ಟ್ವಿಟರ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಕಂಗನಾ ರಣಾವತ್ ಟ್ವಿಟ್ಟರ್ ಖಾತೆ ಪರ್ಮನೆಂಟ್ ಸಸ್ಪೆಂಡ್

ಟ್ವಿಟರ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಕಂಗನಾ ರಣಾವತ್ ಟ್ವಿಟ್ಟರ್ ಖಾತೆ ಪರ್ಮನೆಂಟ್ ಸಸ್ಪೆಂಡ್

Jayashree Aryapu   ¦    May 04, 2021 04:23:06 PM (IST)
ಟ್ವಿಟರ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಕಂಗನಾ ರಣಾವತ್ ಟ್ವಿಟ್ಟರ್ ಖಾತೆ ಪರ್ಮನೆಂಟ್ ಸಸ್ಪೆಂಡ್

ನವದೆಹಲಿ: ವಿವಾದಾತ್ಮಕ ಪೋಸ್ಟ್ ಹಿನ್ನೆಲೆಯಲ್ಲಿ ನಟಿ ಕಂಗನಾ ರಣಾವತ್ ಅವರ ಟ್ವಿಟ್ಟರ್ ಅಕೌಂಟ್‌ನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗಿದೆ. ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳದ ವಿಧಾನಸಭೆ ಫಲಿತಾಂಶದ ಕುರಿತು ಅವರು ಒಂದಾದ ಮೇಲೆ ಒಂದರಂತೆ ಟ್ವೀಟ್ ಮಾಡಿದ್ದರು.

ಈ ಕುರಿತು ಟ್ವಿಟ್ಟರ್‌ ವಕ್ತಾರರು ಪ್ರತಿಕ್ರಿಯೆ ನೀಡಿದ್ದು, ಹಿಂಸಾಚಾರಕ್ಕೆ ಪುಷ್ಟಿಕೊಡುವ ನಡವಳಿಕೆ ಮೇಲೆ ನಾವು ಕಠಿಣ ಕ್ರಮ ಕೈಗೊಳ್ಳುವುದನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ಟ್ವಿಟ್ಟರ್‌ ನಿಯಮಗಳನ್ನು ಪದೇ ಪದೇ ಉಲ್ಲಂಘನೆ ಮಾಡಿದ್ದಕ್ಕಾಗಿ ಕಂಗನಾ ರಣಾವತ್ ಅವರ ಟ್ವಿಟ್ಟರ್ ಅಕೌಂಟ್‌ನ್ನು ಶಾಶ್ವತವಾಗಿ ನಿಷ್ಕ್ರಿಯಗೊಳಿಸಲಾಗಿದೆ.

ನಮ್ಮ ಸೇವೆ ಬಳಸುತ್ತಿರುವ ಪ್ರತಿಯೊಬ್ಬರಿಗೂ ನಾವು ಟ್ವಿಟರ್ ನಿಯಮಗಳನ್ನು ನ್ಯಾಯಯುತವಾಗಿ ಮತ್ತು ನಿಷ್ಪಕ್ಷಪಾತವಾಗಿ ಜಾರಿ ಮಾಡುತ್ತೇವೆ ಎಂದಿದ್ದಾರೆ.

ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಶ್ಚಿಮ ಬಂಗಾಳದಲ್ಲಿ ಬಹುಮತ ಗಳಿಸಿತ್ತು. ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ರಾಜ್ಯದಲ್ಲಿ ಭಾರೀ ಹಿಂಸಾಚಾರ ಭುಗಿಲೆದ್ದಿತ್ತು. ಈ ವಿಚಾರವಾಗಿ ಟ್ವೀಟ್ ಮಾಡಿದ್ದ ಕಂಗನಾ ರಣಾವತ್ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂದು ಟ್ವೀಟ್ ಮಾಡಿದ್ದರು. ಇದು ಭಾರೀ ವಿವಾದ ಸೃಷ್ಟಿಸಿತ್ತು.

ಅಲ್ಲದೇ ಕಂಗನಾ ಖಾತೆ ನಿಷ್ಕ್ರಿಯಗೊಳಿಸುವ ಕೆಲ ನಿಮಿಷದ ಹಿಂದಷ್ಟೇ ನಟಿ ಭಾವನಾತ್ಮಕ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದರು. ಈ ಪೋಸ್ಟ್‌ನಲ್ಲಿ ಪಶ್ಚಿಮ ಬಂಗಾಳದ ಹಿಂಸಾಚಾರದ ಬಗ್ಗೆ ಮಾತನಾಡಿದ್ದರು. ಈ ವಿಡಿಯೋದಲ್ಲಿ ಪಶ್ಚಿಮ ಬಂಗಾಳದಲ್ಲಿ ಜನರ ಹತ್ಯೆ ನಡೆಯುತ್ತಿದೆ, ಅತ್ಯಾಚಾರ ನಡೆಯುತ್ತಿದೆ, ಮನೆಗಳನ್ನು ಸುಡಲಾಗುತ್ತಿದೆ ಈ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಕಂಗನಾ ಈ ರೀತಿ ಮಾಡುತ್ತಿರುವುದು ಮೊದಲೇನಲ್ಲ. ಈ ಹಿಂದೆ ಕೂಡ ಕಂಗನಾ ಕೆಲವು ಪೋಸ್ಟ್‌ ಮಾಡಿದ್ದಾಗ, ಆ ಪೋಸ್ಟ್‌ಗಳಿಗೆ ಕ್ರಮ ಕೈಗೊಳ್ಳಲಾಗಿತ್ತು. ಅಮೆಜಾನ್ ಪ್ರೈಂ ವಿಡಿಯೋಸ್‌ನಲ್ಲಿ ರಿಲೀಸ್ ಆದ ತಾಂಡವ್ ವೆಬ್‌ ಸಿರೀಸ್‌ನಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕೆ ಕಂಗನಾ ಮಾಡಿದ್ದ ಟ್ವೀಟ್ ವೈರಲ್ ಆಗಿತ್ತು.