ಉದಯ ಟಿವಿಯಲ್ಲಿ ಪ್ರಸಾರವಾಗುವ ಮದುಮಗಳು ಧಾರಾವಾಹಿಯಲ್ಲಿನ ತುಂಟ, ಶುದ್ಧ ತರಲೆ ತನ್ನ ಮುದ್ದಿನ ತಂಗಿ ಚೈತ್ರ್ಯಾಳ ಕಾಲೆಳೆಯುತ್ತಾ, ಕೀಟಲೆ ಮಾಡುತ್ತಾ, ಪ್ರಿಯತಮೆಯ ಜೊತೆ ಬಿಂದಾಸಾಗಿ ಮರಸುತ್ತುವ, ಮನೆಯಲ್ಲಿ ಅಣ್ಣನಿಲ್ಲದ ಸಮಯದಲ್ಲಿ ಗಂಭೀರವಾಗಿ ಆತನ ಜವಾಬ್ದಾರಿಯನ್ನು ಕೈಗೊಳ್ಳುವ ಗುಳಿಕೆನ್ನೆ ಕಾಲೇಜು ಹುಡುಗ ರಾಹುಲ್ ನ ನಿಜ ನಾಮಧೇಯ ಪ್ರಸನ್ನ ಶೆಟ್ಟಿ.
“Wanting to be a good actor is not good enough. You must want to be a great actor. You just have to have that” ಎಂದು ಇಂಗ್ಲೀಷ್ ನಟ ಗ್ಯಾರಿ ಓಲ್ಡ್ಮನ್ ಹೇಳಿದಂತೆ ಬೆಳೆದವರು ಪ್ರಸನ್ನ ಶೆಟ್ಟಿ ಎಂಬ ಒಬ್ಬ ಅದ್ಭುತ ನಟ. ವಿನೋದ್ ಶೆಟ್ಟಿ ಮತ್ತು ವಿದ್ಯಾ ಶೆಟ್ಟಿಯ ಸುಪುತ್ರ ಪ್ರಸನ್ನ ಹುಟ್ಟಿದ್ದು ಮಂಗಳೂರಿನ ಅಡ್ಕಸ್ಥಳ ಎಂಬ ಕುಗ್ರಾಮದ ಬಡಕುಟುಂಬದಲ್ಲಿ ಜನಿಸಿದ ಪ್ರಸನ್ನರ ಅಜ್ಜ ಒಬ್ಬ ಶ್ರೇಷ್ಠ ಯಕ್ಷಗಾನ ಕಲಾವಿದ. ಪ್ರಸನ್ನರ ಕುಟುಂಬದಲ್ಲಿ ಶಿಕ್ಷಣಕ್ಕೆ ಅತಿಯಾದ ಆರ್ಥಿಕ ಆಡಚಣೆಯಿದ್ದುದರಿಂದ ತನ್ನ ಅಜ್ಜ ಮತ್ತು ಚಿಕ್ಕಪ್ಪನ ಮನೆಯಲ್ಲಿ ಶಿಕ್ಷಣವನ್ನು ಪಡೆಯುತ್ತಾರೆ. ಸಿರಸಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪೂರೈಸಿ, ಧಾರಾವಾಡದಲ್ಲಿರುವ ಕರ್ನಾಟಕ ಕಾಲೇಜಿನಲ್ಲಿ ಬಿ.ಕಾಂ ಪದವಿಯನ್ನು ಪಡೆದ ನಂತರ ಕುಟುಂಬದ ಆಧಾರಕ್ಕಾಗಿ ಬೆಂಗಳೂರಿನಲ್ಲಿರುವ ಒಓಅ ಕಂಪನಿಯಲ್ಲಿ ಉದ್ಯೋಗ ಹೊಂದಿದ್ದರು. ಶಾಲಾ ಕಾಲೇಜಿನ ದಿನಗಳಿಂದಲೇ ನಟನೆಯ ಗೀಳನ್ನು ಹತ್ತಿಸಿಕೊಂಡ ಪ್ರಸನ್ನ ಸತ್ಯ ಸಾಯಿ ಕಾಲೇಜು ಅಳಿಕೆಯಲ್ಲಿ ಪಿಯುಸಿ ಓದುತ್ತಿರುವಾಗ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರೊಂದಿಗೆ ತನ್ನ ನಟನಾ ಕನಸಿಗೆ ಮೆಟ್ಟಿಲನ್ನು ಕಟ್ಟಿಕೊಂಡರು, ಕಂಪನಿಯಲ್ಲಿ ರಾತ್ರಿ ಪಾಳಿಯಲ್ಲಿ ಉದ್ಯೋಗ ಮಾಡುತ್ತಾ ಹಗಲೊತ್ತನ್ನು ನಟನೆಗಾಗಿ ಮೀಸಲಿಡುತ್ತಿದ್ದ ಪ್ರಸನ್ನ ಎಂಬ ಕನಸುಗಾರನ ಬದುಕಿಗೆ ತಿರುವು ನೀಡಿದ್ದು ಎನ್.ಮಂಗಳಾ ಅವರ ನೇತೃತ್ವದ ಸಂಚಾರಿ ನಾಟಕ ತಂಡ, ಇಲ್ಲಿ ಅಭಿನಯದ ಪಟ್ಟುಗಳನ್ನು ಅರಗಿಸಿಕೊಂಡ ಪ್ರಸನ್ನ 15ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿ ಸುಮಾರು 100 ಕ್ಕಿಂತ ಮಿಗಿಲಾದ ಪ್ರದರ್ಶನಗಳನ್ನು ನೀಡಿದ್ದಾರೆ, ಜೊತೆಗೆ ಬೇರೆ ತಂಡಗಳಲ್ಲೂ ತಮ್ಮ ಅಭಿನಯವನ್ನು ಛಾಪನ್ನು ಒತ್ತಿದ್ದಾರೆ.
ಕೈಲಾಸಂ ಕೀಚಕ ಇವರು ಪ್ರಪ್ರಥಮ ಬಾರಿಗೆ ಬಣ್ಣಹಚ್ಚಿದ ನಾಟಕವಾದರೆ ತದನಂತರ ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ನಿರ್ದೇಶನದ ಪಿನಾಕಿಯೋ ಮತ್ತು ಮಿಸ್ಅಂಡರ್ಸ್ಟ್ಯಾಂಡಿಂಗ್, ಮಂಗಳ.ಎನ್ ನಿರ್ದೇಶನದ ವೆನಿಸಿನ ವ್ಯಾಪಾರ ಇವರ ನಟನೆಯನ್ನು ಬೆಳಕಿಗೆ ತಂದ ನಾಟಕಗಳು. ಅಳಗುಳಿಮನೆ ಧಾರಾವಾಹಿಯಲ್ಲಿ ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದ ಪ್ರಸನ್ನ ನಂತರ ಚರಣದಾಸಿ, ಶುಭವಿವಾಹ, ಮೇಘಮಯೂರಿ, ಅವನು ಮತ್ತು ಶ್ರಾವಣಿ ಮತ್ತು ಕನಕದಾಸರು ಧಾರಾವಾಹಿಗಳಲ್ಲಿ ಸಣ್ಣಪುಟ್ಟಪಾತ್ರಗಳಲ್ಲಿ ಮಿಂಚಿದರೂ ಇವರ ಅಭಿನಯದ ಪರಿಯನ್ನು, ತಲ್ಲೀನತೆಯನ್ನು ನೋಡಿದ ನಿರ್ದೇಶಕ ದರ್ಶಿತ್ ಬಳವಳ್ಳಿ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಧುಮಗಳು ಧಾರಾವಾಹಿಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುವ ಜವಾಬ್ದಾರಿಯನ್ನು ನೀಡುತ್ತಾರೆ. ಇವುಗಳ ಜೊತೆ ಜೊತೆಗೆ ಕ್ಯಾನನ್ ಮತ್ತು ಸ್ಯಾಮ್ಸಂಗ್ ಜಾಹಿರಾತುಗಳಲ್ಲಿ ಸಹಕಲಾವಿದನಾಗಿ, ಬ್ಯಾಡ್ ಕ್ರಿಯೇಚರ್ ಆಫ್ ಗಾಡ್ ಮತ್ತು ನಮ್ ಕಥೆ ಕಿರುಚಿತ್ರಗಳಲ್ಲಿ ನಟಿಸಿ ತನ್ನ ನಟನಾ ಸಾಮರ್ಥ್ಯವನ್ನು ಅಷ್ಟಕ್ಕೇ ಮಿತಿಗೊಳಿಸದ ಶೆಟ್ಟರು ಹರಿವು, ಸಿಪಾಯಿ, ಶುದ್ಧಿ, ಸಿನೆಮಾ ಮೈ ಡಾರ್ಲಿಂಗ್, ಯಾರಿಗೆ ಇಡ್ಲಿ? ಮತ್ತು ಅಲ್ಲಮ ಚಿತ್ರಗಳ ಮೂಲಕ ಬೆಳ್ಳಿಪರದೆಯಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ನಟನೆಗಾಗಿ ತನ್ನ ಹಸಿವು, ನಿದ್ದೆಯನ್ನು ತ್ಯಜಿಸಿ ಪರಿಪೂರ್ಣವಾಗಿ ನಟನೆಗೆ ತನ್ನನ್ನು ಸಮರ್ಪಿಸಿಕೊಂಡಿದ್ದಾರೆ. ಯಾವುದೇ ರೀತಿಯ ಪಾತ್ರಗಳಗೆ ಒಗ್ಗಿಕೊಳ್ಳುವ ಕನಸು ಕಂಗಳ, ಗುಳಿಕೆನ್ನೆ ಹುಡುಗ ಪ್ರಸನ್ನ ಶೆಟ್ಟಿ ಮುಂದಿನ ದಿನಗಳಲ್ಲಿ ಚಿತ್ರರಂಗದ ಯಶಸ್ವಿ ತಾರೆಯಾಗಿ ಮಿಂಚಲಿ, ಹೊಸತನಕ್ಕೆ, ಹೊಸ ಕಥೆಗಳಿಗೆ, ಹೊಸ ಬೆಳವಣಿಗೆಗೆ ತನ್ಮೂಲಕ ನಾಂದಿ ಹಾಡಲಿ ಎಂದು ಹಾರೈಸುವ…
-ಅರ್ಜುನ್ ಲೂವಿಸ್