ಮೂರು ತಲೆಮಾರು ಕುಳಿತು ತಿಂದರೂ ಕರಗದ ಆಸ್ತಿ ಇದ್ದರೂ ಏನನ್ನೂ ತಿನ್ನೋಕಾಗುತ್ತಿಲ್ಲ ಕಾರಣ ಮಧುಮೇಹ.. ಏನೇನೋ ಮಾಡಬೇಕು.. ಬದುಕಲ್ಲಿ ಜಾಲಿಯಾಗಿರಬೇಕೆಂದುಕೊಳ್ಳುತ್ತೇವೆ. ಆದರೆ ಅದು ಯಾವುದೂ ಸಾಧ್ಯವಾಗುತ್ತಿಲ್ಲ ಏಕೆಂದರೆ ಆರೋಗ್ಯವೇ ಸರಿ ಇಲ್ಲ. ಸದಾ ವೈದ್ಯರು, ಮಾತ್ರೆ ಅಂಥ ಆಸ್ಪತ್ರೆಗೆ ಎಡತಾಕುವುದೇ ಆಗಿದೆ.
ಆರೋಗ್ಯವೇ ಇಲ್ಲದ ಮೇಲೆ ಎಷ್ಟು ಸಿರಿತನವಿದ್ದರೇನು? ಕೆಲವೊಮ್ಮೆ ಆರೋಗ್ಯವಂತ ಬದುಕಿನ ಮುಂದೆ ನಮ್ಮ ಎಲ್ಲ ಸಂಪತ್ತು ಗೌಣವಾಗಿಬಿಡುತ್ತದೆ. ಕೆಲವರು ಹೇಳುತ್ತಿರುತ್ತಾರೆ. ಆಗ ಆರೋಗ್ಯವಿತ್ತು ಹಣವಿರಲಿಲ್ಲ. ಈಗ ಹಣವಿದೆ ಆರೋಗ್ಯವಿಲ್ಲ ಎಂದು. ಸಾಮಾನ್ಯವಾಗಿ ಆರೋಗ್ಯವಂತ ಬದುಕನ್ನು ನಾವೇ ಕಳೆದು ಕೊಂಡಿರುತ್ತೇವೆ. ಕಾರಣ ಶಿಸ್ತು ಬದ್ಧ ಜೀವನವನ್ನು ನಾವು ಮಾಡಿಯೇ ಇರುವುದಿಲ್ಲ.
ಬಹಳಷ್ಟು ಸಾರಿ ನಮ್ಮ ಆರೋಗ್ಯ ಹದಗೆಡುವುದು ನಮ್ಮಿಂದಲೇ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಅನಗತ್ಯ ಚಿಂತೆ, ಬೇರೆಯವರ ಬಗ್ಗೆ ಹೊಟ್ಟೆಉರಿ, ತಮ್ಮ ಬಗ್ಗೆಯೇ ಕೀಳರಿಮೆ ಮುಂತಾದ ಕೆಲಸಕ್ಕೆ ಬಾರದ ವಿಷಯಗಳಿಗೆ ಹೆಚ್ಚಿನ ಒತ್ತು ನೀಡುವುದರಿಂದ ನಮ್ಮ ಮಾನಸಿಕ ಆರೋಗ್ಯ ನಮಗೆ ಗೊತ್ತಿಲ್ಲದೆ ಕ್ಷೀಣಿಸುತ್ತದೆ. ಅದರ ಪರಿಣಾಮ ದೇಹದ ಮೇಲಾಗುತ್ತದೆ. ಆದ್ದರಿಂದ ಯಶಸ್ಸು ಹುಡುಕುವ ಮುನ್ನ ಆರೋಗ್ಯದ ಗಮನ ಅಗತ್ಯ. ಆರೋಗ್ಯವಂತ ಬದುಕು ಕೂಡ ಯಶಸ್ಸೇ.
ಈ ಭೂಮಿ ಮೇಲೆ ಹುಟ್ಟಿದ ಮೇಲೆ ಇಲ್ಲಿ ಇದ್ದಷ್ಟು ದಿನ ನಾವು ನಾವಾಗಿಯೇ ಗುರುತಿಸಿಕೊಳ್ಳುತ್ತೇವೆ. ನಾವು ಬೇರೆಯವರ ಆದರ್ಶಗಳನ್ನು ಪಾಲಿಸಿದರೆ ಅಥವಾ ಅವರನ್ನು ಅನುಕರಣೆ ಮಾಡಿದ ತಕ್ಷಣ ನಾವು ಅವರಾಗುವುದಿಲ್ಲ. ಇಲ್ಲಿ ಏನೇ ಮಾಡಿದರೂ ನಾವು ನಾವೇ. ಹೀಗಾಗಿ ನಾವು ನಾವಾಗಿ ಬದುಕುವುದನ್ನು ಮತ್ತು ಒಳ್ಳೆಯ ರೀತಿ ಬದುಕುವುದನ್ನು ರೂಢಿಸಿಕೊಳ್ಳಬೇಕು.
ಪ್ರತಿಯೊಬ್ಬರ ಬದುಕು ಒಂದೊಂದು ರೀತಿಯಲ್ಲಿರುತ್ತದೆ. ಅಷ್ಟೇ ಅಲ್ಲ ಅವರು ಮಾಡುವ ವ್ಯವಹಾರ, ಉದ್ಯೋಗವೂ ಕೂಡ. ನಮ್ಮ ಮುಂದಿನ ಜೀವನ ಹೇಗೋ ಗೊತ್ತಿಲ್ಲ. ಅದು ನಮ್ಮ ಕೈಯ್ಯಲ್ಲಿಲ್ಲ. ಆದರೆ ನಾವು ಮಾಡುವ ಕೆಲಸಗಳು, ತೆಗೆದುಕೊಳ್ಳುವ ನಿರ್ಣಯ, ಮತ್ತು ನಡೆದುಕೊಳ್ಳುವ ರೀತಿ ಮೇಲೆ ಮುಂದಿನ ಆರೋಗ್ಯವಂತ ಬದುಕು ನಿಂತಿರುತ್ತದೆ.
ಬಹಳಷ್ಟು ಮಂದಿ ಮತ್ತೊಬ್ಬರ ಏಳಿಗೆ ನೋಡಿ ಹಲಬುತ್ತಿರುತ್ತಾರೆ. ಅವನ ಅದೃಷ್ಟ ಚೆನ್ನಾಗಿದೆ. ಹಾಗಾಗಿ ಆತ ಆ ರೀತಿಯಲ್ಲಿ ಏಳ್ಗೆಯಾದ ಎಂಬ ಸಮಾಧಾನವನ್ನು ನಮಗೆ ನಾವೇ ಹೇಳಿಕೊಳ್ಳುತ್ತೇವೆ. ಬದಲಾಗಿ ಆತ ಆ ರೀತಿಯಾಗಲು ಎಷ್ಟು ಕಷ್ಟಪಟ್ಟಿದ್ದಾನೆ. ಅದೆಷ್ಟು ದಿನ ನಿದ್ದೆಗೆಟ್ಟು ದುಡಿದಿದ್ದಾನೆ ಎಂಬುವುದರ ಬಗ್ಗೆ ನಾವ್ಯಾರು ಯೋಚಿಸುವುದೇ ಇಲ್ಲ. ಅಷ್ಟೇ ಅಲ್ಲ ಅವನಂತೆ ನಾವು ಕೂಡ ಕಷ್ಟಪಡಲು ತಯಾರಿರುವುದಿಲ್ಲ. ಹೀಗಾಗಿ ನಾವು ದಿನದಿಂದ ದಿನಕ್ಕೆ ಕಡೆಗಣನೆಗೆ ಒಳಗಾಗಿ ಬಿಡುತ್ತೇವೆ.
ಸಾಮಾನ್ಯವಾಗಿ ಅಭಿವೃದ್ಧಿಯಾದವರ ಬಗ್ಗೆ ಹೆಚ್ಚು ತಿಳಿಯುವ ಕಾಳಜಿ ವಹಿಸುತ್ತೇವೆ. ಆದರೆ ಸೋಲು ಕಂಡವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಿಜ ಹೇಳಬೇಕೆಂದರೆ ಸೋತವರ ಬಗ್ಗೆಯೂ ಗಮನಿಸಬೇಕು. ಆಗ ಸೋಲಿಗೆ ಕಾರಣಗಳು ಸಿಗುತ್ತವೆ. ಬೇರೆಯವರ ಸೋಲು ನಮ್ಮ ಜೀವನಕ್ಕೆ ಪಾಠವಾಗುತ್ತದೆ.
ಜೀವನದಲ್ಲಿ ಸೋಲು, ಕಷ್ಟ ಎಲ್ಲವೂ ಇದ್ದದ್ದೇ. ಒಮ್ಮೆ ಸೋಲು ಎದುರಾಯಿತೆಂದರೆ ಜೀವನವೇ ಮುಗಿಯಿತು ಎಂದುಕೊಳ್ಳುವುದು ದಡ್ಡತನ. ಮಳೆಬಿಟ್ಟ ನಂತರ ಬಿಸಿಲು ಬಂದೇ ಬರುತ್ತದೆ. ಹಾಗೆಯೇ ಕಷ್ಟಗಳು ಕೂಡ. ಒಮ್ಮೆ ಸೋತ ಮಾತ್ರಕ್ಕೆ ನಾವು ಕಳೆದುಕೊಳ್ಳುವಂತಹದ್ದೇನಿಲ್ಲ. ಸೋಲಿನಿಂದ ತಕ್ಕ ಪಾಠ ಕಲಿತುಕೊಂಡು ಮೇಲೇರಲು ಪ್ರಯತ್ನ ಮಾಡಬೇಕು. ಸೋಲಿಗೆ ಭಯಪಡದೆ ಅವು ಸಹಜವಾಗಿ ಎದುರಾಗುವ ಅಡೆತಡೆಗಳಲ್ಲೊಂದು ಎಂದು ಭಾವಿಸಿ ಅವುಗಳನ್ನು ಧೈರ್ಯವಾಗಿ ಎದುರಿಸುವ ಜಾಣ್ಮೆಯನ್ನು ಬೆಳೆಸಿಕೊಳ್ಳಬೇಕು.