ಕೇವಲ ಜವಬ್ದಾರಿ ಮುಗಿಸಬೇಕೆನ್ನುವ ಮನಸ್ಥಿತಿಯಿಂದಲೋ? ಅಯ್ಯೋ ಹೆಣ್ಮಕ್ಕಳನ್ನೆಷ್ಟು ದಿನ ಇಟ್ಕೋಳ್ಳೋದು? ಮದುವೆ ಮಾಡಿ ಮುಗಿಸಿ ಕೈತೊಳೆದುಕೊಳ್ಳುವ ಆತುರದಿಂದಲೋ? ಒಟ್ಟಾರೆ ಎಷ್ಟೇ ಕಠಿಣ ಕ್ರಮವನ್ನು ಕೈಗೊಂಡು ಬಾಲ್ಯ ವಿವಾಹ ನಿಷೇಧಿಸಿದ್ದರೂ ಅಲ್ಲಲ್ಲಿ ಸದ್ದಿಲ್ಲದೆ ಬಾಲ್ಯವಿವಾಹಗಳು ನಡೆಯುತ್ತಿವೆ. ಏನೂ ಅರಿಯದ ಹೆಣ್ಣು ಮಕ್ಕಳು ಸಮಸ್ಯೆಗಳನ್ನು ಅನುಭವಿಸುತ್ತಲೇ ಇದ್ದಾರೆ.
ಕೆಲವೇ ಕೆಲವು ಪ್ರಕರಣಗಳು ಮಾತ್ರ ಹೊರಬಂದು ತಡೆಹಿಡಿಯಲ್ಪಡುತ್ತವೆ ಎನ್ನುವುದನ್ನು ಹೊರತು ಪಡಿಸಿದರೆ ಬಹುತೇಕ ಪ್ರಕರಣಗಳು ಬಯಲಿಗೆ ಬರುವುದೇ ಇಲ್ಲ. ಇಲ್ಲಿ ಹೆತ್ತವರು ಜವಬ್ದಾರಿ ಕಳೆದುಕೊಂಡಿರುತ್ತಾರೆ. ಮನೆ ತುಂಬಿಸಿಕೊಂಡವರು ಚಿಕ್ಕಹುಡುಗಿ ನಾವು ಹೇಳಿದ್ದನ್ನು ಮಾಡಿಕೊಂಡು ತೆಪ್ಪಗಿರುತ್ತದೆ ಎಂಬ ಖುಷಿಯಲ್ಲಿರುತ್ತಾರೆ. ಆದರೆ ಏನೂ ಅರಿಯದ ಹುಡುಗಿ ಚಿಕ್ಕವಯಸ್ಸಿಗೆ ದೊಡ್ಡ ಜವಬ್ದಾರಿ ವಹಿಸಿಕೊಂಡು ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ಎದುರಿಸುತ್ತಾಳೆ.
ಹೆತ್ತವರು ಮಗಳನ್ನು ಮದುವೆ ಮಾಡಿಕೊಟ್ಟು ಬಿಟ್ಟರೆ ಆಕೆ ಸುಖವಾಗಿರುತ್ತಾಳೆ ಎಂಬ ನಂಬಿಕೆಯಿರುತ್ತದೆ. ಒಂದು ವೇಳೆ ಆಕೆಯನ್ನು ಗಂಡ ಚೆನ್ನಾಗಿ ನೋಡಿಕೊಂಡರೂ ದೈಹಿಕವಾಗಿ ಹಲವು ಸಮಸ್ಯೆಗಳು ಬಾಧಿಸುವುದು ಸಹಜವಾಗಿರುತ್ತದೆ. ಏಕೆಂದರೆ ಆಕೆಗೆ ವಯಸ್ಸು ಚಿಕ್ಕದಾಗಿರುವುದರಿಂದ ಮದುವೆ ನಂತರದ ಗಂಡ, ಮಕ್ಕಳು ಸೇರಿದಂತೆ ಸಂಸಾರದ ಜವಬ್ದಾರಿಗಳು ಹೆಚ್ಚಾಗುವುದರಿಂದಾಗಿ ಮಾನಸಿಕವಾಗಿ ಒತ್ತಡಗೊಳಗಾಗಬೇಕಾಗುತ್ತದೆ. ಅಲ್ಲದೆ ಹೆತ್ತವರೇ ವಯಸ್ಸಿಗೆ ಮೀರಿದ ಜವಬ್ದಾರಿ ಹೊರಿಸಿದಂತಾಗುತ್ತದೆ.
ಇನ್ನು ಪ್ರಾಪಂಚಿಕ ವಿಚಾರಣಗಳು ಸರಿಯಾಗಿ ಗೊತ್ತಿಲ್ಲದ ಕಾರಣಗಳು, ಅಲ್ಲದೆ ಲೈಂಗಿಕ ದೌರ್ಜನ್ಯಕ್ಕೆ, ಬಲತ್ಕಾರಕ್ಕೊಳಗಾಗಿ ಅದು ಮಾನಸಿಕವಾಗಿಯೂ ಪರಿಣಾಮ ಬೀರಬಹುದು. ಲೈಂಗಿಕ ರೋಗಗಳಿಗೂ ಕಾರಣವಾಗಬಹುದು. ಇದರೊಂದಿಗೆ ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಿಣಿಯಾಗುವುದರಿಂದ ಗರ್ಭಕೋಶದ ಬೆಳವಣಿಗೆ ಪೂರ್ಣಗೊಳ್ಳದೆ ಗರ್ಭಪಾತ ಉಂಟಾಗುತ್ತದೆ. ಗರ್ಭ ಚೀಲಕ್ಕೆ ಪೆಟ್ಟು ಬೀಳುವುದರಿಂದ ಹೆರಿಗೆ ಸಮಯದಲ್ಲಿ ಸಾವು ಸಂಭವಿಸುವ ಸಾಧ್ಯತೆಗಳು ಇರುತ್ತವೆ.
ಇನ್ನು ಆಕೆ ಮದುವೆಯಾದ ಬಳಿಕ ಗರ್ಭಿಣಿಯಾದರೂ ಕೆಲವೊಮ್ಮೆ ವಿಕಲಾಂಗ ಮಗುವಿಗೆ ಜನ್ಮ ನೀಡುವ ಸಂಭವವಿರುತ್ತದೆ. ರಕ್ತಹೀನತೆಯಿಂದಾಗಿ ಮಗುವಿನ ಬೆಳವಣಿಗೆಯಾಗದೆ ಹೊಟ್ಟೇಯಲ್ಲೇ ಮರಣಿಸುವ ಸಂಭವವೂ ಇರುತ್ತದೆ. ಇದು ಶಿಶು ಮರಣ, ಮಕ್ಕಳ ಮರಣಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ. ಇನ್ನು ಸಂಸಾರದ ಜವಬ್ದಾರಿಗಳು ಹೆಚ್ಚಾಗುವುದರಿಂದ ಅದೆಲ್ಲವನ್ನು ನಿಭಾಯಿಸಲು ಸಾಧ್ಯವಾಗದೆ ಮಾನಸಿಕ ದೌರ್ಬಲ್ಯತೆ ಮತ್ತು ಖಿನ್ನತೆ ಬಾಧಿಸುತ್ತದೆ. ಎಲ್ಲೋ ಒಂದು ಕಡೆ ಜವಬ್ದಾರಿಯ ಭಯದಿಂದ ಮಾನಸಿಕ ಸ್ಥೈರ್ಯ ಕಳೆದುಕೊಳ್ಳುತ್ತಾರೆ.
ತಮ್ಮ ವಯಸ್ಸಿನವರು ಸ್ವಾತಂತ್ರ್ಯವಾಗಿ ಓಡಾಡುತ್ತಾ ಖುಷಿಯಾಗಿರುವುದನ್ನು ಕಂಡು ಮನಸ್ಸಿನೊಳಗೆ ಕೊರಗುವುದು, ಮದುವೆಯಾಗಿ ಎಲ್ಲ ಕಳೆದು ಹೋಯಿತೆಂಬ ಕೀಳರಿಮೆಯೂ ಕಾಡಬಹುದು. ಕೆಲವೊಮ್ಮೆ ಅಪಮಾನಕ್ಕೊಳಗಾಗಿ ಆತ್ಮಹತ್ಯೆಯತ್ತಲೂ ಚಿಂತಿಸಬಹುದು. ಗಂಡ ಹೆಂಡಿರ ನಡುವೆ ವಯಸ್ಸಿನ ಅಂತರದ ಕಾರಣದಿಂದ ಸಾಮರಸ್ಯಕ್ಕೂ ಧಕ್ಕೆ ಬರಬಹುದು. ಇದರಿಂದ ಚಿಕ್ಕ ವಯಸ್ಸಿಗೆ ಹಲವು ರೀತಿಯ ಸಮಸ್ಯೆ ಎದುರಿಸುವ ಪ್ರಮೇಯ ಬರಬಹುದು.
ಇನ್ನಾದರೂ ಚಿಕ್ಕ ವಯಸ್ಸಿಗೆ ಮದುವೆ ಮಾಡಿ ಹೆತ್ತವರು ಜವಬ್ದಾರಿ ಕಳೆದುಕೊಳ್ಳಬಹುದು. ಆದರೆ ಮದುವೆ ನಂತರ ಚಿಕ್ಕ ವಯಸ್ಸಿಗೆ ಆಕೆ ಎಷ್ಟೊಂದು ಮಾನಸಿಕ ಮತ್ತು ದೈಹಿಕ ತೊಂದರೆಯನ್ನು ಅನುಭವಿಸಬೇಕಾಗುತ್ತದೆ ಎಂಬುದು ಗೊತ್ತೇ ಆಗುವುದಿಲ್ಲ. ಆದ್ದರಿಂದ ಇನ್ನು ಮುಂದೆಯಾದರೂ ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಅವರ ಆರೋಗ್ಯವಂತ ಬದುಕನ್ನು ಹಾಳು ಮಾಡುವುದನ್ನು ತಡೆಯುವುದು ಅಗತ್ಯವಾಗಿದೆ