ಜೋಧ್ ಪುರ: ಪರವಾನಗಿ ಇಲ್ಲದ ಶಸ್ತ್ರಾಸ್ತ್ರವನ್ನು ಅಕ್ರಮವಾಗಿ ಹೊಂದಿದ್ದ ಆರೋಪ ಪ್ರಕರಣದಲ್ಲಿ ಬಾಲಿವುಡ್ ನ ಜನಪ್ರಿಯ ನಟ ಸಲ್ಮಾನ್ ಖಾನ್ ಗೆ ಜೋಧಪುರ ಸೆಷನ್ಸ್ ಕೋರ್ಟ್ ನಿರ್ದೋಷಿ ಎಂದು ಘೋಷಿಸಿ, ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ.
ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಈಗಾಗಲೆ ಖುಲಾಸೆಗೊಂಡಿದ್ದು, 1998ರ ಅಕ್ಟೋಬರ್ 1-2ರಂದು ಕಂಕಾನಿ ಗ್ರಾಮದಲ್ಲಿ ಹಮ್ ಸಾಥ್ ಸಾಥ್ ಹೈ ಚಿತ್ರೀಕರಣದ ಸಂದರ್ಭದಲ್ಲಿ ರಾಜಸ್ಥಾನದ ಕಾಡೊಂದರಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಕೃಷ್ಣ ಮೃಗ ಬೇಟೆಯಾಡಿದ್ದರು.
ಈ ಪ್ರಕರಣದಲ್ಲಿ ಸಲ್ಮಾನ್ ಸೇರಿದಂತೆ ನಟಿ ಸೋನಾಲಿ ಬೇಂದ್ರೆ, ತಬು, ನೀಲಂ, ಸೈಫ್ ಅಲಿ ಖಾನ್ ಮೇಲೆ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಲೂನಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಕೆಳ ಹಂತದ ನ್ಯಾಯಲಯದಲ್ಲಿ ಆರೋಪಿಗಳ ಆರೋಪ ಸಾಬೀತಾಗಿತ್ತು ಆದರೆ, ಮರು ವರ್ಷವೇ ಹೈಕೋರ್ಟಿನಲ್ಲಿ ತಡೆಯಾಜ್ಞೆ ಸಿಕ್ಕಿತ್ತು. ನಂತರ ಸುಪ್ರೀಂಕೋರ್ಟಿನಲ್ಲಿ ಪ್ರಕರಣ ಅಂತಿಮ ಹಂತ ತಲುಪಿತ್ತು. ಸುಪ್ರೀಂಕೋರ್ಟ್ ನಿರ್ದೇಶನದಂತೆ ಫೆ.5ರಂದು ವಿಚಾರಣೆ ಮುಗಿಸಿದ ರಾಜಸ್ಥಾನ ಕೋರ್ಟ್ ಅಂತಿಮ ತೀರ್ಪು ಫೆಬ್ರವರಿ 25, 2015ರಂದು ನೀಡಲು ಮುಂದಾಗಿತ್ತು. ಆದರೆ, 5 ಪ್ರಮುಖ ಸಾಕ್ಷಿಗಳ ಮರು ವಿಚಾರಣೆಗೆ ಕೋರ್ಟ್ ಅನುಮತಿ ನೀಡಿದ್ದರಿಂದ ಮತ್ತೊಮ್ಮೆ ಸಲ್ಮಾನ್ ಸೇರಿದಂತೆ ಎಲ್ಲರ ಹೇಳಿಕೆ ದಾಖಲಿಸಿಕೊಳ್ಳಲಾಗಿತ್ತು.