News Kannada

ನುಡಿಚಿತ್ರ

223ವಸಂತ ಕಂಡ ಸಂತ ಅನ್ನಮ್ಮ ಚರ್ಚ್ - 1 min read

223ವಸಂತ ಕಂಡ ಸಂತ ಅನ್ನಮ್ಮ ಚರ್ಚ್

ಕೊಡಗು ಭಾವೈಕ್ಯತೆಯ ಸಂಗಮ ಎನ್ನುವುದಕ್ಕೆ ಇಲ್ಲಿ ನಡೆಯುವ ಹಬ್ಬಗಳು, ನೆಲೆನಿಂತಿರುವ ದೇಗುಲ, ಮಸೀದಿ, ಇಗಜರ್ಿಗಳು ಸಾಕ್ಷಿಯಾಗುತ್ತವೆ. ಇದಕ್ಕೊಂದು ಉದಾಹರಣೆ ವೀರಾಜಪೇಟೆಯ ಸಂತ ಅನ್ನಮ್ಮ ಇಗರ್ಜಿ ಎಂದರೆ ತಪ್ಪಾಗಲಾರದು.

ವೀರಾಜಪೇಟೆಗೆ ಭೇಟಿ ನೀಡಿದವರಿಗೆ ಮುಗಿಲೆತ್ತರಕ್ಕೆ ಹರಡಿ ನಿಂತಿರುವ ಬೆಟ್ಟಶ್ರೇಣಿಗಳು… ವಿಶಾಲ ಭತ್ತದ ಗದ್ದೆಗಳು… ಸುತ್ತುವರಿದ ಜನವಸತಿ ಗೃಹಗಳು… ಇಂತಹ ನಿಸರ್ಗ ವನಸಿರಿಯ ನಡುವೆ ಗಗನಚುಂಬಿಯಾಗಿ ಸಂತ ಅನ್ನಮ್ಮ ಇಗರ್ಜಿ ಕಂಗೊಳಿಸುತ್ತದೆ.

ಹಾಗೆ ನೋಡಿದರೆ ಸಂತ ಅನ್ನಮ್ಮ ಕೊಡಗಿನ ಹೆಮ್ಮೆಯ ಇಗರ್ಜಿಯಾಗಿದ್ದು,  ಇದು ನಿರ್ಮಾಣವಾಗಿ ನವೆಂಬರ್ 10ಕ್ಕೆ 223ವರ್ಷವಾಗುತ್ತಿದೆ. ಎರಡು ಶತಮಾನಗಳ ಗತಇತಿಹಾಸವಿರುವ ಈ ಇಗರ್ಜಿಯ ನಿರ್ಮಾಣದ ಬಗ್ಗೆ ಇತಿಹಾಸದ ಪುಟಗಳನ್ನು ತಿರುವಿಹಾಕುತ್ತಾ ಹೋದರೆ ರೋಚಕ ಕಥೆ  ಇರುವುದು ಗೋಚರಿಸುತ್ತದೆ.

ದೊಡ್ಡವೀರರಾಜೇಂದ್ರ ನಿರ್ಮಿಸಿದ ಇಗರ್ಜಿ: ಅದು 1791-92ನೇ ಇಸವಿಯ ದಿನಗಳು. ಮೂರನೇ ಆಂಗ್ಲೋ-ಮೈಸೂರು ಯುದ್ದದ ಸಮಯದಲ್ಲಿ ಶ್ರೀರಂಗಪಟ್ಟಣದಿಂದ ಕೊಡಗಿಗೆ ದಿಕ್ಕುಪಾಲಾಗಿ ತಪ್ಪಿಸಿಕೊಂಡು ಬಂದಂತಹ ಸುಮಾರು 700 ಕ್ರೈಸ್ತರಿಗೆ ದೊಡ್ಡವೀರರಾಜೇಂದ್ರನು ಆಶ್ರಯ ನೀಡಿ, ಹೊಸದಾಗಿ ಸ್ಥಾಪಿಸಲ್ಪಟ್ಟಂತಹ ವೀರರಾಜೇಂದ್ರಪೇಟೆಯ ಸುತ್ತಮುತ್ತಲ ಹಳ್ಳಿಗಳಲ್ಲಿ ನೆಲೆಸುವಂತೆ ವ್ಯವಸ್ಥೆ ಮಾಡಿದನು. ಅಲ್ಲದೆ ಅವರ ಮತ ಧರ್ಮವನ್ನು ಪಾಲಿಸಲು ಅನುಕೂಲವಾಗುವಂತೆ ಗೋವಾದಿಂದ ಜುವಾಂವ್ ಡಿಕೋಸ್ಟ ಎಂಬ ಧರ್ಮಗುರುವನ್ನು ಕರೆಸಿ 1792ರ ನವೆಂಬರ್ 10ರಂದು ಕ್ರೈಸ್ತರಿಗಾಗಿಯೇ ಒಂದು ಇಗರ್ಜಿ ಕಟ್ಟಿಸಿದನು.  ದೊಡ್ಡವೀರರಾಜೇಂದ್ರನ ಕಾಲದಲ್ಲಿ ನಿರ್ಮಿತವಾದ ಈ ಇಗರ್ಜಿಯು ಕೊಡಗಿನ ಏಕೈಕ ಐತಿಹಾಸಿಕ ಕ್ರೈಸ್ತ ಚರ್ಚ್ ಎಂಬ ಹೆಗ್ಗಳಿಕೆ ಪಡೆದಿದೆ.

ಸಂತ ಅನ್ನಮ್ಮ ಚರ್ಚ್ ಗೆ ಭೇಟಿ ನೀಡಿದ್ದೇ ಆದರೆ ನಮಗೆ ಚರ್ಚ್ ನ ಕಲಾವೈಭವ ಕಣ್ಣಿಗೆ ಕಟ್ಟುತ್ತದೆ. ಚರ್ಚ್ ನ ಸಮಿಪದಲ್ಲಿ ಲೂದರ್ ಮಾತೆಯ ಸ್ಮರಣಾರ್ಥವಾಗಿ ನಿರ್ಮಿಸಲಾದ ಫ್ರಾನ್ಸ್ ನ ಲೂದರ್ ಮಾದರಿಯ ಸುಂದರ ಕೃತ್ರಿಮ ಗವಿಯನ್ನು ಕಾಣಬಹುದು. ದೇವಾಲಯವು ಪ್ರಾಚೀನ-ಅವಾರ್ಚೀನ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದ್ದು, ಭವ್ಯ ಗಾಥಿಕ್ ಶೈಲಿಯಲ್ಲಿ ಶೃಂಗ ತ್ರಿಕೋನ ಬಾಗು ಬಾಹುಗಳ ಮುಖಗೋಪುರವಿದೆ. ದೀರ್ಘ ವೃತ್ತಾಕಾರದ ಪ್ರವೇಶ ದ್ವಾರಗಳಿವೆ. ಗೋಪುರವು ಸುಮಾರು 150 ಅಡಿಗಳಷ್ಟು ಎತ್ತರವಿದ್ದು, ಇದರ ಮೇಲೆ ಪಂಚಲೋಹದ 6 ಅಡಿ ಎತ್ತರದ ಶಿಲುಬೆಯಿದ್ದು, ದೂರದಿಂದ ವೀಕ್ಷಿಸಿದಾಗ ವಿಶಾಲ ಅಂಗಳದ ನಡುವೆ ಇತಿಹಾಸದ ಕಥೆಯನ್ನು ಹೇಳಲು ನಿಂತಿದೆಯೇನೋ ಎನ್ನುವಂತೆ ಭಾಸವಾಗುತ್ತದೆ.

ಪ್ಯಾರೀಸ್ ನಿಂದ ತಂದ ಗಂಟೆ: ಸಾಲ್ವದೋರ್ಪಿಂಟೋ ಹಾಗೂ ದೋನಾಥ್ ಲೋಬೋರವರ ಜ್ಞಾಪಕಾರ್ಥವಾಗಿ ಪ್ಯಾರೀಸ್ನಿಂದ ತರಿಸಲ್ಪಟ್ಟ ಇಂಪಾದ ನಿನಾದವನ್ನು ಹೊರಹೊಮ್ಮಿಸುವ ಬೃಹದಾಕಾರದ ಎರಡು ಗಂಟೆಗಳನ್ನು ಸುಮಾರು ನೂರು ಅಡಿಗಳಷ್ಟು ಎತ್ತರದಲ್ಲಿ ಅಳವಡಿಸಲಾಗಿದೆ. ದೇವಾಲಯಕ್ಕೆ ಪೂರ್ವ ಹಾಗೂ ಉತ್ತರಮುಖವಾಗಿ ಪ್ರವೇಶದ್ವಾರಗಳಿದ್ದು, ದ್ವಾರಗಳನ್ನು ದಾಟಿ ಒಳ ಪ್ರವೇಶಿಸಿದರೆ, ಭವ್ಯ ಸಭಾಂಗಣ ಕಂಡು ಬರುತ್ತದೆ. ಪಶ್ಚಿಮ ಭಿತ್ತಿ(ಗೋಡೆ)ಯ ಬಳಿ ಬಲಿಪೀಠದ ಸುಂದರ ವಿನ್ಯಾಸವು ನಮ್ಮನ್ನು ಆಕರ್ಷಿಸುತ್ತದೆ. ಚರ್ಚ್ ನ ಸ್ಥಾಪನೆಗೆ ಕಾರಣನಾದ ದೊರೆ ವೀರರಾಜೇಂದ್ರ ಒಡೆಯ ನೀಡಿರುವ ಎರಡು ದೀಪಕಂಬಗಳು (ಕುತ್ತುಂಬೊಳಿಚ್ಚ) ವಿ ಸಂಕೇತದಿಂದ ಕೂಡಿದ್ದು, ಬಲಿಪೀಠದ ಮೇಜಿನ ಮೇಲಿಡಲಾಗಿದೆ. ಮೇಜಿನ ಹಿಂಭಾಗದಲ್ಲಿ ಪರಮ ಪ್ರಸಾದದ ಪೆಟ್ಟಿಗೆಯಿದ್ದು,  ಪೆಟ್ಟಿಗೆಯ ಮೇಲೆ ಏಸುವನ್ನು ಶಿಲುಬೆಗೇರಿಸಿದ ಶಿಲ್ಪ ಕಂಡು ಬರುತ್ತದೆ.  ಚರ್ಚ್ ನ ಗೋಡೆಯ ಕೇಂದ್ರಭಾಗದಲ್ಲಿ ಜಗತ್ತಿನ ಪ್ರಸಿದ್ಧ ಕಲಾವಿದ ಮೈಕಲ್ ಎಂಜಿಲೋ ರೂಪಿಸಿದಂತಹ ಪಿಯಾತ್ ಶಿಲ್ಪದ ಮಾದರಿಯ ಪಿಯಾತ್ ಸ್ಥಿತಿಯ ಅಂದರೆ ತಾಯಿ ಮೇರಿಯ ತೊಡೆ ಮೇಲೆ ಏಸುವಿನ ಮೃತ ಶರೀರ ಅಂಗಾತ ಮಲಗಿದುದನ್ನು ಕಾಣಬಹುದು. ಮೇರಿ ತಾಯಿಯ ನಾಭಿ, ಏಸುವಿನ ನಾಭಿಗೆ ಸನಿಹವಿರುವಂತಹ ಭಾವ, ತಾಯಿಯ ಹೊಕ್ಕಳ ಬಳ್ಳಿಯ ಅಜನ್ಮ ಸಂಬಂಧದ ಸಂಕೇತದಂತೆ ತೋರುವ ಕರುಣಾರಸದ ಚಿತ್ರ ಇದಾಗಿದೆ.

See also  ಮಾ. 17ರಿಂದ ಬಿಳಿಗಿರಿರಂಗನ ದರ್ಶನ ಬಂದ್

ಪಿಯಾತ್ ಗೂಡಿನ ಎಡಕ್ಕೆ ಇಡೀ ಜಗತ್ತಿಗೆ ಶಾಂತಿಯ ಮುಖ ತೋರುವ  ಪುನರುತ್ಥಾನದ ಏಸುವಿನ ಭಂಗಿ, ಅಲ್ಲದೆ ಏಸುವಿನ ಕಷ್ಟ ಕೋಟಲೆಗಳನ್ನು ಕಣ್ಣಾರೆ ಕಂಡ ಸಾಕ್ಷಿಯಾದ  ಸಂತ ಸಭಾಸ್ಟಿಯನ್ನನ ಸ್ಮಾರಕ ಶಿಲ್ಪ ಕಂಡು ಬರುತ್ತದೆ.  

ವಿಶಿಷ್ಟ ಹದಿನಾಲ್ಕು ಕಾಷ್ಠ ಶಿಲ್ಪಗಳು: ಏಸುವಿನ ಶಿಲುಬೆಗೆ ಏರಿಸುವ ಹಾದಿಯನ್ನು ತೋರಿಸುವ 14 ಕಾಷ್ಠ ಶಿಲ್ಪಗಳು ಸಭಾಂಗಣದ ಗೋಡೆ ಮತ್ತು ಕಂಬಗಳ ನಡುವೆ ಇವೆ. ಒಂದನೆಯ ಶಿಲ್ಪದಲ್ಲಿ ಏಸುವಿನ ಮರಣಕ್ಕೆ ನಿರ್ಣಯದಲ್ಲಿ ಕ್ರೌರ್ಯ, ದೌರ್ಜನ್ಯದ ಪ್ರತೀಕವಾದ ಭಾವ ಕಂಡು ಬಂದರೆ, ಎರಡನೆಯ ಶಿಲ್ಪದಲ್ಲಿ ಬದುಕಿನ ಯಾತನೆಗಳನ್ನು, ಶಿಲುಬೆಯನ್ನು ಹತ್ತಲೇಳಿಸುವಲ್ಲಿ ಸಮಚಿತ್ತದಿಂದಿರುವ ಏಸುವಿನ ಮುಖವನ್ನು ಕಾಣಬಹುದು. ಮೂರನೆಯದು ಮೊದಲ ಬಾರಿಗೆ ಭಾರವಾದ ಶಿಲುಬೆಯೊಡನೆ ಬೋರಲಾಗಿ  ಬೀಳುತ್ತಿರುವ ಏಸುವಿನ ನೋವನ್ನು ಸಹಿಸುವ ದೃಢಚಿತ್ತ ಮುಖವನ್ನು ಹೊತ್ತ ಶಿಲ್ಪವಾಗಿದೆ. ಏಸುವು ಶಿಲುಬೆಯನ್ನು ಹೊತ್ತು ಹೋಗುವಲ್ಲಿ ತಾಯಿಯ ದರ್ಶನ ಮತ್ತು ಆಕೆಯ ಅವರ್ಣನೀಯ ಅಳಲನ್ನು ಬಿಂಬಿಸುವ ಶಿಲ್ಪವು ನಾಲ್ಕನೆಯದಾಗಿದೆ. ಐದನೆಯ ಶಿಲ್ಪವು ಸಿರೇನ್ಯನಾದಸಿ ಮೋನ ಏಸುವಿಗೆ ಶಿಲುಬೆ ಹೊರಲು ಸಹಾಯಕ್ಕೆ ಬರುವುದನ್ನು ತೋರಿಸುತ್ತದೆ. ಇನ್ನು ವೆರೋನಿಕಮ್ಮ ಎಂಬ ವನಿತೆ ಏಸುವಿನ ಬಳಲಿಕೆ ಕಂಡು ಮುಖವೊರೆಸುವುದನ್ನು ಆರನೆಯ ಶಿಲ್ಪದಲ್ಲಿ ಕಾಣಬಹುದಾಗಿದೆ. ಏಳನೆಯ ಶಿಲ್ಪದಲ್ಲಿ ಎರಡನೇ ಬಾರಿಗೆ ಶಿಲುಬೆಯ ಭಾರದಿಂದ ಬಳಲಿ ಬೀಳುವ ಮಾನವನ ಅಂತಃಕರಣ ಮಿಡಿಯುವ ಏಸುವಿನ ಭಂಗಿಯಾಗಿದೆ. ಎಂಟನೆಯ ಶಿಲ್ಪದಲ್ಲಿ ಏಸುವನ್ನು ಹಿಂಬಾಲಿಸಿ ಬಂದ ಪುಣ್ಯ ಸ್ತ್ರೀಯರಿಗೆ ಏಸುವು ನೀಡುತ್ತಿರುವ ಸಾಂತ್ವನ ಕಾಣುತ್ತದೆ. ಏಸುವು ಮೂರನೇ ಬಾರಿ ಶಿಲುಬೆಗೆ ಸಿಲುಕಿ ಭಾರದಿಂದ ಬಳಲಿ ಬೋರಲಾಗಿ ಬೀಳುತ್ತಿದ್ದರೂ, ಹೊಡೆಯುತ್ತಿರುವುದನ್ನು ಒಂಭತ್ತನೆಯ ಶಿಲ್ಪದಲ್ಲಿ ಕಾಣಬಹುದಾಗಿದೆ.

ಹತ್ತನೆಯದರಲ್ಲಿ ಕಠಿಣ ಮನಸ್ಸಿನ ಸೈನಿಕರು ಏಸುವಿನ ವಸ್ತ್ರವನ್ನು ಸೆಳೆದು ಹರಾಜು ಹಾಕುವುದನ್ನು ಕಾಣಬಹುದು. ಹನ್ನೊಂದನೆಯದರಲ್ಲಿ ಏಸುವನ್ನು ಶಿಲುಬೆಗೆ ಜಡಿದ ಚಿತ್ರವಾಗಿ  ಸಾಂದಕವಾಗಿ ಕೆಂಪು ವರ್ಣಾಚ್ಚಾದಿತವಾಗಿದೆ. ಮರಣವೇ ಮಹಾನವಮಿ ಎನ್ನುವಂತೆ ಏಸುವಿನ ಪ್ರಾಣ ತ್ಯಾಗದ ಚಿತ್ರ ಹನ್ನೆರಡನೆಯದರಲ್ಲಿದೆ. ಪಿಯಾತ್ ಭಂಗಿಯ ಶಿಲ್ಪವು ಹದಿಮೂರನೆಯದರಲ್ಲಿದೆ. ಕೊನೆಯ ಶಿಲ್ಪ ದೇವಮಾನವನಾಗುವ ತೇಜೋ ಮುಖದ ಏಸುವಿನ ತಿರುಶರೀರದ ಮೂಲಕ ಸಂಕಟದಿಂದ ಶಾಂತಿಯ ಗುರಿಯತ್ತ ಸಾಗುವ ಮನುಕುಲದ ಕತೆಯಾಗಿದೆ. ಮೇಲಿನ ಹದಿನಾಲ್ಕು ಹಂತಗಳಲ್ಲಿ ಶಿಲ್ಪಗಳನ್ನು ವ್ಯವಸ್ಥೆ ಮಾಡಿದ್ದು ಗುಲಿಯನ್ ಪಾದ್ರಿ ಎಂದು ಹೇಳಲಾಗಿದೆ. ಇವುಗಳ ಪಕ್ಕದಲ್ಲಿಯೇ ಬಾಲ ಏಸುವು  ತನ್ನ ಅಜ್ಜಿ ಅನ್ನಮ್ಮ ಬಳಿ ನಿಂತು ಲಾಲಿತ್ಯ ಸವಿಯುವ ಶಿಲ್ಪವು ಪ್ರತ್ಯೇಕ ಗೂಡಿನಲ್ಲಿದ್ದು ಮನಮುಟ್ಟುವಂತಿದೆ.

ಕೊಡಗಿನ ಹಬ್ಬಗಳ ಆಚರಣೆ: ಇನ್ನು ಚರ್ಚ್ ಬಗ್ಗೆ ಹೇಳ ಬೇಕೆಂದರೆ ಇದರ ಸಭಾಂಗಣದ ವಿನ್ಯಾಸ, ಬಲಿಪೀಠ, ಗೂಡು, ಮೂಲ ಅಂಕಣ, ಸಭಾ ಸ್ತಂಭಗಳು, ಗುರು ಸಮಾಧಿ ನೆಲೆ ಪರಿವರ ಶಿಲ್ಪ, ಪ್ರದಕ್ಷಿಣೆ ಸಭಾಕಾರ, ಮುಖಗೋಪುರಗಳನ್ನು ಎರಡು ಬಾರಿ ಪುನರ್ ರಚಿಸಲಾಗಿದೆ. ಈ ಗುಡಿಯು ಹಿಂದೂ ದೇವಾಲಯದ ಗರ್ಭಾಂಕಣ, ನವರಂಗ ಮುಖಮಂಟಪ, ಗದ್ದುಗೆ ನೆಲೆಗೋಪುರಗಳನ್ನು ಹೋಲುವಂತಿದೆ.

See also  ಹಳ್ಳಿಯ ಅಂದ ನೆನಪಿಸಿದ ಮಡಿಕೆಯ ಮಳಿಗೆ

ಪ್ರತಿ ವರ್ಷವೂ ಕ್ರಿಸ್ಮಸ್ ಸಹಬ್ಬವನ್ನು ಇಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಉಳಿದಂತೆ ಫೆಬ್ರವರಿ ತಿಂಗಳಲ್ಲಿ ಸಂತ ಅನ್ನಮ್ಮ ಕ್ಯಾಂಡಲ್ ಫೀಸ್ಟ್ ಹಬ್ಬವನ್ನು ನಡೆಸುತ್ತಾರೆ. ಈ ಸಂದರ್ಭ ಎಲ್ಲಾ ಜನಾಂಗದವರು ಇಲ್ಲಿ ನೆರೆಯುತ್ತಾರೆ. ಕೊಡಗಿನ ಹಬ್ಬಗಳಾದ ಕೈಲ್ಪೊಳ್ದ್ ಆಚರಣೆಯ 9 ದಿನಗಳ ಕಾಲ ಏಸುವಿನ ಪ್ರಾರ್ಥನಾ ವಿಧಿಗಳ ಮೂಲಕ ನಡೆದರೆ, ಹುತ್ತರಿ ಹಬ್ಬದ ಸಂದರ್ಭ ಆರ್ಜಿ ಗ್ರಾಮದಲ್ಲಿರುವ ಗದ್ದೆಯಿಂದ ಕದಿರು ತಂದು ಬಲಿಪೀಠದ ಮೇಲಿಟ್ಟು ಕ್ರಿಸ್ತ ಜಪ ಮಾಡಿ ಜನರಿಗೆ ಹಂಚಲಾಗುತ್ತದೆ. ಜೊತೆಗೆ ಅಕ್ಕಿ ಕಾಳಿನ ಪಾಯಸ ಮಾಡುವ ಪದ್ಧತಿಯೂ ಇದೆ. ಆಂಗ್ಲ ಶೈಲಿಯ ಶೂಸ್ ಹಾಕಿ ಪೂಜೆಗೆ ನಿಲ್ಲುವ ಬದಲು ಬರಿಗಾಲಿನಲ್ಲಿ ನಿಂತು ಪೂಜಿಸುವ ಅವಕಾಶವನ್ನು ಕಲ್ಪಿಸಿದ್ದಾರೆ. ಹಬ್ಬದ ದಿನಗಳಲ್ಲಿ ಕಳಸದಲ್ಲಿ  ಮಾವು, ವೀಳ್ಯದೆಲೆ ಸಹಿತ ತೆಂಗಿನ ಫಲವಿಟ್ಟು ಮೇಲೆ ಶಿಲುಬೆಯಿರಿಸುವ ಪದ್ಧತಿ ರೂಢಿಯಲ್ಲಿದೆ. ಹೋಸ್ಟ್ ಬ್ರೆಡ್ ಮೊದಲು ಚಾಲ್ತಿಯಲ್ಲಿತ್ತು ಆದರೆ ಈಗ ಕಾಣಿಕೆಯ ಸಮಯದಲ್ಲಿ ಅವರವರ ದುಡಿಮೆಯ ಫಲವಾಗಿ ಭತ್ತ ತರಕಾರಿಗಳನ್ನು ಅರ್ಪಿಸಬಹುದಾಗಿದೆ. ಹಲವು ವೈಶಿಷ್ಟ್ಯತೆಗಳನ್ನು ತನ್ನ ಮಡಿಲಲ್ಲಿ ತುಂಬಿಕೊಂಡು  ಭಾವೈಕ್ಯತೆಯನ್ನು ಸಾರುತ್ತಾ ಬಹಳಷ್ಟು ಪ್ರವಾಸಿಗರನ್ನು ತನ್ನತ್ತ  ಸೆಳೆಯುತ್ತಿರುವ ಸಂತ ಅನ್ನಮ್ಮ ಚರ್ಚ್ ಕೊಡಗಿಗೊಂದು ಮುಕುಟಮಣಿಯಾಗಿದೆ.
 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು