News Kannada
Wednesday, February 01 2023

ಆರೋಗ್ಯ

ವಾಯುಮಾಲಿನ್ಯವು ನಿಮ್ಮನ್ನು ಹಂದಿ ಜ್ವರಕ್ಕೆ ಗುರಿಯಾಗಿಸುವ ಸಾಧ್ಯತೆ ಹೆಚ್ಚು!

Photo Credit :

ವಾಯುಮಾಲಿನ್ಯವು ನಿಮ್ಮನ್ನು ಹಂದಿ ಜ್ವರಕ್ಕೆ ಗುರಿಯಾಗಿಸುವ ಸಾಧ್ಯತೆ ಹೆಚ್ಚು!

ಬೆಂಗಳೂರು : ಕೊರೋನಾ ವೈರಸ್ ಭೀತಿಯ ನಡುವೆ, ವಾಯುಮಾಲಿನ್ಯದಿಂದಾಗಿ ಹೆಚ್1ಎನ್1 ಹಂದಿ ಜ್ವರಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿದೆಯೆಂದು ತಜ್ಞರು ಹೇಳುತ್ತಿದ್ದಾರೆ. ಅಂಕಿಅಂಶಗಳ ಪ್ರಕಾರ ಕರ್ನಾಟಕದಲ್ಲಿನ ಅರ್ಧದಷ್ಟು ಪ್ರಕರಣಗಳು ಬೆಂಗಳೂರಿನಲ್ಲೇ ವರದಿಯಾಗುತ್ತಿದೆ. 2020ರ ಪೆಬ್ರವರಿ ಕೊನೇಯ ಹೊತ್ತಿಗೆ ಬೆಂಗಳೂರಿನಲ್ಲಿ 101 ಪ್ರಕರಣಗಳು ಕಂಡುಬಂದಿದ್ದು, ಒಬ್ಬ ರೋಗಿ ಸಾವನ್ನಪ್ಪಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಯನದ ಪ್ರಕಾರ, ಬ್ಯಾಕ್ಟೀರಿಯಾದ ವಾಯುಗಾಮಿ ಕಣಗಳನ್ನು ಉಸಿರಾಡುವುದರಿಂದ ಶ್ವಾಸಕೋಶದಲ್ಲಿ ಹಲವಾರು ಸೋಂಕು ಕಾಯಿಲೆ ಹಾಗೂ ಶ್ವಾಸಕೋಶದ ಅತಿಸೂಕ್ಷ್ಮತೆಗೂ ಕಾರಣವಾಗುತ್ತಿವೆ. ಬೇಸಿಗೆಯಲ್ಲಿ ಜನರು ಸೋಂಕು ಖಾಯಿಲೆಗೆ ಒಳಗಾಗುವ ಅಪಾಯ ಹೆಚ್ಚಿರುತ್ತದೆ ಎನ್ನುತ್ತದೆ ಅಧ್ಯಯನ.

ಬೆಂಗಳೂರು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥೆ ನಂದಿನಿ ಎನ್. ಪ್ರಕಾರ, ‘ವೈರಸ್‍ಗಳ ಗಾತ್ರವು 2.5 ಮೈಕ್ರಾನ್ಸ್‍ಗಿಂತಲೂ (1 ಮೀಟರ್ – 10 ಲಕ್ಷ ಮೈಕ್ರಾನ್ಸ್) ಕಡಿಮೆಯಿರುತ್ತದೆ. ಹೀಗಾಗಿ ಇದು ಸುಲಭವಾಗಿ ಗಾಳಿಯಲ್ಲಿ ಸಂಚರಿಸುತ್ತದೆ, ಇದರಿಂದಾಗಿ ಅದು ಹೆಚ್ಚಿನ ಜನರ ಮೇಲೆ ಪರಿಣಾಮ ಬೀರಬಲ್ಲದು.

ಹೆಚ್1ಎನ್1 ಹಂದಿಜ್ವರವು ಹೆಚ್1ಎನ್1 ಇನ್ಫ್ಲುಯೆಂಝ ಎಂಬ ವೈರಸ್‍ನಿಂದ ಉಂಟಾಗುವ ಉಸಿರಾಟದ ಸೋಂಕು. ಇದು ಮುಖ್ಯವಾಗಿ ಕೆಮ್ಮು ಅಥವಾ ಸೀನು, ಕೈಕುಲುಕುವುದು ಅಥವಾ ಅಪ್ಪುಗೆ, ಚುಂಬನ ಅಥವಾ ಪಾನೀಯಗಳನ್ನು ಹಂಚಿಕೊಳ್ಳುವುದು ಅಥವಾ ಕಲುಷಿತ ಹೊದಿಕೆ, ಬಾಗಿಲ ಹಿಡಿಕೆಯಿಂದ ಹರಡುತ್ತದೆ. ಅದಾಗ್ಯೂ, ವಾಯುಮಾಲಿನ್ಯ ಗಾಳಿಯಲ್ಲಿನ ವೈರಸ್ ಅಥವಾ ಬ್ಯಾಕ್ಟೀರಿಯಾಗಳನ್ನು ಹೆಚ್ಚಿಸುತ್ತದೆ ಮತ್ತು ಒಂದು ಬಾರಿಗೆ ವ್ಯಕ್ತಿಯ ರೋಗನಿರೋಧಕ ಶಕ್ತಿಯ ಮೇಲೆ ದಾಳಿ ಮಾಡಿದರೆ ನಂತರ ಇದು ಶ್ವಾಸಕೋಶದ ಕಾಯಿಲೆ, ನೆಗಡಿ ಮತ್ತು ಸಾಮಾನ್ಯ ಜ್ವರ, ಹಂದಿ ಜ್ವರಕ್ಕೂ ಕಾರಣವಾಗುತ್ತದೆ.

ಪರಿಸರ ಕಾರ್ಯಕರ್ತ ಸಂದೀಪ್ ಅನಿರುದ್ಧನ್ ಅವರ ಪ್ರಕಾರ, `ಕಸ ಸುಡುವಿಕೆ, ಅಸಮರ್ಪಕ ಘನತ್ಯಾಜ್ಯ ನಿರ್ವಹಣೆಯಿಂದಾಗಿ ವಾಯುಗಾಮಿ ಕಣಗಳು, ಬ್ಯಾಕ್ಟೀರಿಯಾ ವಾಯುಗಾಮಿ ಕಣಗಳು, ಅಲರ್ಜಿಕಾರಕಗಳು, ಪಾಥೋಜೆನ್ ಗಳು (ಒಂದು ವಿಧ ಬ್ಯಾಕ್ಟೀರಿಯಾದಂತಹ ವೈರಸ್) ಎಲ್ಲೆಂದರಲ್ಲಿ ಗಾಳಿಯಲ್ಲಿ ತುಂಬಾ ಸಮಯದವರೆಗೂ ಸಂಚರಿಸುತ್ತಿರುತ್ತವೆ.

ಇವುಗಳನ್ನು ಉಸಿರಾಡುವುದರಿಂದ ಶ್ವಾಸಕೋಶದಲ್ಲಿ ಸೋಂಕು ಉಂಟಾಗಿ ಉಸಿರಾಟದ ತೊಂದರೆ, ಕಿರಿಕಿರಿಯುಂಟು ಮಾಡುತ್ತದೆ. ಇವು ವಾಯುಮಾಲಿನ್ಯದಿಂದ ಉಸಿರಾಟದ ಸಮಸ್ಯೆಗೆ ಕಾರಣವಾಗುವುದನ್ನು ಸೂಚಿಸುತ್ತದೆ ಎಂದು ಅವರು ಉಲ್ಲೇಖಿಸುತ್ತಾರೆ.

ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸಯನ್ಸ್ (ಐಐಎಸ್ ಸಿ)ಯ ಅಧ್ಯಯನ ಪ್ರಕಾರ ‘ಬೆಂಗಳೂರಿನಂತಹ ಕಲುಷಿತ ನಗರದ ನಿವಾಸಿಗಳು ಆರೋಗ್ಯದ ವಿಷಯದಲ್ಲಿ ಸ್ವಚ್ಛ ನಗರವೊಂದರ ನಿವಾಸಿಗಳಿಗೆ ಹೋಲಿಸಿದರೆ ಅಸಹಜ ವ್ಯತ್ಯಾಸಗಳನ್ನು ಹೊಂದಿದ್ದಾರೆ’.

ಅಧ್ಯಯನದ ಲೇಖಕರಲ್ಲಿ ಒಬ್ಬರಾದ ಡಾ. ಹೆಚ್. ಪರಮೇಶ್ ಅವರು `101ರಿಪೋರ್ಟರ್ಸ್’ ಜೊತೆಗೆ ಮಾತನಾಡುತ್ತಾ `ವಾಯುಮಾಲಿನ್ಯವು ಶ್ವಾಸಕೋಶದ ಮೇಲಿನ ಹಾಗೂ ಕೆಳಗಿನ ಭಾಗದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಇದರಿಂದಾಗಿ ದೀರ್ಘಕಾಲದ ಕೆಮ್ಮು, ನ್ಯುಮೇನಿಯಾ, ಜ್ವರ, ಹೆಚ್1ಎನ್1 ಇಂಪ್ಲುಯೆಂಝ ಸೇರಿದಂತೆ ಅನೇಕ ಸೋಂಕು ಕಾಯಿಲೆಗಳಿಗೆ ಕಾರಣವಾಗುತ್ತದೆ ಮತ್ತು ಬೆಂಗಳೂರಿನಲ್ಲಿ ವಾಯುಮಾಲಿನ್ಯವು ಇಂತಹ ಖಾಯಿಲೆಗಳಿಗೆ ಪ್ರಮುಖ ಕಾರಣವಾಗಿದೆ’ ಎಂದಿದ್ದಾರೆ.

See also  ಕೂದಲಿಗೆ ಡೈ ಹಚ್ಚಿದರೆ ಸ್ತನದ ಕ್ಯಾನ್ಸರ್ ಅಪಾಯ ಹೆಚ್ಚು!

ಸ್ವಿಟ್ಜರ್‍ಲೆಂಡ್ ಮೂಲದ ಕಂಪೆನಿಯೊಂದರ ವರದಿಯ ಪ್ರಕಾರ ಹೆಚ್ಚಿನ ಪ್ರಮಾಣದ ವಾಯುಮಾಲಿನ್ಯ ಹೊಂದಿರುವ ಪ್ರದೇಶದ ಜನರು ಜ್ವರದಿಂದ ಅನಾರೋಗ್ಯಕ್ಕೆ ಒಳಗಾಗುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಏಕೆಂದರೆ ವಾಯುಗಾಮಿ ಕಣಗಳು “ಘನೀಕರಣ ನ್ಯೂಕ್ಲಿಯಸ್”ಗಳನ್ನು ಒದಗಿಸುತ್ತದೆ, ಇದಕ್ಕೆ ವೈರಸ್ ಹನಿಗಳು ತನ್ನನ್ನು ತಾನು ಜೋಡಿಸಿಕೊಳ್ಳುತ್ತದೆ. ಈ ಕಣಗಳು ವೈರಸ್ ಕಣಗಳನ್ನು ಜೋಡಿಸಿಕೊಂಡು ವಾಯುಗಾಮಿಗಳಾಗಿ ಉಳಿಯುತ್ತವೆ. ಸೀನುವಾಗ ಆವರಿಸುವ ದೂರಕ್ಕಿಂತಲೂ ಹೆಚ್ಚು ದೂರ ಪ್ರಯಾಣಿಸಲು ವೈರಸ್‍ಗೆ ಇದು ಅನುವು ಮಾಡಿಕೊಡುತ್ತದೆ ಎಂದು ಕಂಪನಿಯ ಅಧ್ಯಯನ ತಿಳಿಸುತ್ತದೆ.

ವೈರಸ್ ಹಾಗೂ ಮಾಲಿನ್ಯಕಣಗಳು ಬಿಡುಗಡೆ ಮಾಡುವ ರಾಸಾಯನಿಕ ಪ್ರಕ್ರಿಯೆಗೆ ಜೀವಕೋಶಗಳು ಪ್ರತಿಸ್ಪಂದಿಸುತ್ತವೆ. ಈ ಪ್ರಕ್ರಿಯೆಗೆ ಸೈಟೋಕಿನ್ಸ್ ಎನ್ನುತ್ತಾರೆ. ಇವು ಪ್ರೊಟೀನ್‍ಗಳಾಗಿದ್ದು, ಜೀವಕೋಶಗಳು ಹಾಗೂ ದೇಹದ ಪ್ರತಿರಕ್ಷಣಾ ವ್ಯವಸ್ಥೆಯಿಂದ ಬಿಡುಗಡೆಯಾಗುವ ರಾಸಾಯನಿಕಗಳ ನಡುವೆ ಸಂದೇಶ ವಾಹಕಗಳಾಗಿ ಕಾರ್ಯನಿರ್ವಹಿಸುತ್ತವೆ. ಇದು ಉರಿಯೂತ ಮತ್ತು ದ್ರವಗಳ ಬಿಡುಗಡೆಗೆ ಕಾರಣವಾಗುತ್ತದೆ ಎನ್ನುತ್ತದೆ ಅಧ್ಯಯನ ವರದಿ.

ವೈಟ್‍ಫೀಲ್ಡ್ ರೈಸಿಂಗ್‍ನ ಸದಸ್ಯರಾಗಿರುವ ಜಿಬಿ ಜಮಾಲ್ ಶ್ವಾಸಕೋಶದ ಕಾರ್ಯಚಟುವಟಿಕೆಗೆ ಧಕ್ಕೆಯುಂಟಾದಾಗ ವ್ಯಕ್ತಿಯ ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಬೆಂಗಳೂರಿನಲ್ಲಿರುವ ವಾಯುಮಾಲಿನ್ಯವು ಎಚ್1ಎನ್1ನಂತರ ವಾಯುಗಾಮಿ ಕಾಯಿಲೆಗಳಿಗೆ ಅನುಕೂಲಕರವಾಗುತ್ತಿವೆ ಎಂದು ಹೇಳುತ್ತಾರೆ.

ಹಾಂಗ್‍ಕಾಂಗ್‍ನ ವಿಜ್ಞಾನಿಗಳ ಗುಂಪೊಂದು ಮಾಲಿನ್ಯಕಾರಕಗಳ ದೈನಂದಿನ ಸಾಂದ್ರತೆಯನ್ನು ಅಳೆಯುತ್ತಾ, ಇದರಿಂದಾಗಿ ಉಂಟಾಗುವ ಉಸಿರಾಟ ಹಾಗೂ ಹೃದಯರಕ್ತನಾಳದ ಕಾಯಿಲೆಗೆ ಒಳಗಾಗುವವರ ಸರಾಸರಿಯನ್ನು ಅಂದಾಜಿಸಿದೆ.

ಗಮನಾರ್ಹವಾದ ಅಧ್ಯಯನಗಳ ಪ್ರಕಾರ ಎಲ್ಲಾ ಉಸಿರಾಟದ ಕಾಯಿಲೆಗಳು, ಎಲ್ಲಾ ರೀತಿಯ ಹೃದಯರಕ್ತನಾಳದ ಕಾಯಿಲೆಗಳು, ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆಗಳು, ಅಸ್ತಮಾ, ನ್ಯುಮೇನಿಯಾ, ಇನ್ಪ್ಲುಯೆಂಝಾ ಖಾಯಿಲೆಗಳಿಗಾಗಿ ಆಸ್ಪತ್ರೆಗೆ ದಾಖಲಾಗುವವರ ಹಿನ್ನಲೆಯನ್ನು ಗಮನಿಸಿದಾಗ ನೈಟ್ರೋಜನ್ ಡೈಆಕ್ಸೈಡ್, ಓಝೋನ್, ಪಿಎಂ (ಅತಿಸೂಕ್ಷ್ಮ ಧೂಳಿನ ಕಣ) ಸೇವನೆಯ ಪರಿಣಾಮವನ್ನು ಕಂಡುಕೊಳ್ಳಲಾಗಿದೆ.

ಪರಿಸರವಾದಿ ಅಕ್ಷಯ್ ಹೆಬ್ಳೀಕರ್ ಅವರ ಪ್ರಕಾರ ‘ಹೆಚ್ಚಿನ ಒತ್ತಡ ಮತ್ತು ಗಾಳಿಯಲ್ಲಿ ಮಾಲಿನ್ಯಕಾರಕಗಳ ಸಾಂದ್ರತೆಯಿಂದಾಗಿ ನೈಸರ್ಗಿಕ ಗಾಳಿಯ ಪ್ರವಾಹಗಳು ಚದುರಿಹೋಗಲು ಸಾಧ್ಯವಾಗುತ್ತಿಲ್ಲ, ಇವು ವಾಯುಗಾಮಿ ರೋಗಗಳನ್ನು ವ್ಯಾಪಕವಾಗಿ ಹರಡಲು ಕಾರಣವಾಗುತ್ತವೆ.’

ಹೆಚ್ಚುತ್ತಿರುವ ಮಾಲಿನ್ಯವನ್ನು ನಿಭಾಯಿಸಲು ಮಾರ್ಗಸೂಚಿ ಹಾಗೂ ಗುಣಮಟ್ಟದ ಶಿಕ್ಷಣದ ಅಗತ್ಯತೆಯನ್ನು ಒತ್ತಿಹೇಳುತ್ತಾರೆ ಶ್ವಾಸಕೋಶಶಾಸ್ತ್ರಜ್ಞ ಡಾ. ಜಿ. ಶಶಿಧರ. ಜನಸಂಖ್ಯೆಯ ನಿಯಂತ್ರಣ, ಹಸಿರನ್ನು ಹೆಚ್ಚಿಸುವುದು, ಸರಿಯಾದ ಘನತ್ಯಾಜ್ಯ ನಿರ್ವಹಣೆ ಕೂಡಾ ಈ ಸಮಸ್ಯೆಯನ್ನು ಪರಿಹರಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಅವರು. 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು