ಕಿರಿಕ್ ಪಾರ್ಟಿ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಈಗ ಖುಷಿಯಾಗಿದ್ದಾರೆ. ಆಕಸ್ಮಿಕವಾಗಿ ಚಿತ್ರರಂಗಕ್ಕೆ ಕಾಲಿಟ್ಟು, ಮಾಡಿದ ಮೊದಲ ಚಿತ್ರವೇ ಯಶಸ್ಸಾಗಿರುವುದು ಅವರ ಸಂತಸಕ್ಕೆ ಕಾರಣವಾಗಿದೆ.
ಮಂಡ್ಯದ ಬೆಂಗಳೂರು-ಮೈಸೂರು ಹೆದ್ದಾರಿಯ, ನಂದಾ ವೃತ್ತದಲ್ಲಿ ನೂತನವಾಗಿ ಪ್ರಾರಂಭವಾದ ನಕ್ಷತ್ರ ಕಲೆಕ್ಷನ್ಸ್ ಅತಿದೊಡ್ಡ ಉಡುಪುಗಳ ಷೋರೂಂ ಉದ್ಘಾಟಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದ ಜನತೆ ಸೇರಿದಂತೆ ರಾಜ್ಯದ ಜನರು ಕಿರಿಕ್ ಪಾರ್ಟಿ ಚಿತ್ರಕ್ಕೆ ಉತ್ತಮ ಪೋತ್ಸಾಹ ನೀಡಿದ್ದರಿಂದ ಉತ್ತಮವಾಗಿ ಪ್ರದರ್ಶನ ಕಾಣುತ್ತಿರುವುದಲ್ಲದೆ, ಈಗಾಗಲೇ ಶೇ. 75ರಷ್ಟು ಕಲೆಕ್ಷನ್ಸ್ ಬಂದಿದೆ ಎಂದರು.
ಕಿರಿಕ್ ಪಾರ್ಟಿ ಯಶಸ್ವಿಯಾದ ಹಿನ್ನಲೆಯಲ್ಲಿ ಅವಕಾಶಗಳು ಅರಸಿ ಬರುತ್ತಿರುವ ಬಗ್ಗೆ ಹೇಳಿದ ಅವರು, ಅಂಜನಿಪುತ್ರ ಚಿತ್ರಕ್ಕೆ ಅವಕಾಶ ಸಿಕ್ಕಿದನ್ನು ಬಿಚ್ಚಿಟ್ಟರಲ್ಲದೆ, ಈಗಾಗಲೇ ಚಿತ್ರೀಕರಣ ನಡೆಯುತ್ತಿರುವ ಬಗ್ಗೆಯೂ ಹೇಳಿದರು.
ಅಂಜನಿಪುತ್ರ ಚಿತ್ರದ ಜೊತೆಗೆ ಚಮಕ್ ಚಿತ್ರಕ್ಕೂ ಒಪ್ಪಿಗೆ ನೀಡಿದ್ದು, ಮುಂದಿನ ತಿಂಗಳಲ್ಲಿ ಅದರ ಚಿತ್ರೀಕರಣ ಆರಂಭವಾಗಲಿದೆ ಎಂದು ಹೇಳಿದರು. ಆ ಪಾತ್ರ, ಈ ಪಾತ್ರ ಎನ್ನದೆ ಎಲ್ಲ ರೀತಿಯ ಪಾತ್ರಗಳಲ್ಲಿ ಅಭಿನಯಿಸುವ ಬಯಕೆಯನ್ನು ಹೊರಗೆಡವಿದರು.
ಕೊಡಗಿನ ಬೆಡಗಿಯಾಗಿರುವ ರಶ್ಮಿಕಾ ಮಂದಣ್ಣ ಅವರಿಗೆ ನಟಿಸಿದ ಮೊದಲ ಚಿತ್ರವೇ ಬ್ರೇಕ್ ನೀಡಿದೆ. ಹೀಗಾಗಿ ಅವಕಾಶಗಳು ಅರಸಿಕೊಂಡು ಬರುತ್ತಿವೆ. ಆದರೆ ಅವರು ನಟಿಸುವ ಚಿತ್ರಗಳು ಮುಂದಿನ ದಿನಗಳಲ್ಲಿ ಯಶಸ್ಸು ತಂದುಕೊಡುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.