News Kannada
Tuesday, July 05 2022

ನುಡಿಚಿತ್ರ

ಈ ಕನ್ನಡ ಅಭಿಮಾನಿಗೆ ಬಸ್ಸೇ ಕನ್ನಡದ ತೇರು - 1 min read

Photo Credit :

ಈ ಕನ್ನಡ ಅಭಿಮಾನಿಗೆ ಬಸ್ಸೇ ಕನ್ನಡದ ತೇರು

ನವೆಂಬರ್ ಬಂತೆಂದರೆ ಎಲ್ಲೆಡೆಯೂ ಕನ್ನಡದ ಡಿಂಡಿಮ ಮೊಳಗುತ್ತದೆ. ಅಲ್ಲಲ್ಲಿ ಕನ್ನಡದ ಕಾರ್ಯಕ್ರಮಗಳು ನಡೆಯುತ್ತವೆ. ಒಂದಷ್ಟು ಕಾರ್ಯಕ್ರಮಗಳು ಸರ್ಕಾರದ ಅನುದಾನದಲ್ಲಿ ನಡೆದರೆ ಮತ್ತೆ ಕೆಲವು ಸಾರ್ವಜನಿಕರು ನೀಡುವ ಚಂದಾ ಹಣದಲ್ಲಿ ನಡೆಯುತ್ತದೆ.

ಕನ್ನಡಾಂಬೆಯನ್ನು ಪ್ರತಿಷ್ಠಾಪಿಸಿ, ಶಾಮಿಯಾನ ಹಾಕಿಸಿ ಊರಿಗೆಲ್ಲಾ ಕೇಳುವಂತೆ ಧ್ವನಿವರ್ಧಕದಲ್ಲಿ ಕನ್ನಡದ ಹಾಡುಗಳನ್ನು ಹಾಡಿಸಿಬಿಟ್ಟರೆ ಅಲ್ಲಿಗೆ ಕನ್ನಡ ರಾಜ್ಯೋತ್ಸವ ಮುಗಿದು ಹೋಯಿತು ಎಂದು ನಂಬುವವರೂ ಇದ್ದಾರೆ. ಕನ್ನಡ ರಾಜ್ಯೋತ್ಸವವನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಆಚರಿಸಿದರೆ ಕೆಎಸ್ಆರ್ ಟಿಸಿಯಲ್ಲಿ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿರುವ ಎಂ.ನಟರಾಜು ಕುಂದೂರುರವರು ರಾಜ್ಯೋತ್ಸವವನ್ನು ಆಚರಿಸುವ ರೀತಿಯೇ ವಿಭಿನ್ನ ಮತ್ತು ವಿಶಿಷ್ಠವಾಗಿದೆ.

ಹಾಗೆ ನೋಡಿದರೆ ನಿರ್ವಾಹಕ ನಟರಾಜು ಕುಂದೂರುರವರು ಕನ್ನಡವೇ ಉಸಿರು ಎಂಬಂತೆ ಬಾಳುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಇವರು ರಾಜ್ಯೋತ್ಸವ ಆಚರಣೆಗಾಗಿ ಪ್ರತಿ ತಿಂಗಳು ತಮಗೆ ಬರುವ ಸಂಬಳದಲ್ಲಿ ನಿಗದಿತ 1000 ಹಣವನ್ನು ತೆಗೆದಿಡುತ್ತಾರೆ. ಆ ಬಳಿಕ ನವೆಂಬರ್ ತಿಂಗಳಲ್ಲಿ ಆ ಹಣವನ್ನು ಕನ್ನಡದ ಕೆಲಸಗಳಿಗಾಗಿ ವಿನಿಯೋಗಿಸುವುದು ಅವರು ನಡೆಸಿಕೊಂಡು ಬಂದಿರುವ ಕ್ರಮವಾಗಿದೆ.

ಮೂಲತಃ  ದಾವಣಗೆರೆಯ ಹೊನ್ನಾಳಿಯ  ಕುಂದೂರಿನವರಾದ ಎಂ.ನಟರಾಜುರವರು 1981 ಜೂನ್ 1ರಂದು ಗುರುಮೂರ್ತಯ್ಯ ಹಾಗೂ ನಾಗಮ್ಮ ದಂಪತಿಗಳ ಪುತ್ರರಾಗಿ ಜನಿಸಿದರು. ಬಡಕುಟುಂಬದಲ್ಲಿ ಹುಟ್ಟಿದ್ದರಿಂದ ತಮ್ಮ ವಿದ್ಯಾಭ್ಯಾಸವನ್ನು ಕಡಲೆಕಾಯಿ ಮಾರುತ್ತಲೇ ಮಾಡಿದರು.  ಎಸ್ಎಸ್ಎಲ್ ಸಿ ನಂತರ  ದ್ವಿತೀಯ ಪಿಯುಸಿ ಮುಗಿಸಿದ ಅವರು ಬಿಎ ಪದವಿ ಮಾಡುತ್ತಿದ್ದಾಗಲೇ ಕೆಎಸ್ಆರ್ ಸಿ ಸಂಸ್ಥೆಯಲ್ಲಿ ನಿರ್ವಾಹಕರಾಗಿ ಕೆಲಸಕ್ಕೆ ಸೇರಿದರು. ಆ ನಂತರ ಅವರು  ಕರ್ತವ್ಯ ನಿರ್ವಹಿಸುತ್ತಲೇ ಕನ್ನಡದ ಸೇವೆಗೆ ತಮ್ಮ ಬದುಕನ್ನು ಮುಡಿಪಾಗಿಟ್ಟರು.

ನಟರಾಜುರವರಿಗೆ  ಮೊದಲಿನಿಂದಲೂ ಕನ್ನಡದ ಬಗ್ಗೆ ಅಪಾರ ಕಾಳಜಿ. ಹಾಗಾಗಿ  ಸಾರಿಗೆ ಇಲಾಖೆಗೆ ಕೆಲಸಕ್ಕೆ ಸೇರುವ ಮೊದಲೇ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸುತ್ತಿದ್ದರು.  ಆದರೆ ಅದನ್ನೇ ಒಂದಷ್ಟು ಬದಲಾವಣೆ ಮಾಡಿಕೊಂಡು ಪ್ರಯಾಣಿಕರಿಗೆ ರಾಜ್ಯೋತ್ಸವದ ಸಮಯದಲ್ಲಿ ಪ್ರಶ್ನೆ ಕೇಳುವುದು, ಕನ್ನಡ ಗೀತೆಯ ಬಗ್ಗೆ ಪರಿಚಯ ಮಾಡುವುದು ಸರಿಯಾದ ಉತ್ತರ ನೀಡಿದರೆ ಅಲ್ಲೇ ಸಾಹಿತ್ಯ ಪುಸ್ತಕಗಳ ಬಹುಮಾನವನ್ನು ನೀಡುವ ಮೂಲಕ ಕನ್ನಡದ ಏಳ್ಗೆಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ.

ರಾಜ್ಯೋತ್ಸವ ಬಂತೆಂದರೆ ನಟರಾಜುರವರು ತಾವು ಕಾರ್ಯ ನಿರ್ವಹಿಸುವ ಬಸ್ ಅನ್ನೇ ಕನ್ನಡದ ತೇರನ್ನಾಗಿ ಮಾಡಿ ಪ್ರಯಾಣಿಕರಲ್ಲಿ ಕನ್ನಡ ಸಾಹಿತ್ಯದ ಅಭಿರುಚಿ ಬೆಳೆಸಿ ಅವರ ಬುದ್ದಿಗೆ ಕಸರತ್ತು ನೀಡಿ ಪ್ರೋತ್ಸಾಹಿಸುವುದು ಅವರ ಉದ್ದೇಶವಾಗಿರುತ್ತದೆ.  ಇನ್ನು ರಾಜ್ಯೋತ್ಸವದ ದಿನ ಬಸ್ಸನ್ನೇರಿದ ಪ್ರಯಾಣಿಕ ಒಂದು ಕ್ಷಣ ತಬ್ಬಿಬ್ಬಾಗಿ ಬಿಡುತ್ತಾನೆ. ಏಕೆಂದರೆ ಬಸ್ ಒಂದು ರೀತಿಯಲ್ಲಿ ಕನ್ನಡ ಭಂಡಾರದ ಮನೆಯಾಗಿ ಬಿಡುತ್ತದೆ.  ಬಸ್ ನಲ್ಲಿ ಕನ್ನಡದ ಕವಿಗಳು, ಸಾಹಿತ್ಯ ಪುಸ್ತಕಗಳು, 1915 ರಿಂದ ಇಲ್ಲಿಯವರೆಗೆ  ನಡೆದ ಎಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರುಗಳ ಭಾವಚಿತ್ರಗಳು, 425 ನಾಡಗೀತೆಗಳು ಕರ್ನಾಟಕದ ಜಿಲ್ಲೆಗಳ, ತಾಲ್ಲೂಕುಗಳ, ನದಿಗಳ ಹೆಸರುಗಳು ಹೀಗೆ ಒಂದೇ, ಎರಡೇ, ನೂರಾರು ವೈಶಿಷ್ಟ್ಯತೆಗಳು ಪ್ರಯಾಣಿಕರ ಗಮನಸೆಳೆಯುತ್ತದೆ.

See also  ಓಣಂ ಹಬ್ಬದ ಸಂಭ್ರಮಕ್ಕೆ ಕೊರೋನಾ ಕರಿನೆರಳು

ಇನ್ನು ನಟರಾಜುರವರ ಕನ್ನಡದ ಸೇವೆ ಕೇವಲ ಒಂದು ದಿನ, ತಿಂಗಳಿಗೆ ಮಾತ್ರವಲ್ಲ ವರ್ಷಪೂರ್ತಿ ಇವರು ಒಂದಲ್ಲಾ ಒಂದು ರೀತಿಯಲ್ಲಿ ಕನ್ನಡದ ಸೇವೆ ಮಾಡುತ್ತಲೇ ಇರುತ್ತಾರೆ. ವಾರದ ರಜೆಯಲ್ಲಿ ಪಕ್ಕದ ಊರುಗಳ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಆ ವಿದ್ಯಾಥರ್ಿಗಳಿಗೆ ರಾಜ್ಯೋತ್ಸವ ಆಚರಿಸುವುದು ಹೇಗೆ ಮತ್ತು ಕನರ್ಾಟಕದ ಬಗ್ಗೆ ಮಾಹಿತಿಯನ್ನು ನೀಡಿ ಅವರಲ್ಲಿ ಕನ್ನಡದ ಕಿಚ್ಚನ್ನು ಹಚ್ಚುವ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ.  

ಕವಿ, ಬರಹಗಾರರೂ ಆಗಿರುವ ಇವರು ಹಲವಾರು ಚುಟುಕು ಕವನಗಳನ್ನು ಬರೆದಿದ್ದಾರೆ.  ಈ ಪೈಕಿ ನನ್ನ ಶಾಲೆ ಕವನಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಬಹುಮಾನವನ್ನು ಕೂಡ ಪಡೆದಿದ್ದಾರೆ. ಬಸ್ ಪ್ರಯಾಣಿಕರಿಗೆ ಒಂದಷ್ಟು ಸಂದೇಶ ನೀಡುವ ಮೂಲಕ ನಾವು ಕನ್ನಡಿಗರು ಎಂಬುವುದನ್ನು ಹೆಮ್ಮೆಯಿಂದ ಹೇಳುವಂತೆ ಮಾಡಿದ್ದಾರೆ ಅದರಲ್ಲಿನ ಪ್ರಯಾಣಿಕರೇ ಧೈರ್ಯದಿಂದ ಹೇಳಿಕೊಳ್ಳಿ ನಾವು ಕನ್ನಡಿಗರು, ನೀವು ಎಲ್ಲೇ ಇರಿ ಹೇಗೇ ಇರಿ ನಿಮ್ಮ ಮನೆ ಮತ್ತು ಮನ ಇವೆರಡೂ ಕನ್ನಡಮಯವಾಗಿರಲಿ.  ದೀಪಾವಳಿ ಹಬ್ಬದ ದಿನ ಯಾವ ರೀತಿ ನಿಮ್ಮ ಮನೆಗಳ ಮೇಲೆ ಆಕಾಶಬುಟ್ಟಿಯನ್ನು ಹಾಕುತ್ತೀರೋ ಅದೇ ರೀತಿ ನವೆಂಬರ್ ತಿಂಗಳು ಮುಗಿಯುವವರೆಗೂ

ನಿಮ್ಮ ಮನೆಗಳ ಮೇಲೆ ಕನ್ನಡ ಬಾವುಟ ಹಾರಿಸಿ ನಾವು ಕನ್ನಡಿಗರು ಎಂಬುದನ್ನು ತೋರಿಸಿ ಎಂಬ ಸಂದೇಶಗಳು ಕನ್ನಡಿಗರ ಮನಸೆಳೆಯುತ್ತದೆ.  ಈಗಾಗಲೇ ನಟರಾಜ್ ಕುಂದೂರು ಅವರ ಕನ್ನಡ ಸೇವೆಯನ್ನು ಗುರುತಿಸಿ ರಾಜ್ಯದ ಹಲವು ಸಂಘ-ಸಂಸ್ಥೆಗಳು ಮತ್ತು ಇಲಾಖೆಗಳು ಪ್ರಶಸ್ತಿ ನೀಡಿ ಗೌರವಿಸಿವೆ. ಕೆ.ಆರ್.ನಗರದ ಗ್ರಾಮಾಂತರ ಬುದ್ದಿಜೀವಿಗಳ ಬಳಗ (2005)

ಸುವರ್ಣ ಕರ್ನಾಟಕ ಸೇವಾ ಪ್ರಶಸ್ತಿ ನೀಡಿದ್ದರೆ,  ತುಮಕೂರು ಅಭಿಮಾನಿ ಸಂಘವು (2005)  ಅಪ್ಪಟ ಕನ್ನಡ ಅಭಿಮಾನಿ ಎಂಬ ಪ್ರಶಸ್ತಿ,  ಕಾಸರಗೂಡಿನ ಕನ್ನಡ ಅಭಿಮಾನಿಗಳು ಹಾಗೂ ಗಡಿನಾಡ ಧ್ವನಿ ಪತ್ರಿಕೆ, ಕಾಸರಗೂಡು ಇವರು ಗಡಿನಾಡ ಧ್ವನಿ ಎಂಬ ರಾಜ್ಯ ಪ್ರಶಸ್ತಿ ಹಾಗೂ ಗಡಿನಾಡ ಕನ್ನಡ ಅಭಿಮಾನಿ ಎಂದು ಹೊಗಳಿದ್ದಾರೆ.  ಸಿಂಹಿಳೀಯರ ಒಕ್ಕೂಟ, ದಾವಣಗೆರೆ ಇವರು ಕನ್ನಡ ಸೇವಕ (2007) ಎಂಬ ಪ್ರಶಸ್ತಿಯನ್ನು, ದಾವಣಗೆರೆ ಜಿಲ್ಲೆಯಿಂದ ವರ್ಷದ ಕನ್ನಡಿಗ  (2010) ಎಂಬ ಪ್ರಶಸ್ತಿ,  ಚೇತನ ಕಲಾ ಸಂಸ್ಥೆ, ಅಮೃತಧಾರೆ ಸಂಸ್ಥೆ, ನವಕರ್ನಾಟಕ ಕನ್ನಡ ಸಂಘ, ಬೆಂಗಳೂರುರವರಿಂದ ಇವರಿಗೆ ವಿಶ್ವ ಚೇತನ ರತ್ನ ಪ್ರಶಸ್ತಿ, ಸುವರ್ಣ

ಕರ್ನಾಟಕ ಕಾಮಧೇನು ಪ್ರಶಸ್ತಿ, ಅಮೋಘವರ್ಷ ಪ್ರಶಸ್ತಿ, ಸಮಾಜಭೂಷಣ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಕನ್ನಡ ಕ್ರಿಯಾ ಸಮಿತಿಯಿಂದ, ದಾವಣಗೆರೆ, ಚಿಕ್ಕಮಗಳೂರು, ಹಾಸನ, ಮೈಸೂರು, ಚಾಮರಾಜನಗರ ಹೀಗೆ ಹಲವಾರು ಕಡೆಗಳಿಂದ ಇವರಿಗೆ ಪ್ರಶಸ್ತಿ-ಪುರಸ್ಕಾರಗಳು ಲಭಿಸಿದೆ ಹಾಗೂ ಪ್ರಯಾಣಿಕರಿಂದ ಕನ್ನಡ ಪ್ರೇಮಿ ನಟರಾಜ್ ಎಂಬ ಬಿರುದು ಕೂಡ ದಕ್ಕಿದೆ. ಆದರೆ ನಾನು ಪ್ರಶಸ್ತಿ, ಬಿರುದುಗಾಗಿ ಮಾಡುತ್ತಿಲ್ಲ ಕನ್ನಡದ ಸೇವೆಯನ್ನಷ್ಟೆ ಮಾಡುತ್ತಿದ್ದೇನೆ ಎಂದು ನಟರಾಜು ಹೇಳುತ್ತಾರೆ. ನ.1ರಂದು ಗಂಡ್ಲುಪೇಟೆಯಲ್ಲಿ ಬೆಳಿಗ್ಗೆ 7.30ಕ್ಕೆ ಕನ್ನಡ ರಥ(ತಾವು ನಿರ್ವಾಹಕರಾಗಿ ಕಾರ್ಯನಿರ್ವಹಿಸುವ ಬಸ್)ಕ್ಕೆ ಸಾಮಾನ್ಯ ರೈತರೊಬ್ಬರಿಂದ ಚಾಲನೆ ನೀಡಲಿದ್ದಾರೆ.

See also  ಕೊಡಗಿನಲ್ಲೊಂದು ಬೈಯ್ಯೋ ಹಬ್ಬ..!

ಈ ಬಾರಿ ಅವರು ಓದಿದ ಶಾಲೆಗೆ 100ರ ಸಂಭ್ರಮ ಹೀಗಾಗಿ ಆ ಶಾಲೆಗೆ ಏನಾದರೊಂದು ಕೊಡುಗೆ ನೀಡಬೇಕೆನ್ನುವುದು ಅವರ ಬಯಕೆ. ಅದು ಈಡೇರಲಿ ಎಂಬುವುದೇ ನಮ್ಮ ಹಾರೈಕೆ.  ನಟರಾಜ್ ಅವರ ಕನ್ನಡದ ಸೇವೆಗೆ ಶುಭ ಹಾರೈಸುವುದಾದರೆ 9900478868ನ್ನು ಸಂಪರ್ಕಿಸ ಬಹುದಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು