ಪ್ರತಿಯೊಬ್ಬರೂ ಶಾಂತಚಿತ್ತತೆ ಮತ್ತು ಶಾಂತಿಯುತ ವಾತಾವರಣವನ್ನು ಬಯಸುತ್ತಾರೆ. ಆದರೆ ಇವತ್ತಿನ ದಿನದಲ್ಲಿ ಇದು ಮನುಷ್ಯನ ಬದುಕಿನಲ್ಲಿ ಮರೀಚಿಕೆಯಾಗುತ್ತಿದೆ. ಎಲ್ಲಿ ನೋಡಿದರೂ, ಅತ್ಯಾಚಾರ, ಮೋಸ, ವಂಚನೆ, ಗಲಾಟೆ, ಯುದ್ಧ, ದಾಳಿ ಹೀಗೆ ಒಂದಲ್ಲಾ ಒಂದು ರೀತಿಯ ಮನಸ್ಸಿನ ಶಾಂತಿಯನ್ನು ಕದಡುವ ಕೃತ್ಯಗಳು ನಡೆಯುತ್ತಲೇ ಇರುವುದರಿಂದಾಗಿ ಶಾಂತಿಯುತ ಬದುಕನ್ನು ಬಯಸುವುದು ಅಸಾಧ್ಯವಾಗುತ್ತದೆ.
ಎಲ್ಲರೂ ನೆಮ್ಮದಿಯಾಗಿ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕಾದರೆ ಇಡೀ ಸಮಾಜ ಶಾಂತಿಯಾಗಿರಬೇಕು. ಇದು ಸಾಧ್ಯವಾಗಬೇಕಾದರೆ ಶಾಂತಿಯನ್ನು ಕಾಪಾಡಿಕೊಳ್ಳಬೇಕು. ಮೊದಲಿಗೆ ನಾವು ಶಾಂತಿಯಿಂದ ಇರಬೇಕು. ಬಳಿಕ ಕುಟುಂಬ, ಸಮಾಜ ಎಲ್ಲವೂ ಶಾಂತಿಯುತವಾದರೆ ಬದುಕು ಆನಂದಮಯವಾಗಿಯೂ, ನೆಮ್ಮದಿಯಾಗಿಯೂ ಇರಲು ಸಾಧ್ಯವಾಗುತ್ತದೆ.
ಹಾಗೆ ನೋಡಿದರೆ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯೂ ಶಾಂತಿ ಬಯಸುತ್ತದೆ. ಅದಕ್ಕಾಗಿ ದಿನನಿತ್ಯವೂ ಹೋರಾಡುತ್ತದೆ. ಆದರೆ ಕೆಲವು ವಿಕೃತ ಮತ್ತು ಮತಾಂಧ ಮನಸ್ಸಿನ ವ್ಯಕ್ತಿಗಳಿಂದಾಗಿ ಇವತ್ತು ಇಡೀ ಜಗತ್ತೇ ಹಿಂಸೆ ಕ್ರೌರ್ಯಗಳಿಂದ ತುಂಬಿದ್ದು ಶಾಂತಿಯನ್ನು ಅರಸುವ ಸ್ಥಿತಿ ನಿರ್ಮಾಣವಾಗಿದೆ. ಒಂದು ಕ್ಷಣ ಯೋಚಿಸಿ ನೋಡಿದರೆ ಈ ಬದುಕಿನಲ್ಲಿ ಏನಿದೆ? ಏನೂ ಇಲ್ಲ. ಇಷ್ಟಾದರೂ ನಾವು ಶಾಂತಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ ಏನಾದರೊಂದು ಸಮಸ್ಯೆ ನಮ್ಮ ಶಾಂತಿಯನ್ನು ಕಿತ್ತುಕೊಂಡು ಬಿಡುತ್ತದೆ. ಬಹಳಷ್ಟು ಮಂದಿ ಎಲ್ಲ ಇದ್ದರೂ ಶಾಂತಿ, ನೆಮ್ಮದಿಯಿಂದ ವಂಚಿತರಾಗಿ ಜೀವನ ಕಳೆಯುತ್ತಿದ್ದಾರೆ. ಯಾವಾಗ ಏನಾಗುತ್ತದೆಯೋ ಎಂಬ ಭಯ ಅವರನ್ನು ಕಾಡುತ್ತಿರುತ್ತದೆ. ನಮ್ಮ ಬದುಕಿನಲ್ಲಿ ಶಾಂತಿಯೇ ಇಲ್ಲ ಎಂದಾದರೆ ನಾವು ಬದುಕಿಯೂ ಸತ್ತಂತೆ. ಹಾಗಾದರೆ ಶಾಂತಿ ಬೇಕಾದರೆ ನಾವೇನು ಮಾಡಬೇಕು ಎಂಬ ಪ್ರಶ್ನೆಯೂ ನಮ್ಮನ್ನು ಕಾಡದಿರದು. ಆರೋಗ್ಯದಲ್ಲಿ ಏರುಪೇರಾದರೆ ಯಾವುದಾದರೊಂದು ಔಷಧಿಯನ್ನು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬಹುದು. ಆದರೆ ಶಾಂತಿಯನ್ನು ಹಣಕೊಟ್ಟು ತರಲು ಅಸಾಧ್ಯ. ಅದನ್ನು ನಾವೇ ನಮ್ಮಿಂದಲೇ ಸೃಷ್ಠಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ.
ಒಂದು ವೇಳೆ ನಮ್ಮ ಬದುಕಲ್ಲಿ ಅಶಾಂತಿ ಮೂಡಿತೆಂದರೆ ಅದರ ಪರಿಣಾಮ ದೇಹದ ಮೇಲಾಗುತ್ತದೆ. ಇದರಿಂದ ಮಾನಸಿಕ ಮತು ದೈಹಿಕ ಆರೋಗ್ಯವನ್ನು ಕಳೆದು ಕೊಳ್ಳಬಹುದು. ಇಲ್ಲವೆ ಆತ್ಮಹತ್ಯೆಯಂತಹ ಕೃತ್ಯಕ್ಕೂ ಮುಂದಾಗಬಹುದು. ಹೀಗಾಗಿ ಆರೋಗ್ಯವಂತರಾಗಿ ನಾವು ಬದುಕಬೇಕಾದರೆ ಮೊದಲಿಗೆ ನಮ್ಮ ಸುತ್ತ ಶಾಂತಿಯುತ ವಾತಾವರಣವನ್ನು ನಿರ್ಮಾಣ ಮಾಡಿಕೊಳ್ಳಬೇಕು. ಇದು ಹೇಗೆ ಎಂಬ ಪ್ರಶ್ನೆಯೂ ನಮ್ಮನ್ನು ಕಾಡಬಹುದು.
ಸ್ವಾಮಿ ಪ್ರಭುಪಾದರು ಹೇಳುವ ಪ್ರಕಾರ ಶಾಂತಿಯನ್ನು ಪಡೆಯಲು ಇರುವ ಒಂದೇ ಮಾರ್ಗ ಅದೇ ಭಗವಂತನಿಗೆ ಮೊರೆಹೋಗುವುದು. ಮತ್ತು ಭಗವಂತನನ್ನು ಅರಿಯುವುದೇ ಶಾಂತಿ ಪಡೆಯುವ ವಿಧಾನ. ನಿಜವಾದ ಶಾಂತಿ ಸೂತ್ರವೆಂದರೆ, ಭಗವಂತನು ಇಡೀ ಜಗತ್ತಿನ ಒಡೆಯ ಎಂಬುವುದನ್ನು ಅರಿಯಬೇಕು. ಒಪ್ಪಿಕೊಳ್ಳಬೇಕು. ಆಗ ಶಾಂತಿ ಸಿಗುತ್ತದೆ.
ಕೆಲಸದ ಒತ್ತಡ, ಪ್ರತಿಸ್ಪರ್ಧೆ, ಪೈಪೋಟಿ ಹೀಗೆ ಆಧುನಿಕ ಜಗತ್ತಿನಲ್ಲಿ ಪ್ರತಿಕ್ಷಣವೂ ಹೋರಾಟದ ಬದುಕೇ ಆಗಿರುವುದರಿಂದ ಮತ್ತು ಹಣ ಸಂಪಾದನೆಯೊಂದೇ ಪ್ರಮುಖವಾಗಿರುವುದರಿಂದ ನಾವ್ಯಾರೂ ಶಾಂತಚಿತ್ತರಾಗಿ ಬದುಕಲು ಸಾಧ್ಯವಾಗುತ್ತಿಲ್ಲ. ಇದು ನಮ್ಮ ಆರೋಗ್ಯ ಮತ್ತು ಆಯಸ್ಸನ್ನು ಕಡಿಮೆ ಮಾಡುತ್ತಿದೆ.
ಆರೋಗ್ಯವೇ ನಿಜವಾದ ಸಂಪತ್ತು ಆಗಿರುವುದರಿಂದ ಮೊದಲಿಗೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಏನು ಬೇಕೋ ಅದನ್ನು ಮಾಡಿಕೊಂಡು ಬಳಿಕ ಇತರೆ ನಮ್ಮ ಬೇಕು, ಬೇಡಗಳತ್ತ ಗಮನಹರಿಸಬೇಕು. ಆಗ ಮಾತ್ರ ಶಾಂತಿಯುತ ಬದುಕನ್ನು ಕಂಡು ಕೊಳ್ಳಲು ಸಾಧ್ಯವಾಗುತ್ತದೆ.