ನಮ್ಮ ದೇಹದಲ್ಲಿ ಪಾದವು ದೇಹದ ಭಾಗವನ್ನು ಹೊರುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಪಾದವು ತಪ್ಪು ಪಾದರಕ್ಷೆಗಳಿಂದ ದುರುಪಯೋಗಕ್ಕೊಳಗಾಗುವ ಭಾಗವೂ ಹೌದು. ಹಾಗೆಯೇ ರಚನಾತ್ಮಕವಾಗಿಯೂ 26 ಸಣ್ಣ ಮೂಳೆಗಳನ್ನು ಹೊಂದಿ ಪಾದವು ಸಂಕೀರ್ಣವಾಗಿರುವುದರಿಂದ ಇಲ್ಲಿನ ತೊಂದರೆಗಳೂ ಭಿನ್ನವಾಗಿರುತ್ತವೆ. Foot painಪಾದಗಳ ರಚನೆಗೆ ಅನುಗುಣವಾಗಿ ಹೆಚ್ಚಾಗಿ ಈ ಕೆಳಗಿನ ತೊಂದರೆಗಳು ಕಂಡು ಬರುತ್ತವೆ.
ಅವು ಈ ಕೆಳಗಿನ ಯಾವುದಾದರೂ ಭಾಗಕ್ಕೆ ಸಂಬಂಧಿಸಿರಬಹುದು.
* ಮೂಳೆ
* ಅಸ್ಥಿರಜ್ಜು (ಲಿಗಮೆಂಟ್) ಅಥವಾ ಟೆಂಡನ್
* ಮಾಂಸಖಂಡ/ಸ್ನಾಯು
* ತಂತುಕೋಶ (ಸ್ನಾಯುವನ್ನು ಆವರಿಸಿರುವ ಕೋಶ)
* ಉಗುರಿನ ಕೆಳಗಿರುವ ಭಾಗ (ನೈಲ್ಬೆಡ್)
* ರಕ್ತನಾಳ/ನರಸಂಬಂಧಿ
* ಪಾದದ ಚರ್ಮ
ಇವುಗಳಲ್ಲಿ ಅತಿ ಹೆಚ್ಚಾಗಿ ಕಂಡು ಬರುವ ನೋವು ಹಿಮ್ಮಡಿ ನೋವು. ಹಿಮ್ಮಡಿಯ ಬುಡ ಅಥವಾ ಹಿಂಬದಿಯಲ್ಲಿ ನೋವು ಕಾಣಿಸುವುದು. ವಿಶ್ರಾಂತಿಯ ನಂತರದ ನೋವು (ಪೋಸ್ಟ್ ಸ್ಟ್ಯಾಟಿಕ್ ಡಿಸ್ಕೈನೇಸಿಯ) ಇದರ ಮುಖ್ಯ ಲಕ್ಷಣ. ಮುಂಜಾನೆ ಏಳುವಾಗ, ಸ್ವಲ್ಪ ಹೊತ್ತು ಕುಳಿತು ಏಳುವಾಗ, ಹಿಮ್ಮಡಿಯಲ್ಲಿ ಅತೀವ ನೋವು ಕಂಡು ಕೆಲವು ಹೆಜ್ಜೆಗಳನ್ನು ನಡೆದ ಮೇಲೆ ಈ ನೋವು ಕಡಿಮೆಯಾಗುತ್ತದೆ. ಆದರೆ ಸಂಜೆಯಾಗುತ್ತಿದ್ದಂತೆ ಪುನಃ ನೋವು ಹೆಚ್ಚಬಹುದು. ಇದು ಹೆಚ್ಚಾಗಿ ಪಾದ ತಳದ ತಂತುಕೋಶದಲ್ಲಿನ ಉರಿಯೂತ (ಪ್ಲಾಂಟಾರ್ ಫ಼ೇಸೈಟಿಸ್), ಹಿಮ್ಮಡಿಯಲ್ಲಿ ಶಾಕ್ ಅಬ್ಸಾರ್ಬರ್ ಥರ ಇರುವ ಮೆತ್ತನೆಯ ಧಾತುವಿನ ಉರಿಯೂತ (ಹೀಲ್ ಬರ್ಸೈಟಿಸ್), ಟಾರ್ಸಲ್ ನರದ ಒತ್ತಡ (ಟಾರ್ಸಲ್ ಟನಲ್ ಸಿಂಡ್ರೋಮ್) ಮುಂತಾದ ಕಾರಣಗಳಿಂದ ಬರಬಹುದು.
ಅಲ್ಲದೇ ಸಪಾಟಾದ ಪಾದ (ಫ್ಲಾಟ್ ಫ಼ುಟ್), ಭಾರವಾಗಿ ರಭಸವಾದ ಹೆಜ್ಜೆಗಳನ್ನು ಹಾಕುವುದು, ಸದಾ ಹೈಹೀಲ್/ಗಟ್ಟಿ ಚಪ್ಪಲಿ ಧರಿಸುವುದು, ಅತಿಯಾದ ಆಟ ಮುಂತಾದುವುಗಳ ಅತಿ ಒತ್ತಡ, ಮೂಳೆಯ ಟೊಳ್ಳುತನ (ಆಸ್ಟಿಯೋಪೊರೋಸಿಸ್) ಇತ್ಯಾದಿಗಳಿಂದ ಕೂಡ ಹಿಮ್ಮಡಿ ನೋವು ಬರಬಹುದು. ಅತಿಯಾದ ಕಾಲೊಡಕು ಇದ್ದಲ್ಲಿ ಇದರ ಮೂಲಕ ಸೋಂಕು ಒಳಸೇರಿ ನೋವುಂಟು ಮಾಡಬಹುದು.
ಚಿಕಿತ್ಸೆ
ಎಲ್ಲಾ ಕಾರಣಗಳನ್ನೂ ಕೂಲಂಕಷವಾಗಿ ಪರೀಕ್ಷಿಸಿ ಕೊಂಡು ಚಿಕಿತ್ಸೆ ಪಡೆಯಬೇಕು. ಕೇವಲ ತಂತುಕೋಶದ ಉರಿಯೂತ (ಪ್ಲಾಂಟಾರ್ ಫ಼ೇಸೈಟಿಸ್)ದಿಂದ ಉಂಟಾಗಿದ್ದರೆ ಆರಂಭದಲ್ಲಿ ತಣ್ಣನೆಯ ಒತ್ತಡ ನೀಡಬಹುದು. ಆದರೆ ಬಹುದಿನಗಳಿಂದ ಉಳಿದು ಕೊಂಡಲ್ಲಿ ಬಿಸಿ ಶಾಖ ಉಪಯುಕ್ತ. ಉತ್ತಮ ನೋವಿನೆಣ್ಣೆಗಳಿಂದ ಉಜ್ಜಿ ಬಿಸಿಶಾಖ ಕೊಡುವುದು, ಮೆತ್ತನೆಯ ಪಾದರಕ್ಷೆ ಉಪಯೋಗಿಸುವುದು, ಇವುಗಳನ್ನು ಸತತವಾಗಿ ಮಾಡಿದಲ್ಲಿ ಗುಣ ಕಾಣಬಹುದು.
ಕೆಲವರಿಗೆ ಎಕ್ಕದ ಎಲೆಯನ್ನು ಬಿಸಿ ಮಾಡಿ ಹಿಮ್ಮಡಿಯ ಮೇಲಿಟ್ಟು ಶಾಖ ತೆಗೆದುಕೊಳ್ಳುವುದರಿಂದ ನೋವು ಕಡಿಮೆಯಾಗುತ್ತದೆ. ಹಿಮ್ಮಡಿಯ ಚರ್ಮ ದಪ್ಪವಾಗಿರುವುದರಿಂದ ಬಿಸಿನೀರಿನ ಶಾಖ ಅಷ್ಟಾಗಿ ತಗುಲದೇ ಪ್ರಯೋಜನವಾಗುವುದಿಲ್ಲ. ಹಾಗಾಗಿ ಈ ಮೇಲೆ ಹೇಳಿದ ರೀತಿ ಉತ್ತಮ. ದೇಹದ ತೂಕನಿಯಂತ್ರಣ ಅಗತ್ಯ. ಇವುಗಳಿಂದಲೂ ಶಮನವಾಗದಿದ್ದಲ್ಲಿ ಪತ್ರಪಿಂಡ ಸ್ವೇದ, ನವರಕಿಳಿ ಮುಂತಾದ ಆಯುರ್ವೇದ ಚಿಕಿತ್ಸೆ ಸಹಕಾರಿ.
ಅತಿ ಹೆಚ್ಚಿನ ನೋವಿನಲ್ಲಿ ಸ್ಟೀರಾಯಿಡ್ ಇಂಜೆಕ್ಷನ್ ಸ್ಥಳಕ್ಕೆ ನೀಡಲಾಗುತ್ತದೆ. ಇದರ ಉಪಯೋಗ ಅಷ್ಟಾಗಿ ಒಳ್ಳೆಯದಲ್ಲ. ಬೆಳಿಗ್ಗೆ ಏಳುವಾಗ ಅಥವಾ ಸ್ವಲ್ಪ ಸಮಯ ಕುಳಿತೇಳುವಾಗ ಕಾಲು ಪಾದವನ್ನು ವರ್ತುಲಾಕಾರದಲ್ಲಿ ಮತ್ತು ಮುಂದೆ, ಹಿಂದೆ ತಿರುಗಿಸಿ ಹತ್ತು ಹೆಜ್ಜೆ ತುದಿಗಾಲಲ್ಲಿ ನಡೆದು ಅನಂತರ ಹಿಮ್ಮಡಿಯನ್ನು ಊರುವುದು ಒಳ್ಳೆಯದು. ಮನೆಯೊಳಗೂ ಹೊರಗೂ ಮೆತ್ತನೆಯ ಪಾದರಕ್ಷೆ ಬಳಸಬೇಕು. ಕಾಲೊಡಕನ್ನು ಔಷಧಿ ಮುಲಾಮುಗಳಿಂದ ಗುಣಪಡಿಸಿಕೊಳ್ಳಬೇಕು.