ ನನ್ನ ಕೆಲಸ ಪ್ರಾರಂಭ. ಬಾಡಿಬಿಲ್ಡಿಂಗ್ ಸ್ಪರ್ಧೆಗೆ ತಯಾರಿ ಆಗುವವರು ದುಬಾರಿ ವೆಚ್ಚದ ಪೌಷ್ಟಿಕ ಆಹಾರ ಸೇವಿಸಬೇಕಾಗುತ್ತದೆ. ಆದರೆ ನನ್ನಂತಹ ಮಧ್ಯಮ ವರ್ಗದವರಿಗೆ ಇದು ಕೈಗೆಟುಕುವುದು ತುಂಬಾ ಕಷ್ಟ. ದಿನವೊಂದಕ್ಕೆ 8 ಮೀಲ್ ಹೀಗೆ ಕಡಿಮೆ ಎಂದರೂ 800 ರೂ.ಗಳ ಆಹಾರ ಬೇಕಾಗುತ್ತದೆ. ಸ್ಪರ್ಧೆ ಇದ್ರೆ 8 ಗಂಟೆ, ಇಲ್ಲದಿದ್ರೆ 2 ಗಂಟೆ ವರ್ಕ್ ಔಟ್ ಜೊತೆಗೆ ಕೇವಲ 4 ಗಂಟೆ ನಿದ್ರೆ.
7. ಫ್ರೀ ಟೈಮಲ್ಲಿ …?
ಆಫ್ ಸೀಸನ್ ವ್ರೆಸ್ಲಿಂಗ್ ಮತ್ತು ಜಿಮ್ನಾಸ್ಟಿಕ್ ಜೊತೆಗೆ ಎಮ್ ಎಮ್ ಎ(ಮಿಕ್ಸ್ ಮಾರ್ಷಲ್ ಆರ್ಟ್ಸ್) ಕಲಿತಾ ಇದ್ದೇನೆ.
8. ನಿಮ್ಮ ಪರ್ಸನಲ್ ಲೈಫ್..?
ನಾನು ತುಂಬಾನೆ ಸಿಂಪಲ್, ಹೊಸ ಡ್ರೆಸ್, ಪಾರ್ಟಿ ಮೋಜು ಮಸ್ತಿ ಇದ್ರಿಂದ ತುಂಬಾ ದೂರ. ನನ್ನ ಎಲ್ಲಾ ಖರ್ಚು ಜಿಮ್ ಗೆ ಬಾಡಿ ಬಿಲ್ಟಿಂಗೋಸ್ಕರ.
9. ನಿಮ್ಮ ಪ್ರಶಸ್ತಿಗಳು…
ಶ್ರೀ ದಕ್ಷಿಣ ಕನ್ನಡ 2016 ಟೈಟಲ್ ಹಾಗೂ ಎಲ್ಲಾ ವಿಭಾಗದ ವಿನ್ನರ್, ಮಿ. ಕರ್ನಾಟಕ ದ್ವಿತೀಯ, ಇದೀಗ ಜ್ಯೂನಿಯರ್ ಮಿ. ಇಂಡಿಯಾ ಹಾಗೂ ಮಿ.ಇಂಡಿಯಾ ಸ್ಪರ್ಧೆಯ ಎಲ್ಲಾ ವಿಭಾಗದಲ್ಲಿ ಬೆಸ್ಟ್ ಪೋಸರ್.
10. ನಿಮ್ಮ ಮುಂದಿನ ಯೋಜನೆ ?
ಸೀನಿಯರ್ ಮಿ. ಇಂಡಿಯಾ ಆಗ್ಬೇಕು ಮತ್ತು ಅಮೆಚೂರ್ ಒಲಿಂಪಿಯಾದಲ್ಲಿ ಭಾಗವಹಿಸ್ಬೇಕು ಜೊತೆಗೆ ಮಿ. ಇಂಡಿಯಾದಲ್ಲಿ ಚಾಂಪಿಯನ್ ಆಫ್ ಚಾಂಪಿಯನ್ ಆಗ್ಬೇಕು.
11. ಸದ್ಯಕ್ಕೆ ಏನ್ಮಾಡ್ತಾ ಇದ್ದೀರಾ?
‘ಝೂಯೆಸ್ ಫಿಟ್ನೆಸ್ ಜಿಮ್’ ನಲ್ಲಿ ಫುಲ್ ಟೈಮ್ ಪರ್ಸನಲ್ ಟ್ರೈನರ್.
12.ಈ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಬಯಸುವ ಹೊಸ ಬಾಡಿ ಬಿಲ್ಡರ್ಸ್ ಗೆ ನಿಮ್ಮ ಅಡ್ವೈಸ್ ?
“ಈಟ್ ಕ್ಲೀನ್, ಟ್ರೈನ್ ದರ್ಟಿ” ಇದು ನನ್ನ ಸಕ್ಸಸ್ ಮಂತ್ರ. ಬಾಡಿ ಬಿಲ್ಡಿಂಗ್ ಅನ್ನುವಂತದ್ದು ಒಂದು ದಿನದಲ್ಲಿ ಆಗುವಂತದ್ದಲ್ಲ. ನಂಬಿಕೆ ಜೊತೆಗೆ ನೋವನ್ನು ಸಹಿಸಿಕೊಳ್ಳುವ ಶಕ್ತಿ ಹಾಗೂ ಸತತ ಪರಿಶ್ರಮ ಬೇಕೇ ಬೇಕು.