ಮೊಟ್ಟೆಯಿಂದ ಹಲವು ಬಗೆಯ ಖಾದ್ಯಗಳನ್ನು ಮಾಡಬಹುದಾಗಿದ್ದು, ಅದರಲ್ಲಿಯೂ ಕಾಲಿಫ್ಲವರ್ ಎಗ್ ಬುರ್ಜಿ ತುಂಬಾ ರುಚಿಯಾಗಿರುತ್ತದೆ. ಇದು ಅನ್ನದೊಂದಿಗೆ, ಚಪಾತಿ, ದೋಸೆಯೊಂದಿಗೆ ಸೇವಿಸಲು ಮಜಾ ಕೊಡುತ್ತದೆ. ಕಾಲಿಫ್ಲವರ್ ಎಗ್ ಬುರ್ಜಿ ಮಾಡಲು ಬೇಕಾಗುವ ಪದಾರ್ಥಗಳು ಮತ್ತು ಮಾಡುವ ವಿಧಾನ ಇಲ್ಲಿದೆ.
ಕಾಲಿಫ್ಲವರ್ ಎಗ್ ಬುರ್ಜಿ ಮಾಡಲು ಬೇಕಾಗುವ ಪದಾರ್ಥಗಳು
ಮೊಟ್ಟೆ- ಎರಡು
ಕಾಲಿಫ್ಲವರ್- ಕಾಲು ಕೆಜಿ
ಟೊಮ್ಯಾಟೋ- ಒಂದು
ಉಪ್ಪು- ರುಚಿಗೆ ತಕ್ಕಷ್ಟು
ಖಾರದ ಪುಡಿ- ಒಂದು ಚಮಚ
ಅರಶಿನ ಪುಡಿ- ಕಾಲು ಚಮಚ
ಎಣ್ಣೆ- ಹುರಿಯಲು ಅಗತ್ಯವಿರುವಷ್ಟು
ಕಾಲಿಫ್ಲವರ್ ಎಗ್ ಬುರ್ಜಿ ಮಾಡುವ ವಿಧಾನ
ಮೊದಲಿಗೆ ಕಾಲಿಫ್ಲವರ್ ತೆಗೆದುಕೊಂಡು ಅದನ್ನು ಶುಚಿಗೊಳಿಸಿ ಚಿಕ್ಕಚೂರುಗಳನ್ನಾಗಿ ಮಾಡಿಕೊಳ್ಳಬೇಕು. ಆ ನಂತರ ಬಿಸಿಯಾದ ಉಪ್ಪು ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು. ಆ ನಂತರ ತೆಗೆದು ಪಾತ್ರೆಯಲ್ಲಿ ಹಾಕಿ ಜತೆಗೆ ಮೆಣಸಿನಪುಡಿ, ಅರಶಿನ ಪುಡಿ ಸೇರಿಸಿ ಸ್ವಲ್ಪ ಉಪ್ಪು ಹಾಕಿ ಬೇಯಿಸಿಕೊಳ್ಳಬೇಕು. ಬೆಂದ ಬಳಿಕ ತೆಗೆದು ಆರಲು ಇಡಬೇಕು.
ಇನ್ನೊಂದೆಡೆ ಹಸಿ ಮೊಟ್ಟೆಯನ್ನು ಒಡೆದು ಪಾತ್ರೆಯಲ್ಲಿ ಹಾಕಿ ಅದಕ್ಕೆ ಸ್ವಲ್ಪ ಉಪ್ಪು ಬೆರೆಸಿ ಚೆನ್ನಾಗಿ ಕಲೆಸಬೇಕು. ಇದಕ್ಕೆ ಮಸಾಲೆ ಬೆರೆಸಿದ ಕಾಲಿಫ್ಲವರ್‍ನ್ನು ಬೆರೆಸಬೇಕು. ಆ ನಂತರ ಬಾಣಲೆಯಲ್ಲಿ ಎಣ್ಣೆ ಹಾಕಿ ಅದು ಬಿಸಿಯಾದ ಬಳಿಕ ಸಾಸಿವೆ ಹಾಕಿ ಸಿಡಿಸಿ ಅದಕ್ಕೆ ಕತ್ತರಿಸಿದ ಟೊಮ್ಯಾಟೋ ಹಾಕಿ ಚೆನ್ನಾಗಿ ಬೇಯಿಸಬೇಕು ನಂತರ ಅದಕ್ಕೆ ಕಾಲಿಫ್ಲವರ್ ಬೆರಸಿ ಕಂದು ಬಣ್ಣ ಬರುವ ತನಕ ಹುರಿದು ತೆಗೆದರೆ ಕಾಲಿಫ್ಲವರ್ ಎಗ್ ಬುರ್ಜಿ ರೆಡಿಯಾದಂತೆಯೇ.