ಒಂದೆಡೆ ಗುಂಪುಗಲಭೆಯಿಂದ 144 ಸೆಕ್ಷನ್ ಜಾರಿಯಾಗಿರುವುದು, ಮತ್ತೊಂದೆಡೆ ಮಳೆ ಇದರ ನಡುವೆ ಕೊಡಗಿನ ಸುಗ್ಗಿ ಹಬ್ಬ ಹುತ್ತರಿ ನಡೆಯಬೇಕಿದೆ.
ಹಾಗೆ ನೋಡಿದರೆ ಮೊದಲಿನಂತೆ ಈ ಬಾರಿ ಹಬ್ಬದ ಸಂಭ್ರಮ ಕಾಣುತ್ತಿಲ್ಲವಾದರೂ ಆಚರಣೆಯನ್ನು ಚಾಚುತಪ್ಪದೆ ಮಾಡುವುದು ಕೊಡಗಿನವರು ನಡೆಸಿಕೊಂಡು ಬಂದಿರುವ ಸಂಪ್ರದಾಯ. ಹಬ್ಬಕ್ಕೆ ಕೊಡಗಿನವರು ಎಲ್ಲಿಯೇ ಇರಲಿ ಹೇಗಾದರು ಮಾಡಿ ಬರಬೇಕು ಎಂದು ಬಯಸುತ್ತಾರೆ. ಆ ದಿನ ಕುಟುಂಬದವರೊಂದಿಗೆ ಬೆರೆತು ಸಂಭ್ರಮಪಡುತ್ತಾರೆ
ಈ ಬಾರಿ ಹುತ್ತರಿ ನ.26ರಂದು ನಡೆಯಲಿದೆ. ಈಗಾಗಲೇ ಕೊಡಗಿನ ಕುಲದೈವ ಕಕ್ಕಬೆಯ ಪಾಡಿಇಗ್ಗುತ್ತಪ್ಪ ದೇವಾಲಯದಲ್ಲಿ ತಕ್ಕಮುಖ್ಯಸ್ಥರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಹಬ್ಬದ ಆಚರಣೆ ಕುರಿತಂತೆ ತೀರ್ಮಾನ ಕೈಗೊಳ್ಳಲಾಗಿದೆ. ದೇವಾಲಯದ ಪಾರಂಪರಿಕ ಜ್ಯೋತಿಷ್ಯರಾದ ಅಮ್ಮಂಗೇರಿಯ ಕಣಿಯರ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನ.25ರಂದು ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಹುತ್ತರಿ ಕಲ್ಲಾಡ್ಚ ಹಬ್ಬ ಮತ್ತು ನ.26ರಂದು ಹುತ್ತರಿ ಆಚರಣೆ ನಡೆಸಲು ಸಮಯ ನಿಗದಿ ಮಾಡಲಾಗಿದೆ.
ಹುತ್ತರಿ ಹಬ್ಬದ ದಿನದಂದು(ನ.26) ಸಂಜೆ 7.15ಕ್ಕೆ ದೇವಾಲಯದಲ್ಲಿ ನೆರೆ ಕಟ್ಟುವುದು, 8.15ಕ್ಕೆ ಕದಿರು ತೆಗೆಯುವುದು ಮತ್ತು 9.15ಕ್ಕೆ ಬೋಜನಕ್ಕೆ ಪ್ರಶಸ್ತ ಸಮಯವನ್ನು ನಿಗದಿಪಡಿಸಲಾಯಿತು. ದೇವಾಲಯದಲ್ಲಿ ಈ ಸಮಯದಲ್ಲಿ ಹಬ್ಬದ ವಿಧಿವಿಧಾನಗಳು(ದೇವಪೋದ್) ನಡೆದರೆ ಊರಿನಲ್ಲಿ ಅಂದರೆ ಜಿಲ್ಲೆಯಲ್ಲಿ(ನಾಡ್ ಪೋದು) 7.40ಕ್ಕೆ ನೆರೆಕಟ್ಟುವುದು, 8.40ಕ್ಕೆ ಕದಿರು ತೆಗೆಯುವುದು ಮತ್ತು 9.40ಕ್ಕೆ ಬೋಜನ ವೇಳೆಯನ್ನು ತಿಳಿಸಲಾಗಿದೆ.
ದೇವಾಲಯದ ಆದಿ ಸ್ಥಳ ಮಲ್ಮದಲ್ಲಿ ದೇಶಕಟ್ಟು ಹಾಕಲಾಗಿದ್ದು ಇದು ಹುತ್ತರಿ ಹಬ್ಬದವರೆಗೆ ಆಚರಣೆಯಲ್ಲಿರುತ್ತದೆ. ಅಲ್ಲಿಯವರೆಗೆ ಮರಗಿಡ ಕಡಿಯುವುದಾಗಲೀ, ಪ್ರಾಣಿ ಹಿಂಸೆ, ಮಾಂಸ ಸೇವನೆ, ಸಭೆ ಸಮಾರಂಭವನ್ನು ನಿಷೇಧಿಸಲಾಗಿದೆ. ಹಬ್ಬದ ಹಿಂದಿನ ದಿನದಂದು ದೇವಾಲಯದಲ್ಲಿ ಕಲ್ಲಾಡ್ಚಹಬ್ಬ ನಡೆದು ಎತ್ತುಪೋರಾಟ, ದುಡಿಕೊಟ್ಟ್ಪಾಟ್ ಮತ್ತು ದೇವರ ಮೂತರ್ಿಯೊಂದಿಗೆ ಆದಿ ಸ್ಥಾನ ಮಲ್ಮಕ್ಕೆ ತೆರಳಿ ಸಾಂಪ್ರದಾಯಿಕ ವಿಧಿವಿಧಾನ ನೆರವೇರಿಸಿ ವಿಧಿಸಿರುವ ಕಟ್ಟನ್ನು ಸಡಿಸಲಾಗುವುದು. ಬಳಿಕ ಜಿಲ್ಲೆಯಾದ್ಯಂತ ಹುತ್ತರಿ ಹಬ್ಬವನ್ನು ಆಚರಿಸಲಾಗುತ್ತದೆ.
ಮೊದಲೆಲ್ಲ ಗದ್ದೆಯೇ ಕೊಡಗಿನವರ ಜೀವಾಳವಾಗಿತ್ತು. ಭತ್ತದ ಕೃಷಿಗೆ ಪ್ರಾಧಾನ್ಯತೆ ನೀಡಲಾಗುತ್ತಿತ್ತು. ಭತ್ತವನ್ನು ಧಾನ್ಯ ಲಕ್ಷ್ಮಿ ಎಂದು ನಂಬಿದ್ದ ಜನ ಮನೆಯಲ್ಲಿ ಭತ್ತವಿದ್ದರೆ ಸಕಲ ಐಶ್ವರ್ಯವಿದ್ದಂತೆ ಎಂದು ನಂಬಿದ್ದರು. ಹೀಗಾಗಿ ಭತ್ತದ ಕೃಷಿ ಆಧರಿಸಿ ಹಬ್ಬವನ್ನು ಆಚರಿಸುತ್ತಿದ್ದರು. ಈಗ ಭತ್ತದ ಕೃಷಿ ನೇಪಥ್ಯಕ್ಕೆ ಸರಿಯತೊಡಗಿದೆ. ಆರ್ಥಿಕ ದೃಷ್ಠಿಯಿಂದ ನೋಡುವುದಾದರೆ ಕೂಲಿ ಕಾರ್ಮಿಕರ ಸಮಸ್ಯೆಯಿಂದಾಗಿ ಭತ್ತದ ಕೃಷಿ ಕೊಡಗಿನವರ ಪಾಲಿಗೆ ನಷ್ಟವಾಗುತ್ತಿದೆ. ಆದ್ದರಿಂದ ತಮಗೆ ಎಷ್ಟು ಅವಶ್ಯಕವೋ ಅಷ್ಟನ್ನು ಮಾತ್ರ ಕೃಷಿ ಮಾಡುತ್ತಿದ್ದಾರೆ. ಉಳಿದಂತೆ ಕೆಲವರು ತೋಟವನ್ನಾಗಿ ಮಾರ್ಪಡಿಸಿದರೆ, ಇನ್ನು ಕೆಲವರು ಪಾಳು ಬಿಟ್ಟಿದ್ದಾರೆ.
ಹಬ್ಬದ ಆಚರಣೆಯನ್ನು ಮಾಡಿ ತೀರಲೇ ಬೇಕೆಂದು ಸಾಂಪ್ರದಾಯವಾಗಿ ಕದಿರು ತೆಗೆಯಲು ಅನುಕೂಲವಾಗುವಂತೆ ಕೆಲವರು ಮನೆ ಬಳಿಯೇ ಚಿಕ್ಕ ಗದ್ದೆಮಾಡಿ ಅದರಲ್ಲಿ ಭತ್ತ ನೆಟ್ಟಿದ್ದರೆ, ಮತ್ತೆ ಕೆಲವರು ಮನೆಯ ಕಾಂಪೌಂಡ್ ನಲ್ಲಿ ಭತ್ತದ ಸಸಿನೆಟ್ಟು ಆರೈಕೆ ಮಾಡಿ ಹಬ್ಬದ ದಿನ ಕದಿರು ತೆಗೆದು ಸಂಭ್ರಮಿಸುವ ತವಕದಲ್ಲಿದ್ದಾರೆ. ಒಂದೆಡೆ ಕುಟುಂಬದವರು ಕೂಡಿ ಕದಿರು ಕೊಯ್ದರೆ, ಮತ್ತೊಂದೆಡೆ ದೇವಸ್ಥಾನಗಳಲ್ಲಿ ಕದಿರು ಕೊಯ್ದು ವಿತರಿಸಲಾಗುತ್ತಿದೆ. ಕದಿರು ತೆಗೆಯುವ ಗದ್ದೆಯಲ್ಲಿ ಮಾವಿನ ತೋರಣ ಕಟ್ಟಿ, ಬಾಳೆ ಕಟ್ಟಿ, ಹೂವಿನಿಂದ ಅಲಂಕರಿಸಲಾಗುತ್ತಿದ್ದು, ರಾತ್ರಿ ಕುಟುಂಬದ ಮುಖ್ಯಸ್ಥ ಕದಿರು ಕೊಯ್ದು ಪೊಲಿ.. ಪೊಲಿ.. ದೇವಾ ಎನ್ನುತ್ತಾ ಕೊಂಡೊಯ್ಯುವ ಮೂಲಕ ಧಾನ್ಯ ಲಕ್ಷ್ಮಿಯನ್ನು ಮನೆಗೆ ತುಂಬಿಸಿಕೊಳ್ಳುವುದರೊಂದಿಗೆ ಸದಾ ಕಾಲ ಮನೆಯಲ್ಲಿ ಧವಸ ಧಾನ್ಯ ತುಂಬಿರುವಂತೆ ತಾಯಿ ಕಾವೇರಮ್ಮ ಹಾಗೂ ಪಾಡಿ ಇಗ್ಗುತ್ತಪ್ಪನಲ್ಲಿ ಪ್ರಾರ್ಥಿಸಿಕೊಳ್ಳಲಾಗುತ್ತದೆ.
ಹುತ್ತರಿ ಹಬ್ಬ ಕಳೆಯುತ್ತಿದ್ದಂತೆಯೇ ಕೊಡಗಿನಲ್ಲಿ ಭತ್ತದ ಕೊಯ್ಲು ಆರಂಭವಾಗುತ್ತದೆ. ಆ ಕೆಲಸ ಮುಗಿಯುತ್ತಿದ್ದಂತೆಯೇ ಕಾಫಿ, ಕರಿಮೆಣಸು ಹೀಗೆಯೇ ಬಿಡುವಿಲ್ಲದ ಕೆಲಸ ಮುಂದುವರೆಯುತ್ತದೆ. ಇತರೆ ಹಬ್ಬದಂತೆ ಹುತ್ತರಿ ಅಲ್ಲ. ಈ ಹಬ್ಬ ಕಳೆದರೂ ಅದರ ಸಂಭ್ರಮ ಕೆಲವು ದಿನಗಳವರೆಗೆ ಕೊಡಗಿನಲ್ಲಿ ಕಾಣುತ್ತಿರುತ್ತದೆ.