News Kannada
Tuesday, December 06 2022

ಆರೋಗ್ಯ

ಬದುಕಿನ ಸಂತೆಯಲ್ಲಿ ನೆಮ್ಮದಿ ಜೀವನ

Photo Credit :

ಬದುಕಿನ ಸಂತೆಯಲ್ಲಿ ನೆಮ್ಮದಿ ಜೀವನ

ಕೆಲವರನ್ನು ಗಮನಿಸಿದ್ದೀರಾ? ಯಾವಾಗಲೂ ಏನನ್ನೋ ಯೋಚಿಸುತ್ತಿರುವಂತೆ ಕಾಣುತ್ತಾರೆ. ಮುಖವನ್ನು ನೋಡಿ ನಕ್ಕರೂ ಕೂಡ ತಿರುಗಿ ನಗುವಷ್ಟು ಸಮಾಧಾನ ಇರುವುದಿಲ್ಲ. ಜಗತ್ತಿನ ಎಲ್ಲ ಸಮಸ್ಯೆಯು ತಮಗೇ ಬಂದಿರುವ ಹಾಗೆ ಆಡುತ್ತಿರುತ್ತಾರೆ. ಎಲ್ಲರ ಮೇಲೆ ಸಿಡುಕುವುದು, ತಾವೇ ಬೇಸರಿಸಿಕೊಳ್ಳುವುದು; ಅವರಿಗೆ ಅವರ ಮೇಲೆ ಕೋಪವೇ? ಬೇಸರವೇ? ಗೊತ್ತಾಗುವುದಿಲ್ಲ.

ಬಹುಶಃ ಅದು ತಾವಾಗಿಯೇ ಇಷ್ಟಪಟ್ಟು ಆಹ್ವಾನಿಸಿಕೊಂಡ ಯಾತನೆ ಅನಿಸುತ್ತದೆ. ಸ್ಥಿಮಿತ ಕಳೆದುಕೊಂಡ ಮನಸ್ಸು – ಅರೆ ಹುಚ್ಚರಂತೆ – ಅಲೆದಾಡುತ್ತದೆ. ಒಮ್ಮೊಮ್ಮೆ ಅದು ನೆನಪಿನ ಅಲೆಯಲ್ಲಿ ತೇಲಾಡಿದರೆ, ಇನ್ನೊಮ್ಮೆ ದುಃಖದ ಕಾರ್ಮೋಡದಲ್ಲಿ ಸಿಕ್ಕಿಕೊಳ್ಳುತ್ತದೆ. ಇವುಗಳೇ ಒಂಟಿತನಕ್ಕೆ ಜೊತೆಯಾಗುವ ವಿಷಾದದ ಅಲೆಗಳು! ಅತ್ತಾಗ, ನಕ್ಕಾಗ ಮೌನವಾಗಿಯೇ ಹುರಿದುಂಬಿಸಿ, ಸ್ಪಂದಿಸುವ ತಿಳಿಮುಗಿಲ ಬಣ್ಣ ಒಡಲಾಳದ ಕತ್ತಲಲ್ಲಿ ಹೂತುಹೋಗುವುದು. ಬದುಕಿನ ಗೂಡಿಗೆ ಕೈ ಹಿಡಿದು ಕರೆತರಲು ಅಣಿಯಾದ ಮನಸ್ಸಿಗೆ ಆಗ ರಾಹುಕಾಲ ಬಂದೆರಗುತ್ತದೆ.

ಇಂತಹ ಹಲವು ಹುಚ್ಚುಕಲ್ಪನೆಗಳು ಬದುಕಿನ ಗಾಲಿಯನ್ನು ಎಳೆಯುತ್ತಿರುತ್ತವೆ. ಅದರ ನಡುವೆ ಎದುರಾಗುವ ಎಷ್ಟೋ ಆಕಸ್ಮಿಕಗಳಿಗೆ ತನ್ನನ್ನು ತಾನು ಒಡ್ಡಿಕೊಳ್ಳುತ್ತ ಅದು ಗುರಿಯಿಲ್ಲದ ಕಡೆ ಪಯಣಿಸುತ್ತವೆ. ಬಟ್ಟಬಯಲಲ್ಲಿ ಏಕಾಂಗಿಯ ನಡೆಯಂತಿರುತ್ತದೆ, ಈ ಪಯಣ. ನಟ್ಟ ನಡುರಾತ್ರಿಯಲ್ಲಿ ಭೀಭತ್ಸ ನೋಟ. ಧೋ ಎಂದು ಸುರಿವ ಜ್ವಾಲಾಮುಖಿಯ ಸ್ಫೋಟ. ಭಾರದ ಹೆಜ್ಜೆಯಿಡುತ್ತಾ, ದಿಕ್ಕು ದೆಸೆಯಿಲ್ಲದೆ ಅಲೆಯುವಾಗ ಕೆನ್ನೆಯನ್ನು ತೋಯಿಸುವ ಆ ಕಣ್ಣೀರ ಹನಿಗಳು, ಆ ಬಯಲಿನಲ್ಲಿ ನಡುರಾತ್ರಿಯಲಿ, ಸುಲಭವಾಗಿ ಯಾರಿಗೂ ತೋರದು. ಮೂಕ ಮನಸ್ಸಿನ ಭಾವನೆಗಳನ್ನು ಅಲ್ಲಿಯೇ ಮಡುಗಟ್ಟಿಸಿ ಏಕಾಂಗಿಯ ಹೆಜ್ಜೆಯಿಡುವಾಗ, ನೋವಿನ ಕತ್ತಲೆ ಆವರಿಸಿಬಿಡುತ್ತವೆ. ಪ್ರಕ್ಷುಬ್ಧಗೊಂಡ ಮನದ ಕೊಳದಲ್ಲಿ ಜಲಧಾರೆಯ ಭೋರ್ಗರೆವ ನರ್ತನ ಪ್ರಾರಂಭವಾಗುತ್ತವೆ. ನಿಂತಲ್ಲಿಯೇ ಕುಳಿತಲ್ಲಿಯೇ ಈ ಭೂಮಿ ನನ್ನನ್ನು ಹಾಗೆಯೇ ನುಂಗಬಾರದಾ – ಎಂದು ಅಂಥ ಸಂದರ್ಭದಲ್ಲೆಲ್ಲ ಪ್ರಾರ್ಥಿಸುತ್ತೇನೆ. ಈ ನಿಶ್ಶಬ್ಧದ ವೇದನೆ ಆ ಭಗವಂತನಿಗೆಲ್ಲಿ ಕೇಳಿಸೀತು?

‘ಇಲ್ಲಿ ನಾನು ಎಂಬುದು ನೆಪಮಾತ್ರ. ನನ್ನದೆಂಬುದು ಏನೂ ಇಲ್ಲ. ಆದರೂ ಭಗವಂತನೇ ಕೊಟ್ಟಿರುವ ಈ ಬದುಕನ್ನು ಪ್ರೀತಿಸುತ್ತೇನೆ. ಬದುಕಿಗೆ ಆಸರೆಯನ್ನು ಹುಡುಕುತ್ತೇನೆ. ಸುಂದರ ಕನಸನ್ನು ಕಾಣುತ್ತೇನೆ. ನಾನು ಎಂಬ ಬದುಕು ನೆಪ ಮಾತ್ರವಾದರೂ, ಅದಕ್ಕೆ ಸ್ವಾರ್ಥದ ಲೇಪ ಬಳಿದು, ಬಣ್ಣಬಣ್ಣದ ಚಿತ್ತಾರದ ಮೂಲಕ ಅದನ್ನು ಅಲಂಕರಿಸಲು ಇಷ್ಟಪಡುತ್ತೇನೆ.’ ಬದುಕಿನ ಸಂತೆಯಲ್ಲಿ ಜೀವನದ ಚಿಂತೆಯ ಕುರಿತು ಯೋಚಿಸುವ ನಾವುಗಳು ನಾನು ಎಂಬುದನ್ನು ಮರೆತಾಗ ಮಾತ್ರ ಈ ಸಂತೆಯೂ ಕೂಡ ನೆಮ್ಮದಿಯನ್ನು ತರುತ್ತದೆ.

ಜೀವನದಲ್ಲಿ ಚಿಂತೆ ಎಂಬುದು ಯಾರಿಗಿಲ್ಲ ಹೇಳಿ? ಪ್ರತಿಯೊಬ್ಬರಿಗೂ ಚಿಂತೆ ಇದ್ದೇ ಇರುತ್ತದೆ. ಒಬ್ಬರಿಗೆ ಒಂದೊಂದು ಚಿಂತೆ. ಅವರವರಿಗೆ ಇರುವ ತೊಂದರೆಯ ಬಗ್ಗೆ, ಅನನುಕೂಲಗಳ ಬಗ್ಗೆ ಪ್ರತಿಯೊಬ್ಬನಿಗೂ ಚಿಂತೆ ಇರುತ್ತದೆ. ಮಕ್ಕಳು ಬೆಳೆದು ದೊಡ್ಡವರಾಗಿದ್ದಾರೆ. ಅವರ ಮದುವೆ ಮಾಡಬೇಕು ಎನ್ನುವುದು ಪಾಲಕರ ಚಿಂತೆಯಾದರೆ, ಮಕ್ಕಳಿಗೆ ತಮ್ಮ ಮದುವೆಯಾಗುವ ಹುಡುಗ ಅಥವಾ ಹುಡುಗಿ ಹೇಗಿರಬಹುದು ಎನ್ನುವ ಚಿಂತೆ. ಕಷ್ಟಪಟ್ಟು ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗೆ ಮುಂದಿನ ಫೀಸ್ ಹೇಗೆ ಕೊಡುವುದು ಎನ್ನುವ ಚಿಂತೆ. ಮನೆ ಬಿಟ್ಟು ಹೋದ ಗಂಡ ಇನ್ನೂ ಹಿಂದಿರುಗಲಿಲ್ಲ ಎನ್ನುವುದು ಅವನಿಗಾಗಿ ಕಾದು ಕುಳಿತ ಹೆಂಡತಿಯ ಚಿಂತೆ. ಹೀಗೆ ಒಂದಿಲ್ಲೊಂದು ಚಿಂತೆಯಲ್ಲಿಯೇ ನಮ್ಮ ಜೀವನವನ್ನು ಕಳೆದುಬಿಡುತ್ತೇವಲ್ಲವೇ?

See also  ಆಹಾರ ಸೇವನೆಯತ್ತ ನಿಗಾವಹಿಸಿ.. ಬಿಪಿ ನಿಯಂತ್ರಿಸಿ..

ಎಷ್ಟೋ ಇಷ್ಟಪಟ್ಟು ಪ್ರೀತಿಸಿದ ವ್ಯಕ್ತಿ ಒಂದು ದಿನ ಬಿಟ್ಟು ಹೋಗುತ್ತಾರೆ. ನಂಬಿಕೆ ಇತ್ತ ಗೆಳತಿ ಮೋಸ ಮಾಡುತ್ತಾಳೆ. ಸಾಲ ಮಾಡಿ ಶುರು ಮಾಡಿದ ಕೆಲಸ ಕೈಗೆ ಹತ್ತುವುದಿಲ್ಲ. ಎಷ್ಟೇ ಕೆಲಸ ಮಾಡಿದರೂ ಬಡ್ತಿ ಸಿಕ್ಕುವುದಿಲ್ಲ. ಒಂದೇ, ಎರಡೇ – ಚಿಂತೆ ಎಂದರೆ ಸಾವಿರಾರು ವಿಷಯಗಳು ಸಿಗುತ್ತವೆ. ಆದರೆ, ಒಂದಂತೂ ನಿಜ; ಹೀಗೆ ಯೋಚಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ನಮ್ಮನ್ನು ನಾವು ಇನ್ನಷ್ಟು ಶಿಕ್ಷಿಸಿಕೊಳ್ಳುತ್ತಿರುತ್ತೇವೆ, ಅಷ್ಟೆ! ಒಂದು ಗಾದೆಯ ಮಾತೇ ಇದೆಯಲ್ಲವೆ – ‘ಚಿತೆ ಹೆಣವನ್ನು ಸುಟ್ಟರೆ, ಚಿಂತೆ ಬದುಕಿರುವವನನ್ನೇ ಸುಡುತ್ತದೆ’ ಎಂದು.
ಚಿಂತೆ ಮಾಡಿ ಯಾವುದೇ ಪ್ರಯೋಜನವಿಲ್ಲ. ಅದರ ಬದಲು ಈಗ ಬಂದಿರುವ ಸಮಸ್ಯೆಗೆ ಪರಿಹಾರ ಹುಡುಕುವುದರಲ್ಲೇ ಇರುವುದು ನಮ್ಮ ಜಾಣತನ. ಜೀವನದಲ್ಲಿ ಎಷ್ಟೋ ಸಿಹಿ–ಕಹಿ ಘಟನೆಗಳಾಗುತ್ತಲೇ

ಇರುತ್ತವೆ. ಕಹಿ ಘಟನೆಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಚಿಂತೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಏನು ನಡೆಯಬೇಕೋ ಅದು ಆಗಿಯೇ ಆಗುತ್ತದೆ; ನಾವು ಚಿಂತೆ ಮಾಡಿದರೂ ಅಷ್ಟೇ ಬಿಟ್ಟರೂ, ಅವನ್ನು ನಿಲ್ಲಿಸಲು ಆಗುವುದಿಲ್ಲ. ಇರುವಷ್ಟು ದಿನ ನಗುನಗುತ್ತಾ ಜೀವನ ಸಾಗಿಸುವುದನ್ನು ಕಲಿಯೋಣ. ‘ಒಂದು ವೇಳೆ ಹಾಗಾದರೆ? ಹೀಗಾದರೆ?’ – ಹೀಗೆಲ್ಲ ಎಂದು ಅನವಶ್ಯಕವಾಗಿ ಯೋಚಿಸುತ್ತೇವೆ. ಕೊನೆಗೆ ನೋಡಿದರೆ ಎಲ್ಲವೂ ಒಳ್ಳೆಯದೇ ಆಗಿರುತ್ತದೆ. ಸುಮ್ಮನೆ ಚಿಂತಿಸಿ ಮನಸ್ಸನ್ನು ಹಾಳುಮಾಡಿಕೊಂಡರೆ ಬರುವುದಾದರು ಏನು? ಏನೇ ಆದರೂ ಬದುಕಿನಲ್ಲಿ ಮುಂದೆ ಸಾಗಲೇಬೇಕು. ಜೀವನವನ್ನು ಸಂತೋಷದಿಂದ ಸಾಗಿಸೋಣ. Hope for the best, prepare for the worst. ‘ಒಳ್ಳೆಯದಕ್ಕೆ ಆಶಿಸೋಣ; ಕೆಟ್ಟದ್ದಕ್ಕೆ ಸಿದ್ಧವಾಗಿರೋಣ’.

ಭಾವಶರಧಿಯಲ್ಲಿ ಎದ್ದ ಅಲೆಗಳು, ಮುಸ್ಸಂಜೆಯ ಅಸ್ತಮಾನಕ್ಕೆ ಭೋರ್ಗರೆಯುತ್ತವೆ. ಭರವಸೆಯ ಮುಂಜಾನೆಗೆ ಕಾದು ಕುಳಿತು, ಕಾಗುಣಿತದ ಕೂಡು ಕಳೆಯುವಿಕೆಯ ಲೆಕ್ಕಾಚಾರದಲ್ಲಿ ಮುಳುಗುತ್ತವೆ. ಉದಯದ ಬೆಳಕು ಹರಿಯುತ್ತಿದ್ದಂತೆ ಮತ್ತೆ ಕನಸುಗಳು ಗರಿಬಿಚ್ಚಿ, ಹುಚ್ಚೆದ್ದು ಕುಣಿಯುತ್ತವೆ. ಕನಸು ನನಸಾಗಿಸುವ ಛಲ; ಆದರೆ ಅನಿರೀಕ್ಷಿತ ಗೋಡೆ ತೊಡರಾಗುತ್ತಿರುತ್ತದೆ. ಕತ್ತಲಾವರಿಸಿದ ಮನದ ಕೋಣೆಯಲಿ ಬೆಳಕಿನ ಬತ್ತಿಯನ್ನು ಇದರ ನಡುವೆಯೇ ಹಚ್ಚಬೇಕು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು