ಈಗ ನಮ್ಮ ಜೀವನ ಶೈಲಿ ಬದಲಾಗಿದೆ. ಮುಂಜಾನೆ ಇಷ್ಟೇ ಸಮಯಕ್ಕೆ ಏಳಬೇಕು. ಹೀಗೆಯೇ ಕೆಲಸ ಆರಂಭಿಸಬೇಕೆನ್ನುವ ಹಿಂದಿನ ಸಂಪ್ರದಾಯದಂತೆ ಬದುಕಲು ನಮಗೆ ಸಾಧ್ಯವಾಗುತ್ತಿಲ್ಲ.
ಮೊದಲು ಪ್ರತಿಯೊಬ್ಬ ಮನುಷ್ಯನು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಕಾರ್ಯ ಪ್ರಾರಂಭಿಸಿದರೆ ಶುಭದಾಯಕವಾಗಿರುತ್ತದೆ ಎಂಬ ಮಾತಿತ್ತು. ಬ್ರಾಹ್ಮಿ ಕಾಲದಲ್ಲೆದ್ದು ಒಂದಷ್ಟು ಹೊತ್ತು ನಡೆದಾಡಿ ಬಂದರೆ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಅನುಕೂಲವಾಗುತ್ತದೆ. ಏಕೆಂದರೆ, ಇವತ್ತಿನ ದಿನಗಳಲ್ಲಿ ಜನಜಂಗುಳಿ, ವಾಹನ ಸಂಚಾರವಿಲ್ಲದೆ ನೀರವ ವಾತಾವರಣ ಬ್ರಾಹ್ಮಿಮುಹೂರ್ತದಲ್ಲಿ ಮಾತ್ರ ಸಾಧ್ಯ ಎಂದರೆ ತಪ್ಪಾಗಲಾರದು.
ರಾತ್ರಿ ನಿದ್ದೆಗೆಟ್ಟು ಕೆಲಸ ಮಾಡಿಯೋ ಅಥವಾ ಸಿನಿಮಾ, ಟಿವಿ ನೋಡಿಯೋ ಮಲಗಿದವರು ಬೆಳಿಗ್ಗೆ ಬೇಗ ಏಳಬೇಕೆಂದರೆ ಹೇಗೆ? ಹೀಗಾಗಿ ಸೂರ್ಯ ನೆತ್ತಿಗೆ ಬಂದರೂ ಕೆಲವರು ಹಾಸಿಗೆ ಬಿಟ್ಟು ಏಳುವುದೇ ಇಲ್ಲ.ಆದರೆ ಪ್ರಾತಃಕಾಲದ ಒಂದಷ್ಟು ವಿಧಿಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಮಾನಸಿಕ ಮತ್ತು ದೈಹಿಕವಾಗಿ ಒಳ್ಳೆಯ ಆರೋಗ್ಯವನ್ನು ಪಡೆಯಬಹುದು ಎಂದು ಆಧ್ಯಾತ್ಮಿಕ ಚಿಂತಕರು ಹೇಳುತ್ತಾರೆ. ಕೆಲವರು ಬೆಳಿಗ್ಗೆ ಎದ್ದ ಕೂಡಲೇ ಬೆಡ್ ಕಾಫಿ, ಟೀ ಕುಡಿಯುವ ಅಭ್ಯಾಸ ಇಟ್ಟು ಕೊಂಡಿರುತ್ತಾರೆ. ಇದು ಆರೋಗ್ಯಕರ ಅಭ್ಯಾಸವಲ್ಲ. ಬೆಳಿಗ್ಗೆ ಬೇಗನೆ ಎದ್ದು ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ಉತ್ತಮ. ಇದರಿಂದ ಆಹಾರ ಜೀರ್ಣಗೊಂಡು ಅಳಿದುಳಿದ ತ್ಯಾಜ್ಯಗಳ ವಿಸರ್ಜನೆಗೆ ಅನುಕೂಲವಾಗುತ್ತದೆ. ಪ್ರಾತಃಕಾಲ ಎದ್ದು ಖಾಲಿ ಹೊಟ್ಟೆಯಲ್ಲಿ ನೀರು ಕುಡಿದು, ಮಲ ಮೂತ್ರಾದಿಗಳನ್ನು ವಿಸರ್ಜಿಸಿ, ಹಲ್ಲುಜ್ಜಿ ಮುಖ ತೊಳೆದು ಮುಂದಿನ ಕೆಲಸಕ್ಕೆ ತೊಡಗಿಸಿಕೊಳ್ಳಬೇಕು. ಈ ರೀತಿಯ ಪದ್ಧತಿಯ ರೂಢಿಸಿಕೊಂಡರೆ ಜೀವನಕ್ಕೊಂದು ಶಿಸ್ತು ಪಡೆಯಲು ಸಾಧ್ಯವಾಗುತ್ತದೆ.
ಪ್ರಾತಃಕಾಲದ ವಾಯು ಸೇವನೆಯೂ ಆರೋಗ್ಯಕ್ಕೆ ಸಹಕಾರಿಯಾಗಿದೆ. ವಾಯು ಮಾಲಿನ್ಯದ ಸೋಂಕಿಲ್ಲದೆ ನಿರ್ಮಲ ವಾತಾವರಣವಿರುವ ಈ ವೇಳೆಯಲ್ಲಿ ನಡೆದಾಡುವುದು, ಓಡುವುದು, ವ್ಯಾಯಾಮ, ಯೋಗಾಸನ, ಪ್ರಾಣಾಯಾಮಗಳನ್ನು ಮಾಡುವುದು ಆರೋಗ್ಯ ವರ್ಧನೆಗೆ ಉತ್ತಮ ಹಾದಿಯಾಗಿದೆ. ಇನ್ನು ವಿದ್ಯಾರ್ಥಿಗಳು ಪ್ರಾತಃಕಾಲ ಕ್ರೀಡೆಗಳನ್ನು ಆಡುವುದು ಮತ್ತು ಓದುವುದನ್ನು ಮಾಡಿದರೆ ಒಳ್ಳೆಯದು. ವಿದ್ಯಾರ್ಥಿಗಳು ರಾತ್ರಿ ಬೇಗ ಮಲಗಿ ಬೆಳಿಗ್ಗೆ ಬೇಗ ಎದ್ದು ಓದುವ ಪರಿಪಾಠ ಬೆಳೆಸಿಕೊಂಡರೆ ಉತ್ತಮ. ಮನುಷ್ಯನ ಸರ್ವಾಂಗೀಣ ಬೆಳವಣಿಗೆಗೆ ಪ್ರಾತಃಕಾಲ ಬಹು ಮುಖ್ಯ ಪಾತ್ರ ವಹಿಸುವುದರಿಂದಲೇ ಪ್ರತಿಯೊಬ್ಬರೂ ಪ್ರಾತಃಕಾಲದ ಸದ್ಭಳಕೆ ಮಾಡಿಕೊಳ್ಳುವುದು ಅಗತ್ಯವಾಗಿದೆ.
ನಮ್ಮ ದಿನ ನಿತ್ಯದ ಜೀವನ ಶೈಲಿಯಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಳ್ಳಲು ಆಶಿಸಿದ್ದರೆ ಮೊದಲಿಗೆ ಪ್ರಾತಃಕಾಲ(ಬ್ರಾಹ್ಮಿಮುಹೂರ್ತ)ದಲ್ಲಿ ಏಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ಬಳಿಕ ಒಂದಷ್ಟು ಹೊತ್ತು ನಡೆದಾಡಿ ಬನ್ನಿ ಆಗ ಅದರ ಮಹತ್ವ ಅರಿವಾಗುತ್ತದೆ.