News Kannada
Monday, December 05 2022

ಮನರಂಜನೆ

ಕಾಡಿನ ಮಕ್ಕಳ ಹಬ್ಬ-2017 ಕ್ಕೆ ಚಾಲನೆ

Photo Credit :

ಕಾಡಿನ ಮಕ್ಕಳ ಹಬ್ಬ-2017 ಕ್ಕೆ ಚಾಲನೆ

ಮಡಿಕೇರಿ: ಬುಡಕಟ್ಟು ಸಂಸ್ಕೃತಿ ಅರಣ್ಯ ರಕ್ಷಣೆಗೆ ಪೂರಕವಾಗಿದ್ದು, ಈ ಅದ್ವಿತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರ ಪ್ರೋತ್ಸಾಹ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ತಿಳಿಸಿದ್ದಾರೆ.

ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ಹಾಗೂ ಮಡಿಕೇರಿ ಆಕಾಶವಾಣಿ ವತಿಯಿಂದ ರಾಷ್ಟ್ರಿಯ ಬುಡಕಟ್ಟು ಸಮುದಾಯಗಳ ಹಾಡು ಮತ್ತು ನೃತ್ಯದ ಸಮ್ಮಿಲನ ‘ಕಾಡಿನ ಮಕ್ಕಳ ಹಬ್ಬ-2017’ ಕ್ಕೆ ನಗರದ ಗಾಂಧಿ ಮೈದಾನದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. ಕಾಡಿನಲ್ಲೇ ವಾಸಿಸುತ್ತಾ ಹಸಿರ ಪರಿಸರಕ್ಕೆ ಒಗ್ಗಿಕೊಂಡಿರುವ ಬುಡಕಟ್ಟು ಜನರು ತಮ್ಮ ವಿಶಿಷ್ಟ ಸಂಸ್ಕೃತಿಯನ್ನು ಇಂದಿಗೂ ಉಳಿಸಿಕೊಂಡು ಬಂದಿದ್ದಾರೆ ಎಂದು ಜಿಲ್ಲಾಧಿಕಾರಿ ಶ್ಲಾಘಿಸಿದರು. ಕಾಡಿದ್ದರೆ ನಾಡು ಎನ್ನುವ ಸಂದೇಶದೊಂದಿಗೆ ಕಾಡಿನ ಮಕ್ಕಳ ಹಬ್ಬ ನಡೆಯುತ್ತಿದ್ದು, ಇದು ಅರ್ಥಪೂರ್ಣವಾಗಲಿ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು ಬುಡಕಟ್ಟು ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.

ಇಂಥ ಕಾರ್ಯಕ್ರಮಗಳಿಗೆ ಉತ್ತೇಜನ ನೀಡುತ್ತಿರುವ ಆಕಾಶವಾಣಿಯ ಪ್ರಯತ್ನ ಶ್ಲಾಘನೀಯವೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕರಾದ ಡಾ.ಇ.ಎನ್.ಸಜಿಲ್ ಮಾತನಾಡಿ ಕಳೆದ ನಾಲ್ಕು ವರ್ಷಗಳಿಂದ ಮಡಿಕೇರಿಯಲ್ಲಿ ಕಾಡಿನ ಮಕ್ಕಳ ಹಬ್ಬವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗಿದ್ದು, ಸ್ಥಳೀಯರ ಸಹಕಾರದೊಂದಿಗೆ ನಿರಂತರವಾಗಿ ಕಾರ್ಯಕ್ರಮ ನಡೆಸಲು ಪ್ರಯತ್ನ ನಡೆಸಲಾಗುವುದೆಂದು ಭರವಸೆ ನೀಡಿದರು. ಬುಡಕಟ್ಟು ಜನರ ಸಂಸ್ಕೃತಿಯ ಅನಾವರಣ ಮಾತ್ರವಲ್ಲದೆ ಕಾಡಿನ ಮಕ್ಕಳು ತಯಾರಿಸಿದ ಕರಕುಶಲ ವಸ್ತುಗಳನ್ನು ಕೂಡ ನೋಡಬಹುದಾಗಿದೆ ಎಂದು ಅವರು ತಿಳಿಸಿದರು.

ಮಡಿಕೇರಿ ಆಕಾಶವಾಣಿಯ ಸಹಾಯಕ ನಿರ್ದೇಶಕರಾದ ಎಂ.ರಾಘವೇಂದ್ರ ಮಾತನಾಡಿ ಜನಪದೀಯ ಅನುಪಮ ಕಲೆಗಳು ಬುಡಕಟ್ಟು ಸಂಸ್ಕೃತಿಯಲ್ಲಿ ಮಿಳಿತವಾಗಿದ್ದು, ಇದನ್ನು ಪ್ರೋತ್ಸಾಹಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದರು.  ನಗರಸಭಾ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಬಿ.ಎಸ್.ತಮ್ಮಯ್ಯ ಹಾಗೂ ಆಕಾಶವಾಣಿಯ ನಿವೃತ್ತ ನಿರ್ದೇಶಕರಾದ ಇಂದಿರಾ ಯೇಸುಪ್ರಿಯ ಗಜರಾಜ್ ಉಪಸ್ಥಿತರಿದ್ದು ಕಾಡಿನ ಮಕ್ಕಳ ಹಬ್ಬಕ್ಕೆ ಶುಭ ಹಾರೈಸಿದರು.

400 ಕಲಾವಿದರಿಂದ ಕಾರ್ಯಕ್ರಮ
ಕೊಡಗು ಜಿಲ್ಲೆ ಹಾಗೂ ರಾಜ್ಯದ ಜಾನಪದ ಕಲಾ ತಂಡಗಳು ಸೇರಿದಂತೆ ದೇಶದಾದ್ಯಂತದ ಸುಮಾರು 28 ಕಲಾ ತಂಡಗಳ 400 ಕಲಾವಿದರು ತಮ್ಮ ವಿಶಿಷ್ಟ ಸಂಸ್ಕೃತಿಯನ್ನು ಮೂರು ದಿನಗಳ ಕಾಲ ಪ್ರದರ್ಶಿಸಲಿದ್ದಾರೆ. ಬುಡಕಟ್ಟು ತಂಡಗಳಲ್ಲಿ ಕಾರವಾರದ ಶೇಖರ್ ಸಿದ್ದಿ ಮತ್ತು ತಂಡದ ಸಿದ್ದಿ ಕುಣಿತ, ಕಲಾವಿದ ಮಲ್ಲೇಗೌಡರಿಂದ ಕುರುವರ ಕುಣಿತ, ಕೊಡಗಿನ ಬುಡಕಟ್ಟು ತಂಡವಾದ ಧೋಬಿ ಮತ್ತು ತಂಡದಿಂದ ಜೇನು ಕುರುಬ ನೃತ್ಯ, ಬಿ.ಜೆ. ಕಾಳ ಮತ್ತು ತಂಡದಿಂದ ಬೆಟ್ಟಕುರುಬ ನೃತ್ಯ, ಕುಮಾರ್ ಬಿ.ಬಿ. ಮತ್ತು ತಂಡದಿಂದ ಡೋಲು ಕುಣಿತ, ಕುಡಿಯರ ಮುತ್ತಪ್ಪ ಮತ್ತು ತಂಡ, ಕೆ.ಎಸ್. ಗೋಪಮ್ಮ ಮತ್ತು ತಂಡ, ಶಾರದ ಮತ್ತು ತಂಡದಿಂದ  ಮಲೆ ಕುಡಿಯ ನೃತ್ಯ, ವಾಸು ಮತ್ತು ತಂಡದಿಂದ ಸೋಲಿಗ ನೃತ್ಯ, ಪ್ರಕಾಶ್ ಮತ್ತು ತಂಡದಿಂದ ಯರವ ನೃತ್ಯ, ಎಂ.ಎಸ್. ರಾಜು ಮತ್ತು ತಂಡದಿಂದ ಪಾರೆಕೊಟ್ಟು ನೃತ್ಯ ನಡೆಯಲಿದೆ.

See also  ಕನ್ನಡಿಯಲ್ಲಿ ಕಂಡ ದೆವ್ವದ ಆಕೃತಿ!...ಬಿಗ್ ಬಾಸ್ ನಲ್ಲಿ ಬೆಚ್ಚಿ ಬಿದ್ದ ಕಾರುಣ್ಯ, ಸಂಜನಾ

ಗಿರಿಜನೇತರ ತಂಡಗಳಾದ ಪಳಂಗಪ್ಪ ಮತ್ತು ತಂಡದಿಂದ ಬೊಳಕಾಟ್, ಕೋಲಾಟ್, ಕತ್ತಿಯಾಟ್, ಪರೆಯಕಳಿ, ಕೇಕಡ ಇಂದುಮತಿ ರವೀಂದ್ರ ಮತ್ತು ತಂಡದಿಂದ ಸುಗ್ಗಿ ಕೋಲಾಟ, ಹುತ್ತರಿ ಜೋಗಿ ನೃತ್ಯ, ಮಣಿ ಲಿಂಗಪ್ಪ ಮತ್ತು ತಂಡದಿಂದ ಕೊಡವ ವಾಲಗ, ಹೆಚ್.ಸಿ. ಮುದ್ದಪ್ಪ ಅವರಿಂದ ಬೊಳಕಾಟ್, ಕೋಲಾಟ್, ಕತ್ತಿಯಾಟ್, ಮಿನ್ನಂಡ ನೇತ್ರು ಅವರಿಂದ ಉಮ್ಮತ್ತಾಟ್ ಪ್ರದರ್ಶನಗೊಳ್ಳಲಿದೆ. ಹೊರ ರಾಜ್ಯಗಳ ಕಲಾ ತಂಡಗಳಾದ ತಮಿಳುನಾಡಿನ ತೋಡ , ಆಂಧ್ರಪ್ರದೇಶದ ದಿಂಸಾ ಡ್ಯಾನ್ಸ್, ತೆಲಂಗಾಣ ಲಂಬಾಣಿ, ಕೇರಳದ ಮಂಗಳಂ ಕಳಿ, ಲಕ್ಷ ದ್ವೀಪದ ಪರಿಚರ ಕಳಿ ಸೇರಿದಂತೆ 28 ಕಲಾ ತಂಡಗಳು ಪಾಲ್ಗೊಳ್ಳಲಿವೆಯೆಂದು ಕಾರ್ಯಕ್ರಮ ಸಂಯೋಜಕ ಪಿ.ಬಾಲನ್ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು