ಪಾಟ್ನಾ: ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೇಂದ್ರ ಸರ್ಕಾರವು ರಾಜ್ಯಕ್ಕೆ ಸಮರ್ಪಕವಾಗಿ ಕೋವಿಡ್ ಲಸಿಕೆಗಳನ್ನು ಪೂರೈಸುತ್ತಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೋಮವಾರ ಆರೋಪಿಸಿದ್ದಾರೆ.
ನಿತೀಶ್ ಕುಮಾರ್ ಸೋಮವಾರ ಹಿರಿಯ ಅಧಿಕಾರಿಗಳ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿ ಆಸ್ಪತ್ರೆಗಳಲ್ಲಿ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
“ಕೇಂದ್ರವು ಬಿಹಾರಕ್ಕೆ ಸಮರ್ಪಕವಾಗಿ ಲಸಿಕೆಗಳನ್ನು ಪೂರೈಸದಿದ್ದರೆ, ರಾಜ್ಯ ಸರ್ಕಾರವು ತನ್ನ ಸ್ವಂತ ವೆಚ್ಚದಲ್ಲಿ ಅವುಗಳನ್ನು ಖರೀದಿಸುತ್ತದೆ” ಎಂದು ನಿತೀಶ್ ಕುಮಾರ್ ಹೇಳಿದರು, ರಾಜ್ಯದಲ್ಲಿ ಲಸಿಕೆ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಮಾರ್ಚ್ ಕೊನೆಯ ವಾರದಲ್ಲಿ ಆಸ್ಪತ್ರೆಗಳಲ್ಲಿ ಲಸಿಕೆ ದಾಸ್ತಾನು ಮುಗಿದಿದೆ, ಆದ್ದರಿಂದ ಬಿಹಾರ ಸರ್ಕಾರವು ಒಂದು ಲಕ್ಷ ಲಸಿಕೆಗಳನ್ನು ಪೂರೈಸಲು ಕೇಂದ್ರಕ್ಕೆ ಪತ್ರ ಬರೆದಿದೆ ಎಂದು ಮುಖ್ಯಮಂತ್ರಿ ಹೇಳಿದರು. ಆದರೆ ಕೇಂದ್ರದಿಂದ ಈವರೆಗೆ ಲಸಿಕೆ ಪೂರೈಕೆಯಾಗಿಲ್ಲ ಎಂದು ವಿವರಿಸಿದರು.
ಸರ್ಕಾರಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಔಷಧಿ, ಹಾಸಿಗೆಗಳು, ವೆಂಟಿಲೇಟರ್‌ಗಳು, ಆಮ್ಲಜನಕ ಸಿಲಿಂಡರ್‌ಗಳು, ಆಂಬ್ಯುಲೆನ್ಸ್‌ಗಳು ಮತ್ತು ಇತರ ಸೌಲಭ್ಯ ಸಜ್ಜುಮಾಡುವಂತೆ ಸೂಚಿಸಿದರು. ಫೇಸ್ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೈ ತೊಳೆಯುವುದು ಸೇರಿದಂತೆ ಕೋವಿಡ್ ಪ್ರೋಟೋಕಾಲ್ ಅನುಸರಿಸುವಂತೆ ಅವರು ಬಿಹಾರ ಜನತೆಗೆ ಮನವಿ ಮಾಡಿದರು.