ನಾವೆಲ್ಲರೂ ಆರೋಗ್ಯಕಾರಿ ದೇಹವನ್ನು ಬಯಸುತ್ತೇವೆ. ಆದರೆ ಅದರಾಚೆಗೆ ಇರುವ ಆರೋಗ್ಯವಂತ ಬದುಕನ್ನು ಕಟ್ಟಿಕೊಳ್ಳುವಲ್ಲಿ ಮಾತ್ರ ಹೆಣಗಾಡುತ್ತಿರುತ್ತೇವೆ. ಇವತ್ತು ನಮ್ಮಲ್ಲಿ ಬಹಳಷ್ಟು ಜನರಿದ್ದಾರೆ. ಅವರಿಗೆ ಮಾಡೋದಕ್ಕೆ ಕೆಲಸವಿರುತ್ತದೆ. ಆರೋಗ್ಯವೂ ಚೆನ್ನಾಗಿಯೇ ಇರುತ್ತದೆ. ಆದರೂ ಅವರು ಸದಾ ಹೊರಗಿನವರಿಗೆ ರೋಗಿಗಳಂತೆ ಕಾಣುತ್ತಿರುತ್ತಾರೆ. ಇದಕ್ಕೆ ಮುಖ್ಯವಾದ ಕಾರಣ ತಮ್ಮಲ್ಲಿ ಇರುವುದನ್ನು ಖುಷಿಯಾಗಿ ಅನುಭವಿಸಲು ಕಲಿಯದೇ ಇರುವುದು ಮತ್ತು ಬೇರೆಯವರೊಂದಿಗೆ ತಮ್ಮ ಬದುಕನ್ನು ಸಮೀಕರಿಸಿಕೊಂಡು ಕೊರಗುವುದು.
ಕೆಲವೊಮ್ಮೆ ಕೈಗೆ ಎಟಕುವ ವಸ್ತುವಿನಲ್ಲಿ ನಮಗೆ ಆಸಕ್ತಿ ಇರುವುದಿಲ್ಲ. ಬದಲಿಗೆ ದೂರದಲ್ಲಿರುವ ವಸ್ತುವಿನ ಬಗ್ಗೆ ಕುತೂಹಲ ಅದರಲ್ಲೇನಿದೆ ನೋಡಿಯೇ ಬಿಡೋಣ ಎಂಬ ತವಕ. ಇದರಿಂದ ಕೆಲವೊಮ್ಮೆ ನಮ್ಮ ಬದುಕು ಎಂಥ ಸಂಕಷ್ಟಕ್ಕೆ ಸಿಲುಕುತ್ತದೆ ಎಂಬುದು ಹಲವು ಬಾರಿ ನಮ್ಮ ಅರಿವಿಗೆ ಬಂದಿರುತ್ತದೆ. ಒಬ್ಬ ವ್ಯಕ್ತಿ ಮನೆ ಮುಂದೆ ಬಿಟ್ಟಿದ್ದ ಹಲಸಿನ ಹಣ್ಣನ್ನು ನೋಡುತ್ತಾನೆ. ಆದರೆ ಅದು ಅವನನ್ನು ಆಕರ್ಷಿಸಲಿಲ್ಲ. ಏಕೆಂದರೆ ಅದು ನೋಡಲು ನುಣುಪಾಗಿರದೆ ಮೈಮೇಲೆ ಮುಳ್ಳುಗಳಂತಿತ್ತು. ಹೀಗಾಗಿ ಅದರ ಬಗ್ಗೆ ಗಮನಹರಿಸದ ಆತ ದೂರದಲ್ಲಿ ನೇತಾಡುತ್ತಿದ್ದ ಸುಂದರ ತಾಳೆ ಕಾಯಿಯನ್ನು ಕಂಡನು. ಅದರತ್ತ ಆಕರ್ಷಿತನಾಗಿ ಮುಳ್ಳು ಪೊದೆಗಳ ನಡುವೆ ಬೆಳೆದಿದ್ದ ಮರದತ್ತ ಪ್ರಯಾಸ ಪಟ್ಟು ಬಂದನು.
ಮರದ ಮೇಲಿದ್ದ ಕಾಯಿಯನ್ನು ಕೀಳುವುದು ಅಷ್ಟು ಸುಲಭವಾಗಿರಲಿಲ್ಲ. ಆದರೂ ಆತ ತನ್ನ ಛಲ ಬಿಡದೆ ಕಾಯಿಯನ್ನು ಕೀಳುವ ಸಲುವಾಗಿ ಮರವೇರಿದನು. ಆದರೆ ಮರವೇರಲು ಸಾಧ್ಯವಾಗದೆ ಮುಳ್ಳಿನ ಪೊದೆಗೆ ಬಿದ್ದನು. ಈ ಸಂದರ್ಭ ಅವನ ಮೈಗೆ ಮುಳ್ಳುಗಳು ಚುಚ್ಚಿದವು ಆದರೂ ಆತ ಅದನ್ನೆಲ್ಲಾ ಲೆಕ್ಕಿಸದೆ ಮತ್ತೆ ಮರವನ್ನೇರ ತೊಡಗಿದನು. ಆಗ ಮರದ ಒರಟಾದ ತೊಗಟೆಗಳು ಅವನನ್ನು ಚುಚ್ಚಿದವು. ಮರದಲ್ಲಿದ್ದ ಇರುವೆಗಳು ಕಚ್ಚಿದವು. ಅಲ್ಲಲ್ಲಿ ತರಚಿದ ಗಾಯಗಳಾದವು. ಆದರೆ ಇದ್ಯಾವುದನ್ನೂ ಲೆಕ್ಕಿಸದ ಆತ ಮರದ ಮೇಲ್ಭಾಗ ತಲುಪಿದನು. ಇನ್ನೇನು ಕಾಯಿಯನ್ನು ಕೀಳಬೇಕೆನ್ನುವಷ್ಟರಲ್ಲಿ ಹಾರಾಡುತ್ತಿದ್ದ ಜೇನುನೊಣಗಳು ಕುಟುಕಿದವು.
ಸುಂದರ ಕಾಯಿಗಳನ್ನು ಕೀಳುವುದೇ ಅವನ ಉದ್ದೇಶವಾಗಿದ್ದರಿಂದ ಇದ್ಯಾವುದರ ಬಗ್ಗೆಯೂ ಆತ ತಲೆಕೆಡಿಸಿಕೊಳ್ಳದೆ ಶ್ರಮ ಪಟ್ಟು ಕಾಯಿಯ ಗೊಂಚಲಿಗೆ ಕೈ ಹಾಕಿ ಕೀಳತೊಡಗಿದನು. ಆದರೆ ಕೆಲವು ಕೈ ತಪ್ಪಿ ಕೆಳಗೆ ಬಿದ್ದು ಪೊದೆಯಲ್ಲಿ ಕಾಣದಾದವು. ಕೈಗೆ ಸಿಕ್ಕ ಒಂದೆರಡು ಕಾಯಿಗಳೊಂದಿಗೆ ಮರದಿಂದ ಕೆಳಗೆ ಇಳಿದ ಆತ ಕಾಯಿಯನ್ನು ಒಡೆದು ತಿನ್ನುವ ಸಲುವಾಗಿ ಜಜ್ಜಿದನು. ಒಳಗಿದ್ದ ಕಾಯಿ ಬೆಳೆದು ತಿನ್ನದಾಗದಂತಾಗಿದ್ದವು. ಇದರಿಂದ ನಿರಾಶನಾದ ಆತ ಅದನ್ನೆಲ್ಲಾ ಎಸೆದು ಬೇಸರದಿಂದ ಅಯ್ಯೋ ಕೈಗೆ ಸಿಗುವಂತಿದ್ದ ಹಲಸಿನ ಹಣ್ಣನ್ನು ಬಿಟ್ಟು, ಈ ತಾಳೆ ಕಾಯಿಯನ್ನು ಪಡಬಾರದ ಕಷ್ಟ ಪಟ್ಟು ಕಿತ್ತು ಮೋಸ ಹೋದೆನಲ್ಲ ಎಂದು ಮರುಕ ಪಡುತ್ತಾ ಮನೆ ಕಡೆಗೆ ಹೆಜ್ಜೆ ಹಾಕಿದನು.
ಸ್ವಾಮಿ ಶಿವಾನಂದರು ಹೇಳಿದ ಈ ದೃಷ್ಟಾಂತ ಕಥೆ ಮನುಷ್ಯನ ಬದುಕಿನಲ್ಲಿ ನಡೆಯುವ ಮತ್ತು ನಾವು ಎಲ್ಲ ಇದ್ದರೂ ಇಲ್ಲದ ಕಡೆಗೆ ತುಡಿಯುತ್ತಾ ಒಂದೊಳ್ಳೆಯ ಆರೋಗ್ಯವಂತ, ಸುಂದರ ಬದುಕನ್ನೇ ಹೇಗೆ ಹಾಳು ಮಾಡಿಕೊಳ್ಳುತ್ತೇವೆ ಎಂಬುದನ್ನು ಹೇಳುತ್ತದೆ. ನಮ್ಮಲ್ಲಿರುವುದನ್ನು ಸದುಪಯೋಗಿಸಿಕೊಳ್ಳದೆ ಮತ್ತೇನೋ ಬೇಕೆಂದು ಕೊರಗುತ್ತಾ ದಿನ ಕಳೆಯುತ್ತೇವೆ. ಬೇರೆಯವರ ಬಗ್ಗೆ ಯೋಚಿಸುತ್ತಾ ತಮ್ಮ ಬಗ್ಗೆಯೇ ಜಿಗುಪ್ಸೆ ಪಟ್ಟುಕೊಳ್ಳುತ್ತೇವೆ. ಮೊದಲು ನಮ್ಮ ಬದುಕನ್ನು ನಾವು ಪ್ರೀತಿಸುವುದಕ್ಕೆ ಕಲಿಯಬೇಕು. ಆಗ ಎಲ್ಲವೂ ಸುಂದರವಾಗಿ ಕಾಣುತ್ತದೆ. ಸುಂದರವಾಗಿ ಕಾಣದ್ದು ಹಲಸಿನ ಹಣ್ಣಿನಂತೆ ಇರಬಹುದು. ಆದರೆ ಅದರಿಂದ ಸ್ವಾದಭರಿತ ಹಣ್ಣನ್ನು ಪಡೆದು ತಿಂದು ಹಸಿವು ನೀಗಿಸಬಹುದು. ಸುಂದರವಾಗಿ ಕಾಣುವ ತಾಳೆಕಾಯಿಂದ ಅದು ಸಾಧ್ಯನಾ? ಇಷ್ಟನ್ನೇ ನೆನಪಿಸಿಕೊಂಡರೆ ಸಾಕು. ನಾವು ಇರುವುದರಲ್ಲಿ ನೆಮ್ಮದಿಯಾಗಿ ಬದುಕಲು…