ಅಮರಾವತಿ: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂನಲ್ಲಿ ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರ ಪಾದಯಾತ್ರೆ ವೇಳೆ ಟಾಲಿವುಡ್ ನಟ ನಂದಮೂರಿ ತಾರಕ ರತ್ನ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.
ತಾರಕ ರತ್ನ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಲೋಕೇಶ್ ಅವರು ತಮ್ಮ 4,000 ಕಿಮೀ ಉದ್ದದ ಪಾದಯಾತ್ರೆಯನ್ನು ಪ್ರಾರಂಭಿಸಿದ ಕೂಡಲೇ ಭೇಟಿ ನೀಡಿದ ಮಸೀದಿಯ ಹೊರಗೆ ಕಾಲ್ತುಳಿತದಂತಹ ಪರಿಸ್ಥಿತಿ ಉಂಟಾದಾಗ ಈ ಘಟನೆ ಸಂಭವಿಸಿದೆ.
ಲೋಕೇಶ್ ಪೂಜಾ ಸ್ಥಳದಿಂದ ಹೊರಬಂದ ನಂತರ ಹೆಚ್ಚಿನ ಸಂಖ್ಯೆಯ ತೆಲುಗು ದೇಶಂ ಪಕ್ಷದ (ಟಿಡಿಪಿ) ಕಾರ್ಯಕರ್ತರು ಮುನ್ನುಗ್ಗಿದರು. ಗಲಿಬಿಲಿಯಲ್ಲಿ, ನಟ ಕೆಳಗೆ ಬಿದ್ದು ಮೂರ್ಛೆ ಹೋದರು. ಸ್ಥಳೀಯ ಟಿಡಿಪಿ ಮುಖಂಡರು ಅವರನ್ನು ಕುಪ್ಪಂನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ತಾರಕ ರತ್ನ ಅವರ ಚಿಕ್ಕಪ್ಪ ಹಾಗೂ ಜನಪ್ರಿಯ ನಟ ಎನ್.ಬಾಲಕೃಷ್ಣ ಅವರನ್ನು ಆಸ್ಪತ್ರೆಗೆ ಭೇಟಿ ಮಾಡಿದರು. ನಂತರ ಯುವ ನಟನನ್ನು ಬೆಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ತಾರಕ ರತ್ನ ಅವರು ಟಿಡಿಪಿ ಸಂಸ್ಥಾಪಕ, ದಿಗ್ಗಜ ನಟ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಟಿ.ರಾಮರಾವ್ ಅವರ ಮೊಮ್ಮಗ. ಅವರು ಜೂನಿಯರ್ ಎನ್ಟಿಆರ್, ಕಲ್ಯಾಣ್ ರಾಮ್ ಮತ್ತು ಲೋಕೇಶ್ ಅವರ ಸೋದರಸಂಬಂಧಿ.
2002ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಸುಮಾರು ಹನ್ನೆರಡು ಸಿನಿಮಾಗಳು ಮತ್ತು ವೆಬ್ ಸಿರೀಸ್ ಗಳಲ್ಲಿ ನಟಿಸಿರುವ ತಾರಕ ರತ್ನ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ ಎನ್ನಲಾಗಿದೆ.