News Kannada
Thursday, September 29 2022

ಆರೋಗ್ಯ

ವೈದ್ಯರಿಗೊಂದು ಸಲಾಮ್ - 1 min read

Photo Credit :

ವೈದ್ಯರಿಗೊಂದು ಸಲಾಮ್

ಭಾರತರತ್ನ ಡಾ.ಬಿದನ್ ಚಂದ್ರ ರಾಯ್ ಅವರ ಜಯಂತಿಯಾದ ಜುಲೈ 1ನ್ನು ಭಾರತದಲ್ಲಿ ವೈದ್ಯರ ದಿನಾಚರಣೆಯನ್ನಾಗಿ ಆಚರಿಸುತ್ತಾ ಬರಲಾಗುತ್ತಿದೆ. ಸದಾ ರೋಗಿಗಳ ಶುಶ್ರೂಷೆಯಲ್ಲಿ ತೊಡಗಿ ಆರೋಗ್ಯ ಸೇವೆ ಮಾಡುವ ವೈದ್ಯರಿಗೆ ಸಲಾಂ ಎನ್ನಲೇ ಬೇಕು. ಇತ್ತೀಚಿಗಿನ ದಿನಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳು ವೈದ್ಯರ ಕರ್ತವ್ಯಕ್ಕೆ ಚ್ಯುತಿ ತರುತ್ತಿವೆ ಎನ್ನುವ ಮಾತುಗಳೂ ಇವೆ. ಮತ್ತೊಂದೆಡೆ ವೈದ್ಯರು ಭಯದ ವಾತಾವರಣದಲ್ಲಿ ಕೆಲಸ ಪರಿಸ್ಥಿತಿಯನ್ನು ಸೃಷ್ಟಿಮಾಡಿದೆ.

ವೈದ್ಯ ವೃತ್ತಿ ಎನ್ನುವುದು ಪವಿತ್ರವಾದ ವೃತ್ತಿ. ಅದಕ್ಕೆ ತನ್ನದೇ ಆದ ಗೌರವ, ಜವಬ್ದಾರಿ ಎಲ್ಲವೂ ಇದೆ. ವೈದ್ಯರು ಒಂದು ಕ್ಷಣ ಎಚ್ಚರ ತಪ್ಪಿದರೂ ಅದರಿಂದ ಭಾರೀ ಅನಾಹುತ ಸಂಭವಿಸಿ ಬಿಡುತ್ತದೆ. ಹೀಗಾಗಿ ಪವಿತ್ರ ವೃತ್ತಿಯಾಗಿರುವ ವೈದ್ಯ ವೃತ್ತಿಯನ್ನು ಮಾಡುವ ಎಲ್ಲಾ ವೈದ್ಯರು ಒಂದೆಡೆ ಕಲೆತು  ವೈದ್ಯರ ದಿನಾಚರಣೆ ಸಂದರ್ಭ ಮನನ ಮಾಡಿಕೊಳ್ಳಲೊಂದು ಅವಕಾಶ ದೊರೆತಂತಾಗಿದೆ.  ಹಾಗೆನೋಡಿದರೆ ವೈದ್ಯರ ದಿನಾಚರಣೆಯನ್ನು ಭಾರತದಲ್ಲಿ ಜುಲೈ 1ರಂದು ಆಚರಿಸಿದರೆ, ಅಮೆರಿಕದಲ್ಲಿ ಮಾರ್ಚ್ 30ರಂದು ವೈದ್ಯ ದಿನಾಚರಣೆಯನ್ನು ಆಚರಿಸುತ್ತಾರೆ. ಏಕೆಂದರೆ ಮಾರ್ಚ್ 30, 1842 ರಂದು ಡಾ.ಕ್ರಾಫರ್ಡ್ ಡಬ್ಲ್ಯು ಲಾಂಗ್ ಎನ್ನುವವರು ಮೊದಲ ಬಾರಿಗೆ ಅರಿವಳಿಕೆಯನ್ನು (ಅನೆಸ್ತೀಸಿಯ) ಪರಿಣಾಮಕಾರಿಯಾಗಿ ಬಳಸಿ ಒಂದು ಶಸ್ತ್ರಚಿಕಿತ್ಸೆಯನ್ನು ಮಾಡಿದರಂತೆ. ಈ ಮಹತ್ವದ ದಿನವನ್ನು ಅವರು ರಾಷ್ಟ್ರೀಯ ವೈದ್ಯ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದಾರೆ.  ಅಂದು ಅಲ್ಲಿ ರೋಗಿಗಳು ಮತ್ತು ಸಾರ್ವಜನಿಕರು ವೈದ್ಯರಿಗೆ ಕೆಂಪು ಗುಲಾಬಿ ಹೂವು ನೀಡಿ ಶುಭಾಶಯ ಹೇಳುತ್ತಾರಂತೆ. ಕಾರಣ ಕೆಂಪು ಗುಲಾಬಿ ಪ್ರೀತಿ, ತ್ಯಾಗ, ಧೈರ್ಯ, ಸಾಹಸ ಹಾಗೂ ಸೇವೆಯ ಪ್ರತೀಕವಂತೆ.

ಭಾರತದಲ್ಲಿ ಜುಲೈ1ನ್ನು ವೈದ್ಯರ ದಿನಾಚರಣೆಯನ್ನಾಗಿ ಆಚರಿಸುವುದರ ಹಿಂದೆ ಹಲವು ಮಹತ್ವದ ವಿಚಾರಗಳಿವೆ. ಅದು ಮೇಲ್ನೋಟಕ್ಕೆ ಡಾ.ಬಿದನ್ ಚಂದ್ರ ರಾಯ್ ಅವರ ಜನ್ಮದಿನವಾದರೂ ಆ ದಿನವನ್ನು ಆಯ್ಕೆ ಮಾಡಿಕೊಳ್ಳಲು ಹಲವು ಕಾರಣಗಳಿವೆ. ಡಾ.ಬಿದನ್ ಚಂದ್ರ ರಾಯ್ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಮಾಹಾತ್ಮ ಗಾಂಧೀಜಿಯವರ ಖಾಸಗಿ ವೈದ್ಯರೂ ಹೌದು. ಅವರು ಲಂಡನ್ ನಿಂದ ಎಫ್.ಆರ್.ಸಿ.ಎಸ್ ಹಾಗೂ ಎಂ.ಆರ್.ಸಿ.ಪಿ ಪದವಿಗಳೆರಡನ್ನೂ ಪಡೆದ ತಜ್ಞವೈದ್ಯ, ಶಸ್ತ್ರಚಿಕಿತ್ಸಕರಾಗಿದ್ದದ್ದು ಮತ್ತೊಂದು ವಿಶೇಷ. ಇವರು ಅನೇಕ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸುವುದರೊಂದಿಗೆ  ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾಗಿ ಜನಸೇವೆಯೊಂದಿಗೆ ಪ್ರತಿ ದಿನ ಸುಮಾರು 2 ಗಂಟೆಗಳ ಕಾಲ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡುತ್ತಿದ್ದರು ಎಂದರೆ ಅವರ ಸೇವಾ ಮನೋಭಾವನೆ ಹೇಗಿದ್ದಿರಬಹುದೆಂಬುದು ಅರ್ಥವಾಗಿ ಬಿಡುತ್ತದೆ.

ಇಂತಹ ಮಹಾನ್ ವ್ಯಕ್ತಿ ಜುಲೈ 1, 1882ರಲ್ಲಿ ಜನಿಸಿ ಜುಲೈ 1, 1962ರಂದು ವಿಧಿವಶರಾದರು. ಆದರೆ ಅವರು ಜುಲೈ 1ರಂದು ಜನಿಸಿ, ಜುಲೈ 1ರಂದೇ ಇಹಲೋಕ ತ್ಯಜಿಸಿದ್ದು ವಿಶೇಷ. ಅವರ ನೆನಪು ಚಿರವಾಗಿರಲೆಂದೇ ವೈದ್ಯರ ದಿನಾಚರಣೆಯನ್ನು ಅಸ್ತಿತ್ವಕ್ಕೆ ತರಲಾಗಿದೆ.

ಇವತ್ತು ವೈದ್ಯಲೋಕ ಅಗಾಧವಾಗಿ ಬೆಳೆದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕಾಣಸಿಗುವ ಆರೋಗ್ಯ ಕೇಂದ್ರದಿಂದ ಆರಂಭವಾಗಿ ಸೂಪರ್ ಸ್ಪೆಷಾಲಿಟಿ, ಹೈಟೆಕ್ ಆಸ್ಪತ್ರೆಗಳು ನಮ್ಮ ದೇಶದಲ್ಲಿವೆ. ವೈದ್ಯಕೀಯ ಕಾಲೇಜುಗಳು ಪ್ರತಿವರ್ಷ ಲಕ್ಷಾಂತರ ವೈದ್ಯರನ್ನು ತಯಾರು ಮಾಡಿ ಕಳುಹಿಸುತ್ತಿದೆ. ಹೀಗಾಗಿ ವೈದ್ಯಕೀಯ ಕ್ಷೇತ್ರ ವಿಶಾಲವಾಗುತ್ತಿದೆ.  ಮತ್ತೊಂದೆಡೆ ಹಣ ಮಾಡುವ ದಂಧೆಯಾಗಿಯೂ ಬದಲಾಗುತ್ತಿದೆ ಎಂದರೆ ತಪ್ಪಾಗಲಾರದು.

See also  ಮಹಿಳೆಯರ ಪಾಲಿನ ದುಸ್ವಪ್ನ ಸ್ತನ ಕ್ಯಾನ್ಸರ್!

ಸಾಮಾನ್ಯ ಜನರಿಗೆ ಆರೋಗ್ಯ ಸೇವೆ ಮರೀಚಿಕೆಯಾಗುತ್ತಿದೆ. ಇದರ ನಡುವೆ ಬಡವರ ಸೇವೆ ಮಾಡುತ್ತಾ ತಮ್ಮ ವೃತ್ತಿಧರ್ಮ ಪಾಲಿಸುತ್ತಿರುವ ವೈದ್ಯರೂ ಇಲ್ಲದಿಲ್ಲ. ಬಡ, ಅನಾಥ, ವೃದ್ಧಾಶ್ರಮಗಳಿಗೆ ತೆರಳಿ ಚಿಕಿತ್ಸೆ ನೀಡುವವರು ಒಂದು ಕಡೆಯಾದರೆ, ಮತ್ತೊಂದೆಡೆ ರೋಗಿಗಳಿಗೆ ಹೊರೆಯಾಗದಂತೆ ಆರೋಗ್ಯ ಸೇವೆ ನೀಡುವ ವೈದ್ಯರೂ ಇದ್ದಾರೆ. ಇಂತಹ ವೈದ್ಯರಿಗೆ ಪ್ರತಿಯೊಬ್ಬರೂ ಕೃತಜ್ಞತೆಯನ್ನು ಸಲ್ಲಿಸಲೇ ಬೇಕು.

ಡಾ.ನಾ.ಸೋಮೇಶ್ವರ್ ಹೇಳುವಂತೆ ವೈದ್ಯಕೀಯ ಒಂದು ವೃತ್ತಿಯಲ್ಲ, ಅದು ಅರಿವು, ಮಾನವೀಯತೆ, ಶ್ರದ್ಧೆ ಹಾಗೂ ಸೇವಾಮನೋಭಾವ ಮೇಳೈಸಿರುವ ಸೇವೆ. ವೈದ್ಯನಾದವನಿಗೆ ಹದ್ದಿನ ಕಣ್ಣುಗಳು, ಸಿಂಹದ ಹೃದಯ ಹಾಗೂ ಹೆಣ್ಣಿನ ಕೋಮಲ ಕರಗಳಿರಬೇಕಾಗುತ್ತದೆ. ಆಗ ಮಾತ್ರ ಅವನು ವೃತ್ತಿಗೆ ನ್ಯಾಯವನ್ನು ಒದಗಿಸಬಲ್ಲನು.

ವೈದ್ಯನು ಸದಾ ಜಾಗೃತನಾಗಿರಬೇಕು. ಅವನು ಮಾಡಬಹುದಾದ ಒಂದು ಸಣ್ಣ ತಪ್ಪು ಒಂದು ಜೀವಕ್ಕೆ (ತನ್ಮೂಲಕ ಒಂದು ಕುಟುಂಬಕ್ಕೆ) ಎರವಾಗಬಹುದು. ಹಾಗಾಗಿ ಪ್ರತಿ ಕ್ಷಣದಲ್ಲಿಯೂ ಮೈಯೆಲ್ಲ ಕಣ್ಣಾಗಿಟ್ಟುಕೊಂಡಿರಬೇಕಾಗುತ್ತದೆ. ವೈದ್ಯನು ಸದಾ ಒತ್ತಡದಲ್ಲಿರುವುದು ಅನಿವಾರ್ಯ.

ವೈದ್ಯನು ತಾನು ಎಷ್ಟೇ ಒತ್ತಡದಲ್ಲಿರಲಿ, ಅದನ್ನು ತೋರಿಸಿಕೊಳ್ಳುವ ಹಾಗಿಲ್ಲ. ರೋಗಿಗೆ ಚಿಕಿತ್ಸೆಯನ್ನು ಹಾಗೂ ನೋವಿನಲ್ಲಿ ಪಾಲ್ಗೊಂಡು ಸಾಂತ್ವಾನವನ್ನು ನೀಡಬೇಕಾಗುತ್ತದೆ. ವೈದ್ಯ ದಿನಾಚರಣೆಯಂದು  ವೈದ್ಯರು ಸಮಾಜದಲ್ಲಿ ತಮ್ಮ ಸ್ಥಾನವನ್ನು ಅರಿತುಕೊಳ್ಳಬೇಕು. ಸೇವೆಯ ಪ್ರತಿಜ್ಞೆಯನ್ನು ಸ್ವೀಕರಿಸಿರುವುದನ್ನು ನೆನಪಿಸಿಕೊಂಡು ವೃತ್ತಿಗೆ ನ್ಯಾಯವನ್ನು ಒದಗಿಸಬೇಕು.

ಇಂದು ವೈದ್ಯಕೀಯ ವೃತ್ತಿ ಕವಲುಹಾದಿಯಲ್ಲಿ ನಿಂತಿದ್ದು, ಸೇವೆಯಾಗಿ ಉಳಿಯದೇ ಉದ್ಯಮವಾಗಿದೆ. ಆದರೆ ಆ ವೃತ್ತಿಗೆ ಅಂದು-ಇಂದು-ಮುಂದು ತನ್ನದೇ ಗೌರವ ಇದ್ದೇ ಇರುತ್ತೆ ಅದನ್ನು ಮನಗಂಡು ವೈದ್ಯರು ಕಾರ್ಯನಿರ್ವಹಿಸಬೇಕು ಹಾಗಾದಲ್ಲಿ ವೈದ್ಯೋ ನಾರಾಯಣೋ ಹರಿಃ ಮಾತಿಗೆ ಅರ್ಥಬರುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು