ಇತ್ತೀಚೆಗೆ ಬಿಡುಗಡೆಯಾಗಿರುವ ಮೆಲೋಡಿ ಸ್ಟಾರ್ ‘ಮ್ಯಾಕ್ಸಿಂ ಪಿರೇರಾ’ ನಿರ್ದೇಶನದ ಕೊಂಕಣಿ-ತುಳು ಸಿನಿಮಾ ‘ಅಶೆಂ ಜಾಲೆಂ ಕಶೆಂ’ ಉರುಫ್ ‘ಇಂಚ ಆಂಡ ಎಂಚ’ ಮತ್ತದೇ ಹಳೇ ಸಿನಿಮಾಗಳ ಸಾಲಿಗೆ ಸೇರಿರುವುದು ಮಾತ್ರ ದುರಾದೃಷ್ಟ. ಕೊಂಕಣಿಯಂತಹ ಅತೀ ಸಣ್ಣ ಮಾರುಕಟ್ಟೆಯಲ್ಲಿ ಕನ್ನಡ ಚಿತ್ರಗಳಿಗೆ ಸಮನಾದ ಬಜೆಟ್ ಹಾಕಿ ಸಿನಿಮಾ ಮಾಡಿರುವುದು ಶ್ಲಾಘನೀಯ. ಸರಿಯಾದ ಪೂರ್ವ ತಯಾರಿಯೊಂದಿಗೆ ಸಿನಿಮಾ ಮಾಡಿದ್ದರೆ ‘ಅಶೆಂ ಜಾಲೆಂ ಕಶೆಂ’ ಕೋಸ್ಟಲ್ ವುಡ್ ಗೊಂದು ಉತ್ತಮ ಸಿನಿಮಾವಾಗುತ್ತಿತ್ತು. ಅತೀ ಸಣ್ಣ ಮಾರುಕಟ್ಟೆಗೆ ಸಿನಿಮಾ ಮಾಡುವಾಗ ಕನ್ನಡ ಚಿತ್ರಗಳ ಹಳೇ ಫಾರ್ಮುಲಾದಂತೆ ಒಂದೆರಡು ಫೈಟ್ಸ್, ನಾಲ್ಕು ಹಾಡುಗಳು, ಅನಗತ್ಯವಾದ ದೃಶ್ಯಗಳನ್ನು ಪೋಣಿಸುವುದನ್ನು ಬಿಟ್ಟು ಒಂದು ಉತ್ತಮವಾದ ಕಥೆಯನ್ನು ನೀಟಾಗಿ ನಿರೂಪಿಸಿದರೆ ಪ್ರೇಕ್ಷಕ ಮೆಚ್ಚುವಂತಹ ಅದ್ಭುತ ಸಿನಿಮಾವನ್ನು ಕಟ್ಟಬಹುದು ಜೊತೆಗೆ ಲಾಭವನ್ನೂ ಗಳಿಸಬಹುದು.
‘ಸಣ್ಣ ವಯಸ್ಸಿನಲ್ಲಿ ಮಾಡದ ಅನಾಹುತಕ್ಕೆ, ದುರಾದೃಷ್ಟಕ್ಕೆ ಮನೆಬಿಟ್ಟು ಓಡಿಹೋಗುವ ನಾಯಕ ಅಮಿತ್ ಹಲವು ವರುಷಗಳ ಬಳಿಕ ಅನಾಹುತ ಮಾಡಲೆಂದೇ ಬಂದು ಮರಳಿ ಗೂಡಿಗೆ ಸೇರುವುದು’, ಒನ್ ಲೈನ್ ಸ್ಟೋರಿ. ಇಲ್ಲಿ ಅಪಕ್ವವಾದ ಚಿತ್ರಕಥೆ ಮತ್ತು ಅಪೂರ್ಣ ನಿರ್ದೇಶನವೇ ಸಿನಿಮಾದ ಶತ್ರುಗಳೆಂದರೆ ತಪ್ಪಿಲ್ಲ. ಲಾಜಿಕ್ ಬಿಟ್ಟ ಹೋದ ಕೆಲವೊಂದು ದೃಶ್ಯಗಳು, ಸುಮ್ಮನೆ ಅನಗತ್ಯವಾಗಿ ತುರುಕಿಸಿದ ಹಾಸ್ಯ ತುಣುಕುಗಳು, ಆಲ್ಬಂಗೆ ರಚಿಸಿದ ಒಂದೆರಡು ಹಾಡುಗಳು,ಬೈಬಲ್ಲಿನ ವಾಕ್ಯಗಳಂತಹ ಸಂಭಾಷಣೆಗಳು ಸಿನಿಮಾಕ್ಕೆ ಹಿನ್ನೆಡೆ ನೀಡಿವೆ. ನಾಯಕ ನಟ ರೂಪೇಶ್ ಶೆಟ್ಟಿ ತನಗೆ ನೀಡಿರುವ ಕ್ಯಾಥೋಲಿಕ್ ಕೊಂಕಣಿ ಮಾತಾಡುವ ಪಾತ್ರಕ್ಕೆ ನ್ಯಾಯ ಸಲ್ಲಿಸಿರುವುದು ಅವರೊಳಗೆ ಬೆಳೆಯುತ್ತಿರುವ ಒಬ್ಬ ಉತ್ತಮ ನಟನಿಗೆ ಸಾಕ್ಷಿ. ಉಳಿದಂತೆ ನಾಯಕಿಯರಿಬ್ಬರು ಮೊದಲ ಚಿತ್ರಕ್ಕೆ ಪರವಾಗಿಲ್ಲ ಮುಂದಿನ ಸಿನಿಮಾಗಳಿಗೆ ನಟನೆಯಲ್ಲಿ ಪಕ್ವವಾಗುವ ಅಗತ್ಯವಿದೆ. ನಾಯಕನ ತಂಗಿಯ ಪಾತ್ರಧಾರಿ ರಂಜಿತಾ ಲೂವಿಸ್, ಖಳನ ಪಾತ್ರದಲ್ಲಿ ನಟಿಸಿದ ಕ್ಲ್ಯಾನ್ವಿನ್ ಫೆರ್ನಾಂಡೀಸ್ ಮೊದಲ ಸಿನಿಮಾದಿಂದ ಈ ಸಿನಿಮಾಕ್ಕೆ ಬೆಳೆದಿರುವುದು ಕಾಣುತ್ತದೆ. ಇನ್ನು ಗೋಪಿನಾಥ್ ಭಟ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ಉಮೇಶ್ ಮಿಜಾರು ತಮಗೆ ಸಿಕ್ಕ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹಾಸ್ಯ ಪಾತ್ರಧಾರಿಗಳು ನಗಿಸುವಲ್ಲಿ ಯಶಸ್ವಿಯಾದರೂ ಕೆಲವೊಂದು ಕಡೆ over acting ಮಾಡಿರುವುದನ್ನು ಬಿಟ್ಟಿದ್ದರೆ ಚೆನ್ನಾಗಿತ್ತು. ತಾಂತ್ರಿಕ ವರ್ಗದಲ್ಲಿ ಛಾಯಾಗ್ರಾಹಕ, ಸಂಕಲನಕಾರ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಹಿನ್ನೆಲೆ ಸಂಗೀತ ಕೆಲವೊಂದು ಕಡೆ ಕಿಕಿರಿಯೆನಿಸುತ್ತದೆ.
ಬೆಳೆಯುತ್ತಿರುವ ಕೊಂಕಣಿ ಸಿನಿಮಾರಂಗದಲ್ಲಿ ಸಿನಿಮಾ ಮಾಡುವವರು ಬೆಳೆಯುತ್ತಿರುವ ತಂತ್ರಜ್ಞಾನ ಮತ್ತು ಬದಲಾಗಿರುವ ಹೊಸ ಚಿಂತನೆಯ ಪ್ರೇಕ್ಷಕನ ಜೊತೆ ಹೆಜ್ಜೆ ಹಾಕುತ್ತಾ ಲಿಮಿಟೆಡ್ ಮಾರ್ಕೆಟ್ ಗೆ ಲಿಮಿಟೆಡ್ ಬಜೆಟ್ ಹಾಕಿ ಉತ್ತಮ ಕಥೆಗಳನ್ನು ನೀಡಿದರೆ ಮುಂದೊಂದು ದಿನ ಕೋಸ್ಟಲ್ ವುಡ್ ನಲ್ಲಿ ಯಶಸ್ಸಿನ ಫಸಲು ಕಾಣುವುದರಲ್ಲಿ ಡೌಟಿಲ್ಲ.