ಪ್ರಕೃತಿಯಲ್ಲಿರುವ ಕೆಲವು ಜೀವಿಗಳು ಮನುಷ್ಯನಿಗೆ ಉಪದ್ರವಿಯಾಗಿದ್ದರೆ, ಮತ್ತೆ ಕೆಲವು ನಿರುಪದ್ರವಿಯಾಗಿವೆ ಜತೆಗೆ ಆರೋಗ್ಯಕಾರಿಯೂ ಹೌದು. ಮಲೆನಾಡಿನಲ್ಲಿ ಬದುಕು ಸಾಗಿಸುವ ಜನ ಅದರಲ್ಲೂ ಕೃಷಿಯಲ್ಲಿ ತೊಡಗಿಸಿಕೊಂಡಿರುವ ರೈತರು ಪ್ರತಿನಿತ್ಯ ಹಲವು ಜೀವಿಗಳನ್ನು ನೋಡುತ್ತಿರುತ್ತಾರೆ. ಅದರಲ್ಲಿಯೂ ಮಳೆಗಾಲದಲ್ಲಿ ಆಗಾಗ್ಗೆ ಜಿಗಣೆಗಳ ದಾಳಿಗೆ ತುತ್ತಾಗಲೇ ಇರುತ್ತಾರೆ.
ತೋಟದಲ್ಲಿ ಕೆಲಸ ಮಾಡುವವರು ಜಿಗಣೆಗೆ ಹೆದರಿ ಕೂರುವಂತೆಯೂ ಇಲ್ಲ. ಅದರ ಪಾಡಿಗೆ ಅದು ಕಚ್ಚಿ ಬಿದ್ದ ಬಳಿಕವೇ ಹೆಚ್ಚಿನವರಿಗೆ ಜಿಗಣೆ ಕಚ್ಚಿರುವುದು ಗೊತ್ತಾಗುವುದು. ಮಳೆಗಾಲದಲ್ಲಿ ತೋಟದಲ್ಲಿ ಕೆಲಸ ಮಾಡುವ ಹೆಚ್ಚಿನ ಜನ ತಮ್ಮ ದೇಹದಲ್ಲಿರುವ ರಕ್ತದಲ್ಲಿ ಒಂದಷ್ಟು ಪಾಲನ್ನು ಅವುಗಳಿಗೆ ನೀಡಲೇ ಬೇಕಾಗುತ್ತದೆ. ಇಷ್ಟಕ್ಕೂ ಜಿಗಣೆ ಕಚ್ಚಿ ಆಸ್ಪತ್ರೆಗೆ ಸೇರಿದವರು ಇಲ್ಲವೇ ಇಲ್ಲ ಎನ್ನಬೇಕು.
ಜಿಗಣೆ ಎಂದರೆ ಮಾರು ಉದ್ದ ಓಡುವ, ಅಸಹ್ಯ ಪಡುವ ಜನ ಬಹಳಷ್ಟಿದ್ದಾರೆ. ಆದರೆ ಈ ಜಿಗಣೆಗಳು ಕಚ್ಚುವುದು ಕೂಡ ಆರೋಗ್ಯಕ್ಕೆ ಒಳ್ಳೆಯದು ಎನ್ನುವವರಿದ್ದಾರೆ. ಕಜ್ಜಿ, ವೃಣಗಳ ಜಾಗಕ್ಕೆ ಜಿಗಣೆಗಳು ಕಚ್ಚಿ ರಕ್ತ ಹೀರುವುದರಿಂದ ಬ್ಯಾಕ್ಟೀರಿಯಾ ಜಿಗಣೆಯನ್ನು ಸೇರಿ ಗಾಯಗಳು ವಾಸಿಯಾದ ನಿದರ್ಶನಗಳು ಬೇಕಾದಷ್ಟಿವೆ.
ವೈದ್ಯರು ಜಿಗಣೆ ಚಿಕಿತ್ಸೆ ನೀಡಿ ಚರ್ಮರೋಗಗಳನ್ನು ವಾಸಿ ಮಾಡಿ ಯಶಸ್ಸು ಸಾಧಿಸಿದ್ದಾರೆ. ದಶಕಗಳ ಹಿಂದೆಯೇ ಬೆಂಗಳೂರಿನ ಡಾ.ಶುಭಾಶಂಕರಿ ಎಂಬುವರು ಜಿಗಣೆಯನ್ನು ಬಳಸಿ ಚಿಕಿತ್ಸೆ ನೀಡುವುದರ ಮೂಲಕ ಹಲವು ರೀತಿಯ ಚರ್ಮರೋಗಗಳನ್ನು ಗುಣಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮನುಷ್ಯನ ದೇಹದ ಮೇಲೆ ಕಾಣಬರುವ ಸುಮಾರು ಹದಿನೆಂಟು ಚರ್ಮರೋಗಗಳಲ್ಲಿ ಯಕ್ಸಿಮಾ, ಕುರು, ದುಷ್ಟವೃಣ, ಗ್ರಂಥಿಗೆಡ್ಡೆ ಮುಂತಾದ ಎಲ್ಲ ರೀತಿಯ ಚರ್ಮ ವ್ಯಾಧಿಗಳಿಗೂ ಜಿಗಣೆಯ ಮೂಲಕ ಚಿಕಿತ್ಸೆ ನೀಡಿ ಕಾಯಿಲೆ ವಾಸಿ ಮಾಡುವಲ್ಲಿ ಅವರು ಯಶಸ್ವಿಯಾಗಿದ್ದರು.
ಹಾಗೆ ನೋಡಿದರೆ ಜಿಗಣೆಯಲ್ಲಿ ಆಧುನಿಕ ವಿಜ್ಞಾನದ ಪ್ರಕಾರ ಸುಮಾರು 650 ವಿಧಗಳಿದ್ದು, ಆಯುರ್ವೇದದ ಪ್ರಕಾರ 12 ವಿಧ ಮಾತ್ರ ಲಭ್ಯ ಇವೆ ಎನ್ನಲಾಗಿದೆ. ಅವುಗಳಲ್ಲಿ ಆರು ವಿಧದವುಗಳು ವಿಷರಹಿತವಾಗಿದ್ದು, ಇವುಗಳನ್ನು ಮಾತ್ರ ಚಿಕಿತ್ಸೆಯಲ್ಲಿ ಉಪಯೋಗಿಸಲಾಗುತ್ತದೆ. ಈ ಜಿಗಣೆಗಳು ಕೆರೆ, ಕೊಳ ಮುಂತಾದ ಸಿಹಿ ನೀರಿನ ಪ್ರದೇಶಗಳಲ್ಲಿ ವಾಸಿಸುತ್ತಿರುತ್ತವೆ. ದನ ಜಿಗಣೆ(ಹಿರುಡಿನಿಯ ಗ್ಯಾನ್ಯು ಲೋಸೆ) ಪ್ರಭೇದದ ಜಿಗಣೆಯು ಸಾಮಾನ್ಯವಾಗಿ ಎಲ್ಲೆಡೆಯೂ ಕಂಡು ಬರುತ್ತದೆ.
ಜಿಗಣೆಗೆ ದೇಹದ ಎರಡು ತುದಿಗಳಲ್ಲಿಯೂ ಬಟ್ಟಲಿನಂತಹ ಚೂಷಕ(ಸಕ್ಕರ್)ಗಳಿದ್ದು, ಕೊರೆಯಲು ಸ್ಕ್ರೂನಂತಹ ಮೂರು ದವಡೆ ಹಲ್ಲುಗಳಿವೆ. ಈ ಸ್ಕ್ರೂನಂತಹ ದವಡೆ ಹಲ್ಲುಗಳಿಂದ ಮನುಷ್ಯನ ಅಥವಾ ಪ್ರಾಣಿಯ ದೇಹವನ್ನು ಅರಿವಿಗೆ ಬಾರದಂತೆ ಕೊರೆದು ರಕ್ತ ಹೀರುತ್ತವೆ. ಇವುಗಳ ಜೊಲ್ಲಿನಲ್ಲಿ ಕರಣೆ ರೋಧಕ ವಸ್ತು ಹಿರುಡಿನ್ ಇದ್ದು ರಕ್ತ ಹೀರುವಾಗ ರಕ್ತ ಹೆಪ್ಪುಗಟ್ಟದಂತೆ ಇದು ಸಹಾಯ ಮಾಡುತ್ತದೆ. ಒಮ್ಮೆ ಪ್ರಾಣಿಯ ದೇಹವನ್ನು ಕಚ್ಚಿದ ಜಿಗಣೆಯು ತನ್ನ ತೂಕದ ಮೂರರಿಂದ ಆರರಷ್ಟು ಹೆಚ್ಚಿನ ರಕ್ತವನ್ನು ಹೀರಿಯೇ ಪ್ರಾಣಿಯ ದೇಹವನ್ನು ಬಿಡುತ್ತದೆ.
ಇವುಗಳ ಜೀರ್ಣಾಂಗಗಳಲ್ಲಿ ರಕ್ತವನ್ನು ತುಂಬಿಕೊಳ್ಳಲು ವಿಶೇಷವಾದ ಚೀಲವಿದ್ದು, ಒಮ್ಮೆ ಹೊಟ್ಟೆ ತುಂಬಾ ರಕ್ತ ಹೀರಿದ ಜಿಗಣೆ ಒಂದು ವರ್ಷ ಕಾಲ ಉಪವಾಸವಾಗಿರಬಲ್ಲದು ಎಂದು ಹೇಳಲಾಗಿದೆ. ಸಿಹಿ ನೀರಿನಲ್ಲಿರುವ ಅಂದರೆ ಕೊಳಗಳಲ್ಲಿರುವ ಜಿಗಣೆಗಳನ್ನು ಕಾಲಿಗೆ ತುಪ್ಪ ಹಚ್ಚಿ ಕೊಳಕ್ಕೆ ಇಳಿದು ಜಿಗಣೆಗಳು ಕಾಲಿಗೆ ಅಂಟಿಕೊಂಡಾಗ ಅದನ್ನು ಹಿಡಿದು ಮಣ್ಣಿನ ಮಡಕೆಯಲ್ಲಿ ಹುಲ್ಲು ಹಾಕಿ ಬಟ್ಟೆಕಟ್ಟಿ ಸಂಗ್ರಹಿಸಿಟ್ಟುಕೊಂಡು ಬಳಿಕ ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತದೆ.
ಕೊಡಗಿನಲ್ಲಿ ಹಿಂದೆ ಏಲಕ್ಕಿ ತೋಟಗಳು ಹೆಚ್ಚಾಗಿದ್ದ ಕಾಲದಲ್ಲಿ ನೆರಳು ಮತ್ತು ನೀರಿನ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜಿಗಣೆಗಳಿರುತ್ತಿದ್ದವು. ಅವುಗಳ ನಡುವೆಯೇ ಮಳೆಗಾಲದಲ್ಲಿ ಏಲಕ್ಕಿ ತೋಟದಲ್ಲಿ ಕೆಲಸ ಮಾಡಬೇಕಾಗಿತ್ತು. ಈ ಸಂದರ್ಭ ಜಿಗಣೆಗಳು ಕಾಲಿಗೆ ಹತ್ತದಂತೆ ನಿಯಂತ್ರಣ ಮಾಡಲು ತಂಬಾಕು ನೀರು, ಅಥವಾ ನಿಂಬೆಹಣ್ಣಿನ ರಸವನ್ನು ಕಾಲಿಗೆ ಸವರಿಕೊಳ್ಳುತ್ತಿದ್ದರು. ಇವತ್ತಿಗೂ ಜಿಗಣೆಯಿಂದ ತಪ್ಪಿಸಿಕೊಳ್ಳಲು ಜನ ಇದನ್ನೇ ಮಾಡುತ್ತಾರೆ. ಒಟ್ಟಾರೆ ಜಿಗಣೆಯಲ್ಲಿ ಆರೋಗ್ಯಕಾರಿ ಗುಣಗಳಿರುವುದರಿಂದಲೇ ಇಂದಿಗೂ ಜಿಗಣೆಗಳಿಂದ ಜನ ಕಚ್ಚಿಸಿಕೊಂಡರೂ ಆರೋಗ್ಯವಾಗಿಯೇ ಇದ್ದಾರೆ ಎಂದರೆ ತಪ್ಪಾಗಲಾರದು.