ಫೆಬ್ರವರಿ 4ರಂದು ವಿಶ್ವದೆಲ್ಲೆಡೆ ವಿಶ್ವ ಕ್ಯಾನ್ಸರ್ ದಿನವನ್ನಾಗಿ ಆಚರಿಸಲಾಯಿತು. ಕ್ಯಾನ್ಸರ್ ಅಂದರೆ ಸಾವು ಎನ್ನುವ ಸಮಯವಿತ್ತು. ಆದರೆ ಈಗ ಹಾಗಿಲ್ಲ. ಆರಂಭದಲ್ಲೇ ಕ್ಯಾನ್ಸರ್ ಪತ್ತೆ ಮಾಡಿದರೆ ಚಿಕಿತ್ಸೆ ಸಾಧ್ಯ. ಕೆಲವೊಂದು ಜೀವನಶೈಲಿಯಿಂದಲೂ ಕ್ಯಾನ್ಸರ್ ಬರುವುದು. ಧೂಮಪಾನ, ಬೊಜ್ಜು, ಆಲ್ಕೋಹಾಲ್ ಇತ್ಯಾದಿಗಳಿಂದ ಬೇಗನೆ ಕ್ಯಾನ್ಸರ್ ಬರುವ ಸಾಧ್ಯತೆಗಳಿವೆ.
ಕ್ಯಾನ್ಸರ್ ಮುಕ್ತ ಜೀವನ ನಡೆಸಲು ನೀವು ಆರೋಗ್ಯಕರ ಜೀವನ ನಿಮ್ಮದಾಗಿಸಿಕೊಳ್ಳಬೇಕು. ಅದು ಯಾವುದೆಂದು ನೀವು ತಿಳಿಯಿರಿ.
1. ತಂಬಾಕು ಬಳಸಬೇಡಿ
ಕ್ಯಾನ್ಸರ್ ಹರಡುವ ಪ್ರಮುಖ ವಸ್ತುಗಳಲ್ಲಿ ತಂಬಾಕು ಕೂಡ ಒಂದಾಗಿದೆ. ಧೂಮಪಾನ ಮತ್ತು ತಂಬಾಕಿನಿಂದ ಆಗುವಂತಹ ಅನಾಹುತಗಳ ಬಗ್ಗೆ ವಿಶ್ವದೆಲ್ಲೆಡೆ ಜನಜಾಗೃತಿ ಕೈಗೊಳ್ಳಲಾಗಿದೆ. ಧೂಮಪಾನ ತ್ಯಜಿಸಿದರೆ ನೀವು ಅರ್ಧ ಗೆದ್ದಂತೆ.
2. ಬೊಜ್ಜು ದೇಹ
ಬೊಜ್ಜು ದೇಹವು ಕೇವಲ ಕ್ಯಾನ್ಸರ್ ಮಾತ್ರವಲ್ಲ, ಇತರ ಹಲವಾರು ಅನಾರೋಗ್ಯಗಳಿಗೆ ಕಾರಣವಾಗುವುದು. ಫಿಟ್ ಆಗಿ ಆರೋಗ್ಯಕರ ಜೀವನಶೈಲಿ ಕೈಗೊಂಡರೆ ಕ್ಯಾನ್ಸರ್ ತಡೆಗಟ್ಟಬಹುದು.
3. ಆಲ್ಕೋಹಾಲ್
ಹೊಟ್ಟೆ ಮತ್ತು ಮೇಧೋಜೀರಕದಲ್ಲಿ ಕ್ಯಾನ್ಸರ್ ಗೆ ಪ್ರಮುಖ ಕಾರಣ ಆಲ್ಕೋಹಾಲ್. ನೀವು ಹೆಚ್ಚೆಚ್ಚು ಆಲ್ಕೋಹಾಲ್ ಕುಡಿದಷ್ಟು ಕ್ಯಾನ್ಸರ್ ಅಪಾಯಕ್ಕೆ ಹತ್ತಿರವಾಗುತ್ತೀರಿ. ಆಲ್ಕೋಹಾಲ್ ನಿಂದ ಯಕೃತ್ ನಲ್ಲೂ ಕ್ಯಾನ್ಸರ್ ಬರಬಹುದು. ಬಾಯಿ, ಗಂಟಲು, ಕರುಳು, ಸ್ತನ ಇತ್ಯಾದಿ ಕ್ಯಾನ್ಸರ್ ಗಳು ಆಲ್ಕೋಹಾಲ್ ಸೇವಿಸುವವರಲ್ಲಿ ಸಾಮಾನ್ಯ.
4. ಅತಿಯಾಗಿ ಸೂರ್ಯ ಕಿರಣಕ್ಕೆ ಮೈಯೊಡ್ಡುವುದು
ಸೂರ್ಯನ ಕಿರಣಗಳಿಗೆ ಅತಿಯಾಗಿ ಮೈಯೊಡ್ಡುವುದರಿಂದ ಚರ್ಮದ ಕ್ಯಾನ್ಸರ್ ಕಾಣಿಸಬಹುದು. ಅತಿಯಾದ ಅಲ್ಟ್ರಾವೈಲೆಟ್ ಕಿರಣಗಳು ಚರ್ಮದ ಡಿಎನ್ ಎ ನಾಶ ಮಾಡಬಹುದು. ಇದರಿಂದ ಚರ್ಮದ ಕ್ಯಾನ್ಸರ್ ಬರಬಹುದು.
5. ಕೆಂಪು ಮಾಂಸ ಮತ್ತು ಸಂಸ್ಕರಿತ ಮಾಂಸ ಸೇವನೆ
ಸಂಸ್ಕರಿತ ಮಾಂಸ ಮತ್ತು ಕೆಂಪು ಮಾಂಸವು ಕ್ಯಾನ್ಸರ್ ಅಪಾಯಕ್ಕೆ ಕಾರಣವಾಗಬಹುದು. ಸಾಸೇಜ್, ಶೀತಲೀಕರಿಸಿದ ಹಂದಿ ಮಾಂಸ, ಕುರಿ ಮಾಂಸ ಇತ್ಯಾದಿಗಳು ಕ್ಯಾನ್ಸರ್ ಅಪಾಯ ಹೆಚ್ಚಿಸಬಹುದು.
6.ಸಕ್ಕರೆಯುಳ್ಳ ಪಾನೀಯಗಳು
ಸೋಡಾಗಳು ಅಥವಾ ಸಕ್ಕರೆಯುಕ್ತ ಪಾನೀಯಗಳನ್ನು ಅತಿಯಾಗಿ ಸೇವನೆ ಮಾಡುವುದರಿಂದ ಕ್ಯಾನ್ಸರ್ ಬರಬಹುದು. ಇದು ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಿಸುವುದು. ಮಾತ್ರವಲ್ಲದೆ ಬೊಜ್ಜು ಹೆಚ್ಚಿಸುವುದು.
7. ಅತಿಯಾದ ಉಪ್ಪು ಸೇವನೆ
ಉಪ್ಪಿನಾಂಶ ಹೆಚ್ಚಾಗಿರುವಂತಹ ಆಹಾರಗಳನ್ನು ಯಾವಾಗಲೂ ಸೇವನೆ ಮಾಡುವುದರಿಂದ ಕ್ಯಾನ್ಸರ್ ಅಪಾಯ ಹೆಚ್ಚಾಗುವುದು. ಆಹಾರದಲ್ಲಿ ಇರುವ ಸೋಡಿಯಂನ್ನು ದೇಹವು ಹೀರಿಕೊಳ್ಳುವುದು. ಇದರಿಂದ ಹೆಚ್ಚುವರಿ ಉಪ್ಪಿನ ಅಗತ್ಯವಿಲ್ಲ.