ಈ ವಾರ ಸೂರಜ್ ಕೃಷ್ಣ ನಟನೆಯ `ನಾನೇ ರಾಜ' ತೆರೆಗೆ

ಈ ವಾರ ಸೂರಜ್ ಕೃಷ್ಣ ನಟನೆಯ `ನಾನೇ ರಾಜ' ತೆರೆಗೆ

LK   ¦    Nov 27, 2019 02:34:38 PM (IST)
ಈ ವಾರ ಸೂರಜ್ ಕೃಷ್ಣ ನಟನೆಯ `ನಾನೇ ರಾಜ' ತೆರೆಗೆ

ಮಂಡ್ಯ: ವರಪ್ರದ ಪ್ರೊಡಕ್ಷನ್ಸ್‍ನಲ್ಲಿ ನಿರ್ಮಾಣವಾಗಿರುವ `ನಾನೇ ರಾಜ' ಚಿತ್ರ ನ.29ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಶ್ರೀನಿವಾಸ್ ಶಿವಾರ್ ತಿಳಿಸಿದ್ದಾರೆ.

ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ಚಿತ್ರ ನಿರ್ಮಾಣ ಮಾಡಲಾಗಿದೆ. ಮಂಡ್ಯ, ಬನ್ನೂರು, ಬೆಂಗಳೂರು, ಹೊರನಾಡಿನಲ್ಲಿ ಚಿತ್ರೀಕರಣ ನಡೆದಿದ್ದು, ಎಲ್ಲ ದೃಶ್ಯ ಅಚ್ಚುಕಟ್ಟಾಗಿ ಮೂಡಿಬಂದಿದೆ. ಅಂತೆಯೇ, ರಾಜ್ಯಾದ್ಯಂತ 70ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದರು.

ಅಪ್ಪಟ ಗ್ರಾಮೀಣ ಸೊಗಡಿನ ಚಿತ್ರವಾಗಿದ್ದು, ಸೆಂಟಿಮೆಂಟ್ ಮತ್ತು ಕಾಮಿಡಿ, ಆ್ಯಕ್ಷನ್ ಸೇರಿದಂತೆ ಅಂಶಗಳನ್ನು ಒಳಗೊಂಡಿದೆ. ಸುಮಾರು ಒಂದು ಕೋಟಿ ರೂ ವೆಚ್ಚದಲ್ಲಿ ಚಿತ್ರ ನಿರ್ಮಿಸಲಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಸಹೋದರ ಸೂರಜ್ ಕೃಷ್ಣ ನಾಯಕನಾಗಿ, ಸೋನಿಕಾಗೌಡ ನಾಯಕಿಯಾಗಿ ನಟಿಸಿದ್ದಾರೆ. ಟೆನಿಸ್ ಕೃಷ್ಣ, ಉಮೇಶ್, ಕುರಿ ಪ್ರತಾಪ್, ಚಂದ್ರಪ್ರಭಾ ಮುಖ್ಯ ತಾರಾಬಳಗದಲ್ಲಿದ್ದಾರೆ. ಪ್ರೇಕ್ಷಕರು ಚಿತ್ರವನ್ನು ನೋಡುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು.

ನಾಯಕ ನಟ ಸೂರಜ್ ಕೃಷ್ಣ ಮಾತನಾಡಿ, ಹಳ್ಳಿ ಸೊಗಡಿನ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಬೇಕೆನ್ನುವ ಕನಸು ನನಸಾಗಿದೆ. ಎಲ್ಲರೂ ಚಿತ್ರವನ್ನು ನೋಡಿ ನಮ್ಮನ್ನು ಪ್ರೋತ್ಸಾಹಿಸಿ ಎಂದರು.

ಚಿತ್ರದ ನಿರ್ಮಾಪಕ ಎಲ್.ಆನಂದ್, ನಾಯಕ ನಟಿ ಸೋನಿಕಾಗೌಡ, ಹಾಸ್ಯ ಕಲಾವಿದ ಚಂದ್ರಪ್ರಭಾ ಇದ್ದರು.