ಸುಳ್ಯ: ಜ್ಞಾನದ ಭಂಡಾರವಾದ ವಿಜ್ಞಾನವನ್ನು ಯಂತ್ರಗಳಾಗಿ ಉಪಯೋಗಿಸಿ ನಾವು ಸುಲಭ ಬದುಕಿಗೆ ಒಗ್ಗಿ ಹೋಗಿದ್ದೇವೆ. ಯಂತ್ರಗಳು ನಮ್ಮ ನೈಜ ಬದುಕನ್ನು ಕಸಿದು ನಾವು ಅಧಃಪತನದತ್ತ ಸಾಗುತ್ತಿದ್ದೇವೆ ಎಂದು ಪ್ರಸಿದ್ಧ ರಂಗ ನಿರ್ದೇಶಕ ಪ್ರಸನ್ನ ಹೆಗ್ಗೋಡು ಹೇಳಿದ್ದಾರೆ.
ಸುಳ್ಯದ ಸಾಂಸ್ಕೃತಿಕ ಕಲಾ ಕೇಂದ್ರ ರಂಗಮನೆಯಲ್ಲಿ ಆರಂಭಗೊಂಡ ರಾಜ್ಯಮಟ್ಟದ ಸಾಂಸ್ಕೃತಿಕ ಉತ್ಸವ `ರಂಗ ಸಂಭ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯಂತ್ರಗಳನ್ನು ಅವಲಂಬಿಸಿ ತುಂಬಾ ಕಾಲ ಬದುಕು ಸಾಧ್ಯವಿಲ್ಲ, ನೈಜ ಬದುಕು ಅನಿವಾರ್ಯ ಎಂಬ ಸತ್ಯ ಈಗ ಎಲ್ಲರಿಗೂ ಅರಿವಾಗುತಿದೆ ಎಂದ ಅವರು ಮಕ್ಕಳಿಗೆ ಕಲೆ, ಸಂಸ್ಕೃತಿಯ ಅರಿವನ್ನು ನೀಡಿ ನೈಜ ಬದುಕಿನ ಅರ್ಥವನ್ನು ತಿಳಿಸಿಕೊಡಬೇಕಾಗಿದೆ. ರಂಗಭೂಮಿಯ ಮೂಲಕ ಸಂಸ್ಕೃತಿ, ಕಲೆ ಮತ್ತು ನೈಜ ಬದುಕಿನ ಅರ್ಥವನ್ನು ತಿಳಿಸಿಕೊಡುವ ಕೆಲಸ ಆಗಬೇಕು ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಬ್ಯಾಂಕಿನ ಸಾರ್ವಜನಿಕ ಸಂಪರ್ಕ ಮುಖ್ಯ ಪ್ರಬಂಧಕ ಶ್ರೀನಿವಾಸ ದೇಶಪಾಂಡೆ ಮಾತನಾಡಿ ನಾಡನ್ನು ಸಾಂಸ್ಕೃತಿಕ ಗೂಡನ್ನಾಗಿಸುವ ಸಾಂಸ್ಕೃತಿಕ ಕೇಂದ್ರಗಳು ಎಲ್ಲಡೆ ರಾರಾಜಿಸಬೇಕು. ಆಗ ಮಾತ್ರ ಜೀವನದಲ್ಲಿ ನಿಜ ಅರ್ಥದ ಆನಂದವನ್ನು ಪಡೆಯಲು ಸಾಧ್ಯ ಎಂದು ಹೇಳಿದರು.
ತಾಲೂಕನ್ನು ಕಲಾಕೇಂದ್ರವಾಗಿಸುವ ಚಿಂತನೆ- ಅಂಗಾರ
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಅಂಗಾರ ಮಾತನಾಡಿ ಕಲೆ,ಸಂಸ್ಕೃತಿಯಿಂದ ದೂರವಾಗಿ ಆತ್ಮ ವಂಚನೆಯ ಬದುಕನ್ನು ಬದುಕುತ್ತಿರುವುದರಿಂದ ನಮ್ಮ ಜೀವನದ ನೆಮ್ಮದಿ ಹಾಳಾಗುತಿದೆ. ಕಲೆ, ಸಂಸ್ಕೃತಿಯನ್ನು ಬಿಟ್ಟ ಬದುಕು ಸಾಧ್ಯವಿಲ್ಲ ಎಂದು ಹೇಳಿದರು. ಕಲೆಯನ್ನು ಪೋಷಿಸಲು ಇಂದು ಕಲಾವಿದರ ನಿರ್ಮಾಣ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಸುಳ್ಯ ತಾಲೂಕನ್ನು ಕಲಾ ಕೇಂದ್ರವಾಗಿಸುವ ಬಗ್ಗೆ ಯೋಚನೆ ನಡೆಸಲಾಗುವುದು ಎಂದು ಅವರು ಹೇಳಿದರು.
ಭಾರದ್ವಾಜ್ರಿಗೆ ಗೌರವಾರ್ಪಣೆ:
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತೂಗು ಸೇತುವೆಗಳ ಸರದಾರ ಗಿರೀಶ್ ಭಾರದ್ವಾಜ್ ರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಎಲ್ಲರ ಪ್ರೀತಿ ವಿಶ್ವಾಸ ಮತ್ತು ಹಾರೈಕೆಯಿಂದ ಪದ್ಮಶ್ರೀ ತನಗೆ ಪ್ರಶಸ್ತಿ ಬಂದಿದೆ. ಎಲ್ಲರ ಪರವಾಗಿ ತನಗೆ ಪ್ರಶಸ್ತಿ ಸಂದಿದೆ ಎಂದು ಅವರು ಹೇಳಿದರು. ವ್ಯಂಗ್ಯ ಚಿತ್ರಕಾರ ದಿನೇಶ್ ಕುಕ್ಕುಜಡ್ಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸುಜನಾ ಸುಳ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಂಗಮನೆಯ ಅಧ್ಯಕ್ಷ ಜೀವನ್ರಾಂ ಸುಳ್ಯ ಸ್ವಾಗತಿಸಿ, ಡಾ.ಸುಂದರ್ ಕೇನಾಜೆ ವಂದಿಸಿದರು. ಡಾ.ವೀಣಾ ನಿರೂಪಿಸಿದರು.
ಸಾಂಸ್ಕೃತಿಕ ವೈಭವ: ಸಾಂಸ್ಕೃತಿಕ ಸಂಭ್ರಮದ ಮೊದಲ ದಿನ ಗಾನನೃತ್ಯ ಅಕಾಡೆಮಿ ಸುಳ್ಯ ಶಾಖೆಯ ವತಿಯಿಂದ ನೃತ್ಯ ಸಂಗಮ, ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಅವರು ಪ್ರಸ್ತುತ ಪಡಿಸಿದ ಪ್ರೊ.ಅಮೃತ ಸೋಮೇಶ್ವರ ವಿರಚಿತ ಜ್ವಾಲಾಮುಖಿ ಅಂಬೆ ನೃತ್ಯ ಪ್ರಯೋಗ ನಡೆಯಿತು. ಪ್ರಸನ್ನ ಹೆಗ್ಗೋಡು ರಚಿಸಿ ನಿರ್ದೇಶಿಸಿ ರಂಗವಲ್ಲಿ ಮೈಸೂರು ಅಭಿನಯಿಸಿದ ಗಾಂಧೀಜಿಯವರ `ಹಿಂದ್ ಸ್ವರಾಜ್’ ಕೃತಿ ಆಧಾರಿತ `ಸ್ವರಾಜ್ಯದಾಟ’ ನಾಟಕ ಪ್ರೇಕ್ಷಕರ ಮನ ಸೆಳೆಯಿತು.