ಮಂಗಳೂರು: ಕರಾವಳಿಯ ಜನರು ಆದರಾತಿಥ್ಯಕ್ಕೆ ಹೆಸರುವಾಸಿ. ವಿಶ್ವದೆಲ್ಲೆಡೆ ಕರಾವಳಿಗರ ಹೋಟೆಲ್‌ಗಳನ್ನು ಕಾಣಬಹುದು. ಅದೇ ರೀತಿ ಮಂಗಳೂರಿನ ಹೃದಯ ಭಾಗ ಜೈಲ್ ರೋಡ್‌ನಲ್ಲಿ ವರ್ಷದ ಹಿಂದೆ ಆರಂಭವಾದ ಕಾಮಧೇನು ಕೆಫೆ ಕೂಡ ಹಸಿವು ಎಂದು ಬಂದವರಿಗೆ ಶುಚಿ, ರುಚಿಯಾದ ಆಹಾರ ನೀಡಿ ಜನರಕ್ಕೆ ಹೃದಯಕ್ಕೆ ಹತ್ತಿರವಾಗಿದೆ. ಅಲ್ಲದೇ ನಿರ್ಗತಿಕರು, ಕಾರ್ಮಿಕರಿಗೆ ಉಚಿತವಾಗಿ ಆಹಾರ ನೀಡುವ ಮೂಲಕ ನೈಜ ಅರ್ಥದಲ್ಲಿ ಕಾಮಧೇನುವಾಗಿದೆ.
ಬಹುಮುಖ ಉದ್ಯಮದ ಸಾಹಸಿ ಸಚಿನ್ ಕರ್ಕೇರ ಈ ಸೂಪರ್ ಕೆಫೆ ಮಾಲೀಕರು. ಹೋಟೆಲ್ ಆರಂಭಿಸುವ ಮೊದಲು ಜಿಮ್, ಫಿಶ್ ಬ್ಯುಸಿನೆಸ್‌ನಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಆ ಉದ್ಯಮಗಳಲ್ಲಿ ಅನಾರೋಗ್ಯಕರ ಸ್ಪರ್ಧೆಯಿಂದ ಬೇಸರಗೊಂಡಿದ್ದರು. ಸಚಿನ್ ಯಾವುದೇ ಬ್ಯುಸಿನೆಸ್ ಮಾಡಿದರೂ ಗುಣಮಟ್ಟದಲ್ಲಿ ರಾಜಿಯಾಗುವ ಸ್ವಭಾವದವರಲ್ಲ. ಕಡಿಮೆ ದರಕ್ಕೆ ಕಳಪೆ ವಸ್ತು ನೀಡಿ ಗ್ರಾಹಕರಿಗೆ ಮೋಸ ಮಾಡುವ ಮನೋಭಾವ ಎಂದಿಗೂ ಇವರಿಗೆ ಹಿಡಿಸುವುದಿಲ್ಲ. ಇದೇ ಕಾರಣದಿಂದ ಕೆಲ ವ್ಯವಹಾರಗಳಲ್ಲಿ ಸೋತಿದ್ದೇನೆ. ಜನರಿಗೆ ಉತ್ತಮ ಗುಣಮಟ್ಟದ ಆಹಾರ ನೀಡಬೇಕು ಎಂಬ ಉದ್ದೇಶದಿಂದ ಹಿಂದಿನ ಉದ್ಯಮಗಳನ್ನೆಲ್ಲ ಬಿಟ್ಟು ವರ್ಷದ ಹಿಂದೆ ಕಾಮಧೇನು ಕೆಫೆ ಆರಂಭಿಸಿದೆ ಎನ್ನುತ್ತಾರೆ ಸಚಿನ್.
ಗುಣಮಟ್ಟ, ಸ್ವಚ್ಛತೆಗೆ ಆದ್ಯತೆ: ಆಹಾರದ ಗುಣಮಟ್ಟ, ರುಚಿ, ಸ್ವಚ್ಛತೆಗೆ ಆದ್ಯತೆ ನಮ್ಮ ಹೋಟೆಲ್ ಜನರ ಮನಗೆಲ್ಲಲು ಮುಖ್ಯ ಕಾರಣ ಎನ್ನುತ್ತಾರೆ ಸಚಿನ್, ಹೋಟೆಲ್ ಉದ್ಯಮದಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಇಲ್ಲದೇ ಹೋದಲ್ಲಿ ಉಳಿದೆಲ್ಲ ಅಂಶಗಳು ಗೌಣವಾಗುತ್ತವೆ ಎಂಬುದು ಕರ್ಕೇರ ಮನದ ಮನದ ಮಾತು. ಅದೇರೀತಿ ರಾಸಾಯನಿಕ ಬಳಸಿದ ವಸ್ತುಗಳನ್ನು ನಮ್ಮ ಕೆಫೆಯಲ್ಲಿಇಲ್ಲ ಎನ್ನುತ್ತಾರೆ.
ರಾಸಾಯನಿಕ ರಹಿತ ಬೆಲ್ಲದ ಕಾಫಿ ಬೇಕಿದ್ದರೆ ಬನ್ನಿ: ಬೆಲ್ಲದಿಂದ ತಯಾರಿಸಿದ ಎಳ್ಳು, ಕೋಕಂ ಜ್ಯೂಸ್ ಗ್ರಾಹಕರ ಅಚ್ಚುಮೆಚ್ಚಿನ ಬೇಸಿಗೆಯ ಪೇಯವಾಗಿದೆ. ಕಲರಿಂಗ್ ಪೌಡರ್, ಅಡುಗೆಗೆ ಬಳಸುವ ವಿವಿಧ ರಾಸಾಯನಿಕಗಳಿಂದ ದೂರವಿರುವ ಸಚಿನ್ ಕಾಫಿ ತಯಾರಿಗೆ ಸಕ್ಕರೆ ಬಳಸುವುದಿಲ್ಲ. ಬದಲಿಗೆ ಬೆಲ್ಲದಿಂದಲೇ ಕಾಫಿ, ಚಹಾ ತಯಾರಿ ಮಾಡುವುದು ವಿಶೇಷ.
ಅಸ್ವಸ್ಥರು, ಕಾರ್ಮಿಕರಿಗೆ ಉಚಿತ ತಿಂಡಿ ನೆರವು: 2010ರಲ್ಲಿ ನಾನು ಆರ್ಮಿ ಬೇಸ್‌ನಲ್ಲಿದ್ದಾಗ ಅಮೆರಿಕ ಸೈನ್ಯದ ಮಹಿಳೆಯೊಬ್ಬರು ನನಗೆ ಉಚಿತವಾಗಿ ಆಹಾರ ಒದಗಿಸುವ ಕಾರ್ಯ ಮಾಡುತ್ತಿದ್ದರು. ಇದೇ ನನ್ನ ಆಹಾರ ನೆರವು ಯೋಜನೆಗೆ ಮೂಲಕಾರಣ. ಹೋಟೆಲ್ ಆರಂಭಿಸಿದ ಬಳಿಕ ಅದೇ ಆಲೋಚನೆಗಳು ಮರುಕಳಿಸಿತು. ನಾನೂ ಕೂಡ ಬಡವರು, ನೊಂದವರಿಗೆ ಆಹಾರ ನೀಡುವ ಕೆಲಸ ಮಾಡಬೇಕೆಂಬ ಆಲೋಚನೆ ದಿನದಿಂದ ದಿನಕ್ಕೆ ದಟ್ಟವಾಯಿತು. ಇದರ ಫಲವಾಗಿ ಸೆಕ್ಯೂರಿಟಿ ಗಾರ್ಡ್, ತ್ಯಾಜ್ಯವಿಲೇವಾರಿ ಮಾಡುವವರು, ಪೌರಕಾರ್ಮಿಕರು, ಮಾನಸಿಕ ಅಸ್ವಸ್ಥರು ಸೇರಿದಂತೆ ಅಗತ್ಯವಿರುವವರಿಗೆ ಉಚಿತ ಆಹಾರ ನೀಡುತ್ತಿದ್ದೇನೆ. ಇಲ್ಲಿಯೂ ಕೂಡ ಹಣ, ಶ್ರಮ ವ್ಯರ್ಥವಾಗದಂತೆ ಮುನ್ನೆಚ್ಚರಿಕೆ ವಹಿಸುತ್ತೇನೆ ಎನ್ನುತ್ತಾರೆ ಕರ್ಕೇರ. ಪ್ರತಿದಿನ 23 ಮಂದಿಗೆ ಉಚಿತ ಆಹಾರ ಒದಗಿಸುತ್ತಿದ್ದೇನೆ. ಕೆಲವೊಮ್ಮೆ ಬೀದಿ ಗುಡಿಸುವ ಪೌರಕಾರ್ಮಿಕರು, ಇತರೆ ಕೆಲಸಗಾರರ ಸಂಖ್ಯೆ ಹೆಚ್ಚಾಗುವುದು ಇದೆ. ಬಿಸಿಲಿನಲ್ಲಿ ದಣಿದು ಕೆಲಸ ಮಾಡುತ್ತಿರುವರನ್ನು ಕರೆದು ಆಹಾರ ನೀಡುತ್ತೇನೆ. ನಾನು ಯಾರನ್ನೇ ಇಂಪ್ರೆಸ್ ಮಾಡಲು ಈ ಕಾರ್ಯ ಮಾಡುತ್ತಿಲ್ಲ. ಹಾಗಾಗಿ ಗಿರಾಕಿಗಳು ಆಹಾರ ನೆರವಿಗೆ ಕೊಡುಗೆ ನೀಡಲು ಮುಂದಾದರೂ ತೆಗೆದುಕೊಳ್ಳುವುದಿಲ್ಲ ಎನ್ನುತ್ತಾರೆ ಸಚಿನ್.
ಒಬ್ಬರೇ ಸಾರಥಿ: ಕಾಮಧೇನು ಕೆಫೆಯಲ್ಲಿ ಕೆಲಸಗಾರರರಿಲ್ಲ. ಸಚಿನ್ ಅವರೇ ಅಡುಗೆ ತಯಾರಿ, ಸ್ವಚ್ಛತೆ ಸೇರಿದಂತೆ ಪ್ರತಿ ಕಾರ್ಯವನ್ನು ನಿರ್ವಹಿಸುತ್ತಾರೆ. ಇಷ್ಟೆಲ್ಲ ಕೆಲಸವನ್ನು ಒಬ್ಬರೇ ನಿರ್ವಹಿಸುವುದು ತ್ರಾಸವಲ್ಲವೇ ಎಂದು ಪ್ರಶ್ನಿಸಿದರೆ. ಇದರಲ್ಲಿ ಹೆಚ್ಚುಗಾರಿಕೆಯೇನಿಲ್ಲ. ಪ್ರತಿ ಕೆಲಸವನ್ನು ಸ್ಟೋರ್ಟಿವ್ ಆಗಿ ತೆಗೆದುಕೊಳ್ಳುವ ಕಾರಣ ಆಯಾಸದ ಅನುಭವವೇ ಆಗುವುದಿಲ್ಲ ಎಂದು ನಸುನಗುತ್ತಾರೆ ಕರ್ಕೇರ.
ಪಾತ್ರೆ ತೊಳೆಯಲು ಡಿಷ್‌ವಾಷರ್: ಮಂಗಳೂರಿನ ದೊಡ್ಡ ಹೋಟೆಲ್‌ಗಳಲ್ಲಿ ಪಾತ್ರೆಗಳನ್ನು ತೊಳೆಯಲು ಕಾರ್ಮಿಕರನ್ನು ಬಳಕೆ ಮಾಡುವುದು ಮಾಮೂಲಿ. ಆದರೆ ಸಚಿನ್ ಅವರು ತಮ್ಮ ಹೋಟೆಲ್‌ನಲ್ಲಿ ಡಿಷ್‌ವಾಷರ್ ಬಳಕೆ ಮಾಡುತ್ತಿದ್ದು, ಉಪ್ಪಿನ ನೀರು, ಬಿಸಿನೀರು, ಒಣಗುವಿಕೆ ಸೇರಿದಂತೆ ಮೂರಹಂತದಲ್ಲಿ ಲೋಟಗಳನ್ನು ತೊಳೆಯುವ ಪ್ರಕ್ರಿಯೆ ನಡೆಯುತ್ತದೆ. ಕಾರ್ಮಿಕರನ್ನು ಬಳಸಿ 50 ಲೋಟ ತೊಳೆಯಲು 10ರಿಂದ 12 ಲೀಟರ್ ನೀರು ಅಗತ್ಯ ಆದರೆ ಯಂತ್ರದ ಮೂಲಕ ತೊಳೆಯುವುದರಿಂದ 4 ಲೀಟರ್ ಸಾಕಾಗುತ್ತದೆ.
ಹೆಲ್ತ್‌ಟಿಪ್ಸ್: ಸಚಿನ್ ಅವರು ಹೋಟೆಲ್ ಉದ್ಯಮವನ್ನು ಕೇವಲ ಹಣ ಗಳಿಸುವ ಉದ್ದೇಶದಿಂದ ನಡೆಸುತ್ತಿಲ್ಲ. ಬದಲಿಗೆ ಪ್ರತಿಗ್ರಾಹಕರು ಅವರಿಗೆ ದೇವರದ್ದಂತೆ. ಹೀಗಾಗಿ ಸಚಿನ್‌ರಲ್ಲಿ ಕೆಲವರು ಹೆಲ್ತ್
ಟಿಪ್ಸ್ ಪಡೆಯುವುದಿದೆ. ಕೆಲವರು ಕಚೇರಿಯ ಒತ್ತಡದ ನಡುವೆ ವಿಪರೀತವಾಗಿ ತಿನ್ನುವ ಹವ್ಯಾಸ ರೂಢಿಸಿಕೊಂಡಿರುತ್ತಾರೆ. ಇದರಿಂದ ಆರೋಗ್ಯ ಸಮಸ್ಯೆಗಳು ಬಹುವಾಗಿ ಕಾಡುತ್ತವೆ. ಇಂತಹವರಿಗೆ ಅಗತ್ಯವಿದ್ದಷ್ಟು, ಹಸಿವಾದ ವೇಳೆ ಮಾತ್ರ ತಿನ್ನುವಂತೆ ಸಲಹೆ ನೀಡುತ್ತಾರೆ.
ಮೆನು ಹೀಗಿದೆ: ಬಿಸ್ಕುಟ್ ರೊಟ್ಟಿ, ಸಂಜೀರ, ಚಟ್ಟಂಬಡೆ, ಬನ್ಸ್, ಸಮೋಸ, ಜ್ಯೂಸ್‌ಗಳಲ್ಲಿ ಎಳ್ಳು, ಕೋಕಂ, ಪುನರ್ಪುಳಿ, ಬೆಳಗ್ಗೆ 8.30ರಿಂದ 1ರವರೆಗೆ ಮಧ್ಯಾಹ್ನ 3ರಿಂದ 8ರವರೆಗೆ ಕೆಫೆ ಕಾರ್ಯಾಚರಿಸುತ್ತದೆ.
ಸಚಿನ್ ಅವರು ಸಮಾಜಮುಖಿ ಮನೋಧರ್ಮ ಹೊಂದಿದ ವ್ಯಕ್ತಿ. ಅವರು ಗ್ರಾಹಕರೊಂದಿಗೆ ನಡೆದುಕೊಳ್ಳುವ ರೀತಿ ಎಲ್ಲ ಹೋಟೆಲ್ ಮಾಲೀಕರಿಗೂ ಮಾದರಿ. ಕೆಫೆ ಸಣ್ಣದಾಗಿದ್ದರೂ ಅವರ ಹೃದಯ ವಿಶಾಲವಾದುದ್ದು. ಕೆಫೆಯಲ್ಲಿ ಒಂದು ಪಾಸಿಟಿವ್ ವೈಬ್ ಇದೆ. ಇಲ್ಲಿನ ಸಂಜೀರ ವಿಶಿಷ್ಟ ರುಚಿ ಹೊಂದಿದೆ. ಪ್ರತಿ ಗ್ರಾಹಕರೊಂದಿಗೆ ಆಹಾರದ ಕುರಿತು ಫೀಡ್ ಬ್ಯಾಕ್ ಪಡೆದುಕೊಳ್ಳುವ ವಿಧಾನ ನನಗೆ ಹಿಡಿಸಿದೆ. ಅಲ್ಲದೆ ಅವರು ನಮಗೆ ಹೆಲ್ತ್ ಟಿಪ್ಸ್ ನೀಡುತ್ತಿದ್ದು, ಆರೋಗ್ಯ ಮಾರ್ಗದರ್ಶನ ನೀಡುವ ಮಾಸ್ಟರ್ ಆಗಿದ್ದಾರೆ.
ಶ್ರೇಯಸ್ ಪ್ರತಿನಿತ್ಯ ಭೇಟಿ ನೀಡುವ ಗ್ರಾಹಕ
7ತಿಂಗಳಿನಿಂದ ಕೆಫೆಗೆ ಬರುತ್ತಿದ್ದೇನೆ. ಇಲ್ಲಿನ ಕಾಫಿ ನನಗೆ ಇಷ್ಟ. ಬೆಲ್ಲದ ಕಾಫಿ ಆರೋಗ್ಯಕ್ಕೆ ಉತ್ತಮ. ಸಚಿನ್ ಅವರ ನಡತೆ ಉತ್ತಮವಾಗಿದ್ದು, ಒಮ್ಮೆ ಬಂದವರು ಮತ್ತೊಮ್ಮೆ ಬರಬೇಕು ಎಂದು ಇಚ್ಛೆ ಪಡುತ್ತಾರೆ.
ವರದರಾಜ್ ಗ್ರಾಹಕ