ಬಣ್ಣದ ಲೋಕ ಎಂಬುದೇ ಮಾಯಾವಿ ಜಗತ್ತು. ಅಲ್ಲಿ ನೆಲೆಯೂರಬೇಕು ಏನಾದರೊಂದು ಸಾಧಿಸಬೇಕೆಂದು ಹೊರಡುವ ಯುವಕ, ಯುವತಿಯರಿಗೇನು ಕೊರತೆಯಿಲ್ಲ. ಅವಕಾಶಕ್ಕಾಗಿ ನಿರ್ದೇಶಕರ, ನಿರ್ಮಾಪಕರ ಮನೆಗಳಿಗೆ ಪ್ರತಿದಿನ ಎಡತಾಕುವ ದೊಡ್ಡ ಪಡೆಯೇ ಇದೆ. ಸಿನಿಮಾ ಕ್ಷೇತ್ರ ಸಾಗರವಿದ್ದಂತೆ ಅಲ್ಲಿಗೆ ಸಹಸ್ರಾರು ಮಂದಿ ಧುಮುಕಿದರೂ ಕೆಲವರಷ್ಟೆ ಯಶಸ್ಸಿನ ದಡ ಸೇರುತ್ತಾರೆ.
ಹೀಗಾಗಿ ಅವಕಾಶ ಮತ್ತು ಅದೃಷ್ಟ ಎರಡು ಬೇಕೆಂದು ಅಭಿಪ್ರಾಯ ಪಡುವರು ಹೆಚ್ಚಿನ ಮಂದಿ ಸಿಗುತ್ತಾರೆ. ಬಣ್ಣದಲೋಕದ ಬಗ್ಗೆ ಗೊತ್ತಿದ್ದರೂ ಎಲ್ಲವನ್ನು ಎದುರಿಸಿ ಅಲ್ಲಿ ಏನಾದರೊಂದು ಸಾಧಿಸಿಯೇ ತೀರುತ್ತೇನೆ ಎಂದು ಹೊರಡುವ ಬೇಕಾದಷ್ಟು ನಟ, ನಟಿಯರಿದ್ದಾರೆ. ಯಾವ ಪಾತ್ರವಾದರೂ ಸರಿ ಅದಕ್ಕೆ ಜೀವ ತುಂಬುತ್ತೇನೆ ಎನ್ನುವವರೂ ಇದ್ದಾರೆ. ಇಂತಹ ನಟ ನಟಿಯರ ಸಾಲಿನಲ್ಲಿ ನಟಿ ಅಶ್ವಿನಿರೆಡ್ಡಿ ಒಬ್ಬರಾಗಿ ಗಮನಸೆಳೆಯುತ್ತಾರೆ. ಮೂಲತಃ ಅಂಧ್ರಪ್ರದೇಶದ ಪೆನುಗುಂಡದವರಾದ ಇವರು ಹುಟ್ಟಿ ಬೆಳೆದಿದ್ದು ಓದಿದ್ದು ಎಲ್ಲವೂ ಕರ್ನಾಟಕದಲ್ಲಿಯೇ. ಪಿಯುಸಿಯನ್ನು ದಕ್ಷಿಣ ಕನ್ನಡದ ಮೂಡಬಿದಿರೆಯ ಅಳ್ವಾಸ್ ನಲ್ಲಿ ಮುಗಿಸಿ, ಬೆಂಗಳೂರಿನ ಕೆ.ಎನ್ಎಸ್ಐಟಿಯಲ್ಲಿ ಇಂಜಿನಿಯರಿಂಗ್ ಮಾಡಿದ್ದಾರೆ. ಆದರೆ ಪ್ರತಿಭಾನ್ವಿತೆಯಾಗಿದ್ದ ಇವರಿಗೆ ಶಾಲಾ ದಿನಗಳಲ್ಲೇ ಸಿನಿಮಾ ರಂಗದತ್ತ ಒಲವಿತ್ತು. ಅದು ಕಾಲೇಜಿಗೆ ಹೋಗುತ್ತಿದ್ದಂತೆಯೇ ಇಮ್ಮಡಿಯಾಯಿತು.
ಸಿನಿಮಾ ರಂಗಕ್ಕೆ ನಟನೆಯೊಂದಿಗೆ ಬೇಕಾಗುವ ಇತರೆ ಕಲೆಗಳನ್ನು ಕರಗತಮಾಡಿಕೊಂಡ ಅವರು ಡ್ಯಾನ್ಸ್ ಸೇರಿದಂತೆ ಮತ್ತಿತರ ಕಲೆಗಳನ್ನು ರೂಢಿಸಿಕೊಂಡರು. ಚೆಲುವೆಯಾಗಿದ್ದ ಈಕೆಗೆ ಅವಕಾಶ ಸಿಗುವುದು ಕಷ್ಟವೇನೂ ಆಗಲಿಲ್ಲ. ಇಂಜಿನಿಯರಿಂಗ್ ಮಾಡುತ್ತಿರುವಾಗಲೇ ಸಿನಿಮಾದಲ್ಲಿ ನಟಿಸಲು ಅವಕಾಶ ದೊರೆಯಿತು. ಹಾಗಾಗಿ ಅವರು ಕಲ್ಯಾಣ, ಮಿಸ್ಟರ್ ಮೊಮ್ಮಗ, ಚಿತ್ರದಲ್ಲಿ ನಾಯಕಿಯ ಗೆಳತಿಯಾಗಿ ಬಣ್ಣ ಹಚ್ಚಿದರು. ಆ ನಂತರ ನಿರೂಪಕಿಯಾಗಿ ಕೆಲಸ ಮಾಡಲು ಮುಂದಾದರಾದರೂ ನಟನೆ ಮತ್ತೆ ಸೆಳೆಯಿತು. ನೋ ಪಾರ್ಕಿಂಗ್, ಧಮ್ಕಿ, ಡು ಆರ್ ಡೈ ಚಿತ್ರದಲ್ಲಿ ನಾಯಕಿಯಾಗುವ ಅವಕಾಶವೂ ಸಿಕ್ಕಿತು. ತೆಲುಗಿನ ಕಿರುತೆರೆಯಲ್ಲಿ ಅವಕಾಶ ಸಿಕ್ಕರೂ ಅದನ್ನು ಒಪ್ಪದ ಅವರು ಸ್ಯಾಂಡಲ್ ವುಡ್ ನಲ್ಲಿ ಹೆಸರು ಮಾಡಬೇಕೆಂಬ ಹಂಬಲದಿಂದ ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ತನ್ನ ಶಾಲಾ ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಪಾಶ್ಚಾತ್ಯ ನೃತ್ಯಗಳನ್ನು ಅಭ್ಯಾಸ ಮಾಡಿದ್ದು ಅವರ ನೆರವಿಗೆ ಬರುತ್ತಿದೆ. ನಟಿಯಾಗಿ ಬೆಳೆಯುವುದಕ್ಕೆ ಅವರ ಮನೆಯವರ ಪ್ರೋತ್ಸಾಹವೂ ಇದೆಯಂತೆ. ನಾಯಕಿಯಂತಹ ಪ್ರಧಾನ ಪಾತ್ರಗಳಿಗೆ ಮಾತ್ರ ಒತ್ತುಕೊಡುತ್ತೇನೆ ಎನ್ನುವ ಅವರು ತಾನು ನಿರ್ವಹಿಸುವ ಪಾತ್ರಗಳಿಗೆ ಜೀವ ತುಂಬುವ ಪ್ರಯತ್ನ ಮಾಡುವುದಾಗಿಯೂ ಹೇಳುತ್ತಾರೆ.
ಸ್ಯಾಂಡಲ್ ವುಡ್ ನಲ್ಲಿ ಹೆಸರು ಮಾಡಿದ ನಟಿಯರ ದೊಡ್ಡಪಟ್ಟಿಯೇ ಇದೆ. ಕೆಲವರು ಮಿಂಚಿ ಉಳಿದುಕೊಂಡಿದ್ದರೆ, ಮತ್ತೆ ಕೆಲವರು ಮಿಂಚಿ ಮರೆಯಾಗಿದ್ದಾರೆ. ಇನ್ನು ಕೆಲವರು ಉಳಿದುಕೊಳ್ಳಲು ಹೋರಾಡುತ್ತಿದ್ದಾರೆ. ಇವರೆಲ್ಲರ ನಡುವೆ ಅಶ್ವಿನಿರೆಡ್ಡಿಯನ್ನು ಜನ ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದನ್ನು ಕಾಲವೇ ಹೇಳಬೇಕು.