ಬೆಂಗಳೂರು: ನಂದಮೂರಿ ಕುಟುಂಬದಿಂದ ಸದ್ಯ ರಾಜಕೀಯದಲ್ಲಿ ಸಕ್ರಿಯರಾಗಿದ್ದಂತ ನಟ ತಾರಕರತ್ನ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಹೃದಯಾಘಾತವಾಗಿ ಏಕಾಏಕಿ ಕುಸಿದು ಬಿದ್ದಿದ್ದು, ಅಲ್ಲಿಂದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯರು ತಾರಕರತ್ನ ಅವರಿಗೆ ಹೃದಯಾಘಾತವಾಗಿರುವುದಾಗಿ ತಿಳಿಸಿದ್ದಾರೆ.
ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿರುವ ನಂದಮೂರಿ ಅವರ ಆರೋಗ್ಯ ಚಿಂತಾಜನಕವಾಗಿದೆ ಎಂದು ಗೊತ್ತಾಗುತ್ತಿದ್ದಂತೆ ಚಿತ್ರರಂಗ ಹಾಗೂ ರಾಜಕೀಯ ವಲಯದ ಗಣ್ಯರು ಆತಂಕಕ್ಕೆ ಒಳಗಾಗಿದ್ದಾರೆ. ತಾರಕರತ್ನ ಅವರ ಆರೋಗ್ಯ ವಿಚಾರಿಸಲು ನಂದಮೂರಿ ಕುಟುಂಬಸ್ಥರು ಒಬ್ಬೊಬ್ಬರಾಗಿ ಬೆಂಗಳೂರಿಗೆ ಬರುತ್ತಿದ್ದಾರೆ.
ಶುಕ್ರವಾರ ಜನವರಿ 27ರಂದು ನಡೆದ ಯುವಗಲಂ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ತಾರಕ ರತ್ನ ದಿಢೀರ್ ಕುಸಿದು ಬಿದ್ದಾಗ ಎಲ್ಲರೂ ಬೆಚ್ಚಿಬಿದ್ದರು. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ನಂತರ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಸ್ಥಳಾಂತರಿಸಲಾಯಿತು. ಸದ್ಯ ಅವರಿಗೆ ವಿಶೇಷ ವೈದ್ಯಕೀಯ ತಂಡ ಚಿಕಿತ್ಸೆ ನೀಡುತ್ತಿದೆ.
ತಾರಕರತ್ನ ಅವರ ಆರೋಗ್ಯ ಅತ್ಯಂತ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದರಿಂದ ನಂದಮೂರಿ ಕಲ್ಯಾಣ್ ರಾಮ್, ಜೂನಿಯರ್ ಎನ್‌ಟಿಆರ್ ತಕ್ಷಣ ಆಸ್ಪತ್ರೆಗೆ ತೆರಳಿದ್ದಾರೆ. ಅವರು ಬೆಂಗಳೂರಿಗೆ ಬಂದು ಆರೋಗ್ಯ ವಿಚಾರಿಸಿದ್ದಾರೆ.
ಕೃತಕ ಉಸಿರಾಟ ನೀಡಿ ತಾರಕರತ್ನ ಅವರನ್ನು ಉಳಿಸಲು ವೈದ್ಯರು ಹಲವು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ತಾರಕರತ್ನ ದೇಹವು ಪದೇ ಪದೇ ಆಂತರಿಕ ರಕ್ತಸ್ರಾವವನ್ನು ಅನುಭವಿಸುತ್ತಿದೆ. ಅದನ್ನು ನಿಯಂತ್ರಿಸಲಾಗುತ್ತಿಲ್ಲ ಎಂದಿದ್ದಾರೆ ವೈದ್ಯರು.
ಇದೇ ವೇಳೆ ಅವರ ಸಹೋದರ ಚೈತನ್ಯ ಕೃಷ್ಣ ಅವರು ತಾರಕರತ್ನ ಆರೋಗ್ಯದ ಬಗ್ಗೆ ಆಘಾತಕಾರಿ ಕಮೆಂಟ್ ಮಾಡಿದ್ದಾರೆ. ತಾರಕರತ್ನ ಹೃದಯಾಘಾತದಿಂದ ಬಳಲುತ್ತಿರುವುದನ್ನು ನಂಬಲು ಸಾಧ್ಯವಾಗ್ತಿಲ್ಲ. ಈಗ ಅವರ ಎಲ್ಲಾ ಅಂಗಗಳೂ ಚೆನ್ನಾಗಿ ಕೆಲಸ ಮಾಡುತ್ತಿವೆ. ಪ್ರಜ್ಞೆ ಬಂದರೆ ಸಂಪೂರ್ಣ ಸ್ಪಷ್ಟತೆ ಸಿಗುತ್ತದೆ. ಸೋಮವಾರ ಮತ್ತೆ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು ಎಂದು ಚೈತನ್ಯ ತಿಳಿಸಿದ್ದಾರೆ.
ತಾರಕರತ್ನ ಅವರಿಗೆ ಈ ಹಿಂದೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಇದು ಆಕಸ್ಮಿಕವಾಗಿ ಸಂಭವಿಸಿದೆ. ಹೃದಯಾಘಾತದಿಂದಾಗಿ ಅವರು ಆಘಾತಕ್ಕೊಳಗಾಗಿದ್ದರು. ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸೋಣ ಎಂದು ಚೈತನ್ಯ ಹೇಳಿದರು. ತಾರಕರತ್ನ ಕೋಮಾದಲ್ಲಿದ್ದಾರೆಯೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಚೈತನ್ಯ ಕೃಷ್ಣ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ತಾರಕರತ್ನ ಕೋಮಾದಲ್ಲಿದ್ದಾರೆ. ಆದರೆ ಇನ್ನೂ ಕೆಲವು ದಿನ ಚಿಕಿತ್ಸೆ ನೀಡಬೇಕು ಎಂದು ವೈದ್ಯರು ತಿಳಿಸಿದ್ದಾರೆ.