ಅಕ್ಷಯ್ ಕುಮಾರ್ ನಟನೆಯ ‘ರುಸ್ತುಂ’ ಚಿತ್ರ ಹೆಚ್ಚು ಸುದ್ದಿ ಮಾಡಿರದಿದ್ದರೂ ಅದೇ ಸಿನಿಮಾದ ‘ತೇರೆ ಸಂಗ್ ಯಾರಾ’ ಹಾಡು ಮಾತ್ರ ಪ್ರತಿಯೊಬ್ಬ ಸಂಗೀತ ಪ್ರೇಮಿಯ ಮನಮುಟ್ಟಿದ್ದು ಮಾತ್ರ ಸುಳ್ಳಲ್ಲ. ಹಾಡು ಬಿಡುಗಡೆಯಾಗುತ್ತಿದ್ದಂತೆ ವಸಂತಕಾಲಕ್ಕೆ ಕಾಯುತ್ತಿದ್ದ ಕೋಗಿಲೆಯಂತೆ ಕಾದಿದ್ದ ಒಂದಿಷ್ಟು ಯುವ ಸಂಗೀತ ಪ್ರೇಮಿಗಳು ಈ ಹಾಡಿನ ಕವರ್ ಸಾಂಗ್ ಮಾಡುವುದರೊಂದಿಗೆ ತಮ್ಮ ಪ್ರತಿಭೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶಿಸಲು ಶುರುವಿಟ್ಟರು. ಇಂಥವರಲ್ಲಿ ಮಂಗಳೂರಿನ ಉತ್ಸಾಹಿ ಯುವಕರ ತಂಡವೂ ಒಂದು.
ಮಂಗಳೂರಿನ ಯುವ ಸಂಗೀತಗಾರ ಸ್ಟೀಫನ್ ಫ್ರಾಂಕ್ ಮತ್ತು ತಂಡ, ಯುವ ಗಾಯಕ ನಿಹಾಲ್ ತಾವ್ರೋ ದನಿಯಲ್ಲಿ ಹಾಡಿಸಿ, ವಿವೇಕ್ ಗೌಡ ಛಾಯಾಗ್ರಹಣ ಮತ್ತು ಸಂಕಲನದಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ಯೂಟ್ಯೂಬಿನಲ್ಲಿ ಬಿಡುಗಡೆ ಮಾಡಿದ ‘ತೇರೆ ಸಂಗ್ ಯಾರಾ’ ಕವರ್ ಸಾಂಗ್ ಈಗ ಬರೋಬ್ಬರಿ ಹತ್ತು ಲಕ್ಷ ವೀಕ್ಷಕರನ್ನು ತಲುಪಿ ಪ್ರಶಂಸೆಯ ಸುರಿಮಳೆಯನ್ನೇ ಗಿಟ್ಟಿಸಿದೆ. ಈ ಅಭೂತಪೂರ್ವ ಯಶಸ್ಸಿನಿಂದ ಹಿಗ್ಗಿರುವ ಸ್ಟೀಫನ್ ತಂಡ ಇನ್ನಷ್ಟು ಹೊಸ ಯೋಜನೆಗಳನ್ನು ಹಾಕಿಕೊಂಡಿದೆಯಂತೆ. ‘ತೇರೆ ಸಂಗ್ ಯಾರಾ’ ಕವರ್ ಸಾಂಗಿನಂತೆ ಇವರ ಮುಂದಿನ ಯೋಜನೆಗಳೂ ಯಶಸ್ಸನ್ನು ಗಳಿಸಿ, ಈ ಉತ್ಸಾಹಿ ತಂಡ ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಉನ್ನತ ಮಟ್ಟದಲ್ಲಿ ಗುರುತಿಸುವಂತಾಗಲಿ.