ಸಾಮಾನ್ಯವಾಗಿ ಯಾವುದೇ ಒಂದು ಪೇಂಟಿಂಗನ್ನು ಸರಿಯಾಗಿ ನೋಡಲು ಒಂದೈದು ನಿಮಿಷವಾದರೂ ಬೇಕು ಅನ್ನುವುದು ಸತ್ಯ ಆದರೆ ಮಂಗಳೂರಿನ ಈ ಕಲಾಚತುರೆ ಬರೀ ಮೂರು ನಿಮಿಷದಲ್ಲಿ ಪೇಂಟಿಂಗ್ ಮಾಡುತ್ತಾಳೆ ಅನ್ನುವುದು ಅಚ್ಚರಿ ಮತ್ತು ಆಕೆಯಲ್ಲಿರುವ ಅಗಾಧವಾದ ಪ್ರತಿಭೆಗೆ ಸಾಕ್ಷಿ. ಈಕೆಯ ಹೆಸರು ಶಬರಿ ಗಾಣಿಗ. ಮಂಗಳೂರಿನ ಶ್ರೀದೇವಿ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ, ಕೆಂಜಾರಿನಲ್ಲಿ MCA ಓದುತ್ತಿರುವ ಶಬರಿ ಬಾಲ್ಯದಿಂದಲೇ ಪೇಂಟಿಂಗ್ ಗೀಳನ್ನು ಹತ್ತಿಸಿಕೊಂಡವಳು.LKG ಯಲ್ಲಿರುವಾಗ ನ್ಯಾಷನಲ್ ಫ್ಲ್ಯಾಗ್ ಡ್ರಾಯಿಂಗ್ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಶಬರಿ ಆ ನಂತರ ಪರಿಪೂರ್ಣವಾದ ತರಬೇತಿಯೊಂದಿಗೆ ನೋಡಿದವರು ನಿಬ್ಬರಗಾಗುವಂತಹ ಜಾದೂ ಮಾಡಿಬಿಟ್ಟರು.
ಆಕೆಯ ಮಾತಿನಲ್ಲಿ ಹೇಳುವುದಾದರೆ ‘ನ್ಯಾಷನಲ್ ಫ್ಲ್ಯಾಗ್ ಡ್ರಾಯಿಂಗ್ ನನ್ನ ಮೊದಲ ಪೇಂಟಿಂಗ್ ಆಗಿತ್ತು. ಅದಕ್ಕಾಗಿ ಅಮ್ಮ ನನ್ನನ್ನು ತರಬೇತುಗೊಳಿಸಿದ್ದರು, ಅಲ್ಲಿ ನನಗೆ ಮೊದಲ ಬಹುಮಾನ ಬಂದಿತ್ತು, ನನ್ನ ಪ್ರತಿಭೆಯನ್ನು ನೋಡಿದ ನನ್ನ ಶಿಕ್ಷಕರು ನನ್ನನ್ನು ಡ್ರಾಯಿಂಗ್ ಕ್ಲಾಸಿಗೆ ಹಾಕಲು ಅಮ್ಮನ ಬಳಿ ಹೇಳಿದರು. ನಂತರ ಅಮ್ಮ ನನ್ನನ್ನು ನಮ್ಮ ಶಾಲೆಯಲ್ಲಿ ಡ್ರಾಯಿಂಗ್ ಸ್ಪೆಷಲ್ ಕ್ಲಾಸ್ ಮಾಡುತ್ತಿದ್ದ ವೀಣಾ ಭಂಡಾರಿ ಅವರ ಹತ್ತಿರ ಹೆಚ್ಚಿನ ತರಬೇತಿಗೆ ಸೇರಿಸಿದರು. ಏಳು ವರುಷ ವೀಣಾ ಭಂಡಾರಿ ಮೇಡಂ ಹತ್ತಿರ ತರಬೇತಿ ಪಡೆದು ನಂತರ BGM School of art ನ ಶಮೀರ್ ಆಲಿ ಅವರ ಬಳಿ ಪ್ರೊಫೆಷನಲ್ ಟ್ರೇನಿಂಗ್ ಪಡೆದುಕೊಂಡೆ. ಹತ್ತನೇ ತರಗತಿಗೆ ತಲುಪುತ್ತಿದ್ದಂತೆ ಪೇಟಿಂಗ್ ನ ಕೆಲವೊಂದು ಆಯಾಮಗಳನ್ನು ಚೆನ್ನಾಗಿ ಕಲಿತುಕೊಂಡಿದ್ದೆ. ನನ್ನಲ್ಲಿರುವ ಪ್ರತಿಭೆಯನ್ನು ಗುರುತಿಸಿ 2009 ರಲ್ಲಿ ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ಬೆಂಗಳೂರಲ್ಲಿ ಆಗಿನ ರಾಜ್ಯಪಾಲರಾದ ಎಚ್.ಆರ್.ಭಾರದ್ವಜ್ ಅವರು ಕರ್ನಾಟಕ ಕಲಾಶ್ರೀ ಪ್ರಶಸ್ತಿಯನ್ನು ಕೊಟ್ಟರು’.
ವಿಶ್ವದೆದುರಲ್ಲಿ ‘India’s fastest female artsist’ ಎಂದು ಗುರುತಿಸಿಕೊಳ್ಳಬೇಕೆಂಬ ಕನಸನ್ನು ಕಟ್ಟಿಕೊಂಡಿರುವ ಶಬರಿಗೆ ತನ್ನ ಅಜ್ಜ ಮತ್ತು ಅಪ್ಪ-ಅಮ್ಮನೇ ಸ್ಪೂರ್ತಿಯಂತೆ. ‘ತನ್ನಜ್ಜ ಒಬ್ಬ ಹವ್ಯಾಸಿ ಚಿತ್ರಕಾರನಾಗಿದ್ದು ಅವರಿಂದ ತಾಯಿಗೆ ಒಲಿದು ಬಂದ ಪ್ರತಿಭೆ ನನ್ನಲ್ಲಿ ರೂಪುಗೊಂಡಿತು ಎನ್ನುತ್ತಾರೆ ಶಬರಿ. ನನ್ನನ್ನು ವೃತ್ತಪರಳಾಗಿ ಮಾಡಿರುವ ತರಬೇತುದಾರರಾದ ವೀಣಾ ಭಂಡಾರಿ, ಶಮೀರ್ ಆಲಿ ಮತ್ತು ಚಂದ್ರಾಡ್ಕರ್ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುವ ಶಬರಿ ತನ್ನ ಶಿಕ್ಷಣ ಮುಗಿದ ಕೂಡಲೇ ‘India Got Talent’ ಗೆ ಹೋಗುವ ಬಯಕೆಯನ್ನು ತೋರ್ಪಡಿಸುತ್ತಾರೆ. ಈಗ ಕರ್ನಾಟಕದ ಮೊದಲ ‘Fastest female artist’ ಎಂದು ಖ್ಯಾತಳಾಗಿದ್ದುಮುಂದೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶ್ವದ ವೇಗದ ಮಹಿಳಾ ಚಿತ್ರಗಾರ್ತಿಯಾಗುವ ಬಹುದೊಡ್ಡ ಕನಸನ್ನು ಇಟ್ಟಿದ್ದಾರಂತೆ. ಈಕೆ ಬರೀ ಚಿತ್ರಗಾರ್ತಿ ಮಾತ್ರವಲ್ಲದೆ ಅತ್ಯುತ್ತಮ ಗಾಯಕಿ ಕೂಡಹಾಗಾಗಿರಾಷ್ಟ್ರೀಯ ಮಟ್ಟದ ವೇದಿಕೆಯಾದ ‘India’s Got talent’ ನಲ್ಲಿ ಹಾಡನ್ನು ಹಾಡುತ್ತಾ ಅತೀ ಕಡಿಮೆ ಅವಧಿಯಲ್ಲಿ ಪೇಂಟಿಂಗ್ ಮಾಡುವುದು ಈಕೆಯ ಮುಂದಿರುವ ಸವಾಲಂತೆ.
ಈವರೆಗೆ 2000 ಕ್ಕಿಂತಲೂ ಮಿಗಿಲಾಗಿ ಸ್ಟೇಜ್ ಷೋಗಳನ್ನು ಕೊಟ್ಟ ಶಬರಿ ಕರ್ನಾಟಕ ಕಲಾಶ್ರೀ ಪ್ರಶಸ್ತಿ, ಕರ್ನಾಟಕ ರಾಜ್ಯ ಸಾಧಕ ಪ್ರಶಸ್ತಿ, ಯುವಸಾಧಕಿ ಪ್ರಶಸ್ತಿ, ಸಿದ್ಧಿಶ್ರೀ ಪ್ರಶಸ್ತಿ, ಮಲ್ಲಿಕಾ ಪ್ರಶಸ್ತಿಗಳ ಜೊತೆಯಲ್ಲಿ 1600ಕ್ಕಿಂತ ಹೆಚ್ಚು ಬಹುಮಾನಗಳನ್ನು ಪಡೆದಿದ್ದಾರಂತೆ. ತನ್ನ ಈ ಸಾಧನೆಗೆ ಅಪ್ಪ-ಅಮ್ಮನೇ ಬೆನ್ನೆಲುಬು ಎನ್ನುವ ಶಬರಿ ‘ಸ್ಟೇಜ್ ಷೋಗಳಿಗೆ ಹೋಗುವ ಮುಂಚೆ ತುಂಬಾ ತಯಾರಿಗಳು ಇರುತ್ತವೆ. ಎಲ್ಲಾ ತಯಾರಿಗಳನ್ನು ಅಪ್ಪ-ಅಮ್ಮನೇ ಮಾಡ್ತಾರೆ ಎನ್ನುತ್ತಾರೆ.
ಪೇಂಟಿಂಗ್,ಸಿಂಗಿಂಗ್ ಗಳ ಜೊತೆಯಲ್ಲಿ ಡಾನ್ಸಿಂಗ್, ಗಿಟಾರ್ ಮತ್ತು ಕೀಬೊರ್ಡ್ ಪ್ಲೇ ಮಾಡುವ ಹವ್ಯಾಸಗಳನ್ನು ರೂಢಿಸಿಕೊಂಡಿರುವ ಶಬರಿ ತಮ್ಮ ಕನಸಿನಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಲಿ ಎಂದು ಹಾರೈಸುವ.