News Kannada
Friday, December 02 2022

ಆರೋಗ್ಯ

ನಾಳೆಯ ಚಿಂತೆ ಬಿಡಿ… ಇವತ್ತು ಖುಷಿಯಾಗಿರಿ..

Photo Credit :

ನಾಳೆಯ ಚಿಂತೆ ಬಿಡಿ... ಇವತ್ತು ಖುಷಿಯಾಗಿರಿ..

ಸಾಮಾನ್ಯವಾಗಿ ನಾವ್ಯಾರೂ ಇವತ್ತಿನ ಬಗ್ಗೆ ಚಿಂತಿಸುವುದೇ ಇಲ್ಲ. ಕೂತರೂ ನಿಂತರೂ ನಮಗೆ ನಾಳೆಯದ್ದೇ ಚಿಂತೆ. ಪ್ರಾಣಿ ಪಕ್ಷಿಗಳು ಹಾಗಿಲ್ಲ. ಇವತ್ತು ಸಿಕ್ಕಿದನ್ನು ಉಂಡು ಮಲಗಿ ನೆಮ್ಮದಿಯಾಗಿ ನಿದ್ದೆ ಮಾಡುತ್ತವೆ. ಆದರೆ ನಾವು ಮನುಷ್ಯರು ರಾತ್ರಿ ಮೃಷ್ಟಾನ್ನ ಉಂಡು ಸುಪ್ಪತ್ತಿಗೆಯಲ್ಲಿ ಮಲಗಿದರೂ ನಾಳೆ ಎಂಬ ಚಿಂತೆ ನಮ್ಮನ್ನು ಸುಖವಾಗಿ, ನೆಮ್ಮದಿಯಾಗಿ ನಿದ್ದೆ ಮಾಡಲು ಬಿಡುವುದಿಲ್ಲ. ನಾಳೆ ಏನಾಗುತ್ತೋ ಎಂಬ ಆತಂಕ ನಮ್ಮನ್ನು ಕಾಡುತ್ತಲೇ ಇರುತ್ತದೆ.

ಇವತ್ತಿದ್ದಂತೆ ನಾಳೆಯೂ ಇರುತ್ತೆ ಎಂಬ ನಂಬಿಕೆ ನಮಗಿಲ್ಲ. ನಾಳೆ ಏನು ಬೇಕಾದರೂ ಆಗಬಹುದು. ಕೆಲಸವೇನೋ ಇದೆ. ಭದ್ರತೆಯಿಲ್ಲ. ಅದು ಕೂಡ ನಾಳೆ ಕೈ ತಪ್ಪಿ ಹೋದರೂ ಹೋಗಬಹುದು. ಬರಬೇಕಾದ ಹಣ ಬರದೆಯೂ ಇರಬಹುದು. ಅದು ನಮಗೆ ಗೊತ್ತಿಲ್ಲ. ಆದರೆ ಅದನ್ನು ಇವತ್ತೇ ಕಲ್ಪಿಸಿಕೊಂಡು ಚಿಂತೆ ಮಾಡುವುದು ಮಾತ್ರ ಮೂರ್ಖತನವಾಗಿ ಬಿಡುತ್ತದೆ. ಇದು ನಾವು ನಮಗೆ ಮಾಡಿಕೊಳ್ಳುವ ವಂಚನೆ ಎಂಬುದು ಗೊತ್ತಿದ್ದರೂ ಇಲ್ಲ ಸಲ್ಲದ ವಿಚಾರಗಳಿಗೂ ಚಿಂತೆ ಮಾಡುತ್ತಿರುತ್ತೇವೆ.

ನಮ್ಮ ಸಂಪಾದನೆಯಲ್ಲಿ ಕೊಡಬೇಕಾದುದೆಲ್ಲವನ್ನೂ ಕೊಟ್ಟು ಕೈಖಾಲಿ ಆದಾಗ ಮುಂದೆ ಹೇಗಪ್ಪಾ ಎಂಬ ಚಿಂತೆ ಕಾಡುತ್ತದೆ. ಕೇವಲ ಚಿಂತಿಸುತ್ತಾ ಕೂತರೂ ಏನು ಪ್ರಯೋಜನವಿಲ್ಲ ಅದಕ್ಕೊಂದು ಮಾರ್ಗ ಹುಡುಕಲೇ ಬೇಕು. ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ. ಸಮಸ್ಯೆ ಎದುರಾದಾಗ ಅದನ್ನು ಪರಿಹರಿಸುವ ಮಾರ್ಗ ಹುಡುಕಬೇಕೇ ವಿನಃ ಚಿಂತೆ ಮಾಡುತ್ತಾ ಆತ್ಮಸ್ಥೈರ್ಯ ಕುಂದಿಸಿಕೊಳ್ಳುವುದಲ್ಲ.

ನಮ್ಮ ಬದುಕನ್ನು ಒಳ್ಳೆಯ ಮಾರ್ಗದಲ್ಲಿ ಕಟ್ಟಿಕೊಳ್ಳಲು ನಮಗೆ ಬೇಕಾಗಿರುವುದು ಚಿಂತೆಯಲ್ಲ ಚಿಂತನೆ. ಒಳ್ಳೆಯ ವಿಚಾರಗಳ ಬಗ್ಗೆ ಚಿಂತಿಸುವುದರಿಮದ ನಮ್ಮ ಮನಸ್ಸನ್ನು ಆಗಾಗ್ಗೆ ಕಾಡುವ ಚಿಂತೆಯಿಂದ ಕಾಪಾಡಿಕೊಳ್ಳಬಹುದು. ಇಷ್ಟಕ್ಕೂ ಈ ಭೂಮಿ ಮೇಲೆ ಹುಟ್ಟಿದ ಪ್ರತಿಯೊಬ್ಬರನ್ನೂ ಚಿಂತೆ ಕಾಡದಿರದು. ಹಾಗೆಂದು ಬರೀ ಚಿಂತೆಯಲ್ಲೇ ಕಾಲ ಕಳೆಯುವಂತಿಲ್ಲ. ಚಿಂತೆ ಮಾಡುತ್ತಾ ಹೋದರೆ ಮನುಷ್ಯ ಚಿತೆಯಾಗಬೇಕಾಗುತ್ತದೆ.

ನಮ್ಮ ಬದುಕನ್ನು ಬೇರೆಯವರ ಬದುಕಿನೊಂದಿಗೆ ಸಮೀಕರಿಸಿ ನೋಡುವುದನ್ನು ಮೊದಲು ಬಿಡಬೇಕು. ಒಂದು ವೇಳೆ ಹಾಗೆ ಮಾಡಿದರೂ ಬೇರೆ ವ್ಯಕ್ತಿಗಳ ಬದುಕಿನ ಒಳ್ಳೆತನಗಳನ್ನು ನಮ್ಮೊಂದಿಗೆ ಹೋಲಿಸುತ್ತಾ ಅವರ ಆದರ್ಶಗಳನ್ನು ಪಾಲಿಸುವಂತಾಗಬೇಕು. ಆದರೆ ಅದು ನಮ್ಮಿಂದ ಸಾಧ್ಯವೇ? ನಾವು ಬೇರೆಯವರ ಒಳ್ಳೆತನಗಳನ್ನು ಪಾಲಿಸುವುದಿಲ್ಲ ಬದಲಾಗಿ ಅವರ ಮನೆಯಲ್ಲಿರುವ ಐಷಾರಾಮಿ ವಸ್ತುಗಳಿಗೆ ಪೈಪೋಟಿ ನೀಡುತ್ತೇವೆ. ಅವರಲ್ಲಿರುವ ವಸ್ತು ನಮ್ಮಲ್ಲಿಲ್ಲವಲ್ಲ ಎಂದು ಚಿಂತೆ ಮಾಡುತ್ತೇವೆ. ಇಂಥ ಕೆಟ್ಟ ಪ್ರವೃತ್ತಿ ಬೆಳೆಸಿಕೊಳ್ಳುವುದು ಕೂಡ ನಮ್ಮನ್ನು ವೃಥಾ ಚಿಂತೆಗೆ ದೂಡಲು ಕಾರಣವಾಗುತ್ತಿದೆ.

ಕೆಲವರಿಗೆ ಚಿಂತೆ ಮಾಡುವುದೇ ಒಂದು ಕಾಯಿಲೆ ಎಂದರೂ ತಪ್ಪಾಗುವುದಿಲ್ಲ. ಏಕೆಂದರೆ ಅವರು ಬೇಡವಾದ ವಿಚಾರಕ್ಕೆಲ್ಲ ಚಿಂತೆ ಮಾಡುತ್ತಿರುತ್ತಾರೆ. ಅದರಿಂದಲೇ ತಮ್ಮ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಾರೆ. ಇವತ್ತು ಹೀಗಿದೆ. ನಾಳೆ ಇನ್ನು ಹೇಗಿದೆಯೋ ಗೊತ್ತಿಲ್ಲ. ಏಕೆಂದರೆ ಅದು ಬಂದಿಲ್ಲ. ಆದರೆ ಬಂದೇ ಬರುತ್ತೆ. ಇವತ್ತು ಹೇಗೆ ಕಳೆದಿದ್ದೇವೆಯೋ ಹಾಗೆಯೇ ನಾಳೆ ಬರಲಿರುವ ದಿನವನ್ನು ಎದುರಿಸಿದರಾಯಿತು. ನಾಳೆ ಹಾಗೆ ಆಗಬಹುದು, ಹೀಗೆ ಆಗಬಹುದು ಎಂದು ಚಿಂತಿಸುತ್ತಾ ಇವತ್ತಿನ ಸಂತೋಷದ ಕ್ಷಣಗಳನ್ನು ಕಳೆದುಕೊಳ್ಳುವುದು ಮೂರ್ಖತನವಾಗುತ್ತದೆ.

See also  ಕೊರೊನಾದೊಂದಿಗೆ ಸಾಂಕ್ರಮಿಕ ರೋಗ ಕಾಡಬಹುದು ಎಚ್ಚರ!

ಭಗವಾನ್ ಬುದ್ಧ ಹೇಳುತ್ತಾನೆ ಮನಸ್ಸಿನಲ್ಲಿ ಹುಟ್ಟಿದ ಚಿಂತನೆಯನ್ನು ದೂರ ಓಡಿಸಬೇಕಾದರೆ ಮನಸ್ಸಿನ ಸ್ತರಗಳನ್ನು ಮತ್ತೆ ಮತ್ತೆ ಪರಿಶೀಲನೆಗೆ ಒಳಪಡಿಸಬೇಕು. ಹಾಗೆಯೇ ಕೆಲಸಕ್ಕೆ ಬಾರದ ಚಿಂತನೆಗಳನ್ನು ಮನಸ್ಸಿನಿಂದ ಕಿತ್ತುಹಾಕಿ ಒಳ್ಳೆಯದನ್ನು ಮಾತ್ರ ತುಂಬಿಕೊಳ್ಳಬೇಕು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು