ಬೇಸಿಗೆ ಮುಗಿದು ಮಳೆಗಾಲ ಶುರುವಾಗುವ ಸಮಯ ಬಂದರೆ ಹಳ್ಳಿಗಳಲ್ಲಿ ಹಲಸಿನ ಹಬ್ಬ ಜಾಸ್ತಿ. ಬೇಸಿಗೆಯಲ್ಲಿ ವರ್ಷಕ್ಕಾಗುವಷ್ಟು ಹಲಸಿನ ಕಾಯಿಯ ಚಿಪ್ಸ್, ಹಪ್ಪಳ ಇತ್ಯಾದಿಗಳನ್ನು ತಯಾರಿಸಿಟ್ಟುಕೊಳ್ಳುವ ಜನರು ಮಳೆಗಾಲದಲ್ಲಿ ಹಲಸಿನ ಹಣ್ಣಿನ ಖಾದ್ಯಗಳನ್ನು ತಯಾರಿಸಿ ತಿನ್ನುತ್ತಾರೆ. ಕೆಲವರು ಹಲಸಿನ ಪಲ್ಪ್ ನ್ನು ಶೇಖರಿಸಿ ಫ್ರಿಜ್ ನಲ್ಲಿಟ್ಟುಕೊಂಡು ತಮಗೆ ಬೇಕೆನಿಸಿದಾಗಲೆಲ್ಲ ಕಡುಬು, ಇತ್ಯಾದಿ ಖಾದ್ಯಗಳನ್ನು ತಯಾರಿಸುವುದೂ ಉಂಟು. ಬನ್ನಿ ನಾವೀಗ ಹಲಸಿನ ಹಣ್ಣಿನ ಕಡುಬು ತಯಾರಿಸಿ ಸವಿಯೋಣ…
ಬೇಕಾಗುವ ಸಾಮಗ್ರಿಗಳು:
ಹಲಸಿನ ಹಣ್ಣಿನ ಪಲ್ಪ್ – 1 1/2 ಕಪ್
ಅಕ್ಕಿ ಕಡಿ – 3/4 ಕಪ್
ಗಟ್ಟಿ ಬೆಲ್ಲ – 1/2 ಕಪ್
ಸಕ್ಕರೆ – 2 ಚಮಚ
ಉಪ್ಪು – 1/2 ಚಮಚ
ಏಲಕ್ಕಿಪುಡಿ – ದೊಡ್ಡ ಚಿಟಿಕೆ
ಎಣ್ಣೆ (ತೆಂಗಿನೆಣ್ಣೆ ಆದರೆ ಒಳ್ಳೆಯದು) – 1 ಚಮಚ
ಮಾಡುವ ವಿಧಾನ:
ಹಲಸಿನ ಪಲ್ಪ್ ಗೆ ಬೆಲ್ಲ, ಸಕ್ಕರೆ, ಉಪ್ಪು ಸೇರಿಸಿ ಕದಡಿ. ಬೆಲ್ಲ ಚೆನ್ನಾಗಿ ಕರಗಿದ ನಂತರ ಇದಕ್ಕೆ ನೀರಿನಲ್ಲಿ ತೊಳೆದ ಅಕ್ಕಿ ಕಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಎಣ್ಣೆ, ಏಲಕ್ಕಿಪುಡಿ ಸೇರಿಸಿ ಕದಡಿ.ಮಿಶ್ರಣ ದೋಸೆ ಹಿಟ್ಟಿಗಿಂತ ಸ್ವಲ್ಪ ತೆಳ್ಳಗಿರಲಿ. ತುಂಬಾ ಗಟ್ಟಿ ಎನಿಸಿದರೆ ಸ್ವಲ್ಪ ನೀರು ಸೇರಿಸಿ ತೆಳ್ಳಗೆ ಮಾಡಿ. ಕಡುಬಿನ ಹಿಟ್ಟನ್ನು ಇಡ್ಲಿಯಂತೆ ಮಾಡಿಯೂ ಬೇಯಿಸಬಹುದು ಇಲ್ಲವೇ ಬಾಳೆಯೆಲೆಯ ಕೊಟ್ಟೆಯಲ್ಲಿ ಕಟ್ಟಿಯೂ ಬೇಯಿಸಬಹುದು. ಇಡ್ಲಿಯಂತೆ ಮಾಡಿ ಬೇಯಿಸುವುದಾದರೆ ಸುಮಾರು ಅರ್ಧ ಘಂಟೆ ಬೇಯಿಸಬೇಕು. ಬಾಳೆ ಕೊಟ್ಟೆಯಲ್ಲಿ ಮಾಡಿದರೆ ಕನಿಷ್ಠ ಒಂದು ಘಂಟೆಯಾದರೂ ಬೇಯಿಸಬೇಕು. ಚೆನ್ನಾಗಿ ಬೆಂದ ಕಡುಬನ್ನು ಬಿಸಿ ಇರುವಾಗಲೇ ತುಪ್ಪ ಹಾಕಿಕೊಂಡು ತಿನ್ನಿ.