ಚಪಾತಿಯನ್ನು ನಾವು ಚಟ್ನಿ, ಸಾಂಬಾರ್ ಹೀಗೆ ಯಾವುದಾದರೊಂದರಲ್ಲಿ ಸೇವಿಸುತ್ತೇವೆ. ಆದರೆ ಅದನ್ನು ಸಾಗುನಲ್ಲಿ ಸೇವಿಸಿದರೆ ಅದರಲ್ಲಿ ಸಿಗುವ ಮಜಾವೇ ಬೇರೆ. ಸಾಮಾನ್ಯವಾಗಿ ಪೂರಿಗೆ ಸಾಗು ಕಾಂಬಿನೇಷನ್ ಚಪಾತಿಗೂ ಸಾಗುಗೂ ಹಾದು ಬರುತ್ತಾ ಎಂಬ ಪ್ರಶ್ನೆ ಕಾಡಬಹುದು? ಅದಕ್ಕೇಕೆ ಚಿಂತೆ ಒಂದು ಸಾರಿ ಚಪಾತಿಗಾಗಿಯೇ ತಯಾರಿಸಲಾದ ಸಾಗುವಿನಲ್ಲೊಮ್ಮೆ ಸೇವಿಸಿ ನೋಡಿ ಬಿಡಿ.
ಸಾಗು ಮಾಡಲು ಬೇಕಾಗುವ ಪದಾರ್ಥಗಳು
ತೆಂಗಿನಕಾಯಿ ತುರಿ- 1/2 ಪಾಲು(ಕಾಯಿಯ ಅರ್ಧ ಭಾಗ)
ಹುರಿಗಡಲೆ- ಸ್ವಲ್ಪ
ಕರಿಮೆಣಸು- 15
ಜೀರಿಗೆ- 2 ಚಮಚ
ಹಸಿಮೆಣಸಿನ ಕಾಯಿ- 3 ರಿಂದ 4
ಗಸಗಸೆ- 1 ಚಮಚ,
ಚಕ್ಕೆ- ಸ್ವಲ್ಪ, ಲವಂಗ- 2, ಇಂಗು ಚೂರು, ಕೊತ್ತಂಬರಿ ಸೊಪ್ಪು
ಇವುಗಳನ್ನು ಸೇರಿಸಿ ರುಬ್ಬಿಟ್ಟುಕೊಳ್ಳಬೇಕು. ಇನ್ನೊಂದೆಡೆ ಬೀನ್ಸ್, ಗೆಡ್ಡೆಕೋಸು, ಕ್ಯಾರೆಟ್, ಆಲೂಗೆಡ್ಡೆ, ಟೊಮೆಟೋ, ಈರುಳ್ಳಿಯನ್ನು ಚಿಕ್ಕದಾಗಿ ಹಚ್ಚಿಟ್ಟುಕೊಳ್ಳಬೇಕು. ಇದರ ಜತೆಗೆ ಬಟಾಣಿಯನ್ನು ಮೊದಲೇ ಬೇಯಿಸಿಕೊಳ್ಳುವುದು ಒಳ್ಳೆಯದು.
ಮಾಡುವ ವಿಧಾನ ಹೀಗಿದೆ..
ಮೊದಲು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದು ಕಾದ ಬಳಿಕ ಸಾಸಿವೆ, ಕರಿಬೇವು ಹಾಕಿ ಹಚ್ಚಿಟ್ಟ ತರಕಾರಿಗಳನ್ನು ಹಾಗೂ ಬಟಾಣಿಯನ್ನು ಹಾಕಿ ನಿಧಾನ ಉರಿಯಲ್ಲಿ ಚೆನ್ನಾಗಿ ಬಾಡಿಸಬೇಕು. ಜತೆಗೆ ಸ್ವಲ್ಪ, ಸ್ವಲ್ಪ ನೀರು ಚಿಮುಕಿಸುತ್ತಾ ಸೌಟಿನಿಂದ ತಿರುಗಿಸಬೇಕು. ಬಳಿಕ ರುಬ್ಬಿಟ್ಟ ಮಸಾಲೆಗಳನ್ನು ಅದಕ್ಕೆ ಸುರಿದು ನಮಗೆ ಹೇಗೆ ಬೇಕೋ ಹಾಗೆ ತೆಳ್ಳಗೆ ಅಥವಾ ಗಟ್ಟಿಗೆ ತಕ್ಕಂತೆ ನೀರು ಹಾಕಿ, ರುಚಿಗೆ ತಕ್ಕಂತೆ ಉಪ್ಪು ಹಾಕಿ ಬೇಯಿಸಬೇಕು. ಬಳಿಕ ಬಿಸಿಬಿಸಿಯಾಗಿ ಚಪಾತಿಯೊಂದಿಗೆ ಸೇವಿಸಬಹುದಾಗಿದೆ