ಚೊಚ್ಚಲ ನಿರ್ದೇಶನದ ‘ಎಕ್ಕಸಕ’ ಚಿತ್ರದಲ್ಲೇ ಯಶಸ್ಸಿನ ರುಚಿಯನ್ನು ಕಂಡ ನಿರ್ದೇಶಕ ಸೂರಜ್ ಶೆಟ್ಟಿಯವರು ತಮ್ಮ ಎರಡನೇ ಸಿನಿಮಾ ‘ಪಿಲಿಬೈಲ್ ಯಮುನಕ್ಕ’ದ ಮೂಲಕ ಸೊರಗುತ್ತಿದ್ದ ತುಳು ಸಿನಿಮಾರಂಗಕ್ಕೆ ಗೆಲುವಿನ ಟಾನಿಕ್ ನೀಡಿದ್ದಲ್ಲದೆ ತುಳು ಪ್ರೇಕ್ಷಕನನ್ನು ನಗೆಗಡಲಲ್ಲಿ ತೇಲಿಸಿದರು. ಇಂತಿಪ್ಪ ಸೂರಜ್ ಶೆಟ್ಟಿಯವರು ತುಳುಚಿತ್ರರಂಗದಲ್ಲೇ ಮೊದಲ ಬಾರಿಗೆಯೆಂಬಂತೆ ಕ್ರೌಡ್ ಫಂಡಿಂಗ್ ಮೂಲಕ ‘ಇಂಗ್ಲೀಷ್’ ಎಂಬ ಚಿತ್ರದ ತಯಾರಿಯಲ್ಲಿರುವಾಗ ಸಿಕ್ಕ ಕ್ಷಣದಲ್ಲಿ ಹಂಚಿಕೊಂಡ ಭಾವನೆಗಳು.
1. ಮಾಡಿರುವ ಎರಡೂ ಸಿನೆಮಾಗಳು ಸೂಪರ್ ಹಿಟ್ ಆಗಿವೆ, ಒಂದರ ಹಿಂದೊಂದು ಹಿಟ್ ಕೊಡಲು ಹೇಗೆ ಸಾಧ್ಯವಾಯಿತು?
ಮೊದಲನೆಯದಾಗಿ ಹಾರ್ಡ್ವರ್ಕ್ ನಂತರದ್ದು ತುಳು ಪ್ರೇಕ್ಷಕರ ಆಶೀರ್ವಾದ. ಇದಕ್ಕಿಂತ ಹೆಚ್ಚಾಗಿ ಇನ್ನೇನು ಹೇಳೋದು.
2. ನಿಮ್ಮ ಎರಡೂ ಸಿನಿಮಾಗಳು ಕಥೆಗಿಂತ ಜಾಸ್ತಿ ಕಾಮಿಡಿಗೆ ಒತ್ತು ನೀಡಿವೆ, ಕಾಮಿಡಿ ಹೊರತಾಗಿ ಸಿನಿಮಾ ಮಾಡ್ಬೇಕು ಅಂತ ಅನಿಸಿಲ್ವಾ?
ನನಗೆ ಚಿಕ್ಕಂದಿನಿಂದಲೂ ಕಾಮಿಡಿ ಸಿನಿಮಾಗಳೆಂದರೆ ತುಂಬಾ ಇಷ್ಟ. ಕಾಸು ಕೊಟ್ಟ ಪ್ರೇಕ್ಷಕನನ್ನು ಅಳಿಸುವುದು ನನಗೇಕೋ ಸರಿ ಕಾಣಲ್ಲ. ಜನ ನಗ್ಬೇಕು, ಸಂತೋಷ ಪಡ್ಬೇಕು ಅನ್ನೋದೆ ನನ್ನ ಉದ್ದೇಶ. ಇಲ್ಲಿವರೆಗೆ ಕಾಮಿಡಿ ಬಿಟ್ಟು ಬೇರೆ ಥರ ಮಾಡ್ಬೇಕು ಅನಿಸಿಲ್ಲಾ. ಮುಂದೆ ಗೊತ್ತಿಲ್ಲಾ. ಆದರೆ ಸದ್ಯಕ್ಕೆ ಮಾಡ್ತಿರೋದೆಲ್ಲಾ ಪಕ್ಕಾ ಕಾಮಿಡಿ ಸಿನಿಮಾಗಳು.
3. ತುಳುಚಿತ್ರರಂಗದಲ್ಲಿ ಕಾಲೆಳೆಯುವವರು ಇದ್ದಾರೆ ಅಂತಾರಪ್ಪಾ, ನಿಮಗೆ ಇಂಥ ಅನುಭವ ಆಗಿದೆಯಾ?
ಕಾಲೆಳೆಯುವವರ ಬಗ್ಗೆ ನಾನು ಗಮನ ಕೊಟ್ಟಿಲ್ಲ. ನನಗೆ ಇಲ್ಲಿವರೆಗೆ ಅಂಥ ಅನುಭವನೂ ಆಗಿಲ್ಲ. ಕಾಲೆಳೆಯುವವರು ಎಲ್ಲಾ ರಂಗಗಳಲ್ಲೂ ಇರ್ತಾರೆ. ಚಿತ್ರರಂಗದಲ್ಲಿ ಮಾತ್ರ ಅಲ್ಲ. ನಾನು ನನ್ನ ಕೆಲಸಗಳಲ್ಲಿ ಬ್ಯುಸಿ ಇರೋದ್ರಿಂದ ಬೇರೆ ಯಾವುದೇ ಸಂಗತಿಗಳಿಗೂ ಗಮನ ಕೊಡುತ್ತಿಲ್ಲ.
4. ಸಿನಿಮಾ ರಂಗದಲ್ಲಿ ನಿಮ್ಮ ಗಾಡ್ ಫಾದರ್? ನಿಮ್ಮ ಸಿನೆಮಾ ಜರ್ನಿ ಬಗ್ಗೆ ಹೇಳಿ?
ನನಗೆ ಸಿನಿಮಾವನ್ನು ಕಲಿಸಿದ ಗುರುಗಳು ಕ್ಯಾಮೆರಾಮೆನ್ ಎಚ್.ಸಿ.ವೇಣು ಅವರು. ಅವರೇ ನನ್ನ ಗಾಡ್ ಫಾದರ್. ಮೊದಲು ನಾನು ಜಾಹೀರಾತುಗಳನ್ನು ಮಾಡ್ತಿದ್ದೆ. ಆಮೇಲೆ ಧಾರಾವಾಹಿಗಳಲ್ಲಿ ಕೆಲಸ ಮಾಡಿದೆ. ಕನ್ನಡ ಚಿತ್ರರಂಗದಲ್ಲಿ 12 ವರುಷಗಳ ಕಾಲ ದುಡಿದಿದ್ದೇನೆ. ಶ್ರೀನಿವಾಸ್ ಕೌಶಿಕ್ ಅವರ ಬಳಿ ನಿರ್ದೇಶನದ ಪಟ್ಟುಗಳನ್ನು ಕಲಿತು ನಂತರ ತುಳುವಿನ ‘ಕಂಚಿಲ್ದ ಬಾಲೆ’ ಸಿನಿಮಾಕ್ಕೆ ಕೆಲಸ ಮಾಡಿದ್ದೇನೆ. ಅಲ್ಲದೆ ನಾಗಾಭರಣ ಸರ್ ಅವರಂತಹ ಮಹಾನುಭವಿಗಳ ಜೊತೆ ಕೆಲಸ ಮಾಡಿದ ಪುಣ್ಯದ ಫಲವಿದೆ.
5. ಮೊಟ್ಟಮೊದಲ ಬಾರಿಗೆ ತುಳುವಿನಲ್ಲೂ ಕ್ರೌಡ್ ಫಂಡಿಂಗ್ ಮೂಲಕ ಸಿನಿಮಾ ಮಾಡಲು ಹೊರಟಿದ್ದೀರಾ, ಇದು ಸಾಧ್ಯ ಅನ್ಸುತ್ತಾ?
ಕ್ರೌಡ್ ಫಂಡಿಂಗ್ ಮೂಲಕ ಸಿನಿಮಾ ಮಾಡಿದ್ರೆ ಹೆಚ್ಚು ಜನರಿಗೆ ರೀಚ್ ಆಗುತ್ತೆ. ಅಲ್ಲದೆ ಹೊಸ ಕಲಾವಿದರು, ಹೊಸ ತಂತ್ರಜ್ಞರು, ಹೊಸ ನಿರ್ಮಾಪಕರು ಬರಲು ಸಾಧ್ಯವಾಗುತ್ತೆ. ಎಲ್ಲಾ ಭಾಷೆಗಳಲ್ಲೂ ಹೊಸದನ್ನು ಟ್ರೈ ಮಾಡ್ತಾರೆ. ನಾವ್ಯಾಕೆ ಮಾಡೋಕೆ ಆಗಲ್ಲಾ. ತುಂಬಾ ಜನರಿಗೆ ಸಿನಿಮಾ ಮಾಡ್ಬೇಕು ಅನ್ನೋ ಆಸೆ ಇರುತ್ತೆ ಆದರೆ ಅವರ ಬಳಿ ದೊಡ್ಡ ಬಜೆಟ್ ಇರುವುದಿಲ್ಲ. ಸಣ್ಣ ಬಜೆಟ್ ಇರುತ್ತೆ ಹಾಗಾಗಿ ಇಲ್ಲಿ ಅಂಥಹ ಆಕಾಂಕ್ಷಿಗಳನ್ನು ಸೇರಿಸಿಕೊಂಡು ಹೊಸತನ್ನು ಮಾಡೋ ಸಾಹಸ ಇದು.
6. ನಿಮ್ಮ ಹೊಸ ಸಿನೆಮಾ ‘ಇಂಗ್ಲೀಷ್’ ಬಗ್ಗೆ ಸ್ವಲ್ಪ ಹೇಳಿ?
ನಾವುಗಳು ಯಾವತ್ತೂ ನಮ್ಮ ಭಾಷೆಯನ್ನು ಬದಿಗಿಟ್ಟು ಇಂಗ್ಲೀಷನ್ನೇ ಅಪ್ಪಿಕೊಳ್ಳುವುದು ಜಾಸ್ತಿ. ಇಂಗ್ಲೀಷ್ ಮಾತಾಡಲು ಬಂದ್ರೆ ಆತ ಪರಮ ಜ್ಞಾನಿ ಅನ್ನುವ ಮೂರ್ಖ ಅಭಿಪ್ರಾಯವೂ ಇದೆ. ಇಂಥಹ ಒಂದು ಸಬ್ಜೆಕ್ಟನ್ನು ಇಟ್ಟುಕೊಂಡು ಕಾಮಿಡಿ ಸಿನೆಮಾ ಮಾಡುತ್ತಿದ್ದೇನೆ. ಹೆಸರು ಮಾತ್ರ ‘ಇಂಗ್ಲೀಷ್’ ಸಿನಿಮಾದೊಳಗೆ ತುಳು ಭಾಷೆಯಿದೆ.
7. ಪಿಲಿಬೈಲ್ ಯಮುನಕ್ಕ ತಂಡ ಬ್ರೇಕ್ ಆಯ್ತು, ಗೆಳೆಯರ ನಡುವೆ ಮನಸ್ತಾಪ ಅನ್ನುವ ಸುದ್ದಿಯಿದೆ. ಹೌದಾ? ನಿಜಾನಾ?
ಬ್ರೇಕ್ ಅಪ್ ಆಗಿರುವುದು ನಿಜ. ಆದರೆ ಜನಗಳು ಮಾತಾಡುವಷ್ಟರ ಮಟ್ಟಿಗೆ ಕೆಟ್ಟದಾಗಿಲ್ಲ. ನಮ್ಮ ಹಾಲಿನಂತಹ ಗೆಳೆತನವನ್ನು ಯಾವುದೋ ಒಂದು ಮಾನವರೂಪಿ ಬ್ಯಾಕ್ಟೀರಿಯಾ ಒಡೆದು ಹಾಕಿಬಿಟ್ಟಿದೆ. ಮನಸ್ತಾಪವನ್ನು ನಾವು ನಾವೇ ಕೂತು ಸರಿ ಮಾಡಿದ್ದೇವೆ. ಅವರ ಸಿನಿಮಾಕ್ಕೆ ನಮ್ಮ ಬೆಂಬಲ ಯಾವತ್ತೂ ಇದೆ.
8. ನಿಮ್ಮ ಮೊದಲ ಸಿನಿಮಾ ‘ಎಕ್ಕಸಕ’ ಬಗ್ಗೆ ಹೇಳಿ. ಮೊದಲ ಅನುಭವ ಹೇಗಿತ್ತು?
ಎಕ್ಕಸಕ ಮಾಡುವಾಗ ಜನ ನನ್ನ ಸಿನಿಮಾವನ್ನು ಸ್ವೀಕರಿಸುತ್ತಾರಾ ಎಂಬ ಸಹಜವಾದ ಭಯವಿತ್ತು. ಜನ ಯಾಕೆ ನನ್ನ ಸಿನಿಮಾವನ್ನು ನೋಡ್ಬೇಕು ಎಂಬಂತಹ ಪ್ರಶ್ನೆಗಳಿದ್ದವು. ಆಮೇಲೆ ತುಂಬಾನೇ ಹಾರ್ಡ್ವರ್ಕ್ ಮಾಡಿದೆ. ಯಾವುದೇ ಕಾರಣಕ್ಕೂ ಟೆನ್ಶನ್ ಮಾಡ್ತಿರ್ಲಿಲ್ಲ. ಎಲ್ಲವನ್ನೂ ಕೂಲಾಗಿ ನಿಭಾಯಿಸಿದೆ. ಸಿನಿಮಾ ಲೇಟಾಗಿ ರಿಲೀಸ್ ಆದ್ರೂ ಬಿಗ್ ಹಿಟ್ ಆಯ್ತು.