ಕೃಷ್ಣರಾಜಪೇಟೆಯ ರಾಮದಾಸ್ ರೆಸ್ಟೋರೆಂಟ್ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮೈಸೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಎಂ.ಡಿ.ಪಾರ್ಥಸಾರಥಿ ಅವರು ನಿರ್ಮಿಸಿರುವ ‘ನನ್ ಹೆಸ್ರು ಕಿಶೋರ ಏಳ್ ಪಾಸ್ ಎಂಟು’ ಮಕ್ಕಳ ಕನ್ನಡ ಚಲನ ಚಿತ್ರದ ಪೋಸ್ಟರ್ ನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣಗೌಡ ಬಿಡುಗಡೆಗೆ ಮಾಡಿದರು.
ಬಳಿಕ ಮಾತನಾಡಿದ ಅವರು, ಮಕ್ಕಳ ಶೈಕ್ಷಣಿಕ ವಿಕಾಸಕ್ಕೆ ಪೂರಕವಾಗುವಂತಹ ಸಿನಿಮಾಗಳನ್ನು ಹೆಚ್ಚಾಗಿ ನಿರ್ಮಾಣ ಮಾಡುವ ಮೂಲಕ ದುಶ್ಚಟಗಳಿಗೆ ಬಲಿಯಾಗಿ ಹಾದಿತಪ್ಪುತ್ತಿರುವ ಮಕ್ಕಳು ಹಾಗೂ ಯುವಜನಾಂಗವನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಕನ್ನಡ ಚಿತ್ರ ನಿರ್ಮಾಪಕರು ಹಾಗೂ ನಿರ್ದೇಶಕರು ಮುಂದಾಗಬೇಕು ಎಂದು ಮನವಿ ಮಾಡಿದರು.
ಇಂದು ಕನ್ನಡ ಚಲನ ಚಿತ್ರದಲ್ಲಿ ಮಕ್ಕಳ ಚಿತ್ರಗಳ ನಿರ್ಮಾಣವು ಕಡಿಮೆಯಾಗುತ್ತಿವೆ. ಈ ಹಿಂದೆ ನಿರ್ಮಾಣವಾಗಿ ದಾಖಲೆಯನ್ನು ನಿರ್ಮಿಸಿದ್ದ ಬೆಟ್ಟದಹೂವು, ಚಿನ್ನಾರಿ ಮುತ್ತ. ಪುಟಾಣಿ ಏಜೆಂಟ್ 123 ಅಂತಹ ಸಿನಿಮಾಗಳು ನಿರ್ಮಾಣವಾಗಿ ನಮ್ಮ ಮಕ್ಕಳು ಹಾಗೂ ಯುವಜನರಿಗೆ ಒಂದು ಸಂದೇಶವನ್ನು ನೀಡುವಂತಹ, ಹಾದಿ ತಪ್ಪುತ್ತಿರುವ ಯುವಜನಾಂಗವನ್ನು ಸರಿದಾರಿಗೆ ತರುವಂತಹ ಸಿನಿಮಾಗಳನ್ನು ನಿರ್ಮಿಸಿದರೆ ಪ್ರಶಸ್ತಿಗಳು ದೊರೆಯುವ ಜೊತೆಗೆ ಸಮಾಜದ ಪರಿವರ್ತನೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಪ್ರಸ್ತುತ ರಾಷ್ಟ್ರ ಪ್ರಶಸ್ತಿಯ ಆಯ್ಕೆಗೆ ಪ್ರದರ್ಶನಗೊಳ್ಳಲು ಆಯ್ಕೆಯಾಗಿರುವ ನನ್ ಹೆಸ್ರು ಕಿಶೋರ ಏಳ್ ಪಾಸ್ ಎಂಟು ಮಕ್ಕಳ ಕನ್ನಡ ಚಲನಚಿತ್ರವು ಅತ್ಯುತ್ತಮವಾಗಿ ಪ್ರದರ್ಶನವಾಗಿ ಪ್ರಶಸ್ತಿಗೆ ಆಯ್ಕೆಯಾಗುವ ಜೊತೆಗೆ ಬಾಕ್ಸ್ ಆಫೀಸನ್ನೂ ಗೆಲ್ಲುವಂತಾಗಲಿ ಎಂದು ಚಿತ್ರದ ನಿರ್ಮಾಪಕರಾದ ಎಂ.ಡಿ.ಪಾರ್ಥಸಾರಥಿ ಅವರಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಚಿತ್ರಪ್ರಚಾರಕ ಹರೀಶ್, ಜಿಲ್ಲಾ ಪಂಚಾಯಿತಿ ಮಾಜಿಉಪಾಧ್ಯಕ್ಷ ಎಸ್.ಅಂಬರೀಶ್, ರಾಜ್ಯ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರು ಮತ್ತು ವರದಿಗಾರರ ಸಂಘದ ಅಧ್ಯಕ್ಷ ಕೆ.ಆರ್.ನೀಲಕಂಠ, ರಾಮದಾಸ್ ರೆಸ್ಟೋರೆಂಟ್ ಮಾಲೀಕರಾದ ಅರವಿಂದಕಾರಂತ್ ಮತ್ತಿತರರು ಉಪಸ್ಥಿತರಿದ್ದರು.