News Kannada
Tuesday, September 27 2022

ಆರೋಗ್ಯ

ನಿಮ್ಮಿಂದಾಗಿ ಬೇರೆಯವರಿಗೆ ಮುಜುಗರವಾಗದಿರಲಿ! - 1 min read

Photo Credit :

ನಿಮ್ಮಿಂದಾಗಿ ಬೇರೆಯವರಿಗೆ ಮುಜುಗರವಾಗದಿರಲಿ!

ನಾವೆಲ್ಲರೂ ಪ್ರತಿ ದಿನವೂ ಸಮಾಜದೊಂದಿಗೆ ಕಲೆತು ಬದುಕುವವರು. ಮನೆಯಿರಲಿ, ಕಚೇರಿಯಿರಲಿ, ಕೆಲಸ ಮಾಡುವ ಯಾವುದೇ ಸ್ಥಳವಿರಲಿ. ಒಂದಲ್ಲ ಒಂದು ಕಾರಣಕ್ಕೆ ಬೇರೆಯವರೊಂದಿಗೆ ಬೆರೆಯಲೇ ಬೇಕು. ಹೀಗಿರುವಾಗ ನಮಗೆ ಅರಿವಿಲ್ಲದೆ ಮಾಡುವ ಕೆಲವೊಂದು ಚಟಗಳತ್ತ ಗಮನಹರಿಸಲೇ ಬೇಕಾಗುತ್ತದೆ. ಕಾರಣ ಅವು ಆಗಾಗ್ಗೆ ಬೇರೆಯವರಿಗೆ ಅಸಹ್ಯ ಎನಿಸುತ್ತಿರುತ್ತದೆ.

ನಾವೆಷ್ಟೇ ಸುಂದರವಾದ ಬಟ್ಟೆ ಹಾಕಿಕೊಂಡು ನೀಟಾಗಿ ಕಾಣುತ್ತಿದ್ದರೂ ನಮ್ಮ ಕೆಲವೊಂದು ವರ್ತನೆಗಳು ನಮ್ಮನ್ನು ಬೇರೆಯವರು ಆಡಿಕೊಳ್ಳುವಂತೆ, ದೂರವಿರುವಂತೆ ಮಾಡಿಬಿಡುತ್ತದೆ. ಹೀಗಾಗಿ ನಾವು ತುಂಬಾ ಜಾಗರೂಕರಾಗಿರಬೇಕಾಗುತ್ತದೆ. ಕೆಲವರಿಗೆ ಸಿಗರೇಟ್ ಸೇದಲೇ ಬೇಕು. ಹಾಗೆಂದು ಸೇದಿ ನೇರವಾಗಿ ಆಫೀಸಿನೊಳಗೆ ಬಂದರೆ ಅದರ ವಾಸನೆ ಇತರರಿಗೆ ಹಿಂಸೆ ನೀಡುತ್ತದೆ.

ಮತ್ತೆ ಕೆಲವರು ಆಗಾಗ್ಗೆ, ಮೂಗಿಗೋ, ಬಾಯಿಗೋ, ಇನ್ನೆಲ್ಲಿಗೋ ಕೈಹಾಕಿ ಕೂರುವುದು, ಸಿಕ್ಕ ಸಿಕ್ಕ ಕಡೆ ಕ್ಯಾಕರಿಸಿ ಉಗಿಯುವುದು, ಎಲ್ಲರ ಎದುರಿಗೆ ಶಬ್ದ ಬರುವಂತೆ ಆಕಳಿಸುವುದು, ವಾಯು ಮಾಲಿನ್ಯ ಮಾಡುವುದು ಹೀಗೆ ಏನಾದರೊಂದು ಮಾಡುತ್ತಲೇ ಇರುತ್ತಾರೆ. ಅದು ಮಾಡುವವರಿಗೆ ಏನೂ ಅನಿಸದಿರಬಹುದು. ಆದರೆ ಸುತ್ತಮುತ್ತಲಲ್ಲಿ ಇರುವವರಿಗೆ ನರಕಯಾತನೆ ನೀಡುತ್ತದೆ. ಆದ್ದರಿಂದ ನಾವು ನೀಟಾಗಿ ಡ್ರೆಸ್ ಮಾಡಿಕೊಂಡು ಆಕರ್ಷಕವಾಗಿ ಕಾಣುವುದು ಮುಖ್ಯವಲ್ಲ, ಅದರೊಂದಿಗೆ ಒಂದಷ್ಟು ಶಿಸ್ತನ್ನು ಕೂಡ ಅಳವಡಿಸಿಕೊಳ್ಳಬೇಕಾಗುತ್ತದೆ. ಇಲ್ಲದೆ ಹೋದರೆ ಇತರರು ಸದಾ ನಮ್ಮಿಂದ ದೂರ ಇರಲು ಪ್ರಯತ್ನಿಸುತ್ತಿರುತ್ತಾರೆ.

ಇದೀಗ ಬೇಸಿಗೆ ಕಾಲವಾಗಿರುವುದರಿಂದ ಇನ್ನೊಂದು ರೀತಿಯ ಸಮಸ್ಯೆ ಎದುರಿಸ ಬೇಕಾಗುತ್ತದೆ. ಎಲ್ಲ ಕಚೇರಿಗಳಲ್ಲೂ ಎಸಿ ಇರುವುದಿಲ್ಲ. ಹೀಗಿರುವಾಗ ಬಿಸಿಲಿಗೆ ಬೆವರಿದಾಗ ದೇಹದಿಂದ ಹೊರಬರುವ ದುರ್ಗಂಧ ಪಕ್ಕದಲ್ಲಿ ಕುಳಿತು ಕೆಲಸ ಮಾಡುವವರಿಗೆ ವಾಕರಿಕೆ ತರುತ್ತದೆ. ಪ್ರತಿ ದಿನ ಸಾಕ್ಸ್ ಬದಲಿಸದೆ ಇರುವುದು ಕೂಡ ದುರ್ವಾಸನೆಗೆ ಕಾರಣವಾಗಿ ಬಿಡುತ್ತದೆ.

ಬಹಳಷ್ಟು ಜನ ಮುಖದ ಕಾಳಜಿ ವಹಿಸಿ ಒಂದಷ್ಟು ಕ್ರೀಮ್, ಪೌಡರ್ ಬಳಸಿ ಸುಂದರವಾಗಿ ಕಾಣುವಂತೆ ನೋಡಿಕೊಳ್ಳುತ್ತಾರೆಯಾದರೂ ಶರೀರದ ಇತರ ಅಂಗಗಳತ್ತ ಗಮನಹರಿಸುವುದಿಲ್ಲ. ಇದರಿಂದಾಗಿ ಶರೀರ ದುರ್ಗಂಧ ಬೀರುತ್ತಿರುತ್ತದೆ. ಇದರ ಪರಿಣಾಮಗಳು ಮಳೆಗಾಲ ಮತ್ತು ಚಳಿಗಾಲದಲ್ಲಿ ಹೆಚ್ಚು ಕಾಣುವುದಿಲ್ಲವಾದರೂ ಬೇಸಿಗೆಯಲ್ಲಿ ಹೆಚ್ಚಾಗಿರುತ್ತದೆ. ಹೀಗಾಗಿ ಬೇಸಿಗೆ ದಿನದಲ್ಲಿ ನಮ್ಮ ದೇಹದ ಬಗ್ಗೆ ನಾವು ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ.

ಬೀಡಿ, ಸಿಗರೇಟ್, ಗುಟ್ಕಾ, ನಶ್ಯ ಮುಂತಾದ ಅಭ್ಯಾಸ ಹೊಂದಿರುವವರು ಅದನ್ನು ಮೊದಲು ಬಿಡಬೇಕು. ತಾವು ಸೇದಿ ಬಂದ ಸಿಗರೇಟ್ ನ ವಾಸನೆ ನೀವು ಎದುರು ನಿಂತು ಮಾತನಾಡುತ್ತಿರುವ ವ್ಯಕ್ತಿಗೆ ವಾಕರಿಕೆ ತರಬಹುದು. ಆತನಿಗೆ ಅದು ಹಿಂಸೆ ಎನಿಸಬಹುದು. ಇನ್ನು ಮೂಗು, ಕಿವಿ, ಬಾಯಿ, ಚರ್ಮಗಳಿಗೆ ಸಂಬಂಧಿಸಿದಂತೆ ಕಾಯಿಲೆಗಳಿದ್ದರೆ ವೈದ್ಯರಿಗೆ ತೋರಿಸಿ ಅವರು ನೀಡುವ ಸಲಹೆಗಳನ್ನು ಅನುಸರಿಸಬೇಕು. ಹೆಚ್ಚಿನ ಜನರಿಗೆ ಕಂಕುಳಿನಿಂದಲೇ ದುರ್ವಾಸನೆ ಬರುತ್ತದೆ. ಕಾರಣ ಕಂಕುಳಲ್ಲಿ ಬೆಳೆಯುವ ಅನಗತ್ಯ ಕೂದಲುಗಳನ್ನು ತೆಗೆಯುವ ಮೂಲಕ ಶರೀರ ಶುಚಿಯಾಗಿರುವಂತೆ ನೋಡಿಕೊಳ್ಳಬೇಕು.

ತಲೆಕೂದಲು ಗಡ್ಡ ಹೆಚ್ಚು ಬೆಳೆಯದಂತೆ ನೋಡಿಕೊಳ್ಳುವುದು, ಶರೀರದ ಎಲ್ಲ ಭಾಗಗಳನ್ನು ಚೆನ್ನಾಗಿ ಉಜ್ಜಿ ತೊಳೆಯುವುದು, ಕನಿಷ್ಟ ಎರಡು ಲೀಟರ್ ನೀರು ಕುಡಿಯುವುದು ಬಿಗಿಯಾದ ಉಡುಪುಗಳನ್ನು ಧರಿಸದೆ, ಶರೀರಕ್ಕೆ ಗಾಳಿಯಾಡುವ ಹಾಗೂ ಹತ್ತಿಬಟ್ಟೆಗೆ ಆದ್ಯತೆ ನೀಡಬೇಕು. ಬೇರೆಯವರು ಬಳಸಿದ ಟವಲ್ ಬಳಸದೆ ಒಗೆದು ಒಣಗಿಸಿ ಬಳಸಬೇಕು.

See also  ಗರ್ಭೀಣಿಯರೇ ಆರೋಗ್ಯದತ್ತ ಇರಲಿ ನಿಗಾ..!

ಬೇರೆಯವರಿಗೆ ಅಸಹ್ಯ ಎನಿಸದ ಉತ್ತಮ ಸುವಾಸನೆ ಬೀರುವ ಸುಗಂಧ ದ್ರವ್ಯಗಳನ್ನು ಲೇಪಿಸಿಕೊಳ್ಳಬೇಕು. ಅವು ಶರೀರಕ್ಕೆ ಒಗ್ಗುವಂತಿದ್ದರೆ ಮಾತ್ರ ಬಳಸಬೇಕು. ವೈದ್ಯರ ಸಲಹೆಯೂ ಅಗತ್ಯವಾಗಿರುತ್ತದೆ. ಹಲ್ಲಿನ ಅಥವಾ ಒಸಡುಗಳ ತೊಂದರೆಯಿದ್ದರೆ ದಂತ ವೈದ್ಯರ ಸಲಹೆಯಂತೆ ಸೂಕ್ತ ಚಿಕಿತ್ಸೆಯನ್ನು ಮಾಡಿಸಿಕೊಳ್ಳುವುದು ಅಗತ್ಯ. ಹಲ್ಲಿನ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಕೆಲವು ಚುಯಿಂಗಮ್ ಅಗೆಯುವುದರಿಂದ ಬಾಯಿಯಲ್ಲಿ ಜೊಳ್ಳುರಸದೊಂದಿಗೆ ದುರ್ವಾಸನೆ ಸಮಸ್ಯೆ ಕಡಿಮೆಯಾಗಲು ಸಾಧ್ಯವಾಗುತ್ತದೆ. ಬಾಯಿಯಲ್ಲಿ ಲವಂಗದ ಚೂರುಗಳನ್ನು ಚಪ್ಪರಿಸುವುದರಿಂದ ದುರ್ವಾಸನೆ ತಡೆಯಬಹುದು.

ಎಲ್ಲದಕ್ಕಿಂತ ಮುಖ್ಯವಾಗಿ ನಮ್ಮ ವರ್ತನೆಗಳ ಬಗ್ಗೆ ನಿಗಾ ಇಡುವುದು, ಬಟ್ಟೆ, ದೇಹ ಎಲ್ಲದರಲ್ಲೂ ಶುಚಿತ್ವಕ್ಕೆ ಆದ್ಯತೆ ನೀಡುವುದು ಮಾಡಬೇಕು. ಆಗ ಮಾತ್ರ ನಮ್ಮನ್ನು ಇತರರು ಗೌರವದಿಂದ ಕಾಣಲು, ಬೆರೆಯಲು ಸಾಧ್ಯವಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು