ಮನೆ ಮತ್ತು ಮನಸ್ಸಿನ ಕತ್ತಲೆಯನ್ನು ಹೊಡೆದೋಡಿಸಿ ಬೆಳಕು ತರುವ ದೀಪಾವಳಿ ಮತ್ತೆ ಬಂದಿದೆ. ಮನೆ ಮುಂದೆ ಉರಿಯುವ ಹಣತೆ… ಆಕಾಶದಲ್ಲಿ ಚಿಮ್ಮುವ ಬಾಣಬಿರುಸು… ಕಿವಿಗೆ ಅಪ್ಪಳಿಸುವ ಪಟಾಕಿ ಸದ್ದು… ಎಲ್ಲೆಡೆ ರಾರಾಜಿಸುತ್ತದೆ. ಕೆಲವೆಡೆ ಈ ಹಬ್ಬವನ್ನು ಮೂರು ದಿನ ಆಚರಿಸಿದರೆ ಮತ್ತೆ ಕೆಲವೆಡೆ ಐದು ದಿನಗಳ ಕಾಲ ಆಚರಿಸುವ ಸಂಪ್ರದಾಯವೂ ಇದೆ.
ದೀಪಾವಳಿ ಹಬ್ಬದ ಮೊದಲಿಗೆ ಎಣ್ಣೆ ಸ್ನಾನ ಮಾಡುವ ಸಂಪ್ರದಾಯವೂ ಇದೆ. ಇದಕ್ಕೆ ಕಾರಣ ಸಮುದ್ರಮಥನದ ಸಮಯದಲ್ಲಿ ಶ್ರೀವಿಷ್ಣು ಅಮೃತಕಲಶದೊಡನೆ ಧನ್ವಂತರಿಯಾಗಿ ಅವತಾರವೆತ್ತಿದ. ಈ ದಿನ ತುಂಬುವ ಸ್ನಾನದ ನೀರಿನಲ್ಲಿ ಗಂಗೆಯೂ, ಎಣ್ಣೆಯಲ್ಲಿ ಧನಲಕ್ಷ್ಮೀಯೂ ಇರುತ್ತಾಳೆಂಬುದು ನಂಬಿಕೆ. ಈ ನೀರಿನಿಂದ ಸ್ನಾನಮಾಡಿದರೆ ಆಯುರಾರೋಗ್ಯ ಆಯಸ್ಸು ವೃದ್ಧಿಸುವುದೆಂದೂ ಮತ್ತು ಸಕಲ ಪಾಪಗಳೂ ನಿವಾರಣೆಯಾಗುವುದೆಂಬ ನಂಬಿಕೆಯಿದೆ. ನರಕಾಸುರನನ್ನು ಕೊಂದ ಪಾಪ ಪರಿಹಾರಕ್ಕಾಗಿ ಶ್ರೀಕೃಷ್ಣ ಕೂಡ ಈ ದಿನ ಎಣ್ಣೆಸ್ನಾನ ಶಾಸ್ತ್ರ ಮಾಡಿದ್ದನು ಎಂದು ಹೇಳಲಾಗುತ್ತದೆ.
ಹಬ್ಬದ ಮೊದಲ ದಿನ ನರಕಚತುದರ್ಶಿಯಾಗಿದ್ದು, ನರಕ ಚತುರ್ದಶಿಯ ಕೇಂದ್ರ ಬಿಂದುವೇ ನರಕಾಸುರ. ಮಹಾವಿಷ್ಣು ತನ್ನ ವರಾಹಾವತಾರದಲ್ಲಿದ್ದಾಗ ಅವನ ಶರೀರದಿಂದ ಒಂದು ತೊಟ್ಟು ಬೆವರು ಭೂಮಿಗೆ ಬೀಳಲಾಗಿ ಭೂದೇವಿಯಲ್ಲಿ ನರಕಾಸುರ ಜನಿಸುತ್ತಾನೆ. ಇದರಿಂದಾಗಿ ಅವನಿಗೆ ಭೌಮಾಸುರ, ಭೂಮಿಪುತ್ರ ಎಂಬ ಹೆಸರುಗಳೂ ಉಂಟು. ಭೂದೇವಿ ವಿಷ್ಣುವನ್ನು ಬೇಡಿ ತನ್ನ ಮಗ ನರಕಾಸುರನಿಗೆ ವೈಷ್ಣವಾಸ್ತ್ರವನ್ನು ವರವಾಗಿ ಕೊಡಿಸುತ್ತಾಳೆ. ಇದರಿಂದ ಬಲಿಷ್ಠನಾದ ನರಕಾಸುರ ಲೋಕಕಂಠಕನಾಗುತ್ತಾನೆ. ಇಂದ್ರ ಮತ್ತು ಅವನ ತಾಯಿ ಅಧಿತಿಯನ್ನು ಬಿಡದೆ ಕಾಡತೊಡಗಿದಾಗ ಇಂದ್ರ, ಶ್ರೀಕೃಷ್ಣನ ಮೊರೆಹೋಗುತ್ತಾನೆ. ನರಕಾಸುರನ ದುಷ್ಟತನ ತಾಯಿ ಭೂದೇವಿಗೂ ಸಹಿಸದಾದಾಗ ಈ ದುಷ್ಟ ಮಗನನ್ನು ಕೊಂದು ಲೋಕವನ್ನು ಕಾಪಾಡುವಂತೆ ಭೂದೇವಿ ಶ್ರೀಕೃಷ್ಣನಿಗೆ ಹೇಳಿದಾಗ, ಅಶ್ವೀಜಕೃಷ್ಣ ಚತುರ್ದಶಿಯ ಕಗ್ಗತ್ತಲಿನಲ್ಲಿ ಶ್ರೀಕೃಷ್ಣನು ನರಕಾಸುರನನ್ನು ಸಂಹರಿಸುತ್ತಾನೆ. ಆ ದಿನವೇ ನರಕ ಚತುರ್ದಶಿ. ದುಷ್ಟ ಸಂಹಾರದ ಸಂಕೇತವಾಗಿ ಆ ದಿನ ಪಟಾಕಿ ಸಿಡಿಸಿ ಸಂಭ್ರಮಿಸಿ ವಿಜಯದ ನಗೆಯಲ್ಲಿ ಎಲ್ಲರೂ ಖುಷಿಪಡುತ್ತಾರೆ. ಹಾಗೆಯೇ ನರಕಾಸುರನನ್ನು ಕೊಂದು ಅವನ ಬಂಧನದಲ್ಲಿದ್ದ ಸಾವಿರಾರು ಕನ್ಯೆಯರನ್ನು ಶ್ರೀಕೃಷ್ಣ ಬಂಧಮುಕ್ತಗೊಳಿಸಿದ್ದರಿಂದಾಗಿ ಕನ್ಯಾಸೆರೆ ಬಿಡಿಸಿದ ಶ್ರೀಕೃಷ್ಣ ಸ್ವರೂಪಿಯಾದ ಅಳಿಯಂದಿರನ್ನು ಕನ್ಯಾಪಿತೃಗಳು ಈ ಹಬ್ಬದಂದು ತಮ್ಮ ಮನೆಗೆ ಆಹ್ವಾನಿಸಿ ವಿಶೇಷವಾಗಿ ಆಧರಿಸಿ ಉಪಚರಿಸುವ ಸಂಪ್ರದಾಯವನ್ನು ಕೂಡ ಕಾಣಬಹುದಾಗಿದೆ.
ಇನ್ನು ನರಕ ಚತುರ್ದಶಿಯ ಮಾರನೆಯ ದಿನ ದೀಪಾವಳಿ ಅಮಾವಾಸ್ಯೆಯಾಗಿದ್ದು, ಅವತ್ತು ಲಕ್ಷ್ಮಿಪೂಜೆ ಮಾಡಲಾಗುತ್ತದೆ. ಮಹಾವಿಷ್ಣುವಿನ ಪತ್ನಿಯೂ ಆದ ಮಹಾಲಕ್ಷ್ಮಿಯನ್ನು ಆರಾಧಿಸುವ ಹಬ್ಬವೇ ಧನಲಕ್ಷ್ಮೀ ಪೂಜೆ. ಸಮುದ್ರ ಮಥನದಿಂದ ಲಕ್ಷ್ಮೀ ಉದಯಿಸಿದ ದಿನವೂ ಹೌದು. ಹೀಗಾಗಿ ಉತ್ತರ ಭಾರತೀಯರಿಗೆ ಹೆಚ್ಚಿನ ಸಂಭ್ರಮ. ಅದರಲ್ಲೂ ವ್ಯಾಪಾರಿಗಳಿಗೆ ದೀಪ ಲಕ್ಷ್ಮೀ ಬೆಳಗಿ ಧನಲಕ್ಷ್ಮೀ ಬರುವ ಭಾಗ್ಯದ ದಿನವೇ ಆಗಿದೆ. ಅವರಿಗೆ ವ್ಯಾಪಾರ ವಹಿವಾಟಿನ ವಾಣಿಜ್ಯದ ನೂತನ ವರ್ಷ ಉದಯಿಸುವುದೇ ಈ ದಿನ. ಹಾಗಾಗಿ ಅತ್ಯಂತ ಸಂತೋಷದಿಂದ ಕಾರ್ತಿಕ ಮಾಸದ ಆರಂಭದ ಈ ಅಮಾವಾಸ್ಯೆಯ ಮಹಾರಾತ್ರಿಯಲ್ಲಿ ಮಹಾಲಕ್ಷ್ಮೀಗೆ ಮಹದಾನಂದದಿಂದ ದೀಪಾರಾಧನೆಯೊಡನೆ ಲಕ್ಷ್ಮೀಪೂಜೆಯನ್ನು ಮಾಡುತ್ತಾರೆ.
ಹಬ್ಬದಲ್ಲಿ ಮೂರನೆಯ ದಿನವನ್ನು ಬಲಿಪಾಡ್ಯಮಿಯಾಗಿ ಆಚರಿಸಲಾಗುತ್ತಿದೆ. ಅವತ್ತು ಬಲಿಚಕ್ರವರ್ತಿ ಭೂಲೋಕ ಸಂಚಾರ ಬರುತ್ತಾನೆ ಎಂಬ ನಂಬಿಕೆಯೂ ಇದೆ. ಅಂದು ಬಲೀಂದ್ರಪೂಜೆಯೂ ನಡೆಯುತ್ತದೆ. ಪೌರಾಣಿಕ ಕಥೆಯ ಪ್ರಕಾರ ಮಹಾವಿಷ್ಣುಭಕ್ತ, ದಾನಶೂರ ದೈತ್ಯರಾಜ ಬಲಿ ಚಕ್ರವರ್ತಿಯ ಬಳಿಗೆ ವಾಮನ ಅವತಾರಿಯಾಗಿ ಬಂದ ಮಹಾವಿಷ್ಣು, ಬಲಿಯಿಂದ ಮೂರು ಹೆಜ್ಜೆ ಊರುವಷ್ಟು ಭೂಮಿಯನ್ನು ದಾನವಾಗಿ ಪಡೆದು ಎರಡು ಹೆಜ್ಜೆಗಳಲ್ಲಿ ಆಕಾಶ-ಭೂಮಿಗಳನ್ನು ಅಳೆದುಕೊಂಡು ತ್ರಿವಿಕ್ರಮನಾಗಿ ಬೆಳೆದು ಮೂರನೇ ಹೆಜ್ಜೆಯನ್ನು ಬಲಿಯ ಕೋರಿಕೆಯಂತೆ ಅವನ ತಲೆಯ ಮೇಲಿಟ್ಟು ಬಲಿಚಕ್ರವರ್ತಿಯನ್ನು ಪಾತಾಳಕ್ಕೆ ತುಳಿದುಬಿಡುತ್ತಾನೆ. ಆಗ ಬಲಿಯ ಭಕ್ತಿಯನ್ನು ಮತ್ತು ದಾನಶೀಲಗುಣವನ್ನು ಮೆಚ್ಚಿದ ವಿಷ್ಣು ಪ್ರತಿವರ್ಷ ಒಂದು ದಿನ ಅವನ ಹೆಸರಿನಲ್ಲಿ ಪೂಜೆ ನಡೆಯುವಂತೆ ವರ ನೀಡುತ್ತಾನೆ. ಆ ರೀತಿ ಆಚರಿಸಲ್ಪಡುವ ದಿನವೇ ಬಲಿಪಾಡ್ಯಮಿ. ಅಂದು ಬಲಿ ಚಕ್ರವರ್ತಿ ಭೂಲೋಕ ಸಂಚಾರಕ್ಕೆ ಬರುತ್ತಾನೆಂಬ ನಂಬಿಕೆಯಲ್ಲಿ ಬಲೀಂದ್ರಪೂಜೆ ನಡೆಯುತ್ತದೆ.
ಭಾಗವತ ಪುರಾಣದ ಪ್ರಕಾರ ಕಾರ್ತಿಕ ಶುಕ್ಲಪಾಡ್ಯಮಿ ಶ್ರೀಕೃಷ್ಣನು ಇಂದ್ರನನ್ನು ಸೋಲಿಸಿದ ದಿನವೂ ಹೌದು. ಇಂದ್ರನ ದಾಳಿಯಿಂದ ತನ್ನ ಗೋಸಮೂಹವನ್ನು ರಕ್ಷಿಸಲು ಶ್ರೀಕೃಷ್ಣನು ಗೋವರ್ಧನ ಗಿರಿಯನ್ನೆತ್ತಿದ ದಿನವಿದು. ಆದ್ದರಿಂದಲೇ ಅಂದು ಗೋಪೂಜೆ ಮತ್ತು ಗೋವರ್ಧನಪೂಜೆಯನ್ನು ಆಚರಿಸಲಾಗುತ್ತದೆ. ಕೆಲವೆಡೆ ರೈತರು ಇದನ್ನು ಹಟ್ಟಿಹಬ್ಬವೆಂದು ಆಚರಿಸುತ್ತಾರೆ. ರಾಮಾಯಣದ ಪ್ರಕಾರ ತ್ರೇತಾಯುಗದಲ್ಲಿ ಶ್ರೀರಾಮ ವಿಜಯದಶಮಿಯಂದು ರಾವಣನನ್ನು ಕೊಂದು 14 ವರ್ಷಗಳ ವನವಾಸ ಮುಗಿಸಿ ಅಯೋಧ್ಯೆಗೆ ಮರಳಿದಾಗ ಜನರು ಸಾಲುದೀಪಗಳನ್ನು ಹಚ್ಚಿ ಸ್ವಾಗತಿಸಿ ದೀಪಾವಳಿಯನ್ನು ಆಚರಿಸಿದರಂತೆ. ಜೈನ ಪುರಾಣದ ಪ್ರಕಾರ ಭಗವಾನ್ ಮಹಾವೀರ ನಿರ್ವಾಣ ಹೊಂದಿದ್ದು ದೀಪಾವಳಿಯ ದಿನದಂದೇ. ಸಿಖ್ ಸಂಪ್ರದಾಯದಂತೆ ಗುರುಹರಗೋವಿಂದ್ ಜೀ ಮತ್ತು ಇತರ 25 ಹಿಂದೂ ಮಹಾರಾಜರುಗಳು ಮೊಘಲರಿಂದ ಬಂಧಮುಕ್ತಿ ಹೊಂದಿದ ದಿನ ಕೂಡ ದೀಪಾವಳಿ.
ಅದೇನೇ ಇರಲಿ ಭಾರತೀಯ ಸಂಸ್ಕೃತಿಯ ಪ್ರತೀಕವಾದ ದೀಪಾವಳಿಯು ಒಳಕತ್ತಲು, ಹೊರಕತ್ತಲೆಲ್ಲವನ್ನೂ ಹೊರಹಾಕಿ ಮನ-ಮನೆಯನ್ನೆಲ್ಲಾ ಬೆಳಗಿಸುವ ಬೆಳಕಿನ ಹಬ್ಬವಾಗಿ ದೇಶದಾದ್ಯಂತ ಆಚರಿಸಲ್ಪಡುತ್ತಿದೆ.
ಪಟಾಕಿ ಹಚ್ಚುವಾಗ ಎಚ್ಚರವಿರಲಿ
ಹಬ್ಬದಲ್ಲಿ ಪಟಾಕಿ ಸಿಡಿಸುವುದು ಹಿಂದಿನಿಂದಲೂ ನಡೆದು ಬಂದಿದೆ. ಪಟಾಕಿ ಸಿಡಿಸುವುದರಿಂದ ಆಗುವ ಅನಾನುಕೂಲ ಮತ್ತು ದುರಂತದ ಬಗ್ಗೆ ಈ ಹಿಂದಿನಿಂದಲೂ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಕೆಲವರು ಮಾಡುತ್ತಲೇ ಬಂದಿದ್ದಾರೆ.
ಹಬ್ಬದ ಸಂದರ್ಭ ಪಟಾಕಿ ಸಿಡಿಸಲೇ ಬೇಡಿ… ಬರೀ ದೀಪ ಹಚ್ಚಿ…. ಭಕ್ಷ್ಯ ಭೋಜನ ಸವಿದು ಹಬ್ಬ ಆಚರಿಸಿ… ಹಾಗೆಂದು ಹೇಳೋಕೆ ಯಾರಿಂದ ಸಾಧ್ಯ? ಇಷ್ಟಕ್ಕೂ ಅದನ್ನು ಕೇಳಿ ಪಾಲಿಸೋರು ಅದೆಷ್ಟು ಮಂದಿ ಇದ್ದಾರೆ? ಪಟಾಕಿ ಹಚ್ಚಲೇ ಬೇಡಿ ಅನ್ನೋದಕ್ಕಿಂತ ಪಟಾಕಿ ಹಚ್ಚುವಾಗ ಒಂದಷ್ಟು ಮುಂಜಾಗೃತಾ ಕ್ರಮ ಕೈಗೊಳ್ಳಿ ಎಂಬ ಸಲಹೆ ನೀಡಿದರೆ ಒಂದಷ್ಟು ಮಂದಿ ಅದನ್ನು ಪಾಲಿಸಿ ತಾವೇ ತಮ್ಮ ಕೈಯ್ಯಾರೆ ತಂದುಕೊಳ್ಳುವ ದುರಂತಕ್ಕೆ ಕಡಿವಾಣ ಹಾಕಲು ಸಾಧ್ಯವಾಗಬಹುದು.
ಹಬ್ಬದ ಸಂಭ್ರಮದಲ್ಲಿ ಪಟಾಕಿ ಸಿಡಿಸೋ ಭರದಲ್ಲಿ ಎಚ್ಚರ ತಪ್ಪಿ ತಮ್ಮ ಬದುಕನ್ನು ಕತ್ತಲೆಗೆ ತಳ್ಳಿಕೊಳ್ಳಬಾರದಲ್ವ ಹಾಗಾಗಿ ಪಟಾಕಿ ಸಿಡಿಸುವ ಮುನ್ನ ಒಂದಷ್ಟು ಮುನ್ನೆಚ್ಚರಿಕೆ ಜೊತೆಗಿರಲಿ. ಗುಣಮಟ್ಟದ ಪಟಾಕಿ ಹಾಗೂ ಪರವಾನಗಿ ಹೊಂದಿದವರಿಂದಲೇ ಖರೀದಿಸಿ. ಪಟಾಕಿ ಸಿಡಿಸಲು ಹೊರಡುವವರು ಹತ್ತಿ ಬಟ್ಟೆಯನ್ನು ಧರಿಸಿಕೊಳ್ಳುವುದು ಒಳ್ಳೆಯದು. ಜೊತೆಗೆ ಹಬ್ಬದ ಜೋಶ್ ನಲ್ಲಿ ಪಟಾಕಿಯನ್ನು ಕೈಯ್ಯಲ್ಲಿಡಿದು ಬೆಂಕಿ ಹಚ್ಚುವ, ಬೇರೆಯವರ ಮೇಲೆ ಎಸೆಯುವ ಪ್ರಯತ್ನ ಮಾಡಬೇಡಿ. ಪಟಾಕಿ ಸಿಡಿಯಲಿಲ್ಲವೆಂದು ಅದನ್ನು ಕೈಯ್ಯಲ್ಲಿಡಿದು ಮೇಲಿನ ಪೇಪರ್ ಸುಲಿದು ಬೆಂಕಿ ಹಚ್ಚುವ ಯತ್ನ ಮಾಡಬೇಡಿ. ಕೆಲವೊಮ್ಮೆ ತಡವಾಗಿ ಸಿಡಿಯುವ ಸಾಧ್ಯತೆಯೂ ಇರುತ್ತದೆ. ಪಟಾಕಿ ಸಿಡಿಸುವಾಗ ಕಿವಿಗೆ ಹತ್ತಿ ಹಾಗೂ ಮೂಗಿಗೆ ಮಾಸ್ಕ್ ಹಾಕಿಕೊಳ್ಳಿ. ಭಾರೀ ಸದ್ದು ಮಾಡುವ ಪಟಾಕಿಗಳಿಂದ ದೂರ ಸರಿಯಿರಿ ಇಲ್ಲಾಂದ್ರೆ ಕಿವಿಯ ತಮಟೆಗೆ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕಣ್ಣಿಗೆ ಕನ್ನಡಕ ಧರಿಸುವುದು ಕೂಡ ಒಳ್ಳೆಯದು.
ಮನೆಯ ಹಿರಿಯರು ಮಕ್ಕಳನ್ನು ಅವರಿಷ್ಟದಂತೆ ಪಟಾಕಿ ಸಿಡಿಸಲು ಬಿಡಬೇಡಿ ನೀವು ಕೂಡ ಜೊತೆಗಿದ್ದು ಅವರ ಬಗ್ಗೆ ನಿಗಾ ವಹಿಸಿ ಜೊತೆಗೆ ಸಲಹೆ ನೀಡಿ. ಮಕ್ಕಳ ವಯಸ್ಸಿಗೆ ತಕ್ಕದಾದ ಪಟಾಕಿಗಳನ್ನೇ ಖರೀದಿಸಿ ತನ್ನಿ. ಭಾರೀ ಶಬ್ದ ಬರುವ ಪಟಾಕಿಗಳನ್ನು ನೀಡಬೇಡಿ. ಹೂಕುಂಡ(ಫ್ಲವರ್ಪಾಟ್)ಗಳಿಗೆ ಬೆಂಕಿ ಹಚ್ಚುವಾಗ ಅಂತರ ಕಾಪಾಡಿ. ಕೈಯ್ಯಿಂದ ಹಚ್ಚುವುದು ಒಳ್ಳೆಯದಲ್ಲ. ಹೂಕುಂಡಗಳು ಸಿಡಿದು ಕೈ,ಕಣ್ಣು ಕಳೆದುಕೊಂಡಿರುವ ಉದಾಹರಣೆಗಳು ಬಹಳಷ್ಟಿವೆ.
ಇನ್ನು ಎಲ್ಲೋ ಗಮನಹರಿಸುತ್ತಾ ಪಟಾಕಿಗೆ ಬೆಂಕಿ ಹಚ್ಚುವುದು ಅಪಾಯಕಾರಿ. ಕೆಲವರು ಫೋನಿನಲ್ಲಿ ಮಾತನಾಡುತ್ತಲೋ, ಮತ್ತೇನೋ ಮಾಡುತ್ತಾ ಬೆಂಕಿ ಹಚ್ಚುವವರು ಇದ್ದಾರೆ. ಅಂತಹವರು ದಯವಿಟ್ಟು ಪಟಾಕಿಯತ್ತ ಗಮನವಿಟ್ಟು ಬೆಂಕಿ ಹಚ್ಚಿ. ರಾಕೆಟ್ ಬಿಡುವಾಗ ಬಾಟಲಿಯನ್ನು ಉಪಯೋಗಿಸಿ. ಅಷ್ಟೇ ಅಲ್ಲ ಆಕಾಶದ ಕಡೆಗೆ ಚಿಮ್ಮುವಂತೆ ನೋಡಿಕೊಳ್ಳಿ. ಇಲ್ಲದಿದ್ದರೆ ಕೆಲವೊಮ್ಮೆ ತಮ್ಮತ್ತಲೋ, ಪಕ್ಕದ ಮನೆಗೋ ನುಗ್ಗುವ ಸಾಧ್ಯತೆಯಿರುತ್ತದೆ. ಇನ್ನು ಪ್ರಾಣಿಗಳ ಬಾಲಕ್ಕೆ ಪಟಾಕಿ ಕಟ್ಟಿ ಬೆಂಕಿ ಹಚ್ಚುವ ವಿಕೃತ ಕೆಲಸವನ್ನು ದಯವಿಟ್ಟು ಮಾಡಬೇಡಿ. ಪಟಾಕಿಯ ಹೊಗೆಯಲ್ಲಿ ಹೆಚ್ಚು ಹೊತ್ತು ಇರಬೇಡಿ. ಪಟಾಕಿ ಹಚ್ಚಿದ ಕೈಯ್ಯನ್ನು ಚೆನ್ನಾಗಿ ತೊಳೆದು ಆಹಾರ ಸೇವಿಸಿ. ಹೀಗೆ ಒಂದಷ್ಟು ಮುಂಜಾಗ್ರತೆಯಿದ್ದರೆ ದೀಪಾವಳಿ ಹಬ್ಬವನ್ನು ಎಂಜಾಯ್ ಮಾಡಲು ಸಾಧ್ಯವಿದೆ.