ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಾಗಿ, ಖುಷಿ, ಖುಷಿಯಾಗಿದ್ದಾಗ ಮಾತ್ರ ನಾವು ಅವರನ್ನು ಆರೋಗ್ಯವಂತರು ಎಂದು ಹೇಳಲು ಸಾಧ್ಯ. ಆದರೆ ಇವತ್ತು ನಮ್ಮ ನಿಮ್ಮ ನಡುವೆ ಅಂತಹ ಆರೋಗ್ಯವಂತರು ಎಷ್ಟು ಮಂದಿ ಇದ್ದಾರೆ? ಎಂಬ ಪ್ರಶ್ನೆಗೆ ಉತ್ತರ ಹೇಳುವುದು ಕಷ್ಟವಾಗುತ್ತದೆ. ಇದಕ್ಕೆ ಕಾರಣಗಳು ಹಲವಾರು ಇವೆ.
ನಮ್ಮ ನಿರೀಕ್ಷೆ ಮತ್ತು ಬಯಕೆಗಳು ಬೆಟ್ಟದಷ್ಟಿವೆ. ಅವು ಈಡೇರಿದಾಗ ಖುಷಿಪಡುತ್ತೇವೆ. ಆದರೆ ಒಂದು ವೇಳೆ ಈಡೇರದೆ ಹೋದಾಗ ಮಾನಸಿಕವಾಗಿ ಕುಸಿದು ಬಿಡುತ್ತೇವೆ. ಹೀಗಾಗಿ ಮಾನಸಿಕವಾಗಿ ಜರ್ಜರಿತರಾಗಿ ಅನುಭವಿಸಬೇಕಾದ ಸುಖ, ಸಂತೋಷಗಳಿಂದ ದೂರವಾಗಿ ಸದಾ ಚಿಂತೆಯಲ್ಲೇ ಕಾಲ ಕಳೆಯುತ್ತೇವೆ. ಒಬ್ಬ ವ್ಯಕ್ತಿಯನ್ನು ನಾವು ದೇಹದಿಂದ ಗುರುತಿಸುತ್ತೇವೆ. ಅವನಲ್ಲಿರುವ ಎಲ್ಲ ಗುಣಗಳಿಗೆ ದೇಹ ಸಾಕ್ಷಿಯಾಗುತ್ತದೆ. ನಮಗೆ ಒಬ್ಬ ವ್ಯಕ್ತಿಯ ಮನಸ್ಸಾಗಲೀ, ಆತನ ಗುಣವಾಗಲೀ ತಕ್ಷಣಕ್ಕೆ ಕಾಣುವುದಿಲ್ಲ. ಮೇಲ್ನೋಟಕ್ಕೆ ಕಾಣುವುದು ದೇಹ ಮಾತ್ರ. ಆ ದೇಹದ ಮುಖಚರ್ಯೆ, ರೂಪ, ಆಕಾರ, ಬಣ್ಣದಿಂದ ವ್ಯಕಿಯನ್ನು ಗುರುತಿಸುತ್ತೇವೆ, ನೆನಪಿಟ್ಟುಕೊಳ್ಳುತ್ತೇವೆ.
ಬೇರೊಬ್ಬರ ಒಡನಾಟದಲ್ಲಿದ್ದಾಗ ಮಾತ್ರ ನಮಗೆ ಅವರ ಗುಣ, ಅದರಾಚೆಗಿನ ಮಾನಸಿಕ ಸ್ಥಿತಿ ತಿಳಿಯುತ್ತದೆ. ಇಷ್ಟಕ್ಕೂ ನಾವು ದೇಹವನ್ನು ನೋಡಿ ಯಾವತ್ತೂ ಗೆಳೆತನ ಮಾಡುವುದಿಲ್ಲ. ಪರಿಚಯವಾದ ಬಳಿಕ ಆತನಲ್ಲಿರುವ ಗುಣ, ವರ್ತನೆ, ಮಾನಸಿಕ ಸ್ಥಿತಿಯನ್ನು ಗಮನಿಸುತ್ತೇವೆ. ಇದರಲ್ಲಿ ಒಂದೇ ಒಂದು ನಮಗೆ ಹಿಡಿಸದಿದ್ದರೂ ಅವರಿಂದ ದೂರವಿರಲು ಪ್ರಯತ್ನ ಪಡುತ್ತೇವೆ.ಶಿರ, ಮುಂಡ, ಕೈಕಾಲು, ಕಣ್ಣು, ಕಿವಿ, ಮೂಗು, ಚರ್ಮ, ನಾಲಿಗೆ, ರಕ್ತ ಮಾಂಸವನ್ನು ಹೊಂದಿರುವ ದೇಹವನ್ನು ಕಾಪಾಡಲು ನಾವು ಕಾಳಜಿ ವಹಿಸುತ್ತೇವೆ. ದೇಹದ ಯಾವುದೇ ಭಾಗಕ್ಕೆ ತೊಂದರೆಯಾದರೂ ಇಡೀ ದೇಹ ಕಂಪಿಸುತ್ತದೆ.
ಬಹಳಷ್ಟು ಸಾರಿ ದೇಹಕ್ಕಾಗಿರುವ ನೋವನ್ನು ಚಿಕಿತ್ಸೆ ಮೂಲಕ ಗುಣಪಡಿಸಿಕೊಳ್ಳಬಹುದು. ಆದರೆ ಮನಸ್ಸಿನ ಮೇಲಾಗುವ ನೋವಿಗೆ ಚಿಕಿತ್ಸೆ ನೀಡಿದರೆ ಅದು ಶಮನವಾಗುವುದಿಲ್ಲ. ಅದಕ್ಕೆ ನಾವೇ ಚಿಕಿತ್ಸೆ ನೀಡಿಕೊಳ್ಳಬೇಕು. ಕೆಲವರು ಮಾತು ಮಾತಿಗೂ ತಲೆಬಿಸಿಯಾಗುತ್ತೆ ಎನ್ನುತ್ತಾರೆ. ತಲೆಬಿಸಿ ಎನ್ನುವುದು ಜ್ವರ ಬಂದಾಗ ಆಗುವ ಬೆಚ್ಚಗೆ ಅಲ್ಲ. ಅದು ಒಂದು ರೀತಿಯಲ್ಲಿ ಏನು ಮಾಡಬೇಕೆಂದು ತೋಚದ ಸ್ಥಿತಿ. ಕೆಲವು ಅನಗತ್ಯ ವಿಚಾರಗಳನ್ನು ಮೈಗೆ ಎಳೆದುಕೊಂಡಾಗ, ಯಾವುದೋ ವಿಚಾರದ ಬಗ್ಗೆ ಹೆಚ್ಚು ಹೆಚ್ಚಾಗಿ ಯೋಚಿಸಿದಾಗಲೂ ತಲೆಬಿಸಿಯಾದ ಅನುಭವವಾಗುತ್ತದೆ. ಇದರಿಂದ ತೊಂದರೆಯೇ ಜಾಸ್ತಿ. ಆದ್ದರಿಂದ ಮನಸ್ಸಿಗೆ ಹೆಚ್ಚಿನ ಒತ್ತಡ ನೀಡಬಾರದು. ಆದಷ್ಟು ಪ್ರಶಾಂತವಾಗಿರುವಂತೆ ನೋಡಿಕೊಳ್ಳಬೇಕು. ನಮಗೆ ಖುಷಿ ಕೊಡುವ ವಿಚಾರಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು. ಮನಸ್ಸು ಮತ್ತು ದೇಹ ಎರಡೂ ಆರೋಗ್ಯಕರವಾಗಿರಬೇಕು. ಮನಸ್ಸಿನ ಮೇಲೆ ಆಗುವ ಒತ್ತಡ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆಯೋ ಹಾಗೆಯೇ ದೇಹದ ಮೇಲಿನ ಆಗುವ ನೋವುಗಳು ಕೂಡ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ.
ಇಷ್ಟಕ್ಕೂ ಮನಸ್ಸು ಕಣ್ಣಿಗೆ ಕಾಣುವಂತಹದಲ್ಲ. ದೇಹದ ಮೇಲೆ ಇಂತಹದ್ದೇ ಜಾಗದಲ್ಲಿದೆ ಎಂದು ಗುರುತಿಸಲೂ ಸಾಧ್ಯವಿಲ್ಲ. ಅದು ಅದ್ಭುತ ಶಕ್ತಿಯ ಇಡೀ ಶರೀರವನ್ನು ಆವರಿಸುವ ಸಂವೇದನೆಯಾಗಿದೆ. ಮನ್ ಧಾತುವಿನಿಂದ ಮನಸ್ಸು. ಮನ್ ಎಂದರೆ ಚಿಂತಿಸು, ಯೋಚಿಸು, ತರ್ಕಿಸು ಎಂಬಂತಹ ಅರ್ಥವನ್ನು ನೀಡುತ್ತದೆ. ಇಷ್ಟಕ್ಕೂ ಮನಸ್ಸು ಒಂದೆಡೆ ನಿಲ್ಲುವಂತದಲ್ಲ. ಅದು ಸದಾ ಸಂಚಲನದಲ್ಲಿರುತ್ತದೆ. ಅದು ಕೆಟ್ಟದರತ್ತವೂ ಹರಿಯಬಹುದು. ಇಂಥ ಸಂದರ್ಭ ಅದಕ್ಕೆ ಗುಲಾಮನಾಗಿ ಮುನ್ನಡೆದಾಗ ಹಲವು ಸಮಸ್ಯೆ ಎದುರಿಸಬೇಕಾಗುತ್ತದೆ.
ಆದ್ದರಿಂದ ಸದಾ ಒಳ್ಳೆಯವರ ಒಡನಾಟದಲ್ಲಿದ್ದು, ಒಳ್ಳೆಯದನ್ನೇ ಬಯಸುತ್ತಾ, ಇರೋದ್ರಲ್ಲಿ ತೃಪ್ತಿ ಪಡುತ್ತಾ, ಸಾಮಥ್ರ್ಯಕ್ಕೆ ನಿಲುಕದ್ದನ್ನು ಪಡೆಯಬೇಕೆಂಬ ಹಠವನ್ನು ಬಿಟ್ಟು, ಎಲ್ಲವನ್ನೂ ಸಮಾಧಾನದಿಂದಲೇ ಸ್ವೀಕರಿಸುತ್ತಾ ಹೋದರೆ ಮಾನಸಿಕ ಸ್ಥಿತಿ ಉತ್ತಮವಾಗಿರುತ್ತದೆ. ನಮ್ಮ ಮಾನಸಿಕ ಸ್ಥಿತಿ ಗಟ್ಟಿಯಾದರೆ ಎಲ್ಲ ಸಮಸ್ಯೆಗಳನ್ನು ಎದುರಿಸುವ ಶಕ್ತಿ ಬರುತ್ತದೆ. ಜತೆಗೆ ಮಾನಸಿಕ ಆರೋಗ್ಯವೂ ದೊರೆಯುತ್ತದೆ