ಮಳೆಗಾಲದಲ್ಲಿ ಹಲವು ರೋಗಾಣುಗಳ ಚಟುವಟಿಕೆ ಹೆಚ್ಚು. ಇದರೊಂದಿಗೆ ನಮ್ಮ ದೇಹದಲ್ಲಿ ಜೀರ್ಣಕ್ರಿಯೆಯ ಶಕ್ತಿಯೂ ಕಡಿಮೆಯಾಗಿ ರೋಗಗಳಿಗೆ, ವೈರಾಣು ಜ್ವರಗಳಿಗೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಕಾಡುವ ರೋಗಗಳು, ಅವುಗಳ ಮುನ್ನೆಚ್ಚರಿಕಾ ಕ್ರಮ ಅಗತ್ಯ.
ಮಳೆಗಾಲದಲ್ಲಿ ಕೊಚ್ಚೆ ನೀರಿಗೆ ಸೊಳ್ಳೆಗಳು ಉತ್ಪತ್ತಿಯಾಗಿ ಇದರಿಂದ ಅನೇಕ ರೋಗ ರುಜಿನಗಳನ್ನು ತರಿಸುತ್ತವೆ. ಮಲೇರಿಯಾ, ಡೆಂಗ್ಯೂ, ಚಿಕನ್ ಗುನ್ಯಾದಂತಹ ಅಪಾಯಕಾರಿ ಜ್ವರಗಳು ನಮ್ಮ ದೇಹವನ್ನು ಆಕ್ರಮಿಸುತ್ತವೆ. ಈ ರೋಗಗಳ ಬಗ್ಗೆ ಬಹಳ ಎಚ್ಚರಿಕೆಯಿಂದಿರುವುದು ಅಗತ್ಯ. ಹೆಣ್ಣು ಅನೋಫಿಲಿಸ್ ಸೊಳ್ಳೆ ಕಡಿತದಿಂದಾಗಿ ಮಲೇರಿಯಾ ಜ್ವರ ಹಬ್ಬುತ್ತದೆ. ಹೆಚ್ಚಾಗಿ ನೀರು ನಿಂತಿರುವ ಸ್ಥಳಗಳು ಸೊಳ್ಳೆಗಳ ಆವಾಸ ಸ್ಥಾನವಾಗಿರುತ್ತದೆ. ಪ್ಲಾಸ್ಮೋಡಿಯಂ ಜಾತಿಗೆ ಸೇರಿದ ಪ್ರೊಟೊಸೋವನ್ ಪರಾವಲಂಬಿಯ ಮೂಲಕ ಈ ರೋಗಕ್ಕೆ ಕಾರಣ. ಮಲೇರಿಯಾ ಜ್ವರ ಸಾಮಾನ್ಯ ಜ್ವರದಂತೆಯೇ ಕಾಣಿಸಿಕೊಳ್ಳಬಹುದು. ಆದರೆ ಬಳಿಕ ತೀವ್ರ ರೀತಿಯ ಜ್ವರ ಇರುತ್ತದೆ. ಮೈಕೈ ನೋವು, ತಲೆನೋವು, ತೀವ್ರ ಸುಸ್ತು ಇತ್ಯಾದಿ ಸಾಮಾನ್ಯ. ಇದಕ್ಕಾಗಿ ಸೂಕ್ತ ರಕ್ತ ಪರೀಕ್ಷೆಯೊಂದಿಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು.
ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದರಿಂದ ನಮ್ಮ ದೇಹ ಬಹುಬೇಗ ಈ ವೈರಾಣು ಜ್ವರಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು. ಈಡಿಸ್ ಈಜಿಪ್ಟಿ ಎಂಬ ಸೊಳ್ಳೆ ಕಚ್ಚುವುದರಿಂದ ಡೆಂಗ್ಯೂ ಜ್ವರ ಹಬ್ಬುತ್ತದೆ. ಈ ಸೊಳ್ಳೆ ಹಗಲಲ್ಲೇ ಕಚ್ಚುತ್ತದೆ. ಜನ ಸಂಚಾರ ಹಗಲು ಹೆಚ್ಚಾಗಿರುವುದರಿಂದ ವೇಗವಾಗಿ ಜ್ವರ ಹಬ್ಬುವುದಕ್ಕೂ ಕಾರಣವಾಗುತ್ತದೆ. ತೀವ್ರ ಮೈ ಕೈ ನೋವು, ಬೆನ್ನು ನೋವು, ವಾಂತಿ-ಭೇದಿ, ನಿಶ್ಯಕ್ತಿ, ಇತ್ಯಾದಿ ಕಾಣಬಹುದು.
“ಚಿಕನ್‌ಗುನ್ಯಾ” ಪ್ರಾಣಿಗಳಿಂದ ಬರುವ ಕಾಯಿಲೆಯಾಗಿದ್ದು, ತೀವ್ರ ತರವಾದ ಗಂಟುನೋವು, ಜ್ವರ ಇತ್ಯಾದಿಗಳು ಕಾಣಿಸಿಕೊಳ್ಳುತ್ತವೆ. ಹಗಲಲ್ಲೇ ಈ ಸೊಳ್ಳೆಗಳು ಕಚ್ಚುತ್ತವೆ. ಜ್ವರ ವಾಸಿಯಾದ ಮೇಲೂ ವಾರಗಳ ತನಕ ಗಂಟು ನೋವುಗಳು ಇರಬಹುದು.
ಮಳೆಗಾಲದಲ್ಲಿ ಕೊಚ್ಚೆ ನೀರು ನಿಲ್ಲದಂತೆ ಜಾಗ್ರತೆ ವಹಿಸಬೇಕು. ಇಲ್ಲದಿದ್ದರೇ ಸೊಳ್ಳೆಗಳು ಉತ್ಪತ್ತಿಯಾಗಿ ನಮ್ಮ ಆರೋಗ್ಯವನ್ನು ಕೆಡಿಸುತ್ತವೆ. ಜ್ವರ ಬಂದಾಗ ನಿರ್ಲಕ್ಷ ಮಾಡದೆ ಕೂಡಲೇ ವೈದ್ಯರನ್ನು ಭೇಟಿ ನೀಡಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಮೊದಲು ನಮ್ಮ ಆರೋಗ್ಯ ಅತಿ ಮುಖ್ಯ. ಆರೋಗ್ಯವೇ ಭಾಗ್ಯ ಎಂಬ ಮಾತಿದೆ. ಅದರಂತೆ ನಡೆದುಕೊಂಡರೆ ಉತ್ತಮ ಆರೋಗ್ಯ ನಮ್ಮದಾಗಬಹುದು.