News Kannada
Friday, September 30 2022

ಆರೋಗ್ಯ

ತೂಕ ಇಳಿಕೆಗೆ ಉಪವಾಸ ಪರಿಹಾರವಲ್ಲ..! - 1 min read

Photo Credit :

ತೂಕ ಇಳಿಕೆಗೆ ಉಪವಾಸ ಪರಿಹಾರವಲ್ಲ..!

ವಯಸ್ಸಿಗೆ, ಎತ್ತರಕ್ಕೆ ತಕ್ಕಂತೆ ನಮ್ಮ ದೇಹದ ತೂಕವನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ. ಇದಕ್ಕಾಗಿ ಹಲವು ರೀತಿಯ ವ್ಯಾಯಾಮ, ವಾಕಿಂಗ್ ಹೀಗೆ ದೇಹವನ್ನು ದಂಡಿಸುವುದು ಅನಿವಾರ್ಯ. ವರ್ಕೌಟ್ ಮೂಲಕ ದೇಹದ ತೂಕವನ್ನು ಕಡಿಮೆ ಮಾಡುವುದು ಒಂದು ಕಡೆಯಾದರೆ, ದೇಹಕ್ಕೆ ಎಂತಹ ರೀತಿಯ ಆಹಾರ ಸೇವಿಸಬೇಕು ಎನ್ನುವುದು ಕೂಡ ಅಷ್ಟೇ ಮುಖ್ಯವಾಗುತ್ತದೆ.

ದೇಹದ ತೂಕ ಹೆಚ್ಚಲು ಹಲವು ಕಾರಣಗಳಿವೆ. ಇತ್ತೀಚೆಗೆ ಶ್ರಮ ವಹಿಸಿ ದುಡಿಯಲು ನಾವು ತಯಾರಿಲ್ಲ. ಇಡೀ ದೇಹಕ್ಕೆ ಶ್ರಮವಾಗುವಂತಹ ಕಠಿಣ ರೀತಿಯ ಕೆಲಸ ಮಾಡುವವರಿಗೆ ದೇಹ ತೂಕದ ಸಮಸ್ಯೆ ಕಾಣಿಸುವುದಿಲ್ಲ. ಬಹಳಷ್ಟು ಜನರದು ದೇಹಕ್ಕಿಂತ ಮಾನಸಿಕ ಶ್ರಮದ ಕೆಲಸವೇ ಜಾಸ್ತಿ. ಹೀಗಾಗಿ ದೇಹದ ಮೇಲೆ ನಿಗಾವಹಿಸದ ಕಾರಣದಿಂದ ದೇಹ ತೂಕ ಹೆಚ್ಚುವುದಲ್ಲದೆ ಅನಾರೋಗ್ಯದ ಗೂಡಾಗುವ ಸಾಧ್ಯತೆ ಹೆಚ್ಚಿದೆ.

ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳಲು ಆಹಾರ ಸೇವನೆಯಲ್ಲಿ ಒಂದಷ್ಟು ಎಚ್ಚರಿಕೆಗಳನ್ನು ವಹಿಸಬೇಕಾಗುತ್ತದೆ. ಅಷ್ಟೇ ಅಲ್ಲ ಕೆಲವೊಂದು ವೈದ್ಯರು ಹೇಳುವ ಸಲಹೆ ಮತ್ತು ಆಹಾರ ಕ್ರಮಗಳನ್ನು ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಅಗತ್ಯ. ವೈದ್ಯರು ಹೇಳುವ ಆಹಾರ ಕ್ರಮಗಳಂತೆ ಎಣ್ಣೆ, ಬೆಣ್ಣೆ, ಜಿಡ್ಡಿನ ಪದಾರ್ಥಗಳಷ್ಟೇ ಅಲ್ಲದೆ ಅಗತ್ಯಕ್ಕಿಂತ ಹೆಚ್ಚು ಸೇವಿಸಿದ ಕಾರ್ಬೋಹೈಡ್ರೇಟ್ ಗಳು, ಪ್ರೋಟೀನ್ ಗಳು ದೇಹದ ತೂಕವನ್ನು ಹೆಚ್ಚಿಸುವುದರಿಂದ ಅವುಗಳನ್ನು ದೂರವಿಡಬೇಕು.

ಮಧ್ಯೆ, ಮಧ್ಯೆ ಊಟ ಬಿಟ್ಟರೆ ಸಣ್ಣಗಾಗಬಹುದು ಎಂಬ ಭ್ರಮೆ ಕೆಲವರಲ್ಲಿದೆ. ಅದರಿಂದ ಪ್ರಯೋಜನವಿಲ್ಲ. ಕಾರಣ ಮತ್ತೊಂದು ಹೊತ್ತು ಹೆಚ್ಚು ಊಟ ಸೇವಿಸುವಂತಾಗುತ್ತದೆ. ಹಾಗಾಗಿ ಊಟವನ್ನು ತಪ್ಪಿಸದೆ ಪ್ರಮಾಣವನ್ನು ಕಡಿಮೆಗೊಳಿಸಬೇಕು. ಮಧ್ಯೆ ಮಧ್ಯೆ ಕುರುಕು ತಿಂಡಿಗಳನ್ನು ತಿನ್ನುವ ಅಭ್ಯಾಸ ಕಡಿಮೆ ಮಾಡಬೇಕು ಎನ್ನುವುದಕ್ಕಿಂತಲೂ ಬಿಟ್ಟು ಬಿಡುವುದು ಒಳ್ಳೆಯದು.

ಬೆಳಗ್ಗಿನ ಉಪಹಾರ ಸೇವನೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಆದ್ದರಿಂದ ಅದನ್ನು ತಪ್ಪಿಸಬಾರದು. ರಾತ್ರಿ ವೇಳೆ ಊಟವಾದ ತಕ್ಷಣವೇ ಮಲಗುವುದು ಒಳ್ಳೆಯ ಅಭ್ಯಾಸವಲ್ಲ. ಒಂದಷ್ಟು ಹೊತ್ತು ಅಡ್ಡಾಡಿ ಬಳಿಕ ಮಲಗುವುದು ಒಳ್ಳೆಯದು. ಟಿವಿ ನೋಡುತ್ತಾ, ಪುಸ್ತಕ ಓದುತ್ತಾ ಊಟ ಮಾಡುವ ಅಭ್ಯಾಸ ರೂಢಿಸಿಕೊಂಡಿದ್ದರೆ ಅದನ್ನು ಬಿಟ್ಟುಬಿಡುವುದು ಒಳಿತು. ನಿಧಾನವಾಗಿ ಚೆನ್ನಾಗಿ ಅಗಿದು ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಗಬಗಬನೆ ತಿಂದು ಎದ್ದು ಹೋಗುವ ಅಭ್ಯಾಸವಿದ್ದರೆ ಅದಕ್ಕೆ ಕಡಿವಾಣ ಹಾಕಲೇ ಬೇಕಾಗುತ್ತದೆ.

ಕೊಬ್ಬಿನ ಅಂಶವನ್ನು ಸಂಪೂರ್ಣ ಕಡಿಮೆ ಮಾಡದೆ ಸಮತೋಲನೆ ಕಾಯ್ದುಕೊಳ್ಳಬೇಕು, ಸಕ್ಕರೆ ಪ್ರಮಾಣ ಕಡಿಮೆಯಿದ್ದಷ್ಟು ಒಳಿತು. ಕೃತಕ, ಸಂಸ್ಕರಿಸಿದ, ಬೇಕರಿಯ ಪದಾರ್ಥಗಳು, ಐಸ್ಕ್ರೀಂ, ಫಿಜ್ಹಾ, ಬರ್ಗರ್ನಂತಹ ತಿನಿಸುಗಳಿಂದ ಆದಷ್ಟು ದೂರವಿರಬೇಕು. ಸೇವಿಸದಿದ್ದರೆ ಇನ್ನು ಒಳ್ಳೆಯದು.

ಕೊಬ್ಬರಿ, ಎಳ್ಳು, ಕಡ್ಲೆಕಾಯಿ, ಗೋಡಂಬಿ, ಬಾದಾಮಿ ಮೊದಲಾದ ಡ್ರೈಫ್ರೂಟ್ಸ್ ಸೇವನೆ ಕಡಿಮೆ ಮಾಡಬೇಕು. ತುಪ್ಪ, ಚೀಸ್, ಪನ್ನೀರ್ ಸೇವಿಸದೆ ಕೆನೆ ತೆಗೆದಹಾಲು, ಕಡಿದ ಮಜ್ಜಿಗೆ ಸೇವಿಸಬೇಕು. ಕೊಬ್ಬಿನ ಅಂಶವಿರುವ ಮಾಂಸ ಸೇವನೆ ಕಡಿಮೆ ಮಾಡಿದಷ್ಟು ಉತ್ತಮ. ಉಪ್ಪಿನ ಅಂಶ ಹೆಚ್ಚಿರುವ ಉಪ್ಪಿನ ಕಾಯಿ, ಸಂಡಿಗೆ, ಹಪ್ಪಳ ಮೊದಲಾದವುಗಳನ್ನು ದೂರವಿಡಬೇಕು.

See also  ಕುಡಿತ ಮಾನಸಿಕ-ದೈಹಿಕ ಆರೋಗ್ಯಕ್ಕೆ ಮಾರಕ

ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ವರ್ಜಿಸಿ ಹಬೆಯಲ್ಲಿ ಬೇಯಿಸಿದ ಪದಾರ್ಥಗಳನ್ನು ಸೇವಿಸುವುದನ್ನು ರೂಢಿಸಿಕೊಳ್ಳುವುದು ಒಳ್ಳೆಯದು. ಹಣ್ಣಿನ ಜ್ಯೂಸ್ ಬದಲು ಹಣ್ಣನ್ನೇ ಸೇವಿಸಬೇಕು. ದಿನಕ್ಕೆ ಎಂಟರಿಂದ ಹತ್ತು ಲೋಟ ನೀರು ಸೇವಿಸಲೇ ಬೇಕು. ಸೇವಿಸುವ ಆಹಾರದ ಪ್ರಮಾಣ ಕಡಿಮೆ ಮಾಡಬೇಕಾದರೆ ಊಟಕ್ಕೆ ಮುಂಚಿತವಾಗಿ ಒಂದು ಲೋಟ ನೀರು ಕುಡಿದು ಮತ್ತೆ ಊಟ ಮಾಡುವುದು ಒಳ್ಳೆಯದು.

ಕೊಬ್ಬಿನ ಅಂಶ ಕಡಿಮೆ ಇರುವ, ನಾರಿನ ಅಂಶ ಹೆಚ್ಚಿರುವ ಆಹಾರವನ್ನು ಸೇವಿಸುವುದು, ಮೊಳಕೆ ಕಟ್ಟಿದ ಕಾಳುಗಳು, ಸೊಪ್ಪು ತರಕಾರಿಗಳು, ಹಣ್ಣುಗಳ ಸೇವನೆಗೆ ಆದ್ಯತೆ ನೀಡಬೇಕು. ದೇಹದ ತೂಕವನ್ನು ಒಮ್ಮೆಗೆ ಇಳಿಸಲು ಯಾವುದೇ ಔಷಧಿಯಿಲ್ಲ. ಆದ್ದರಿಂದ ನಕಲಿ ಔಷಧಿಗಳಿಗೆ ಮೋಸ ಹೋಗುವುದಕ್ಕಿಂತ ವ್ಯಾಯಾಮ, ಕ್ರಮಬದ್ಧ ಆಹಾರ ಸೇವನೆ ಮೂಲಕ ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳುವುದು ಜಾಣತನ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು