News Kannada
Monday, September 26 2022

ನುಡಿಚಿತ್ರ

ಪ್ರದರ್ಶನಕ್ಕಷ್ಟೇ ಸೀಮಿತವಾದ ಜನಪದ ನೃತ್ಯಗಳು - 1 min read

Photo Credit :

ಪ್ರದರ್ಶನಕ್ಕಷ್ಟೇ ಸೀಮಿತವಾದ ಜನಪದ ನೃತ್ಯಗಳು

ಪಾಶ್ಚಾತ್ಯ ಶಿಕ್ಷಣ, ನಗರ ನಾಗರಿಕತೆಯ ಪ್ರಭಾವದಿಂದಲೋ ಏನೋ ಪೀಳಿಗೆಯಿಂದ ಪೀಳಿಗೆಗೆ ರೂಢಿಮಯವಾಗಿ ಬಂದಿದ್ದ ಜನಪದ ಕ್ರೀಡೆ, ಹಾಡು, ನೃತ್ಯ ಎಲ್ಲವೂ ಮಾಯವಾಗ ತೊಡಗಿದೆ. ಅನಾದಿ ಕಾಲದಿಂದಲೂ ಹಳ್ಳಿಗರ ಅವಿಭಾಜ್ಯ ಅಂಗವಾಗಿ ಬೆಳೆದು ಬಂದಿದ್ದ ಜನಪದ ನೃತ್ಯಗಳು ಇಂದು ಮೂಲೆ ಗುಂಪಾಗಿದ್ದು, ಆ ಸ್ಥಾನವನ್ನು ಇಂದಿನ ನಾಗರಿಕ ನೃತ್ಯಗಳು ಅಲಂಕರಿಸತೊಡಗಿವೆ. ಹಾಗೆ ನೋಡಿದರೆ ಹಿಂದಿನ ಕಾಲದವರು ಜನಪದ ನೃತ್ಯಕ್ಕೆ ಮಹತ್ವದ ಸ್ಥಾನವನ್ನು ನೀಡಿದ್ದರು. ಈ ನೃತ್ಯಗಳು ಊರಿನ ಸಂಸ್ಕೃತಿಗೆ, ಜನಜೀವನಕ್ಕೆ ಹಿಡಿದ ಕನ್ನಡಿಯಂತಿದ್ದವಲ್ಲದೆ, ಜನರ ಆಚಾರ ವಿಚಾರಗಳಿಗೆ ಪೂರಕವಾಗಿದ್ದವು. ಜಾತಿಮತ ಬೇಧಗಳನ್ನು ದೂರ ಮಾಡಿ ಜನರಲ್ಲಿ ಒಮ್ಮತ ಸೃಷ್ಟಿ ಮಾಡುವ ಪ್ರಯತ್ನವೂ ಈ ಜನಪದ ನೃತ್ಯಗಳಿಂದಾಗುತ್ತಿದ್ದವು.

ನಮ್ಮ ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಲವು ಬಗೆಯ ಜನಪದ ನೃತ್ಯಗಳಿರುವುದನ್ನು ನಾವು ಕಾಣಬಹುದು. ಪ್ರತಿ ಜಿಲ್ಲೆಯೂ ತನ್ನದೇ ಆದ ವಿಶಿಷ್ಟ ಪ್ರಕಾರಗಳ ನೃತ್ಯಗಳನ್ನು ಹೊಂದಿರುವುದು ಕಂಡು ಬರುತ್ತವೆ. ಗುಡ್ಡಗಾಡಿನ ಲಂಬಾಣಿಯವರ ನೃತ್ಯದಿಂದ ಹಿಡಿದು ಬಯಲು ಸೀಮೆಯ ರೈತರ ಸುಗ್ಗಿ ಕುಣಿತಗಳವರೆಗೆ ನಾವು ನೋಡಿದ್ದೇ ಆದರೆ ಒಂದೊಂದು ಜನಪದ ನೃತ್ಯವೂ ವಿಭಿನ್ನ ಹಾಗೂ ವಿಶಿಷ್ಟವಾಗಿದ್ದು, ನಯನ ಮನೋಹರವಾಗಿಯೂ ಆಕರ್ಷಣೀಯವಾಗಿಯೂ, ಬೆಡಗು ಭಿನ್ನಾಣಗಳಿಂದ ಕಂಗೊಳಿಸುತ್ತವೆ. ಅಲ್ಲದೆ, ಇಂತಹ ಹಬ್ಬಕ್ಕೆ ಇಂತಹದ್ದೇ ನೃತ್ಯವನ್ನು ನರ್ತಿಸಬೇಕೆಂಬ ಕಟ್ಟಳೆಯನ್ನು ಸಹ ಜನಪದ ನೃತ್ಯದಲ್ಲಿ ಕಾಣುತ್ತೇವೆ. ಹಬ್ಬ ಹರಿದಿನಗಳಲ್ಲಿ ಜಾತ್ರೆ, ಉತ್ಸವಗಳಲ್ಲಿ, ಸುಗ್ಗಿಯ ಸಮಯಗಳಲ್ಲಿ ವೈವಿದ್ಯಮಯವಾಗಿ ಕುಣಿದು ದುಃಖಗಳನ್ನು  ಮರೆತು ಸುಖವನ್ನು ಇತರರೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಈ ನೃತ್ಯಗಳಿಂದಾಗುತ್ತಿತ್ತು ಎಂದರೆ ಅತಿಶಯೋಕ್ತಿ ಎನಿಸಲಾರದು.

ಮಳೆ, ಗಾಳಿ, ಚಳಿಯನ್ನು ಲೆಕ್ಕಿಸದೆ ಶ್ರಮ ವಹಿಸಿ ದುಡಿದು ರೈತರು, ವರ್ಷದ ಕೊನೆಯಲ್ಲಿ ಧಾನ್ಯದ ರಾಶಿಯನ್ನು ಕಂಡಾಗ ತಮ್ಮ ದುಡಿಮೆಗೆ ಸಿಕ್ಕ ಪ್ರತಿಫಲವೆಂದು ಹಿಗ್ಗುತ್ತಾರೆ. ಈ ದಿನಗಳಲ್ಲಿ ಊರ ದೇವಸ್ಥಾನಗಳ ಮುಂದೆ ರೈತರು ಗುಂಪುಗೂಡಿಕೊಂಡು ನರ್ತಿಸುವುದೇ ಸುಗ್ಗಿ ಕುಣಿತವಾಗಿದೆ. ಇದರ ಆಚರಣೆ, ಕುಣಿತ ವಿಧಾನ ಎಲ್ಲವೂ ಒಂದೆಡೆಯಿಂದ ಮತ್ತೊಂದೆಡೆಗೆ ಭಿನ್ನವಾಗಿದೆ. ಅಲ್ಲದೆ ನಗರ ನಾಗರಿಕತೆಗೆ ಸಿಲುಕಿ ಕೆಲವು ಬದಲಾವಣೆಗಳಾಗಿವೆ. ಆದರೆ ಮೂಲ ಮಾತ್ರ ಬದಲಾಗದೆ ಉಳಿದಿದೆ ಎಂದರೆ ತಪ್ಪಾಗಲಾರದು. ಸಾಂಪ್ರದಾಯಿಕವಾಗಿ ಪೀಳಿಗೆಯಿಂದ ಪೀಳಿಗೆಗೆ ಬಂದ ಈ ಸುಗ್ಗಿ ಕುಣಿತ ಎಲ್ಲೆಡೆಯೂ ಹಾಗೆಯೇ ಉಳಿಯದೆ ಕೆಲವೆಡೆಗಳಲ್ಲಿ ನಿಂತು ಹೋಗಿರುವುದನ್ನು ಸಹ ನಾವು ಕಾಣಬಹುದು.

ಜನಪದ ನೃತ್ಯಗಳ ಪೈಕಿ ಒಂದಾದ ಗೊರವರ ಕುಣಿತದ ಬಗ್ಗೆ ತಿಳಿಯಲು ಹೊರಟರೆ ಇದರಲ್ಲಿ ಹಲವು ವಿಶೇಷತೆಗಳಿರುವುದನ್ನು ಕಾಣಬಹುದು. ನೃತ್ಯದ ಮೂಲಕವೇ ದೇವರನ್ನು ಪೂಜಿಸುವುದು ಈ ಕುಣಿತದ ಮುಖ್ಯ ಉದ್ದೇಶವಾಗಿದೆ. ನೃತ್ಯವನ್ನು ಮಾಡುವಾಗ ಕುದುರೆಯ ಹೆಜ್ಜೆ, ಧ್ವನಿ, ಓಟಗಳನ್ನು ಅನುಕರಿಸುತ್ತಾರೆ. ಅಲ್ಲದೆ, ಕಂಬಳಿಯ ಹೊದಿಕೆಯಲ್ಲಿ ತನ್ನ ರೂಪವನ್ನು ಮರೆ ಮಾಡಿಕೊಂಡು ಬಂದ ಶಿವ ರಾಕ್ಷಸನನ್ನು ಸಂಹರಿಸಿದ ಎಂದು ನಂಬಿರುವ ಇವರು ಆತನ ಭಕ್ತರಾಗಿ ಕಂಬಳಿಯ ನಿಲುವಂಗಿ, ಢಮರು, ಗಂಟೆ, ತ್ರಿಶೂಲ, ಗೆಜ್ಜೆ, ಚಾವಟಿ, ಭಂಡಾರ, ಚೀಲ, ಕುಲಾಯಿ, ಎದೆಹಾರ, ನಡುಪಟ್ಟಿ ಮುಂತಾದವುಗಳನ್ನು ಧರಿಸುತ್ತಾರೆ. ಮೇಲ್ನೋಟಕ್ಕೆ ಈ ಕುಣಿತ ವಿಚಿತ್ರವಾಗಿ ಕಂಡರೂ ಇದರಲ್ಲಿರುವ ಜನಪದ ಸೊಬಗು ಅರಿವಾಗುತ್ತದೆ.

See also  ವಿಶ್ವವನ್ನು ಸೆಳೆಯಲಿರುವ ಉಕ್ಕಿನ ಮನುಷ್ಯನ ಉತ್ಕೃಷ್ಟ ಪ್ರತಿಮೆ!

ಕೊಡಗಿನಲ್ಲಿ ಕಾಣಬರುವ ನೃತ್ಯಗಳಲ್ಲಿಯೇ ಹಲವಾರು ಬಗೆಗಳಿದ್ದು, ಇವುಗಳಲ್ಲಿ ಸಾಮಾಜಿಕ, ಧಾರ್ಮಿಕ, ಕಾರ್ಯ ಪ್ರದರ್ಶನದ ಮಹತ್ವವಿರುವುದು ಮೇಲ್ನೋಟಕ್ಕೆ ಗೋಚರವಾಗುತ್ತದೆ. ಬೊಳಕಾಟ್, ಉಮ್ಮತ್ತಾಟ್ ಈ ಎಲ್ಲವೂ ಗಮನ ಸೆಳೆಯುವವೇ ಆಗಿವೆ. ಕರ್ನಾಟಕದ ಪ್ರತಿಯೊಂದು ಪ್ರದೇಶಗಳಲ್ಲಿಯೂ ತಮ್ಮ ಆಚಾರ-ವಿಚಾರ, ಸಂಸ್ಕೃತಿ ಮುಂತಾದವುಗಳಿಗೆ ತಕ್ಕಂತೆ ಆಯಾಯ ರೀತಿಯ ಜನಪದ ನೃತ್ಯಗಳಿವೆ. ಕೊಡಗಿನಲ್ಲಿ ಬೊಳಕಾಟ್, ಉಮ್ಮತ್ತಾಟ್, ಹುತ್ತರಿ, ಕೋಲಾಟ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ, ಮೈಸೂರಲ್ಲಿ ಕಂಸಾಳೆ, ಉತ್ತರ ಕರ್ನಾಟಕದಲ್ಲಿ ಡೊಳ್ಳು ಕುಣಿತ, ಹೀಗೆ ಸಾಗುತ್ತಲೇ ಹೋಗುತ್ತದೆ. ಪ್ರತಿಯೊಂದು ನೃತ್ಯಗಳೂ ವೈವಿಧ್ಯಮಯವಾಗಿ ಮನಸೆಳೆದರೂ ಆಧುನಿಕ ನೃತ್ಯಗಳ ದಾಳಿಗೆ ತತ್ತರಿಸಿ ಮೂಲೆ ಗುಂಪಾಗುತ್ತಿದೆ. ಇಂದು ಈ ನೃತ್ಯಗಳನ್ನು ಕೇವಲ ಮೇಳ ಸಮಾರಂಭಗಳ ಸಂದರ್ಭ ವೇದಿಕೆಯಲ್ಲಿ ಮಾತ್ರ ಕಾಣುವಂತಾಗಿದೆ. ಜನಪದ ನೃತ್ಯಗಳ ಬಗ್ಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಕೊಡಗಿನ ಮಟ್ಟಿಗೆ ಕೊಡವ ಅಕಾಡೆಮಿ, ಅಲ್ಲದೆ ಇತರೆ ಸಂಘ ಸಂಸ್ಥೆಗಳು ಈ ನೃತ್ಯಗಳತ್ತ ಗಮನ ಹರಿಸಿ ಉಳಿಸಿಕೊಂಡು ಹೋಗುವತ್ತ ಪ್ರಯತ್ನ ಪಡುತ್ತಿರುವುದು ಕಂಡು ಬರುತ್ತಿದೆ. ಆದರೆ ಒಂದು ಕಾಲದಲ್ಲಿ ಹಳ್ಳಿಗರ ಮನರಂಜನೆಯಾಗಿದ್ದ ಈ ಜನಪದ ನೃತ್ಯಗಳು ಇಂದು ಕೇವಲ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿರುವುದು ವಿಷಾದದ ಸಂಗತಿಯಾಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು