ಮಹಿಳೆಯರ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಕೂದಲಿನ ಪಾತ್ರ ಮಹತ್ವದಾಗಿದೆ. ಹಾಗಾಗಿಯೇ ಮಹಿಳೆಯರು ಕೂದಲಿನತ್ತ ಹೆಚ್ಚಿನ ಕಾಳಜಿ ವಹಿಸುತ್ತಾರೆ ಆದರೂ ಕೆಲವೊಮ್ಮೆ ಅಂದುಕೊಂಡಂತೆ ಕೂದಲನ್ನು ನಿಭಾಯಿಸುವುದು ಕಷ್ಟವಾಗುತ್ತದೆ. ಹಲವು ಕಾರಣಗಳಿಗೆ ಉದುರುವುದು, ಕಳೆಗುಂದುವುದು, ಬಿಳಿ ಕೂದಲು ಹುಟ್ಟಿಕೊಳ್ಳುವುದು ಕಂಡು ಬರುತ್ತದೆ. ಕೂದಲಿನ ಬಗ್ಗೆ ಒಂದಷ್ಟು ಮಾಹಿತಿ ತಿಳಿದುಕೊಂಡು ಅದರಂತೆ ಮಾಡಿದರೆ ಖಂಡಿತಾ ಸೊಂಪಾದ, ಸುಂದರವಾದ, ದಟ್ಟ ಮಿರುಗುವ, ಕೇಶರಾಶಿಯನ್ನು ಪಡೆಯಲು ಸಾಧ್ಯವಾಗುತ್ತದೆ.
ಇದೆಲ್ಲ ಸಾಧ್ಯವಾಗಲು ಏನು ಮಾಡಬೇಕೆಂಬ ಪ್ರಶ್ನೆಗಳು ನಮ್ಮನ್ನು ಕಾಡುವುದು ಸಹಜ. ಇದಕ್ಕಾಗಿ ಯಾವುದೇ ಬ್ಯೂಟಿ ಪಾರ್ಲರ್ಗೆ ಹೋಗಬೇಕಾಗಿಲ್ಲ. ಮನೆಯಲ್ಲಿದ್ದುಕೊಂಡೇ ಕೈಗೆ ಎಟಕುವ ಪದಾರ್ಥಗಳನ್ನು ಬಳಸಿಕೊಂಡು ಕೂದಲನ್ನು ಕಾಪಾಡಿಕೊಳ್ಳಬಹುದಾಗಿದೆ. ಈ ಕುರಿತಂತೆ ತಜ್ಞರು ಹಲವು ಸಲಹೆಗಳನ್ನು ನೀಡಿದ್ದು, ಅದರಂತೆ ಮಾಡಿದ್ದೇ ಆದರೆ ಕೂದಲಿನ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರೆ ತಪ್ಪಾಗಲಾರದು.
ಸಾಮಾನ್ಯವಾಗಿ ಮನೆಯಲ್ಲಿ ಬಿಡುವಾಗಿದ್ದಾಗ ರಾತ್ರಿ ವೇಳೆ ಮೆಂತ್ಯವನ್ನು ಮೊಸರಿನಲ್ಲಿ ನೆನೆಸಿಟ್ಟು ಬೆಳಗ್ಗೆ ನುಣ್ಣಗೆ ರುಬ್ಬಿ ಪೇಸ್ಟ್ ತಯಾರಿಸಿಕೊಂಡು ಅದಕ್ಕೆ್ಕೆ ನಿಂಬೆರಸ ಬೆರೆಸಿ ಬಳಿಕ ಕೂದಲಿಗೆ ಹಚ್ಚಿಕೊಂಡು ಸುಮಾರು ಅರ್ಧಗಂಟೆಗಳ ಕಾಲ ಬಿಟ್ಟು ಸ್ನಾನ ಮಾಡಬೇಕು. ಹೀಗೆ ಮಾಡುವುದರಿಂದ ಪ್ರಯೋಜನ ಏನೆಂದರೆ ತಲೆ ಬಾಚುವಾಗಲೆಲ್ಲ ಬಾಚಣಿಗೆಯಲ್ಲಿ ಸಿಕ್ಕಿಕೊಂಡು ಅಯ್ಯೋ ಇಷ್ಟೊಂದು ಕೂದಲು ಉದುರುತ್ತಿದೆಯಲ್ಲ ಎಂಬ ಆತಂಕಕ್ಕೆ ವಿರಾಮ ಬೀಳುತ್ತದೆ. ಇದಲ್ಲದೆ, ವಾರಕ್ಕೊಮ್ಮೆ ತೆಂಗಿನ ತುರಿಯನ್ನು ಮಿಕ್ಸಿ ಮಾಡಿಕೊಂಡು ಅದಕ್ಕೆ ನಿಂಬೆರಸ ಬೆರೆಸಿ ಮಸಾಜ್ ಮಾಡಿಕೊಳ್ಳುವುದರಿಂದಲೂ ಕೂದಲು ಉದುರುವಿಕೆಗೆ ವಿರಾಮ ಹೇಳಬಹುದಾಗಿದೆ. ಇನ್ನು ಸ್ನಾನ ಮಾಡುವ ನೀರಿಗೆ ಬೇವಿನ ಎಲೆಗಳನ್ನು ಹಾಕಿ ಕುದಿಸಿ ಅದರಿಂದ ತಲೆ ಸ್ನಾನ ಮಾಡುವುದರಿಂದಲೂ ಪರಿಹಾರ ಸಿಗುತ್ತದೆ.
ಕೆಲವರ ಕೂದಲು ಆಗಷ್ಟೇ ಸಿಮೆಂಟ್ ಹೊತ್ತು ಬಂದವರಂತೆ ಬಿಳಿಚಿಕೊಂಡಿರುತ್ತದೆ. ನೋಡಲು ಬೇಸರ ಹುಟ್ಟಿಸುವಂತಿರುತ್ತದೆ. ಅಯ್ಯೋ ನನ್ನ ಕೂದಲು ಏಕೆ ಹೀಗಾಯಿತು ಎಂದು ಕೆಲವರು ತಲೆಕೆಡಿಸಿಕೊಳ್ಳುತ್ತಾರೆ. ಅಂಥವರು ಕೂದಲು ಸೊಂಪಾಗಿ ಮಿರಮಿರ ಮಿಂಚಬೇಕು ಎಂದು ಆಶೆ ಪಡುವುದು ಸಾಮಾನ್ಯ. ಇದು ನೆರವೇರಬೇಕೆಂದರೆ, ವಾರಕ್ಕೊಮ್ಮೆ ಆಲಿವ್ ಆಯಿಲ್, ಎಳ್ಳೆಣ್ಣೆ, ಹರೆಳೆಣ್ಣೆ, ಕೊಬ್ಬರಿ ಎಣ್ಣೆ ಎಲ್ಲವನ್ನೂ ಬೆರೆಸಿ ಬಿಸಿ ಮಾಡಿಕೊಂಡು ಕೂದಲ ಬುಡದಿಂದ ತುದಿಯವರೆಗೂ ಮಾಲಿಷ್ ಮಾಡುವಂತೆ ಹಚ್ಚ ಬೇಕು ಹೀಗೆ ಮಾಡುತ್ತಾ ಬಂದರೆ ಅಂಥವರ ಸಮಸ್ಯೆಗ ಪರಿಹಾರವನ್ನು ಕಾಣಬಹುದಾಗಿದೆ. ದಾಸವಾಳ ಎಲೆ, ಭೃಂಗರಾಜ ಸೊಪ್ಪು ಒಂದೆಲಗ ಸೊಪ್ಪನ್ನು ರುಬ್ಬಿ ತಲೆಗೆ ಹಚ್ಚಿ ಸ್ನಾನ ಮಾಡುವುದರಿಂದಲೂ ಕೂದಲು ಸೊಂಪಾಗಿ ಬೆಳೆಯಲು ಸಾಧ್ಯವಾಗುತ್ತದೆ.
ಬೆಟ್ಟದ ನೆಲ್ಲಿಕಾಯಿ ಮತ್ತು ಭೃಂಗರಾಜ, ದಾಸವಾಳ ಎಲೆಗಳನ್ನು ರುಬ್ಬಿ, ಹೇರ್ ಪ್ಯಾಕ್ ಹಾಕಿಕೊಳ್ಳುವುದರಿಂದ, ಬಾಳೆದಿಂಡನ್ನು ಸಣ್ಣಗೆ ಹಚ್ಚಿ ಕೊಬ್ಬರಿ ಎಣ್ಣೆಯಲ್ಲಿ ನೆನೆಸಿ, 2-3 ದಿನ ಬಿಟ್ಟು ಸೋಸಿಕೊಂಡು ಎಣ್ಣೆಯಿಂದ ಕೂದಲ ಮಸಾಜ್ ಮಾಡುವುದರಿಂದಲೂ ಕೂದಲು ಕಪ್ಪಾಗಿ ಹೊಳೆಯುತ್ತದೆ. ವಯಸ್ಸಾಗುವ ಮುನ್ನವೇ ತಲೆಯಲ್ಲಿ ಅಲ್ಲಲ್ಲಿ ಬಿಳಿ ಕೂದಲು ಕಾಣಿಸಿಕೊಂಡು ಮುಜುಗರ ಉಂಟು ಮಾಡುತ್ತಿದ್ದರೆ ಕರಿಬೇವಿನ ಸೊಪ್ಪನ್ನು ರುಬ್ಬಿ ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಸ್ವಲ್ಪ ಬೆಚ್ಚಗೆ ಮಾಡಿಕೊಂಡು ಕೂದಲ ಬುಡಕ್ಕೆ ಹಚ್ಚಿಕೊಂಡರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಇನ್ನೊಂದು ಎಲ್ಲರನ್ನೂ ಕಾಡುವ ಸಮಸ್ಯೆ ಎಂದರೆ ತಲೆಹೊಟ್ಟು. ಇದರ ನಿವಾರಣೆಗೆ ಕೊಬ್ಬರಿ ಎಣ್ಣೆಗೆ ಸಮ ಪ್ರಮಾಣದಲ್ಲಿ ನಿಂಬೆರಸ ಬೆರೆಸಿ ತಲೆಗೂದಲಿಗೆ ಕೈಬೆರಳ ತುದಿಯಿಂದ ಉಜ್ಜಿ, ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಬಹುದು. ಇದೆಲ್ಲದರ ಜೊತೆಗೆ ಶುಚಿತ್ವಕ್ಕೂ ಆದ್ಯತೆ ನೀಡುವುದು ಒಳ್ಳೆಯದು. ಬಳಸುವ ಬಾಚಣಿಕೆ, ಹೇರ್ಬ್ರಷ್, ಟವಲ್ ಗಳನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಅವರಿವರು ಹೇಳಿದಂತೆಲ್ಲ ಪ್ರಯೋಗಕ್ಕೆ ಮುಂದಾಗ ಬಾರದು. ಶಿಸ್ತು, ಒಂದಷ್ಟು ಕಾಳಜಿಯನ್ನಿಟ್ಟು ಕೊಂಡರೆ ಸಾಕು.