ಮೈಸೂರು: ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದು ಹಲವಾರು ಕಾರ್ಯಕ್ರಮಗಳನ್ನು ಹಲವೆಡೆ ನೀಡಿರುವ ವಿದುಷಿ ಕಲಾವತಿ ಅವಧೂತ್ ಅವರು ನಗರದ ಸಂಗೀತ ಪ್ರಿಯರ ಮನತಣಿಸಲಿದ್ದಾರೆ.
ಜೂನ್ 30ರಂದು ಸಂಜೆ 6ಕ್ಕೆ ಮೈಸೂರಿನ ಗಾನಭಾರತಿಯಲ್ಲಿ ನಡೆಯಲಿರುವ ಗಾಯನ ಕಾರ್ಯಕ್ರಮದಲ್ಲಿ ಶಾಸ್ತ್ರೀಯ ಸಂಗೀತ ಸುಧೆಯನ್ನು ಹರಿಸಲಿದ್ದಾರೆ. ಇವರಿಗೆ ವಯೋಲಿನ್ ನಲ್ಲಿ ವಿದುಷಿ ಎಚ್.ಎಂ. ಸ್ಮಿತಾ, ಮೃದಂಗದಲ್ಲಿ ವಿದ್ವಾನ್ ಬಿ.ಸಿ.ಮಂಜುನಾಥ್ ಹಾಗೂ ಖಂಜಿರದಲ್ಲಿ ವಿದ್ವಾನ್ ಕಾರ್ತಿಕ್ ಸಾಥ್ ನೀಡಲಿದ್ದಾರೆ. ವಿದುಷಿ ಕಲಾವತಿ ಅವಧೂತ್ ಅವರ ಬಗ್ಗೆ ಹೇಳುವುದಾದರೆ ಅವರು ಸಂಗೀತದ ಕುಟುಂಬದಿಂದ ಬಂದವರು. ತಂದೆ ಬೆಂಗಳೂರು ಕೆ ವೆಂಕಟರಾಂ ಹೆಸರಾಂತ ಘಟವಾದಕರು. ತಾಯಿ ಜಿ.ಆರ್.ಜಯಾ ಅವರಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದ ಕಲಾವತಿಯವರು ನಂತರ ಗಾನಕಲಾಭೂಷಣ ಆನೂರು ಎಸ್ ರಾಮಕೃಷ್ಣ ಅವರಲ್ಲಿ, ನಂತರ ವಿದುಷಿ ಸೀತಾಲಕ್ಷ್ಮಿ ವೆಂಕಟೇಶನ್ ಅವರಲ್ಲಿ ಮುಂದುವರೆಸಿ, ಈಗ ವಿದ್ವಾನ್ ಪಿ.ಎಸ್.ನಾರಾಯಣಸ್ವಾಮಿಯವರಲ್ಲಿ ಸಂಗೀತ ಕಲಿಯುತ್ತಿದ್ದಾರೆ.
ಈಗಾಗಲೇ ಚೆನ್ನೈ, ಮುಂಬೈ, ಕಲ್ಕತ್ತ, ದೆಹಲಿ, ತಿರುಚಿನಾಪಳ್ಳಿಗಳೇ ಅಲ್ಲದೆ ಅಮೆರಿಕ, ನೆದರ್ಲ್ಯಾಂಡ್ ಮೊದಲಾದ ದೇಶಗಳಲ್ಲೂ ಕಾರ್ಯಕ್ರಮ ನೀಡಿ ಮೆಚ್ಚುಗೆ ಗಳಿಸಿದ್ದಾರೆ. ಇವರ ಹಲವು ಧ್ವನಿಸುರುಳಿಗಳು ಹೊರಬಂದಿವೆ. ಹಲವು ಬಹುಮಾನಗಳು, ಪ್ರಶಸ್ತಿಗಳು ಅವರ ಮುಡಿಯೇರಿವೆ. ಆಕಾಶವಾಣಿಯ ಅಖಿಲ ಭಾರತ ಸ್ಪರ್ಧೆ, ಕೃಷ್ಣ ಗಾನಸಭಾ, ಗಾಯನ ಸಮಾಜ, ಇಂಡಿಯನ್ ಫೈನ್ ಆರ್ಟ್ಸ್ ಸೊಸೈಟಿ ನಡೆಸಿದ ಸ್ಪರ್ಧೆಗಳಲ್ಲಿ ಬಹುಮಾನ ಲಭಿಸಿದೆ. ಅನನ್ಯ ಯುವ ಪುರಸ್ಕಾರ, ಗಾನ ಕಲಾಶ್ರಿ, ಸತ್ಯಶ್ರೀ, ವಿಶೇಷ ಕಲಾಚೇತನ ಮೊದಲಾದ ಪ್ರಶಸ್ತಿಗಳು ಸಂದಿವೆ.